ಕಸಾಪಕ್ಕೆ ತನಿಖಾ ಆಯೋಗ ನೇಮಿಸಿ: ಎಸ್.ಜಿ.ಸಿದ್ದರಾಮಯ್ಯ

KannadaprabhaNewsNetwork |  
Published : Jun 08, 2025, 01:41 AM ISTUpdated : Jun 08, 2025, 01:42 AM IST
ಪೋಟೋ: 07ಎಸ್ಎಂಜಿಕೆಪಿ04ಶಿವಮೊಗ್ಗದ ನಗರದ ಅಂಬೇಡ್ಕರ್ ಭವನದಲ್ಲಿ ಶನಿವಾರ ಕನ್ನಡ ನಾಡು ನುಡಿ ಜಾಗೃತಿ ಸಮಿತಿಯ ವತಿಯಿಂದ ಕನ್ನಡ ಸಾಹಿತ್ಯ ಪರಿಷತ್ತು ಉಳಿಸಿ ಹೋರಾಟ ಕನ್ನಡಿಗರ ಜಾಗೃತಿ ಸಮಾವೇಶವನ್ನು ಹಿರಿಯ ಸಾಹಿತಿ ಎಸ್.ಜಿ.ಸಿದ್ದರಾಮಯ್ಯ ಅವರು  ಡೊಳ್ಳು ಬಾರಿಸುವ ಮೂಲಕ ಉದ್ಘಾಟಿಸಿದರು.  | Kannada Prabha

ಸಾರಾಂಶ

ಕನ್ನಡಿಗರ ಪ್ರಾತಿನಿಧಿಕ ಸಂಸ್ಥೆಯಾದ ಕನ್ನಡ ಸಾಹಿತ್ಯ ಪರಿಷತ್ತಿನ ರಾಜ್ಯಾಧ್ಯಕ್ಷರನ್ನು ಅಮಾನತಿನಲ್ಲಿರಿಸಿ, ಸರ್ಕಾರವು ತನಿಖಾ ಆಯೋಗ ನೇಮಿಸುವ ತುರ್ತಿದೆ ಎಂದು ಹಿರಿಯ ಸಾಹಿತಿ ಎಸ್.ಜಿ.ಸಿದ್ದರಾಮಯ್ಯ ಅಭಿಪ್ರಾಯಪಟ್ಟರು.

ಕನ್ನಡಪ್ರಭ ವಾರ್ತೆ ಶಿವಮೊಗ್ಗ

ಕನ್ನಡಿಗರ ಪ್ರಾತಿನಿಧಿಕ ಸಂಸ್ಥೆಯಾದ ಕನ್ನಡ ಸಾಹಿತ್ಯ ಪರಿಷತ್ತಿನ ರಾಜ್ಯಾಧ್ಯಕ್ಷರನ್ನು ಅಮಾನತಿನಲ್ಲಿರಿಸಿ, ಸರ್ಕಾರವು ತನಿಖಾ ಆಯೋಗ ನೇಮಿಸುವ ತುರ್ತಿದೆ ಎಂದು ಹಿರಿಯ ಸಾಹಿತಿ ಎಸ್.ಜಿ.ಸಿದ್ದರಾಮಯ್ಯ ಅಭಿಪ್ರಾಯಪಟ್ಟರು.

ನಗರದ ಅಂಬೇಡ್ಕರ್ ಭವನದಲ್ಲಿ ಶನಿವಾರ ಕನ್ನಡ ನಾಡು ನುಡಿ ಜಾಗೃತಿ ಸಮಿತಿಯ ವತಿಯಿಂದ ಕನ್ನಡ ಸಾಹಿತ್ಯ ಪರಿಷತ್ತು ಉಳಿಸಿ ಹೋರಾಟ ಕನ್ನಡಿಗರ ಜಾಗೃತಿ ಸಮಾವೇಶದಲ್ಲಿ ಡೊಳ್ಳು ಬಾರಿಸುವ ಮೂಲಕ ಉದ್ಘಾಟಿಸಿ ಮಾತನಾಡಿದರು.

