1000 ಗ್ರಾಮ ಆಡಳಿತಾಧಿಕಾರಿಗೆ ನೇಮಕ ಪತ್ರ

KannadaprabhaNewsNetwork |  
Published : Apr 30, 2025, 12:36 AM IST
ಕಂದಾಯ ಇಲಾಖೆಯಿಂದ ನೂತನವಾಗಿ ಆಯ್ಕೆಯಾಗಿರುವ 1000 ಗ್ರಾಮ ಆಡಳಿತ ಅಧಿಕಾರಿಗಳಿಗೆ ಮಂಗಳವಾರ ಬ್ಯಾಂಕ್ವೆಟ್‌ ಹಾಲ್‌ನಲ್ಲಿ ನಡೆದ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ನೇಮಕಾತಿ ಆದೇಶ ವಿತರಿಸಿದರು. ಕಂದಾಯ ಸಚಿವ ಕೃಷ್ಣ ಬೈರೇಗೌಡ ಹಾಗೂ ಇಲಾಖಾ ಅಧಿಕಾರಿಗಳು ಉಪಸ್ಥತರಿದ್ದರು. | Kannada Prabha

ಸಾರಾಂಶ

ಗ್ರಾಮಾಡಳಿತ ಅಧಿಕಾರಿಗಳು ಜನರಿಗೆ ಸುಲಭವಾಗಿ ಸಿಗಬೇಕು. ಇದಕ್ಕಾಗಿ ಈ ಎಲ್ಲಾ ಅಧಿಕಾರಿಗಳು ಇನ್ನು ಮುಂದೆ ಆಯಾ ಗ್ರಾಪಂ ಮಟ್ಟದಲ್ಲಿ ಉಳಿದುಕೊಳ್ಳಬೇಕು. ಮನೆ ಮನೆಗೆ ಭೇಟಿ ನೀಡಿ ರೈತರ ಸಮಸ್ಯೆ ಪರಿಹರಿಸಬೇಕು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಸೂಚಿಸಿದ್ದಾರೆ.

ಕನ್ನಡಪ್ರಭ ವಾರ್ತೆ ಬೆಂಗಳೂರು

ಗ್ರಾಮಾಡಳಿತ ಅಧಿಕಾರಿಗಳು ಜನರಿಗೆ ಸುಲಭವಾಗಿ ಸಿಗಬೇಕು. ಇದಕ್ಕಾಗಿ ಈ ಎಲ್ಲಾ ಅಧಿಕಾರಿಗಳು ಇನ್ನು ಮುಂದೆ ಆಯಾ ಗ್ರಾಪಂ ಮಟ್ಟದಲ್ಲಿ ಉಳಿದುಕೊಳ್ಳಬೇಕು. ಮನೆ ಮನೆಗೆ ಭೇಟಿ ನೀಡಿ ರೈತರ ಸಮಸ್ಯೆ ಪರಿಹರಿಸಬೇಕು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಸೂಚಿಸಿದ್ದಾರೆ.

ಅಲ್ಲದೆ, ರೈತರಿಗೆ ಕಿರುಕುಳ, ತೊಂದರೆ ನೀಡುವುದು, ಲಂಚ ಪಡೆಯುವುದು ಆಗಕೂಡದು. ಅಂತಹದ್ದನ್ನು ಯಾವುದೇ ಕಾರಣಕ್ಕೂ ಸಹಿಸುವುದಿಲ್ಲ ಎಂದು ಎಚ್ಚರಿಸಿದ್ದಾರೆ.

