ಕನ್ನಡಪ್ರಭ ವಾರ್ತೆ ಸೋಮವಾರಪೇಟೆ
ತಾಲೂಕು ಕಚೇರಿಯಲ್ಲಿ ತಹಸೀಲ್ದಾರ್‌ರನ್ನು ಭೇಟಿ ಮಾಡಿದ ನಿಯೋಗ, ಕಳೆದ ಹಲವಾರು ತಿಂಗಳುಗಳಿಂದ ತಾಲೂಕು ಕಚೇರಿಗೆ ನೀಡುತ್ತಾ ಬಂದಿರುವ ಮನವಿಗಳ ಪ್ರಗತಿಯ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದರು.
ಸಿ ಮತ್ತು ಡಿ ಜಾಗ ಸಮಸ್ಯೆ, ಕಂದಾಯ ಭೂಮಿಗೆ ದಾಖಲೆ ನೀಡದೇ ಎದುರಾಗಿರುವ ಸಮಸ್ಯೆಗಳು, ಬಗರ್‌ಹುಕುಂ ಅಡಿಯಲ್ಲಿ ಸಲ್ಲಿಕೆಯಾಗಿರುವ ಅರ್ಜಿಗಳ ವಿಲೇವಾರಿ, ಪೋಡಿ, ದುರಸ್ತಿ ಸೇರಿದಂತೆ ಇನ್ನಿತರ ಹಲವಾರು ಸಮಸ್ಯೆಗಳಿಗೆ ಕಂದಾಯ ಇಲಾಖೆಯಿಂದ ಯಾವುದೇ ಸ್ಪಂದನೆ ಲಭಿಸುತ್ತಿಲ್ಲ ಎಂದು ಸಮಿತಿಯ ಅಧ್ಯಕ್ಷ ಅರುಣ್ ಕುಮಾರ್ ಗಮನ ಸೆಳೆದರು.ಶಾಂತಳ್ಳಿ ಹೋಬಳಿ ನಾಡಕಚೇರಿ ಸೇರಿದಂತೆ ಕಂದಾಯ ಇಲಾಖೆಯ ಹಲವಷ್ಟು ಕಚೇರಿಗಳಲ್ಲಿ ಸಿಬ್ಬಂದಿ ಇರುವುದಿಲ್ಲ. ಸರಿಯಾದ ಸಮಯ ಪಾಲನೆ ಮಾಡುತ್ತಿಲ್ಲ. ತಾಲೂಕು ಕಚೇರಿಯನ್ನೂ ಒಳಗೊಂಡಂತೆ ಕಂದಾಯ ಇಲಾಖೆಯ ಇತರ ಕಚೇರಿಗಳಲ್ಲಿ ಬಯೋಮೆಟ್ರಿಕ್ ಹಾಜರಾತಿಯನ್ನು ಅಳವಡಿಸಬೇಕು ಎಂದು ಒತ್ತಾಯಿಸಿದರು.
ಈ ಸಂದರ್ಭ ಮಾತನಾಡಿದ ತಹಸೀಲ್ದಾರ್ ಶ್ರೀಧರ್ ಅವರು, ತಾಲೂಕು ಕಚೇರಿಯಲ್ಲಿ ಬಯೋಮೆಟ್ರಿಕ್ ಅಳವಡಿಸಲಾಗುವುದು. ಅರ್ಜಿಗಳನ್ನು ತನ್ನ ಹಂತದಲ್ಲಿ ವಿಲೇವಾರಿ ಮಾಡಲು ಕ್ರಮ ವಹಿಸಲಾಗುವುದು ಎಂದು ಭರವಸೆ ನೀಡಿದರು.
ಈ ಸಂದರ್ಭ ತಾಲೂಕು ಅಭಿವೃದ್ಧಿ ಹೋರಾಟ ಸಮಿತಿ ಉಪಾಧ್ಯಕ್ಷ ಕೆ.ಎನ್. ದೀಪಕ್, ಕಾರ್ಯದರ್ಶಿ ಆದರ್ಶ್ ತಮ್ಮಯ್ಯ, ಪದಾಧಿಕಾರಿಗಳಾದ ಹೂವಯ್ಯ, ಮಂಜೂರು ತಮ್ಮಣ್ಣಿ, ಸುಲೈಮಾನ್, ನ.ಲ. ವಿಜಯ, ತ್ರಿಶೂಲ್, ಅನಂತ್ ಸೇರಿದಂತೆ ಇತರರು ಉಪಸ್ಥಿತರಿದ್ದರು.