ಕನ್ನಡಪ್ರಭ ವಾರ್ತೆ ಹುಬ್ಬಳ್ಳಿ
ಕಾಂಗ್ರೆಸ್‌ನವರು ಓಲೈಕೆ ರಾಜಕಾರಣ ಮಾಡುತ್ತಿದ್ದಾರೆ. ಆದರೆ, ನಾವು ದೇಶದ ಸಮಗ್ರ ಅಭಿವೃದ್ಧಿಗೆ ಆದ್ಯತೆ ಕೊಡುತ್ತಿದ್ದೇವೆ ಎಂದು ಕೇಂದ್ರ ಕಾನೂನು ಸಚಿವ ಅರ್ಜುನ್ ರಾಮ್ ಮೇಘವಾಲ್ ಹೇಳಿದರು.ಇಲ್ಲಿನ ಬಿಜೆಪಿ ಕಾರ್ಯಾಲಯದಲ್ಲಿ ಭಾನುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ನಾವು ಬಿಡುಗಡೆ ಮಾಡಿದ ಪ್ರಣಾಳಿಕೆಯಲ್ಲಿ ದೇಶದಲ್ಲಿ ನಗದು ರಹಿತ ವಾಣಿಜ್ಯ ವಹಿವಾಟಿಗೆ, ಸಾಮಾಜಿಕ ಸವಲತ್ತು ಕಲ್ಪಿಸಿಕೊಡಲು ಹಾಗೂ ಶೋಷಿತ ಸಮುದಾಯದ ಏಳ್ಗೆಗೆ ಆದ್ಯತೆ ನೀಡಿದ್ದೇವೆ ಎಂದರು.
ದೇಶದ ಮೂಲಭೂತ ಸೌಕರ್ಯ ಅಭಿವೃದ್ಧಿ ಪಡಿಸಿದ್ದೇವೆ. ಇದರ ಆಧಾರದ ಮೇಲೆ ವಿಕಸಿತ ಭಾರತದ ಅಭಿವೃದ್ಧಿಗೆ ಆದ್ಯತೆ ಕೊಡಲಾಗುತ್ತಿದೆ. ಆದರೆ, ಕಾಂಗ್ರೆಸ್‌ನವರು ಒಂದೇ ಸಮುದಾಯದ ಓಲೈಕೆ ಗಮನದಲ್ಲಿಟ್ಟುಕೊಂಡು ತಮ್ಮ ಪ್ರಣಾಳಿಕೆ ಸಿದ್ಧಪಡಿಸಿದ್ದಾರೆ ಎಂದು ಆರೋಪಿಸಿದರು.ಭ್ರಷ್ಟಾಚಾರ ರಹಿತವಾದ ಉತ್ತಮ ಆಡಳಿತ ನೀಡುವುದೇ ನಮ್ಮ ಪಕ್ಷದ ಅಜೆಂಡಾ ಆಗಿದ್ದು, ಈ ಹಿನ್ನೆಲೆಯಲ್ಲಿ ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ 400ಕ್ಕೂ ಅಧಿಕ ಸ್ಥಾನಗಳಲ್ಲಿ ಬಿಜೆಪಿ ಜಯಗಳಿಸುವ ವಿಶ್ವಾಸವಿದೆ.
2004ರಲ್ಲಿ ಮುಸ್ಲಿಮರು ಕಾಂಗ್ರೆಸ್ ತ್ಯಜಿಸಿ ಸಮಾಜವಾದಿ, ಬಹುಜನ ಸಮಾಜ ಪಕ್ಷಕ್ಕೂ ನಂತರ ತೃಣಮೂಲ ಕಾಂಗ್ರೆಸ್‌ಗೆ ಬೆಂಬಲ ನೀಡುತ್ತ ಹೋದರು. ಈ ವೇಳೆ ಎಚ್ಚೆತ್ತ ಕಾಂಗ್ರೆಸ್ ಕೆಲವು ಹಿರಿಯರನ್ನು ಸೇರಿಸಿಕೊಂಡು ಚಿಂತಕರ ವೇದಿಕೆ ನಡೆಸಿ ಘಟನೆಯ ಕಾರಣ ಅರಿತುಕೊಂಡರು. ಆಗ ಮುಸ್ಲಿಮರನ್ನು ಮತ್ತೆ ಪಕ್ಷದತ್ತ ಓಲೈಸಿಕೊಳ್ಳಲು ಕಾಂಗ್ರೆಸ್ ಮುಸ್ಲಿಂ ತುಷ್ಟೀಕರಣ ನೀತಿಯನ್ನೇ ತನ್ನ ಅಜೆಂಡಾ ಮಾಡಿಕೊಂಡಿತು. ಇದನ್ನು ಇಂದಿಗೂ ಮುಂದುವರಿಸಿಕೊಂಡು ಬಂದಿದೆ ಎಂದು ದೂರಿದರು.ರಾಷ್ಟ್ರೀಯ ಅಭಿವೃದ್ಧಿ ಮಂಡಳಿ ಸಭೆಯಲ್ಲಿ ಆಗಿನ ಪ್ರಧಾನಮಂತ್ರಿ ಡಾ. ಮನಮೋಹನ ಸಿಂಗ್ ಈ ದೇಶದ ಸಂಪನ್ಮೂಲಗಳ ಮೇಲೆ ಮುಸ್ಲಿಮರಿಗೆ ಮೊದಲ ಹಕ್ಕು ಇದೆ ಎಂದು ಹೇಳಿದ್ದರು. 2009ರಲ್ಲಿ ಮುಂಬೈನಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಅದನ್ನು ಪುನರುಚ್ಛರಿಸಿದ್ದರು. ಇದರ ಮುಂದುವರಿದ ಭಾಗವಾಗಿ ಪ್ರಸ್ತುತ ಲೋಕಸಭಾ ಚುನಾವಣೆಯ ಪ್ರಣಾಳಿಕೆಯಲ್ಲಿ ಕಾಂಗ್ರೆಸ್ ಮುಸ್ಲಿಮರಿಗೆ ವಿಶೇಷವಾಗಿ ಯೋಜನೆ ಪ್ರಕಟಿಸಿದೆ. ಇದೇ ನೀತಿಯನ್ನು ಮುಂದಿಟ್ಟುಕೊಂಡು ಇಂಡಿಯಾ ಒಕ್ಕೂಟ ರಚಿಸಿದ್ದಾರೆ. ಇವರದು ಘಟಬಂಧನವಲ್ಲ, ಕಟ್ಬಂಧನ ಎಂದು ವ್ಯಂಗ್ಯವಾಡಿದರು.
