ಕನ್ನಡಪ್ರಭ ವಾರ್ತೆ ಹೊಸಪೇಟೆ
ಈ ಭಾಗದ ರೈಲ್ವೆ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ನೈರುತ್ಯ ರೈಲ್ವೆ ವಲಯ ರೈಲ್ವೆ ಬಳಕೆದಾರರ ಸಲಹಾ ಸಮಿತಿ ಹಿರಿಯ ಸದಸ್ಯ ಬಾಬುಲಾಲ್ ಜೈನ್ ನೇತೃತ್ವದಲ್ಲಿ ವಿಜಯನಗರ ರೈಲು ಬಳಕೆದಾರರ ಸಂಘದ ವತಿಯಿಂದ ನಗರದ ಪ್ರವಾಸಿ ಮಂದಿರದಲ್ಲಿ ಸಂಸದ ಈ. ತುಕಾರಾಂ ಅವರಿಗೆ ಮನವಿ ಸಲ್ಲಿಸಲಾಯಿತು.ಬೇಡಿಕೆಗಳು:
ಬಳ್ಳಾರಿ-ಹೊಸಪೇಟೆ-ಕೊಟ್ಟೂರು ಮಾರ್ಗವಾಗಿ ಬಂದರು ನಗರ ಮಂಗಳೂರಿಗೆ ನೇರ ರೈಲ್ವೆ ಸಂಪರ್ಕ ಕಲ್ಪಿಸಬೇಕು. ಇದರಿಂದ ರಾಜ್ಯದ ಎರಡು ವಿಶ್ವಪಾರಂಪರಿಕ ತಾಣಗಳಾದ ಹಂಪಿ ಮತ್ತು ಬೇಲೂರು, ಹಳೆಬೀಡುಗಳ ನಡುವೆ ರೈಲ್ವೆ ಸಂಪರ್ಕ ದೊರೆಯುತ್ತದೆ. ಅಲ್ಲದೆ ಧಾರ್ಮಿಕ ಕೇಂದ್ರಗಳಾದ ಧರ್ಮಸ್ಥಳ, ಕುಕ್ಕೆಸುಬ್ರಮಣ್ಯ, ಶ್ರವಣ ಬೆಳಗೋಳ ಹಾಗೂ ಶೈಕ್ಷಣಿಕ, ಬೃಹತ್ ಆಸ್ಪತ್ರೆ ಕೇಂದ್ರಗಳಾದ ಮಣಿಪಾಲ, ಉಡುಪಿ, ಮಂಗಳೂರಿಗೆ ಸಂಪರ್ಕ ದೊರೆಯುತ್ತದೆ. ಅಲ್ಲದೆ ಕರಾವಳಿ, ಮಲೆನಾಡು ಜಿಲ್ಲೆಗಳಿಂದ ಕಲ್ಯಾಣ ಕರ್ನಾಟಕದ ಜಿಲ್ಲೆಗಳ ನಡುವೆ ವ್ಯಾಪಾರ ವಾಣಿಜ್ಯ ಚಟುವಟಿಕೆಗಳು ವೃದ್ಧಿಯಾಗುತ್ತದೆ. ವಿಶೇಷವಾಗಿ ಪ್ರವಾಸೋದ್ಯಮ ಆರ್ಥಿಕ ಚಟುವಟಿಕೆಗಳ ಬೆಳವಣಿಗೆಗಳ ದೃಷ್ಠಿಯಿಂದ ಬಳ್ಳಾರಿ ಮತ್ತು ಮಂಗಳೂರು ನಡುವೆ ನೇರ ರೈಲು ತುರ್ತಾಗಿ ಆಂರಭಿಸಲು ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.ಕಳೆದ ನಾಲ್ಕು ತಿಂಗಳಿಂದ ಸಂಚಾರ ರದ್ದಾಗಿರುವ ಬೆಳಗಾವಿ-ಹೊಸಪೇಟೆ-ಹೈದರಾಬಾದ್-ಮಣಗೂರು ರೈಲು ಪುನರ್ ಆರಂಭಿಸಬೇಕು.
ಹೊಸಪೇಟೆ-ಮುಂಬೈ ರೈಲಿನ ಹಳೇ ಕೋಚ್‌ಗಳ ಬದಲಾಗಿ ಆಧುನಿಕ ಸೌಲಭ್ಯವುಳ್ಳ ನೂತನ ಕೋಚ್ ಅಳವಡಿಸಬೇಕು. ಬಳ್ಳಾರಿ, ವಿಜಯನಗರ, ಕೊಪ್ಪಳ ಜಿಲ್ಲೆಗಳಿಂದ ಮುಂಬೈಗೆ ಹೋಗುವ ಪ್ರಯಾಣಿಕರಿಗೆ ಹೆಚ್ಚುವರಿ ಬರ್ತ್ ಸೌಲಭ್ಯ ಕಲ್ಪಿಸಬೇಕು ಎಂದು ಆಗ್ರಹಿಸಿದರು.ಹೊಸಪೇಟೆ ರೈಲ್ವೆ ನಿಲ್ದಾಣವನ್ನು ಮೇಲ್ದರ್ಜೆಗೇರಿಸಬೇಕು. ರೈಲುಗಳು ಸಕಾಲದಲ್ಲಿ ಬಂದು ಹೋಗಲು ಅನುಕೂಲವಾಗುವಂತೆ ಎರಡು ನೂತನ ಪ್ಲಾಟ್‌ಫಾರಂ ನಿರ್ಮಿಸಿ ಪ್ರಯಾಣಿಕರಿಗೆ ಮೂಲಸೌಲಭ್ಯ ಕಲ್ಪಿಸಬೇಕು.
ಹೊಸಪೇಟೆ-ಗುಂತಕಲ್ ಮಾರ್ಗವಾಗಿ ವಾರಕ್ಕೆ ಎರಡು ಬಾರಿ ಸಂಚರಿಸುತ್ತಿರುವ ಹುಬ್ಬಳ್ಳಿ-ಚೆನ್ನೈ ದಿನವಹಿ ರೈಲಾಗಿ ಸಂಚರಿಸುವಂತೆ ಕ್ರಮ ಕೈಗೊಳ್ಳಬೇಕು ಎಂದರು.ಹುಡಾ ಅಧ್ಯಕ್ಷ ಇಮಾಮ್‌ನಿಯಾಜಿ, ಮುಖಂಡರಾದ ವೈ.ಯಮುನೇಶ್, ಗುಜ್ಜಲ್ ನಾಗರಾಜ್, ಮಹೇಶ್ ಕುಡುತಿನಿ, ಉಮಾ ಮಹೇಶ್ವರ್, ವಕೀಲ ಎಚ್.ಮಹೇಶ್ ಮತ್ತಿತರರಿದ್ದರು.