ತನಿಖೆಯಲ್ಲಿ ಕಳಂಕ ರಹಿತ ಎಂದು ಸಾಬಿತಾದರೆ ವಜಾ ಮಾಡಿ. ಇಲ್ಲವಾದರೆ ಅಮಾನತು ರದ್ದುಪಡಿಸಿ ರಾಜ್ಯಾಧ್ಯಕ್ಷರಾಗಿ ಮುಂದುವರೆಯಲಿ. ಅಖಿಲ ಭಾರತ ಸಾಹಿತ್ಯ ಸಮ್ಮೇಳನಗಳನ್ನು ಪಕ್ಷ ರಾಜಕಾರಣದ ಬೇಳೆ ಬೇಯಿಸಿಕೊಳ್ಳುವ ವೇದಿಕೆಯಾಗಿ ಅವಕಾಶ ಮಾಡಬೇಡಿ. ಸಮ್ಮೇಳನಕ್ಕೆ ಖರ್ಚು ಮಾಡುವ ಕೋಟಿಗಟ್ಟಲೆ ಹಣವನ್ನು ಬಡ ಸರ್ಕಾರಿ ಶಾಲೆಗಳ ಅಭಿವೃದ್ಧಿಗೆ ಬಳಸಿ ಎಂದು ಸರ್ಕಾರಕ್ಕೆ ಸಲಹೆ ನೀಡಿದರು.

ಮಹೇಶ್ ಜೋಷಿಗೆ ನೀಡಿದ್ದ ಸಚಿವ ಸ್ಥಾನಮಾನವನ್ನು ತೆಗೆದು ಹಾಕಿದ ಸರ್ಕಾರಕ್ಕೆ ನಮ್ಮ ಅಭಿನಂದನೆ. ಕಸಾಪದಲ್ಲಿ ನಡೆಯುತ್ತಿರುವ ಆತ್ಮಹೀನ ನಡವಳಿಕೆ ನಿಲ್ಲಬೇಕು. ಅಧಿಕಾರಿಗಳು ನಿವೃತ್ತರಾಗಿ ಕಸಾಪದ ರಾಜ್ಯಾಧ್ಯಕ್ಷರಂತಹ ಹುದ್ದೆಗಳಿಗೆ ಹೋದಾಗ ಇಂತಹ ಅನಾಹುತವಾಗುತ್ತದೆ. ಕಸಾಪಗೆ ಇಂತಹ ದುಷ್ಕಾಳ ಸ್ಥಿತಿ ಎಂದು ಬಂದಿರಲಿಲ್ಲ. ಕಸಾಪ ಚುನಾವಣೆಯ ಕ್ರಮವನ್ನು ಮಾಲಿನ್ಯಗೊಳಿಸಿದ ವ್ಯಕ್ತಿ ಮಹೇಶ್ ಜೋಷಿ. ಪಕ್ಷ ರಾಜಕಾರಣದ ಕೊಳಕನ್ನು ಕಸಾಪಗೆ ತಂದಿದ್ದಾರೆ ಎಂದು ಆರೋಪಿಸಿದರು.

ಶಿವಮೊಗ್ಗ ಜಿಲ್ಲೆಯ ಪ್ರಜಾಸತಾತ್ಮಕವಾಗಿ ಆಯ್ಕೆಯಾದ ಜಿಲ್ಲಾಧ್ಯಕ್ಷರ ಮೂಲ ಸದಸ್ಯತ್ವವನ್ನೆ ಕಿತ್ತುಹಾಕುವ ದುರಾಹಂಕಾರದ ಠೇಂಕಾರದ ವಿರುದ್ಧ ನಾವೆಲ್ಲ ಹೋರಾಡಬೇಕಿದೆ. ನಮ್ಮ ಹೋರಾಟ ಸತ್ಯಾಗ್ರಹಕ್ಕೆ ಪೂರಕವಾಗಿದೆ. ನಾವು ಎತ್ತುವ ಪ್ರಶ್ನೆಗಳಿಗೆ ಸೌಜನ್ಯತೆಯ ಉತ್ತರವೆ ವಿನಃ ಠೇಂಕಾರದ ಸರ್ವಾಧಿಕಾರವಲ್ಲ. ಕಾನೂನು ಕಟ್ಟಳೆ ಮೂಲಕ ತಮ್ಮನ್ನು ಪ್ರಶ್ನಿಸಿದವರನ್ನು ಹೆದರಿಸುತ್ತೇವೆ ಎಂದಾದರೆ, ಅದು ಸಾಹಿತ್ಯಾತ್ಮಕ ಮನಸ್ಸು ಮಾಡುವ ಕೆಲಸವಲ್ಲ ಎಂದು ಕಿಡಿಕಾರಿದರು.