ಈ ವೇಳೆ ಶಿಸ್ತು ಸಮಿತಿ ಅಧ್ಯಕ್ಷ ಲಿಂಗರಾಜ ಪಾಟೀಲ, ದತ್ತಮೂರ್ತಿ ಕುಲಕರ್ಣಿ, ಬಸವರಾಜ ಅಮ್ಮಿನಬಾವಿ, ಗುರು ಪಾಟೀಲ ಸೇರಿದಂತೆ ಹಲವರಿದ್ದರು.ಬರ ಪರಿಹಾರದಲ್ಲಿ ಕಾಂಗ್ರೆಸ್ನದ್ದು ಡ್ರಾಮಾ: ಜೋಶಿಕನ್ನಡಪ್ರಭ ವಾರ್ತೆ ಹುಬ್ಬಳ್ಳಿರಾಜ್ಯಕ್ಕೆ ಎನ್‌ಡಿಎ ಅವಧಿಯಲ್ಲಿ ಯುಪಿಎಗಿಂತ ಶೇ. 40ರಷ್ಟು ಹೆಚ್ಚು ಅನುದಾನವನ್ನೇ ನೀಡಿದೆ. ಹಾಗಿದ್ದರೂ ರಾಜ್ಯ ಕಾಂಗ್ರೆಸ್ ಸರ್ಕಾರ ಡ್ರಾಮಾ ಮಾಡುತ್ತಿದೆ ಎಂದು ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಕಿಡಿ ಕಾರಿದರು.
ಪತ್ರಕರ್ತರೊಂದಿಗೆ ಮಾತನಾಡಿದ ಅವರು, ಎನ್‌ಡಿಎ ಅವಧಿಯ 2014ರಿಂದ 23ರ ವರೆಗೆ ಮೋದಿ ಸರ್ಕಾರ ರಾಜ್ಯಕ್ಕೆ 30951 ಕೋಟಿ ಬರ ಪರಿಹಾರ ಕೊಟ್ಟಿದೆ. ಎನ್‌ಡಿಆರ್‌ಎಫ್‌ನಲ್ಲಿ ₹11482 ಕೋಟಿ ಬಿಡುಗಡೆ ಮಾಡಿದೆ. ಯುಪಿಎ ಅವಧಿ 2009ರಿಂದ 2013ರವರೆಗೆ ₹15,541 ಕೋಟಿ ಕೊಟ್ಟಿದ್ದರು. ಒಟ್ಟು ₹44638 ಕೋಟಿ ಕೇಳಿದ್ದರೆ, ಎನ್‌ಡಿಆರ್‌ಎಫ್‌ನಲ್ಲಿ ₹3500 ಕೋಟಿ ಬಿಡುಗಡೆ ಮಾಡಿದ್ದರು ಎಂದರು.ಯುಪಿಎ ಅವಧಿಯಲ್ಲಿ ಕೇವಲ 10ರಿಂದ 11ಪರ್ಸೆಂಟ್ ಅನುದಾನ ಬಿಡುಗಡೆ ಆಗಿದ್ದರೆ, ಎನ್‌ಡಿಎ ಕಾಲದಲ್ಲಿ 51 ಪರ್ಸೆಂಟ್ ಬರ ಪರಿಹಾರ ನೀಡಿದ್ದೇವೆ ಎಂದರು.ರಾಜ್ಯ ಸರ್ಕಾರದ್ದು ಡ್ರಾಮಾ:ಕೇಂದ್ರದಿಂದ ರಾಜ್ಯಕ್ಕೆ ಅನುದಾನ ಹಂಚಿಕೆ ವಿಷಯದಲ್ಲಿ ರಾಜ್ಯ ಕಾಂಗ್ರೆಸ್ ಸರ್ಕಾರ ಸುಪ್ರೀಂ ಕೋರ್ಟ್‌ಗೆ ಹೋಗುವ ಅವಶ್ಯಕತೆ ಇರಲಿಲ್ಲ. ಲೋಕಸಭೆ ಚುನಾವಣೆ ಹಿನ್ನೆಲೆಯಲ್ಲಿ ಡ್ರಾಮಾ ಮಾಡುತ್ತಿದ್ದಾರೆ ಅಷ್ಟೇ ಎಂದು ಆರೋಪಿಸಿದರು.