ಗೊಂಡ, ಆದಿಗೊಂಡ, ಜೇನು, ಕಾಡುಕುರುಬ ಇವೆಲ್ಲವು ಕುರುಬರ ಪರ್ಯಾಯ ಪದಗಳು. ಕುರುಬರೆ ಗೊಂಡರು ಎಂದು ರಾಜ್ಯ ಸರ್ಕಾರ ಕೇಂದ್ರಕ್ಕೆ ಶಿಫಾರಸು ನೀಡಿದೆ. ಕೇಂದ್ರ ಸರ್ಕಾರ ನಮ್ಮ ನ್ಯಾಯಯುತ ಬೇಡಿಕೆಗೆ ಸ್ಪಂದಿಸುತ್ತಿಲ್ಲ ಎಂದು ಮುಖಂಡರು ತಿಳಿಸಿದರು.
ಶಿರಹಟ್ಟಿ: ಕುರುಬ ಸಮಾಜವನ್ನು ಪರಿಶಿಷ್ಟ ಪಂಗಡ(ಎಸ್‌ಟಿ) ವರ್ಗಕ್ಕೆ ಸೇರಿಸುವಂತೆ ಆಗ್ರಹಿಸಿ ಪಟ್ಟಣದಲ್ಲಿ ಕುರುಬ ಸಮಾಜದವರು ಸೋಮವಾರ ಸಂತೋಷ ಕುರಿ ಅವರ ನೇತೃತ್ವದಲ್ಲಿ ತಹಸೀಲ್ದಾರರ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಿದರು.ಈ ವೇಳೆ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಯುವಸೇನೆ ಜಿಲ್ಲಾ ಅಧ್ಯಕ್ಷ ಹಾಗೂ ಸಮಾಜದ ಯುವ ಮುಖಂಡ ಸಂತೋಷ ಕುರಿ ಮಾತನಾಡಿ, ಸಮುದಾಯಕ್ಕೆ ಬುಡಕಟ್ಟು ಜನಾಂಗದ ಐತಿಹಾಸಿಕ ಪರಂಪರೆ ಇದೆ. ಈ ಕುರಿತಂತೆ ಕುಲಶಾಸ್ತ್ರೀಯ ಅಧ್ಯಯನ ವರದಿಯಲ್ಲಿ ಮಾಹಿತಿ ನೀಡಲಾಗಿದೆ.
ಗೊಂಡ, ಆದಿಗೊಂಡ, ಜೇನು, ಕಾಡುಕುರುಬ ಇವೆಲ್ಲವು ಕುರುಬರ ಪರ್ಯಾಯ ಪದಗಳು. ಕುರುಬರೆ ಗೊಂಡರು ಎಂದು ರಾಜ್ಯ ಸರ್ಕಾರ ಕೇಂದ್ರಕ್ಕೆ ಶಿಫಾರಸು ನೀಡಿದೆ. ಕೇಂದ್ರ ಸರ್ಕಾರ ನಮ್ಮ ನ್ಯಾಯಯುತ ಬೇಡಿಕೆಗೆ ಸ್ಪಂದಿಸುತ್ತಿಲ್ಲ ಎಂದು ದೂರಿದರು.ಮಳೆ, ಗಾಳಿ, ಚಳಿ, ಗುಡುಗು, ಸಿಡಿಲು ಎನ್ನದೇ ಜೀವದ ಹಂಗು ತೊರೆದು ತಮ್ಮ ಮೂಲ ಕುಲ ಕಸುಬಾದ ಕುರಿ ಕಾಯುವ ಕಾಯಕದಲ್ಲಿ ಕುರಿಗಾರರು ನಿತ್ಯ ಕಾಲ ಕಳೆಯುತ್ತಿದ್ದು, ಸಂಚಾರಿ ಮತ್ತು ದಿನವಿಡಿ ಅಡವಿಯಲ್ಲಿಯೇ ಇರುವ ಕುರಿಗಾರರಿಗೆ ಸರ್ಕಾರ ವಿಶೇಷ ಪ್ಯಾಕೇಜ್ ಘೋಷಣೆ ಮಾಡಬೇಕು ಎಂದು ಆಗ್ರಹಿಸಿದರು.ಕುರುಬರಿಗಾಗಿ ಪ್ರತ್ಯೇಕ ನಿಗಮ ಮಂಡಳಿ ಸ್ಥಾಪಿಸಬೇಕು. ಕಾಯ್ದಿಟ್ಟ ಅರಣ್ಯ ಪ್ರದೇಶದಲ್ಲಿ ಕುರಿಗಳನ್ನು ಮೇಯಿಸಲು ಅವಕಾಶ ಕಲ್ಪಿಸಬೇಕು. ಕುರಿಗಳ ಅಕಾಲಿಕ ಮರಣದಿಂದ ಸರ್ಕಾರ ನಿಡುತ್ತಿರುವ ಧನಸಹಾಯವನ್ನು ಕುರಿಗಾಯಿಗಳನ್ನು ಅಲೆದಾಡಿಸದೇ ನಿಗದಿತ ಸಮಯಕ್ಕೆ ನೀಡಬೇಕು. ಪ್ರತಿ ತಾಲೂಕು ಕೇಂದ್ರಸ್ಥಳದಲ್ಲಿ ಕನಕ ಭವನ ನಿರ್ಮಾಣಕ್ಕೆ ಅನುದಾನ ನೀಡಬೇಕು ಎಂದು ರಾಜ್ಯ ಸರ್ಕಾರಕ್ಕೆ ಒತ್ತಾಯಿಸಿದರು.