ಕನ್ನಡಪ್ರಭ ವಾರ್ತೆ ಆಲಮಟ್ಟಿ
ಆಲಮಟ್ಟಿ ಜಲಾಶಯದ ನೀರಿನ ಹೆಚ್ಚಿನ ಸಂಗ್ರಹಣೆಯಿಂದ ಮಹಾರಾಷ್ಟ್ರದ ಕೆಲ ಪ್ರದೇಶಗಳಲ್ಲಿ ಮಹಾಪೂರ ಉಂಟಾಗುತ್ತದೆ. ಆಲಮಟ್ಟಿ ಜಲಾಶಯದಲ್ಲಿ ಹೆಚ್ಚಿನ ನೀರು ಸಂಗ್ರಹ ಮಾಡಿಕೊಳ್ಳದೇ, ಕೇಂದ್ರ ಜಲ ಆಯೋಗ ನಿರ್ದೇಶಿಸಿದ ಮಟ್ಟಕ್ಕೆ ಅನುಗುಣವಾಗಿ ಆಲಮಟ್ಟಿ ಜಲಾಶಯದ ಮಟ್ಟ ಕಾಪಾಡಬೇಕು ಎಂದು ಮಹಾರಾಷ್ಟ್ರದ ಸಾಂಗಲಿಯ ಕೃಷ್ಣಾ ಮಹಾಪೂರ ನಿಯಂತ್ರಣ ನಾಗರಿಕ ಕೃತಿ ಸಮಿತಿ ಆಲಮಟ್ಟಿಗೆ ಕೃಷ್ಣಾ ಮಹಾಪುರ ನಿಯಂತ್ರಣ ಸಮಿತಿ ಭೇಟಿ ಮಾಡಿ ಮನವಿ ಸಲ್ಲಿಸಿತು.ಮಹಾರಾಷ್ಟ್ರದಲ್ಲಿ ಕೃಷ್ಣಾ ತೀರದಲ್ಲಿ ಜುಲೈ, ಆಗಸ್ಟ್‌ನಲ್ಲಿ ಉಂಟಾಗುವ ಮಹಾಪೂರದ ಬಗ್ಗೆ ನಮ್ಮ ಸಮಿತಿ ವಿಸ್ತೃತ ಅಧ್ಯಯನ ನಡೆಸಿದೆ. ಮಹಾಪೂರ ಸಂದರ್ಭದಲ್ಲಿಯೂ ಆಲಮಟ್ಟಿ ಜಲಾಶಯದ ಮಟ್ಟ ಹೆಚ್ಚಿರುತ್ತದೆ ಎಂದರು.ಆಗ ಏಕಾಏಕಿ ಮಹಾಪೂರ ಉಂಟಾಗಿ ನಾಲ್ಕು ದಿನಗಳ ಕಾಲ ಕೊಲ್ಹಾಪುರ, ಶಿರೋಳ, ಸಾಂಗಲಿ ಕಡೆ ಮಹಾಪೂರ ಉಂಟಾಗುತ್ತದೆ ಎಂದು ಸಮಿತಿಯ ಮುಖ್ಯಸ್ಥ ವಿಜಯಕುಮಾರ ದಿವಾನ ಹೇಳಿದರು.
ಪ್ರತಿಯೊಂದು ಜಲಾಶಯಗಳ ನೀರಿನ ಸಂಗ್ರಹ, ಹೊರಹರಿವು, ಒಳಹರಿವು, ಮಳೆ ಪ್ರಮಾಣದ ವಿನಿಮಯ ಆಗಬೇಕು. ಅದು ಪ್ರತಿ ಸಾಮಾನ್ಯನಿಗೂ ತಿಳಿಯಬೇಕು ಎಂದರು. ಸಮಿತಿ ವತಿಯಿಂದ ಮಲಪ್ರಭಾ, ಘಟಪ್ರಭಾ ಹಾಗೂ ಕೃಷ್ಣಾ ನದಿಯ ಅಧ್ಯಯನ ನಡೆಸಲು ಉದ್ದೇಶಿಸಲಾಗಿದೆ, ಅದಕ್ಕೆ ಸಹಕಾರ ನೀಡಬೇಕು ಎಂದರು.ಮಹಾರಾಷ್ಟ್ರದ ತಂಡದ ಜತೆ ಇಲ್ಲಿಯ ಮುಖ್ಯ ಎಂಜಿನಿಯರ್ ಕಚೇರಿಯಲ್ಲಿ ಅನೌಪಚಾರಿಕ ಸಭೆ ನಡೆಸಿ, ಅವರ ಮನವಿಯನ್ನು ಆಲಿಸಿದ ಕೆಬಿಜೆಎನ್ಎಲ್ ಅಧಿಕಾರಿಗಳು, ಕೇಂದ್ರ ಜಲ ಆಯೋಗದ ನಿರ್ದೇಶನ ಹಾಗೂ ಮಹಾರಾಷ್ಟ್ರದ ನೀರಾವರಿ ಇಲಾಖೆಯ ಅಧಿಕಾರಿಗಳೊಂದಿಗೆ ನಿತ್ಯ ಸಮನ್ವಯತೆ ಮಾಡಿಕೊಂಡು ಮಹಾಪೂರ ನಿಯಂತ್ರಣಕ್ಕೆ ಸಮರ್ಪಕ ಕ್ರಮ ಅನುಸರಿಸಲಾಗುತ್ತಿದೆ ಎಂದರು.
ತಮ್ಮ ಅಧ್ಯಯನದ ವರದಿ ಹಾಗೂ ಸಲಹೆಯ ಬಗ್ಗೆ ಲಿಖಿತ ವರದಿ ಸಲ್ಲಿಸಲು ಕೋರಿದರು. ಸೂಪರಿಂಟೆಂಡೆಂಟ್ ಎಂಜಿನಿಯರ್ ರಾಮನಗೌಡ ಹಳ್ಳೂರ, ಕಾರ್ಯನಿರ್ವಾಹಕ ಎಂಜಿನಿಯರ್ ವಿ.ಜಿ. ಕುಲಕರ್ಣಿ, ರವಿ ಚಂದ್ರಗಿರಿಯವರ, ಕುಮಾರೇಶ ಹಂಚಿನಾಳ, ಮಹಾರಾಷ್ಟ್ರದ ಸಮಿತಿಯ ಎಸ್.ಆರ್. ಪಾಟೀಲ, ಪ್ರಭಾಕರ ಕೆಂಗಾರ, ಪ್ರದೀಪ ವಾಯಚಳ, ಸುಯೋಗ ಹವಳ, ದಿನಕರ ಪವಾರ ಮತ್ತೀತರರು ಇದ್ದರು.