ಕಂದಾಯ ಇಲಾಖೆಯು ಮಂಗಳವಾರ ವಿಧಾನಸೌಧದ ಬ್ಯಾಂಕ್ವೆಟ್‌ ಹಾಲ್‌ನಲ್ಲಿ ಆಯೋಜಿಸಿದ್ದ ನೂತನವಾಗಿ ಆಯ್ಕೆಯಾಗಿರುವ 1000 ಗ್ರಾಮ ಆಡಳಿತ ಅಧಿಕಾರಿಗಳಿಗೆ (ವಿಎಒ) ನೇಮಕಾತಿ ಆದೇಶ ವಿತರಣೆ ಮತ್ತು ಹಾಲಿ ವಿಎಒಗಳಿಗೆ 4000 ಕ್ರೋಮ್‌ ಬುಕ್‌(ಲ್ಯಾಪ್‌ಟಾಪ್‌) ವಿತರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಒಂದೇ ಒಂದು ರುಪಾಯಿ ಲಂಚವಾಗಲಿ, ಮಧ್ಯವರ್ತಿಗಳ ಹಾವಳಿಯಾಗಲಿ ಯಾವುದಕ್ಕೂ ಅವಕಾಶವಾಗದಂತೆ ಕಂದಾಯ ಸಚಿವ ಕೃಷ್ಣ ಬೈರೇಗೌಡ ಅವರ ಉಸ್ತುವಾರಿಯಲ್ಲಿ ಅತ್ಯಂತ ಪಾರದರ್ಶಕವಾಗಿ ಒಂದೇ ಬಾರಿ 1000 ವಿಎಒಗಳ ನೇಮಕಾತಿ ಮಾಡಿ ಆದೇಶ ನೀಡಲಾಗುತ್ತಿದೆ. ಹಳ್ಳಿಗಾಡಿನಲ್ಲಿ ಶಾಂತಿ ನೆಮ್ಮದಿಯಿಂದ ಜನ ಬದುಕಬೇಕಾದರೆ ಅವರ ಭೂ ದಾಖಲೆಗಳು ಸರಿಯಾಗಿ ಇರಬೇಕು. ದಾಖಲೆಗಳನ್ನು ಕರಾರುವಾಕ್ಕಾಗಿ ಇಡುವುದು ಗ್ರಾಮ ಅಭಿವೃದ್ಧಿ ಅಧಿಕಾರಿಗಳ ಜವಾಬ್ದಾರಿ. ತಂತ್ರಜ್ಞಾನ ಬಳಸಿಕೊಂಡು ದಾಖಲೆಗಳನ್ನು ಆನ್‌ಲೈನ್‌ ಮೂಲಕ ಜನರಿಗೆ ತಲುಪಿಸುವ ಕೆಲಸ ಆಗುತ್ತಿದೆ. ಇಂತಹ ಸಂದರ್ಭದಲ್ಲಿ ತಪ್ಪುಗಳು ಆಗಬಾರದು ಎಂದರು.

ಹಾಗಾಗಿ ಈ ಅಧಿಕಾರಿಗಳು ಆಯಾ ಗ್ರಾಪಂ ಮಟ್ಟದಲ್ಲಿ ಉಳಿದುಕೊಂಡು ಜನರಿಗೆ ಸುಲಭವಾಗಿ ಸಿಗಬೇಕು. ಜೊತೆಗೆ ತಮ್ಮ ವ್ಯಾಪ್ತಿಯ ಗ್ರಾಮಗಳಲ್ಲಿ ಮನೆ ಮನೆಗೆ ಭೇಟಿ ಅಥವಾ ಪ್ರತಿ ಗ್ರಾಮದಲ್ಲೂ ಒಂದೆಡೆ ಕೂತು ರೈತರನ್ನು ಕರೆಸಿ ಅವರ ಸಮಸ್ಯೆ ಪರಿಹರಿಸುವ ಕೆಲಸ ಮಾಡಬೇಕು. ಮುಂದಿನ ದಿನಗಳಲ್ಲಿ ಇನ್ನಷ್ಟು ವಿಎಒಗಳ ನೇಮಕಾತಿ ಮಾಡಲಾಗುವುದು. ಆ ಹುದ್ದೆಗಳು ಖಾಲಿ ಇದಲ್ಲದಂತೆ ನೋಡಿಕೊಳ್ಳಲಾಗುವುದು ಎಂದು ಮುಖ್ಯಮಂತ್ರಿ ಭರವಸೆ ನೀಡಿದರು.