ಮೀಸಲಾತಿ ವಿಷಯದಲ್ಲಿ ಸಮುದಾಯಕ್ಕೆ ನಿರಂತರವಾಗಿ ಅನ್ಯಾಯ ಆಗುತ್ತಿದೆ. ಚುನಾವಣೆ ಪೂರ್ವದಲ್ಲಿ ರಾಜ್ಯ ಮತ್ತು ಕೇಂದ್ರ ಸರ್ಕಾರಗಳು ನೀಡಿದ ಭರವಸೆಯಂತೆ ನಡೆದುಕೊಳ್ಳಬೇಕು. ನ್ಯಾಯಯುತವಾಗಿ ಸಂವಿಧಾನಬದ್ಧವಾಗಿ ನಮ್ಮ ಹಕ್ಕು ಪ್ರತಿಪಾದಿಸುತ್ತಿದ್ದೇವೆ. ಸರ್ಕಾರ ಇದನ್ನು ಗಂಭೀರವಾಗಿ ಪರಿಗಣಿಸಿ ನಮ್ಮ ಬೇಡಿಕೆ ಈಡೇರಿಸಬೇಕು ಎಂದು ಒತ್ತಾಯಿಸಿದರು.ಮುಖಂಡ ರಾಮಣ್ಣ ಕಂಬಳಿ ಮಾತನಾಡಿ, ಕುರುಬ ಸಮುದಾಯಕ್ಕೆ ಪರಿಶಿಷ್ಟ ಪಂಗಡದ ಸ್ಥಾನಮಾನ ನೀಡುವ ಬಗ್ಗೆ ಚರ್ಚೆ ನಡೆಯುತ್ತಿದೆ. ಗೊಂಡ ಬುಡಕಟ್ಟು ಜನಾಂಗದ ಸಮಾನಾರ್ಥವಾಗಿ ಕುರುಬ ಸಮುದಾಯವನ್ನು ಪರಿಶಿಷ್ಟ ಪಟ್ಟಿಗೆ ಸೇರಿಸಲು ಆಗ್ರಹಿಸಿದರು.ಕುರುಬ ಸಮುದಾಯಕ್ಕೆ ಸಂಬಂಧಿಸಿದ ಕುಲಶಾಸ್ತ್ರೀಯ ಅಧ್ಯಯನದ ವರದಿಯನ್ನು ಶೀಘ್ರವೇ ಅಂಗೀಕರಿಸಿ ಕುರುಬ ಸಮಾಜವನ್ನು ಎಸ್ಟಿ ಮೀಸಲಾತಿಗೆ ಒಳಪಡಿಸಬೇಕು ಎಂದು ಈ ಹಿಂದೆಯೂ ಕೂಡ ಮನವಿ ಸಲ್ಲಿಸಿ ಆಗ್ರಹಿಸಿಲಾಗಿದೆ. ೨೦೧೮ರಲ್ಲೇ ಅಂದಿನ ಸರ್ಕಾರ ಕುಲಶಾಸ್ತ್ರೀಯ ಅಧ್ಯಯನಕ್ಕೆ ಆದೇಶ ನೀಡಿತ್ತು. ಇದನ್ನು ಕೂಡಲೇ ಅಂಗೀಕರಿಸಿ ನಮ್ಮ ಹಕ್ಕೊತ್ತಾಯಕ್ಕೆ ಮನ್ನಣೆ ನೀಡಬೇಕೆಂದು ಆಗ್ರಹಿಸಿದರು.ಕುರುಬ ಸಮಾಜ ಹಲವು ವರ್ಷಗಳಿಂದಲೂ ಮೀಸಲಾತಿ ತಾರತಮ್ಯ ಎದುರಿಸುತ್ತಿದೆ. ಮೀಸಲಾತಿ ಅಸಮಾನತೆ ಹೋಗಲಾಡಿಸಬೇಕೆಂದು ಒತ್ತಾಯಿಸಿದರು. ಸಮುದಾಯಕ್ಕೆ ದೊರೆಯಬೇಕಾದ ನ್ಯಾಯಸಮ್ಮತ ಮೀಸಲಾತಿ ನೀಡದಿದ್ದರೆ ಮುಂದಿನ ದಿನಗಳಲ್ಲಿ ಉಗ್ರ ಹೋರಾಟಕ್ಕೆ ಇಳಿಯಬೇಕಾಗುತ್ತದೆ ಎಂದು ಎಚ್ಚರಿಸಿದರು.ಶಿರಸ್ತೇದಾರ ಜೆ.ಪಿ. ಪೂಜಾರ ಮನವಿ ಸ್ವೀಕರಿಸಿದರು. ಚೆನ್ನವೀರಪ್ಪ ಸ್ವಾಮಿ, ದೇವಪ್ಪ ಬಜನಿ, ಹೊನ್ನಪ್ಪ ಗೂಳಪ್ಪನವರ, ಬಸಪ್ಪ ಬಸಾಪೂರ, ಸುರೇಶ ಕುರಿ, ಫಕ್ಕೀರೇಶ ಜಿಡಗಣ್ಣವರ, ಲಕ್ಷ್ಮಣ ರೊಟ್ಟಿಗವಾಡ, ಹನುಮಂತಪ್ಪ ಕುರಿ, ಫಕೀರೇಶ ಡಂಬಳ, ಬಸವರಾಜ ಕಂಬಳಿ ಸೇರಿದಂತೆ ಇತರರು ಇದ್ದರು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.