ಯಲ್ಲಾಪುರ: ಭಾರತೀಯ ಕಿಸಾನ್ ಸಂಘದ ಜಿಲ್ಲಾ ಘಟಕದ ಸಭೆ ಜಿಲ್ಲಾಧ್ಯಕ್ಷ ಶಿವರಾಮ್ ಗಾಂವ್ಕರ್ ಅವರ ಅಧ್ಯಕ್ಷತೆಯಲ್ಲಿ ಪಟ್ಟಣದ ಟಿಎಂಎಸ್ ಸಭಾಭವನದಲ್ಲಿ ನಡೆಯಿತು.
ಭಾರತೀಯ ಕಿಸಾನ್ ಸಂಘದ ನೇತೃತ್ವದಲ್ಲಿ ನ. ೩೦ರಂದು ಬೆಂಗಳೂರಿನ ಫ್ರೀಡಂ ಪಾರ್ಕ್‌ನಲ್ಲಿ ಹಮ್ಮಿಕೊಂಡಿರುವ ರೈತ ಆಕ್ರೋಶ ಪ್ರತಿಭಟನೆ ಬಗ್ಗೆ ಮಾಹಿತಿ ನೀಡಿ ಪ್ರತಿ ತಾಲೂಕಿನಿಂದ ತಲಾ ೫೦ರಿಂದ ೧೦೦ ಸಂಖ್ಯೆಯಲ್ಲಿ ಕಿಸಾನ್ ಸದಸ್ಯರು, ರೈತರು ಪಾಲ್ಗೊಂಡು ಪ್ರತಿಭಟನೆ ಯಶಸ್ವಿಗೊಳಿಸುವಂತೆ ತಿಳಿಸಿದರು. ಈ ಬಗ್ಗೆ ಗ್ರಾಮಸಮಿತಿಗಳ ಪ್ರಮುಖರನ್ನು ಭೇಟಿ ಮಾಡಿ ಪ್ರತಿಭಟನೆಗೆ ಹೊರಡಿಸುವ ಕೆಲಸವಾಗಬೇಕು ಎಂದರು.
ನದಿ ತಿರುವು ಸೇರಿದಂತೆ ಪರಿಸರಕ್ಕೆ ಜಿಲ್ಲೆಯ ಜನಜೀವನ, ರೈತ ಸಮುದಾಯಕ್ಕೆ ತೊಂದರೆಯುಂಟು ಮಾಡುವ ಯಾವುದೇ ಯೋಜನೆಯನ್ನು ಜಿಲ್ಲೆಗೆ ಸರ್ಕಾರ ತರಕೂಡದೆಂದು ಸಭೆ ಒಕ್ಕೊರಲಿನ ಆಗ್ರಹ ಮಾಡಿತು. ಜಿಲ್ಲೆಯಲ್ಲಿ ಹದಗೆಟ್ಟಿರುವ ರಸ್ತೆಗಳ ಹೊಂಡ ಮುಚ್ಚಲು ಸರ್ಕಾರ ಶೀಘ್ರ ಕ್ರಮ ಅನುಸರಿಸಬೇಕು. ಸರಿಯಾಗಿ ಬೆಳೆವಿಮೆ ಮಂಜೂರು ಮಾಡಿ ವಿತರಣೆಯಾಗಬೇಕು. ದನಕರುಗಳಿಗೆ ವಿಶೇಷವಾಗಿ ಸಿದ್ಧ ಮೇವಿನ ಪೂರೈಕೆ ಮಾಡಬೇಕು ಎಂದರು.ವಿದ್ಯುತ್ ಗೆ ಸಾಕಷ್ಟು ತ್ಯಾಗ ಮಾಡಿದ ಜಿಲ್ಲೆಗೆ ಯಾವುದೇ ಕಾರಣದಿಂದಲೂ ಬೇಸಿಗೆಯಲ್ಲಿ ವಿದ್ಯುತ್ ಖೋತಾ ಪೊರೈಕೆಯಲ್ಲಿ ವ್ಯತ್ಯಯ ಮಾಡಬಾರದೆಂದು ಸಭೆಯಲ್ಲಿ ಆಗ್ರಹಿಸಲಾಯಿತು.
ಜೋಯಿಡಾ ತಾಲೂಕನ್ನು ಅಭಯಾರಣ್ಯ ಎಂದು ಸರ್ಕಾರ ಮಾಡಿದಾಗ್ಯೂ ಅದನ್ನು ವ್ಯವಸ್ಥಿತವಾಗಿ ಜಾರಿಯನ್ನು ಮಾಡದೇ ಜನರ ಜೀವ ಹಿಂಡಲಾಗುತ್ತಿದೆ. ಜನರ ನೋವನ್ನು ಇಲಾಖೆ ಕೇಳುತ್ತಿಲ್ಲ. ಪ್ರಾಣಿಗಳೊಂದಿಗೆ ಭಯದೊಂದಿಗೆ ಬದುಕಬೇಲಾದ ಅನಿವಾರ್ಯತೆ ಸೃಷ್ಟಿ ಮಾಡಲಾಗಿದೆ. ಜನರ ಬದುಕನ್ನು ಅತಂತ್ರಗೊಳಿಸಿದೆ ಎಂದು ಶ್ರೀಧರ ಭಾಗ್ವತ, ಆರ್.ಎನ್. ಹೆಗಡೆ ಗುಂದ ತಿಳಿಸಿದರು.
ಜಿಲ್ಲಾ ಪ್ರಧಾನ ಕಾರ್ಯದರ್ಶಿ ನರಸಿಂಹ ಸಾತೊಡ್ಡಿ ಸ್ವಾಗತಿಸಿ, ಬೆಂಗಳೂರಿನ ಪ್ರೀಡಂ ಪಾರ್ಕ್‌ನಲ್ಲಿ ನ. ೩೦ಕ್ಕೆ ನಡೆಯುವ ರೈತ ಆಕ್ರೋಶ ಪ್ರತಿಭಟನೆಯ ಮಾಹಿತಿ ನೀಡಿ ಜಿಲ್ಲೆಯಿಂದ ೫೦೦ ಸದಸ್ಯರು ತೆರಳುವ ಬಗ್ಗೆ ತಿಳಿಸಿದರು. ಗಣಪತಿ ಪಟಗಾರ್ ಕುಮಟಾ ವಂದಿಸಿದರು.