ಕೊಪ್ಪಳ: ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ಆಲ್ ಇಂಡಿಯಾ ಯುನೈಟೆಡ್ ಟ್ರೇಡ್ ಯೂನಿಯನ್ ಸೆಂಟರ್ (AIUTUC) ಗೆ ಸಂಯೋಜಿತ ಕರ್ನಾಟಕ ರಾಜ್ಯ ಸಂಯುಕ್ತ ಆಶಾ ಕಾರ್ಯಕರ್ತೆಯರ ಸಂಘದ ಕಾರ್ಯಕರ್ತರು ಸಂಸದ ಕೆ. ರಾಜಶೇಖರ್‌ಹಿಟ್ನಾಳ್ ಅವರಿಗೆ ಮನವಿ ಸಲ್ಲಿಸಿದರು.
ಕೇಂದ್ರ ಬಜೆಟ್‌ನಲ್ಲಿ ಕೇಂದ್ರ ಆರೋಗ್ಯ ಸಚಿವ ಕೆ.ಪಿ. ನಡ್ಡಾ ಅವರು ಘೋಷಿಸಿರುವ ಆಶಾ ಕಾರ್ಯಕರ್ತೆಯರಿಗೆ ₹2,500 ರಿಂದ ₹3,000 ವರೆಗೆ ಪ್ರೋತ್ಸಾಹ ಧನ ನೀಡುವ ನಿರ್ಧಾರವನ್ನು ಕೂಡಲೇ ಜಾರಿಗೊಳಿಸಬೇಕು. ಈ ಘೋಷಣೆ ಕಾಗದದಲ್ಲೇ ಉಳಿಯದೆ ತಳಮಟ್ಟದಲ್ಲಿ ಅನುಷ್ಠಾನವಾಗಬೇಕು. ಹೆಚ್ಚುತ್ತಿರುವ ಕೆಲಸದ ಒತ್ತಡದ ಹಿನ್ನೆಲೆ ಆಶಾ ಕಾರ್ಯಕರ್ತೆಯರಿಗೆ ಗೌರವಯುತ ಕೆಲಸದ ಪರಿಸರ, ಸಾಮಾಜಿಕ ಭದ್ರತೆ ಮತ್ತು ನಿವೃತ್ತಿ ಸೌಲಭ್ಯಗಳನ್ನು ಸರ್ಕಾರ ಜಾರಿಗೆ ತರಬೇಕು ಎಂದು ಮನವಿಯಲ್ಲಿ ಆಗ್ರಹಿಸಲಾಗಿದೆ.
ಮನವಿ ಸ್ವೀಕರಿಸಿದ ಸಂಸದ ಕೆ. ರಾಜಶೇಖರ್ ಹಿಟ್ನಾಳ್ ಬಳಿಕ ಮಾತನಾಡಿ, ಆಶಾ ಕಾರ್ಯಕರ್ತೆಯರ ನ್ಯಾಯಸಮ್ಮತ ಬೇಡಿಕೆಗಳ ಕುರಿತು ಕೇಂದ್ರ ಬಜೆಟ್ ಅಧಿವೇಶನ ಸಂದರ್ಭದಲ್ಲಿ ಸರ್ಕಾರದ ಗಮನ ಸೆಳೆದು ಅಗತ್ಯ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದರು.ಸಂಘಟನೆಯ ಜಿಲ್ಲಾಧ್ಯಕ್ಷ ಶರಣು ಗಡ್ಡಿ, ಜಿಲ್ಲಾ ಕಾರ್ಯದರ್ಶಿ ಕೌಶಲ್ಯ ದೊಡ್ಡ ಗೌಡರ, ಜಿಲ್ಲಾ ಆಶಾ ಮುಖಂಡರಾದ ಶೋಭಾ ಹೂಗಾರ್, ಅನ್ನಪೂರ್ಣ, ಸುನೀತಾ, ಶಾರದಾ, ಶಬಾನಾ, ಲಾಲ್ತಿಪ್ಪಮ್ಮ ಬಿ., ಸುಧಾ, ಶಿವಮ್ಮ, ಲಕ್ಷ್ಮೀ, ಲಲಿತಾ, ಶರಣಮ್ಮ, ಅನ್ನಪೂರ್ಣಾ (ಕುಕುನೂರು), ಸಮೀರಾ, ಸವಿತಾ, ಲಕ್ಷ್ಮೀ ಕಟ್ಟಿಮನಿ ಸೇರಿದಂತೆ ಮೊದಲಾದವರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.