ಕರ್ನಾಟಕ ಪುಸ್ತಕ ಪ್ರಾಧಿಕಾರದ ಮಾಜಿ ಅಧ್ಯಕ್ಷ ಬಂಜಗೆರೆ ಜಯಪ್ರಕಾಶ್ ಮಾತನಾಡಿ, ಸರ್ಕಾರದಿಂದ ಕಸಾಪ ರಾಜ್ಯಾಧ್ಯಕ್ಷರಿಗೆ ಅಂಕುಶ ಹಾಕಿ ಎಂಬ ಒತ್ತಾಯ ಮಾಡಬೇಕಾದ ಅನಿವಾರ್ಯತೆ ಆಜೀವ ಸದಸ್ಯರಾದ ನಮ್ಮದಾಗಿದೆ. ಸ್ವಾಭಿಮಾನಹೀನ ವ್ಯಕ್ತಿಯೊಬ್ಬ ರಾಜ್ಯಾಧ್ಯಕ್ಷನಾಗಿ ಆಯ್ಕೆ ಮಾಡಿದ್ದು ವಿಷಾದನೀಯ ಎಂದರು.

ಸಂವಿಧಾನದ ಮೂಲ ಆಶಯವನ್ನು ಬಲಪಡಿಸುವ ತಿದ್ದುಪಡಿಗಳನ್ನು ಸ್ವಾಗತಿಸಬೇಕು ಎಂದು ಸುಪ್ರೀಂ ಕೋರ್ಟ್ ಆಶಿಸುತ್ತದೆ. ಆದರೆ, ಮಹೇಶ್ ಜೋಷಿ ಕಸಾಪದ ಮೂಲ ಆಶಯಗಳನ್ನೆ ತಿರುಚುವ ಹುನ್ನಾರಕ್ಕೆ ಕೈ ಹಾಕಿದ್ದಾರೆ. ಪ್ರಜಾಪ್ರಭುತ್ವದಲ್ಲಿ ಆಯ್ಕೆಯಾದ ಜಿಲ್ಲಾಧ್ಯಕ್ಷರಿಗೆ ಇರುವ ಅಧಿಕಾರಿಗಳನ್ನು ಮೊಟಕುಗೊಳಿಸುವ ಧೋರಣೆ ಖಂಡನಾರ್ಹ ಎಂದು ಹೇಳಿದರು.

ತಾನು ಹೇಳಿದಂತೆ ಜಿಲ್ಲಾಧ್ಯಕ್ಷರು ವರ್ತಿಸಬೇಕು ಇಲ್ಲವಾದಲ್ಲಿ ವಜಾ ಮಾಡುತ್ತೇನೆ ಎಂಬ ಭಯ ಹುಟ್ಟಿಸುವ ಕುಹುಕದ ಬುದ್ದಿ ಮಹೇಶ್ ಜೋಷಿ ಅವರದಾಗಿದೆ. ಜೋಷಿ ಅವರನ್ನು ಪ್ರಶ್ನಿಸುವ ಜಿಲ್ಲಾಧ್ಯಕ್ಷರ ಜಿಲ್ಲೆಗಳಿಗೆ ಅನುದಾನ ನೀಡದೆ ಇರುವುದು, ಸಭೆಗಳಲ್ಲಿ ಅವಮಾನ ಮಾಡುವಂತಹ ವಿಚಿತ್ರ ಸನ್ನಿವೇಶ ಸೃಷ್ಟಿಯಾಗಿದೆ. ಸೊಸೈಟಿ ನಿಯಮಗಳ ಪ್ರಕಾರ ಕಸಾಪ ನಡೆಯುತ್ತಿಲ್ಲ. ಸ್ವಂತ ಕಂಪನಿಯ ಮಾಲೀಕನಂತೆ ದರ್ಬಾರ್ ನಡೆಸುತ್ತಿದ್ದಾರೆ ಎಂದು ಹೇಳಿದರು.

