ಪ್ರಾಂಶುಪಾಲರ ವರ್ಗಾವಣೆ ರದ್ದತಿಗೆ ಆಗ್ರಹಿಸಿ ಜಿಲ್ಲಾಧಿಕಾರಿಗೆ ಮನವಿ

KannadaprabhaNewsNetwork | Published : Feb 21, 2025 12:48 AM

ಸಾರಾಂಶ

ಚಿಕ್ಕಮಗಳೂರು, ತಾಲೂಕಿನ ಬೀಕನಹಳ್ಳಿ ಮೊರಾರ್ಜಿ ದೇಸಾಯಿ ವಸತಿ ಶಾಲೆ ಪ್ರಾಂಶುಪಾಲರ ಮೇಲೆ ಕೆಲವರು ವೈಯಕ್ತಿಕ ಧ್ವೇಷದಿಂದ ಸುಳ್ಳು ಆರೋಪ ಹೊರಿಸಿ ತೇಜೋವಧೆ ಮಾಡುತ್ತಿದ್ದು, ಅದರ ಸತ್ಯಾಸತ್ಯತೆ ಪರಿಶೀಲಿಸದೇ ವರ್ಗಾವಣೆ ಮಾಡಿರುವುದು ಸರಿಯಲ್ಲ, ಕೂಡಲೆ ವರ್ಗಾವಣೆಯನ್ನು ರದ್ದು ಮಾಡಬೇಕು ಎಂದು ಆಗ್ರಹಿಸಿ ದಸಂಸ (ಸ್ವಾಭಿಮಾನಿ ಪ್ರೊ.ಕೃಷ್ಣಪ್ಪ ಬಣ) ಮುಖಂಡರ ನೇತೃತ್ವದಲ್ಲಿ ವಸತಿ ಶಾಲೆ ಮಕ್ಕಳ ಪೋಷಕರು ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದರು.

ದಸಂಸ (ಸ್ವಾಭಿಮಾನಿ ಪ್ರೊ.ಕೃಷ್ಣಪ್ಪ ಬಣ) ಮುಖಂಡರ ನೇತೃತ್ವದಲ್ಲಿ ವಸತಿ ಶಾಲೆ ಮಕ್ಕಳ ಪೋಷಕರು ಜಿಲ್ಲಾಧಿಕಾರಿಗೆ ಕೋರಿಕೆ

