ಉಡುಪಿ: ಸಂಸದ ಕೋಟ ಶ್ರೀನಿವಾಸ ಪೂಜಾರಿ ನೇತೃತ್ವದಲ್ಲಿ ಅಖಿಲ ಭಾರತ ಗೋಡಂಬಿ ಉದ್ಯಮದ ಸಂಘದ ಅಧ್ಯಕ್ಷ ಬೋಳ ರಾಹುಲ್ ಕಾಮತ್ ಮತ್ತು ಕುಂದಾಪುರದ ಶಾಸಕ ಕಿರಣ್ ಕುಮಾರ್ ಕೊಡ್ಗಿ ಮತ್ತಿತರರು ಕೇಂದ್ರ ವಾಣಿಜ್ಯ ಮತ್ತು ಕೈಗಾರಿಕಾ ಸಚಿವ ಪಿಯೂಷ್ ಗೋಯಲ್ ಅವರನ್ನು ಭೇಟಿ ಮಾಡಿ ಗೋಡಂಬಿ ಉದ್ಯಮ ಎದುರಿಸುತ್ತಿರುವ ಸಮಸ್ಯೆಗಳ ಬಗ್ಗೆ ಚರ್ಚಿಸಿ ಮನವಿ ಅರ್ಪಿಸಿದರು.
ಕೆಲವೆಡೆ ಕಚ್ಛಾ ಗೋಡಂಬಿಯನ್ನು ಹುರಿದ ಗೋಡಂಬಿ ಎಂದು ಘೋಷಿಸಿ, ದರದ ವ್ಯತ್ಯಯ ಮತ್ತು ಸಂಶೋಧನಾ ಸಂಸ್ಥೆಗಳ ತಪಾಸಣೆಯಿಂದ ಉದ್ಯಮದಲ್ಲಿ ಅನಗತ್ಯ ಗೊಂದಲ ಉಂಟಾಗುತ್ತಿದ್ದು ಕೇಂದ್ರ ಸರ್ಕಾರ ಮಧ್ಯಪ್ರವೇಶಿಸಿ ಉದ್ಯಮವನ್ನು ಉಳಿಸಿ ಬೆಳೆಸಲು ಸಹಕರಿಸಬೇಕು ಎಂದು ವಿನಂತಿಸಿದರು.ಸುದೀರ್ಘ ಚರ್ಚೆಯ ನಂತರ ಸ್ಥಳದಲ್ಲಿ ಉಪಸ್ಥಿತರಿದ್ದ ಅಧಿಕಾರಿಗಳಿಗೆ ಇನ್ನುಮುಂದೆ ಅಕ್ರಮ ಗೋಡಂಬಿ ಆಮದಿನ ಬಗ್ಗೆ ಕಟ್ಟು ನಿಟ್ಟಾಗಿ ಮಾರ್ಗಸೂಚಿ ರಚಿಸುವಂತೆ, ಪಶು ಆಹಾರಕ್ಕೆ ಬೆಳೆಸುವ ಹೆಸರಲ್ಲಿ ಸುಂಕ ರಹಿತ ಗೋಡಂಬಿ ಆಮದನ್ನು ನಿಲ್ಲಿಸುವಂತೆ ಕೇಂದ್ರ ಆಹಾರ ತಾಂತ್ರಿಕ ಸಂಶೋಧನಾ ಸಂಸ್ಥೆಯ ಮೂಲಕ ಗುಣಮಟ್ಟವನ್ನು ತೀವ್ರ ಪರಿಶೀಲನೆಗೊಳಪಡಿಸುವಂತೆ ಕೇಂದ್ರ ಸಚಿವರು ನಿರ್ದೇಶಿಸಿದರು.ಅಕ್ರಮ ಆಮದುಗಳನ್ನು ನಿಲ್ಲಿಸಿ ಕಾನೂನು ಚೌಕಟ್ಟಿನಲ್ಲಿ ದೇಶಿಯ ಮಾನದಂಡದಡಿ ಮಾತ್ರ ಆಮದಿಗೆ ಅವಕಾಶ ನೀಡಲು ಆದೇಶಿಸಿದರು.ಶಾಸಕ ಕಿರಣ್ ಕೊಡ್ಗಿ ಮಾತನಾಡಿ, ಗೇರು ಬೀಜ ಉದ್ಯಮ ಉಳಿದು ಬೆಳೆಯಲು ಸಹಾಯ ಮಾಡುತ್ತಿರುವ ಪ್ರಧಾನಿ ಮೋದಿ ಮತ್ತು ವಾಣಿಜ್ಯ ಕೈಗಾರಿಕಾ ಮಂತ್ರಿಗಳಿಗೆ ಕೃತಜ್ಞತೆ ತಿಳಿಸಿದರು.
ದೆಹಲಿಯ ಭವನದ ಕೇಂದ್ರ ಸಚಿವರ ಕಚೇರಿಯಲ್ಲಿ ನಡೆದ ಸಭೆಯಲ್ಲಿ ಅಖಿಲ ಭಾರತ ಗೋಡಂಬಿ ಉದ್ಯಮದ ಸಂಘದ ಕಾರ್ಯದರ್ಶಿ ಎಂ. ರಾಮಕೃಷ್ಣನ್, ಗೋಡಂಬಿ ಉದ್ಯಮಿಗಳಾದ ಪ್ರಕಾಶ್ ಕಲ್ಬಾವಿ, ತುಕಾರಂ ಪ್ರಭು, ಉಪೇಂದ್ರ ಕೆ. ಮತ್ತು ಇಲಾಖೆಯ ಹೆಚ್ಚುವರಿ ಕಾರ್ಯದರ್ಶಿ ನಿತಿನ್ ಯಾದವ್, ಆರ್ಥಿಕ ಸಲಹೆಗಾರ್ತಿ ಪ್ರಿಯಾ ನಾಯರ್, ಹೆಚ್ಚುವರಿ ಡಿಜಿಎಫ್‌ಟಿ ರಾಕೇಶ್ ಕುಮಾರ್ ಮುಂತಾದವರಿದ್ದರು.