ಮಂಡ್ಯ ಕರ್ನಾಟಕ ಸಂಘದ ಅಧ್ಯಕ್ಷ ಜಯಪ್ರಕಾಶಗೌಡ ಮಾತನಾಡಿ, ಮಠಾಧೀಶರಿಗೆ ತಲೆ ನಡು ಬಗ್ಗಿಸಿ ನಮಸ್ಕರಿಸುವಂತೆ ಜಿಲ್ಲಾಧ್ಯಕ್ಷರು ಮಹೇಶ್ ಜೋಷಿಗೆ ನಮಿಸಬೇಕಂತೆ. ನಾಡೋಜ ಎಂದು ಮೆಲುದನಿಯಲ್ಲಿ ಹೇಳಬೇಕಂತೆ. ಸರ್ಕಾರದಿಂದ ಅನುದಾನ ಪಡೆಯುವಾಗ ಕ್ರಿಯಾಯೋಜನೆ ಸಲ್ಲಿಸಬೇಕು. ಅಂತಹ ಕ್ರಿಯಾಯೋಜನೆಗೆ ತಕ್ಕಂತೆ ಖರ್ಚು ಮಾಡಬೇಕಿತ್ತು. ಅದರೆ ತಮಗೆ ಬೇಕಾದಂತೆ ಅನುದಾನ ದುರುಪಯೋಗ ಮಾಡಿಕೊಳ್ಳುತ್ತಿದ್ದಾರೆ. ಹಣ ಬಳಕೆ ಪ್ರಮಾಣ ಪತ್ರ ಸಲ್ಲಿಸಿಲ್ಲ. ಆಡಿಟರ್ ಆಕ್ಷೇಪಣೆಗಳನ್ನು ಎತ್ತಿದ್ದಾರೆ. ಕಸಾಪದ ಅನುದಾನದಲ್ಲಿ ವಿದೇಶ ಪ್ರವಾಸದ ದುಂದು ವೆಚ್ಚ ಮಾಡುತ್ತಿದ್ದಾರೆ. ಸರ್ಕಾರದ ಅನುದಾನ ಪಡೆದು ಕಸಾಪದ ಬೈಲಾ ಪ್ರಕಾರ ಖರ್ಚು ವೆಚ್ಚ ಮಾಡುತ್ತಿದ್ದೇನೆ ಎನ್ನುತ್ತಾರೆ. ಬೈಲಾವನ್ನು ತನಗೆ ಬೇಕಾದಂತೆ ತಿರುಚುತ್ತಿದ್ದಾರೆ ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಹಿರಿಯ ಪತ್ರಕರ್ತ ಜಾಣಗೆರೆ ವೆಂಕಟರಾಮಯ್ಯ, ಮಹಿಳಾ ಹೋರಾಟಗಾರ್ತಿ ಕೆ.ಎಸ್.ನಿರ್ಮಲ, ಮೀರಾ ಶಿವಲಿಂಗಯ್ಯ, ಕಲ್ಕುಳಿ ವಿಠಲಹೆಗಡೆ, ಆರ್.ಜೆ.ಹಳ್ಳಿ ನಾಗರಾಜ, ರೋಹಿದಾಸ ನಾಯಕ್ ಮಾತನಾಡಿದರು.

ಸಮಾಜವಾದಿ ನಾಯಕ ಪಿ.ಪುಟ್ಟಯ್ಯ ಅಧ್ಯಕ್ಷತೆ ವಹಿಸಿದ್ದರು. ಸಂಚಾಲಕ ಡಾ.ಹೆಚ್.ಟಿ.ಕೃಷ್ಣಮೂರ್ತಿ ಪ್ರಾಸ್ತಾವಿಕ ನುಡಿಗಳನ್ನಾಡಿದರು. ಕನ್ನಡ ನಾಡು ನುಡಿ ಜಾಗೃತಿ ಸಮಿತಿ ಸಂಚಾಲಕ ಕೆ.ಪಿ.ಶ್ರೀಪಾಲ್ ಸ್ವಾಗತಿಸಿದರು. ಪತ್ರಕರ್ತ ಹೊನ್ನಾಳಿ ಚಂದ್ರಶೇಖರ್ ನಿರೂಪಿಸಿದರು. ಕಾರ್ಯಕ್ರಮ ಸಂಚಾಲಕ ಡಾ.ಹೆಚ್.ಟಿ.ಕೃಷ್ಣಮೂರ್ತಿ, ಅಕ್ಷತಾ ಹುಂಚದಕಟ್ಟೆ ಉಪಸ್ಥಿತರಿದ್ದರು.