ಕನ್ನಡಪ್ರಭ ವಾರ್ತೆ, ಚಿಕ್ಕಮಗಳೂರು

ತಾಲೂಕಿನ ಬೀಕನಹಳ್ಳಿ ಮೊರಾರ್ಜಿ ದೇಸಾಯಿ ವಸತಿ ಶಾಲೆ ಪ್ರಾಂಶುಪಾಲರ ಮೇಲೆ ಕೆಲವರು ವೈಯಕ್ತಿಕ ಧ್ವೇಷದಿಂದ ಸುಳ್ಳು ಆರೋಪ ಹೊರಿಸಿ ತೇಜೋವಧೆ ಮಾಡುತ್ತಿದ್ದು, ಅದರ ಸತ್ಯಾಸತ್ಯತೆ ಪರಿಶೀಲಿಸದೇ ವರ್ಗಾವಣೆ ಮಾಡಿರುವುದು ಸರಿಯಲ್ಲ, ಕೂಡಲೆ ವರ್ಗಾವಣೆಯನ್ನು ರದ್ದು ಮಾಡಬೇಕು ಎಂದು ಆಗ್ರಹಿಸಿ ದಸಂಸ (ಸ್ವಾಭಿಮಾನಿ ಪ್ರೊ.ಕೃಷ್ಣಪ್ಪ ಬಣ) ಮುಖಂಡರ ನೇತೃತ್ವದಲ್ಲಿ ವಸತಿ ಶಾಲೆ ಮಕ್ಕಳ ಪೋಷಕರು ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದರು.ದಸಂಸ ಮುಖಂಡ ಕಬ್ಬಿಗೆರೆ ಮೋಹನ್, ಸತ್ಯನಾರಾಯಣ, ಭಾರತಿ, ನಂಜುಂಡಪ್ಪ, ಸತೀಶ್, ಹರೀಶ್ ನೇತೃತ್ವದಲ್ಲಿ ಮಕ್ಕಳ ಪೋಷಕರಾದ ಕಿರಣ್, ರಾಜೇಶ್ ಮತ್ತಿತರರು ಬುಧವಾರ ಜಿಲ್ಲಾಧಿಕಾರಿ ಕಚೇರಿಯಲ್ಲಿ ಡಿಸಿ ಮೀನಾ ನಾಗರಾಜ್ ಅವರನ್ನು ಭೇಟಿ ಮಾಡಿ ಮನವಿ ಸಲ್ಲಿಸಿ ಮಾತನಾಡಿ, ಬೀಕನಹಳ್ಳಿ ವಸತಿ ಶಾಲೆ ಪ್ರಾಂಶುಪಾಲ ಮಧುಸೂಧನ್ ಪ್ರಾಂಶುಪಾಲರಾಗಿ ವಸತಿ ಶಾಲೆಗೆ ಬಂದ ಬಳಿಕ ವಸತಿ ಶಾಲೆ ಮಕ್ಕಳ ಶೈಕ್ಷಣಿಕ ಪ್ರಗತಿಯಲ್ಲಿ ಉತ್ತಮ ಸಾಧನೆ ಕಂಡು ಬಂದಿದೆ. ವಸತಿ ಶಾಲೆ ವಿದ್ಯಾರ್ಥಿಯೊಬ್ಬರು ೬೨೫ ಅಂಕ ಪಡೆಯುವ ಮೂಲಕ ರಾಜ್ಯ ಮಟ್ಟದಲ್ಲಿ ಸಾಧನೆ ಮಾಡುವಂತಾಗಿದೆ. ಪ್ರಾಂಶುಪಾಲರು ಮಕ್ಕಳ ಶೈಕ್ಷಣಿಕ ಪ್ರಗತಿಗೆ ಹೆಚ್ಚು ಆಸಕ್ತಿಯಿಂದ ಕೆಲಸ ಮಾಡುತ್ತಿರುವುದರಿಂದ ಪ್ರತೀ ವರ್ಷ ಈ ವಸತಿ ಶಾಲೆ ಮಕ್ಕಳು ಉತ್ತಮ ಅಂಕ ಪಡೆಯುತ್ತಿದ್ದಾರೆ ಎಂದರು.ಪ್ರಾಂಶುಪಾಲ ಮಧುಸೂದನ್ ಕಾರ್ಯವೈಖರಿಯಿಂದ ವಸತಿ ಶಾಲೆಯಲ್ಲಿ ಸಕಲ ಮೂಲಸೌಕರ್ಯ ಕಲ್ಪಿಸಲಾಗಿದೆ. ಶಾಲೆಯಲ್ಲಿ ಶುದ್ಧ ಕುಡಿಯುವ ನೀರಿನ ಘಟಕ ಸ್ಥಾಪಿಸಲಾಗಿದೆ. ಮಕ್ಕಳ ಕಲಿಕೆಗೆ ಕಂಪ್ಯೂಟರ್‌ಗಳನ್ನು ದಾನಿಗಳ ನೆರವಿನಿಂದ ಅಳವಡಿಸಿ ಕಂಪ್ಯೂಟರ್ ಶಿಕ್ಷಣ ನೀಡಲಾಗುತ್ತಿದೆ. ಪ್ರಾಂಶುಪಾಲರ ಈ ಕೆಲಸ ಕಂಡು ಮಕ್ಕಳ ಪೋಷಕರು ಹಣ ಸಂಗ್ರಹಿಸಿ ವಸತಿ ಶಾಲೆ ಮೂಲಸೌಕರ್ಯಕ್ಕೆ ವಂತಿಗೆ ನೀಡಿದ್ದಾರೆ. ಹೀಗೆ ಬಡ ಮಕ್ಕಳ ಶೈಕ್ಷಣಿಕ ಪ್ರಗತಿಗೆ ಶ್ರಮಿಸುತ್ತಿರುವ ಪ್ರಾಂಶುಪಾಲ ಮಧುಸೂದನ್ ಅವರನ್ನು ಸುಳ್ಳು ಆರೋಪದ ಕಾರಣಕ್ಕೆ ಬೇರೆಡೆಗೆ ವರ್ಗಾವಣೆ ಮಾಡಿ ರುವುದು ಸರಿಯಲ್ಲ. ಅವರ ವರ್ಗಾವಣೆಯನ್ನು ಕೂಡಲೇ ರದ್ದು ಮಾಡಬೇಕು ಎಂದು ಮನವಿ ಮಾಡಿದರು.ಮನವಿ ಆಲಿಸಿದ ಜಿಲ್ಲಾಧಿಕಾರಿ, ಬೀಕನಹಳ್ಳಿ ವಸತಿ ಶಾಲೆ ಪ್ರಾಂಶುಪಾಲರ ಪ್ರಕರಣದ ಬಗ್ಗೆ ಪರ ವಿರೋಧ ವ್ಯಕ್ತವಾಗಿದ್ದು, 2 ಕಡೆಯವರ ವಾದ ಆಲಿಸಿದ್ದೇನೆ. ಈ ಸಂಬಂಧ ಸಮಗ್ರ ತನಿಖೆ ನಡೆಸಿ ಸೂಕ್ತ ಕ್ರಮವಹಿಸಲಾಗುವುದು. ಕ್ರೈಸ್ ಶಿಕ್ಷಣ ಸಂಸ್ಥೆ ಅಧೀನದಲ್ಲಿರುವ ಈ ವಸತಿ ಶಾಲೆ ಪ್ರಾಂಶುಪಾಲರ ಮೇಲಿನ ಆರೋಪಗಳ ಬಗ್ಗೆ ವಿಚಾರಣೆ ನಡೆಸಲು ಸಮಿತಿ ರಚನೆ ಮಾಡಲಾಗುವುದು, ಸಮಿತಿ ವರದಿ ಆಧರಿಸಿ ಅಗತ್ಯ ಕ್ರಮವಹಿಸಲಾಗುವುದು ಎಂದು ಭರವಸೆ ನೀಡಿದರು.

Share this article