ಮಂಗಳೂರು: ಖಾಸಗಿ ಸಾರಿಗೆ ಕಾರ್ಮಿಕರು ಹಾಗೂ ಆಟೋರಿಕ್ಷಾ ಚಾಲಕರು ಎದುರಿಸುತ್ತಿರುವ ವಿವಿಧ ಸಮಸ್ಯೆಗಳಿಗೆ ಪರಿಹಾರ ಕಲ್ಪಿಸುವಂತೆ ಆಗ್ರಹಿಸಿ ಭಾರತೀಯ ಮಜ್ದೂರ್ ಸಂಘದ ಅಂಗಸಂಸ್ಥೆಯಾದ ಭಾರತೀಯ ಖಾಸಗಿ ಸಾರಿಗೆ ಮಜ್ದೂರ್ ಮಹಾಸಂಘದ ವತಿಯಿಂದ ದಕ್ಷಿಣ ಕನ್ನಡ ಹೆಚ್ಚುವರಿ ಜಿಲ್ಲಾಧಿಕಾರಿ ರಾಜು ಕೆ. ಅವರ ಮೂಲಕ ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವ ನಿತಿನ್ ಗಡ್ಕರಿ ಅವರಿಗೆ ಮನವಿ ಸಲ್ಲಿಸಲಾಯಿತು.ದೇಶದಾದ್ಯಂತ ಖಾಸಗಿ ಸಾರಿಗೆ ಕ್ಷೇತ್ರದಲ್ಲಿ ದುಡಿಯುತ್ತಿರುವ ಆಟೋರಿಕ್ಷಾ ಚಾಲಕರು, ಟ್ಯಾಕ್ಸಿ ಚಾಲಕರು ಹಾಗೂ ಇತರ ಸಾರಿಗೆ ಕಾರ್ಮಿಕರ ಹಿತದೃಷ್ಟಿಯಿಂದ ಒಟ್ಟು 12 ಪ್ರಮುಖ ಬೇಡಿಕೆಗಳನ್ನು ಮನವಿಯಲ್ಲಿ ತಿಳಿಸಲಾಗಿದೆ.
ಮೂರು ಚಕ್ರದ ಆಟೋರಿಕ್ಷಾ ಚಾಲಕರ ಚಾಲನಾ ಪರವಾನಗಿ ನವೀಕರಣ ಪ್ರಕ್ರಿಯೆ ಸರಳೀಕರಣ, ಸಾರಿಗೆ ಕಾರ್ಮಿಕರ ಮೇಲಿನ ಅಕ್ರಮ ವಸೂಲಿ ಮತ್ತು ಕಿರುಕುಳ ತಡೆ, ಖಾಸಗಿ ಸಾರಿಗೆ ಚಾಲಕರಿಗೆ ಕನಿಷ್ಠ ಮಾಸಿಕ ವೇತನ 30,000 ರು. ನಿಗದಿ, ಫೆಬ್ರವರಿ 6 ಅನ್ನು ರಾಷ್ಟ್ರೀಯ ಚಾಲಕರ ದಿನವನ್ನಾಗಿ ಘೋಷಿಸುವುದು, ಅರ್ಹ ಹೆದ್ದಾರಿ ಚಾಲಕರಿಗೆ ಅಂಚೆ ಮತದಾನದ ಸೌಲಭ್ಯ ಹಾಗೂ ಅಂತರರಾಜ್ಯ ವಾಹನಗಳಿಗೆ ಏಕರೂಪದ ರಸ್ತೆ ತೆರಿಗೆ ನೀತಿ ಜಾರಿಗೆ ತರಬೇಕೆಂದು ಮನವಿಯಲ್ಲಿ ಒತ್ತಾಯಿಸಲಾಗಿದೆ.ಅಪಘಾತದಲ್ಲಿ ಮೃತಪಟ್ಟ ಚಾಲಕರ ಕುಟುಂಬಕ್ಕೆ 20 ಲಕ್ಷ ರು. ಹಾಗೂ ಸಹಜ ಕಾರಣಗಳಿಂದ ಮೃತಪಟ್ಟ ಚಾಲಕರ ಕುಟುಂಬಕ್ಕೆ 10 ಲಕ್ಷ ರು. ಆರ್ಥಿಕ ನೆರವು ನೀಡುವಂತೆಯೂ ಮನವಿ ಸಲ್ಲಿಸಲಾಗಿದೆ.
ಭಾರತೀಯ ಮಜ್ದೂರ್ ಸಂಘದ ದಕ್ಷಿಣ ಕನ್ನಡ ಜಿಲ್ಲಾ ಅಧ್ಯಕ್ಷ ಅನಿಲ್ ಕುಮಾರ್ ಯು., ಜಿಲ್ಲಾ ಪ್ರಧಾನ ಕಾರ್ಯದರ್ಶಿ ಗೋಪಾಲ ಕೃಷ್ಣ, ಜಿಲ್ಲಾ ಸಂಘಟನಾ ಕಾರ್ಯದರ್ಶಿ ವಸಂತ ಕುಮಾರ್ ಮನಿಹಳ್ಳ, ಜಿಲ್ಲಾ ಉಪಾಧ್ಯಕ್ಷರಾದ ರೋಹಿತಾಶ್ವ, ನಾರಾಯಣ ಪೂಜಾರಿ, ಪ್ರಮುಖರಾದ ಹೇಮಂತ್ ಕುಮಾರ್ ಪುತ್ತೂರು, ಸತೀಶ್ ಬಂಡಾರಿ ಬೆಟ್ಟು ಬಂಟ್ವಾಳ, ಶ್ರೀಕಾಂತ್ ಬಂಟ್ವಾಳ, ದಿನೇಶ್ ಮೂಲ್ಯ ಬಂಟ್ವಾಳ, ಉಮಾಶಂಕರ್ ಬಂಟ್ವಾಳ, ಸತೀಶ್ ಕುಮಾರ್ ಬಂಟ್ವಾಳ, ಉಮೇಶ್ ದೇವಾಡಿಗ ಇಡ್ಯಾ ಸುರತ್ಕಲ್, ಸುನೀಲ್ ಕುತ್ತಾರು, ಉಳ್ಳಾಲ ಮತ್ತಿತರರು ಇದ್ದರು.