ಸಂಸ್ಕಾರಕ್ಕಿಂತ ಠೇಂಕಾರದ ಧ್ವನಿಯುಳ್ಳ ಜೋಷಿ

ಮಾತಿಗೆ ಮುಂಚೆ ಗುರು ಗೋವಿಂದ ಭಟ್ಟರ ಮೊಮ್ಮಗ ಎಂದು ಹೇಳಿಕೊಳ್ಳುವ ವ್ಯಕ್ತಿ, ಸಂಸ್ಕಾರವನ್ನು ತಮ್ಮ ಒಡಲಾಳದಲ್ಲಿ ಇಟ್ಟುಕೊಳ್ಳಬೇಕಿದೆ. ಅದರೆ ಮಹೇಶ್ ಜೋಷಿ ಅವರಲ್ಲಿ ಸಂಸ್ಕಾರದ ಬದಲಿಗೆ ಠೇಂಕಾರದ ಧ್ವನಿ ಉಳ್ಳವರಾಗಿದ್ದಾರೆ. ಮಹೇಶ್ ಜೋಷಿ ನಿಜವಾದ ಪಟ್ಟಭದ್ರ ಹಿತಾಸಕ್ತಿ. ಜೋಷಿಯ ಸರದವಾಧಿಕಾರ, ಭ್ರಷ್ಟಾಚಾರ, ಲಜ್ಜೆ ರಹಿತ ವ್ಯಕ್ತಿತ್ವದ ವಿರುದ್ಧ ನಮ್ಮ ಹೋರಾಟ ಎಂದು ಮಂಡ್ಯ ಕರ್ನಾಟಕ ಸಂಘದ ಅಧ್ಯಕ್ಷ ಜಯಪ್ರಕಾಶಗೌಡ ಹೇಳಿದರು.

ಐಬಿನಲ್ಲಿ ಕಾಫಿ ತಡವಾದರೆ ಸಚಿವ ಸ್ಥಾನಮಾನದ ಧಮ್ಕಿ

ಮಹೇಶ್ ಜೋಷಿ ಸಚಿವ ಸ್ಥಾನಮಾನದ ಆಟಾಟೋಪ ಎಷ್ಟಿತ್ತೆಂದರೆ, ಐಬಿಗಳಲ್ಲಿ ಕಾಫಿ ಕೊಡುವುದು ತಡವಾದರೆ, ಅಲ್ಲಿದ್ದ ಸಿಬ್ಬಂದಿಗಳಿಗೆ "ಏಯ್ ನಾನು ಸಚಿವ ಸ್ಥಾನಮಾನ ಹೊಂದಿರೊನು " ಎಂದು ಧಮಕಿ ಹಾಕುತ್ತಿದ್ದರಂತೆ ಎಂದು ಬಂಜಗೆರೆ ಜಯಪ್ರಕಾಶ್ ಹೇಳಿದಾಗ ಇಡೀ ಸಭೆ ನಗೆಗಡಲಲ್ಲಿ ತೇಲಿತು.

ಕಸಾಪ ಸರ್ವ ಸದಸ್ಯರ ಸಭೆ ಬೆಂಗಳೂರಿನಲ್ಲಿ ನಡೆಯಲಿ

ಮಹೇಶ್ ಜೋಷಿ ಕನ್ನಡದ ಕಂಟಕ. ಕಸಾಪ ಸರ್ವ ಸದಸ್ಯರ ಸಭೆಯನ್ನು ಹೆಚ್ಚು ಆಜೀವ ಸದಸ್ಯರಿರುವ ಬೆಂಗಳೂರು, ಶಿವಮೊಗ್ಗ, ಮಂಡ್ಯ, ಹಾಸನದಂತಹ ಸ್ಥಳಗಳಲ್ಲಿ ನಡೆಯಲಿ. ಜನರೇ ಬಾರಲಾಗದ ಸಂಡೂರಿನಲ್ಲಿ ಬೇಡ. ಕಸಾಪಕ್ಕೆ ಮಹೇಶ್ ಜೋಷಿ ಮತ್ತು ಮನುಬಳಿಗಾರ್ ಅಂತಹ ದುರುಳರು ಕಸಾಪದ ರಾಜ್ಯಾಧ್ಯಕ್ಷರಾಗಿ ಆಯ್ಕೆಯಾಗದಂತೆ ನೋಡಿಕೊಳ್ಳುವ ಜಾಗೃತಿ ಆಜೀವ ಸದಸ್ಯರಾದ ನಮ್ಮ ಮೇಲಿದೆ ಎಂದು ಸಾಹಿತಿ ಜಾಣಗೆರೆ ವೆಂಕಟರಾಮಯ್ಯ ಹೇಳಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ರಸಗೊಬ್ಬರ ಬಳಕೆ ಕಡಿಮೆ ಮಾಡಿ : ಸಿಎಂ ಸಲಹೆ
''ತಾಕತ್ತು ಇದ್ದರೆ ನೋಟಿನಲ್ಲಿರುವ ಗಾಂಧೀಜಿಯವರ ಭಾವಚಿತ್ರವನ್ನು ತೆಗೆಯಲಿ''