ಕೃಷಿ ಲಾಭದಾಯ ಕಸುಬಲ್ಲ. ಅನ್ನದಾತ ಜತೆ ಕೆಲಸ ಮಾಡುವ ಅರಿವು ವಿಎಒಗಳಿಗೆ ಇರಬೇಕು. ಹಿಂದೆ ಶಾನುಭೋಗರ ರೀತಿಯಲ್ಲಿ ರೈತರಿಗೆ ಈಗ ನೀವು ಸಮರ್ಪಕ ಭೂ ದಾಖಲೆಗಳನ್ನು ಒದಗಿಸಿ ರೈತರ ವಿಶ್ವಾಸಾರ್ಹತೆ ಗಳಿಸಬೇಕು. ಪ್ರಾಮಾಣಿಕವಾಗಿ ಸೇವೆ ಮಾಡಿದರೆ ಸಮಾಜದಕ್ಕೆ ಅದಕ್ಕಿಂತ ದೊಡ್ಡ ಕೊಡುಗೆ ಮತ್ತೊಂದಿಲ್ಲ ಎಂದರು.

ಕಾರ್ಯಕ್ರಮದಲ್ಲಿ ಕಂದಾಯ ಸಚಿವ ಕೃಷ್ಣಬೈರೇಗೌಡ, ತರೀಕೆರೆ ಶಾಸಕ ಶ್ರೀನಿವಾಸ್‌, ಮುಖ್ಯಮಂತ್ರಿಗಳ ಅಪರ ಮುಖ್ಯ ಕಾರ್ಯದರ್ಶಿ ಎಲ್‌.ಕೆ.ಅತೀಕ್‌, ಬೆಂಗಳೂರು ವಿಭಾಗದ ಪ್ರಾದೇಶಿ ಆಯುಕ್ತ ಅಮ್ಲಾನ್‌ ಆದಿತ್ಯ ಬಿಸ್ವಾಸ್‌, ಕಂದಾಯ ಇಲಾಖೆ ಪ್ರಧಾನ ಕಾರ್ಯದರ್ಶಿ ರಾಜೇಂದರ್‌ ಕುಮಾರ್‌ ಕಟಾರಿಯಾ, ಆಯುಕ್ತ ಸುನೀಲ್‌ ಕುಮಾರ್‌ ಉಪಸ್ಥಿತರಿದ್ದರು.

ಕಂದಾಯ ಇಲಾಖೆ ಸುಧಾರಣೆಗೆ ಮೆಚ್ಚುಗೆ

ಇದೇ ವೇಳೆ ಕಂದಾಯ ಇಲಾಖೆಯ ಎರಡು ವರ್ಷಗಳ ಸಾಧನೆ ಹಾಗೂ ಕಂದಾಯ ಸೇವೆಗಳ ಸುಧಾರಣೆ ಕುರಿತ ‘ಭೂ ಗ್ಯಾರಂಟಿ’ ಪುಸ್ತಕ ಬಿಡುಗಡೆ ಮಾಡಿದ ಮುಖ್ಯಮಂತ್ರಿ ಅವರು, ಸಚಿವ ಕೃಷ್ಣ ಬೈರೇಗೌಡ ಅವರಿಗೆ ಕಂದಾಯ ಇಲಾಖೆಯ ಜವಾಬ್ದಾರಿ ನೀಡುವ ವೇಳೆ ಇಲಾಖೆಯಲ್ಲಿ ಸಾಕಷ್ಟು ಸುಧಾರಣೆಗಳಾಗಬೇಕಿದೆ ಎಂದು ಸೂಚಿಸಿದ್ದೆ. ಅದರಂತೆ ಅವರು ಹಲವು ಸುಧಾರಣೆಗಳನ್ನು ತಂದಿದ್ದಾರೆ. ಇನ್ನಷ್ಟು ಸುಧಾರಣೆಗಳು ಆಗಬೇಕಿದೆ. ಅದನ್ನೂ ಅವರು ಮುಂದೆ ಮಾಡುತ್ತಾರೆ ಎನ್ನುವ ವಿಶ್ವಾಸವಿದೆ ಎಂದು ಸಿದ್ದರಾಮಯ್ಯ ಮೆಚ್ಚುಗೆ ವ್ಯಕ್ತಪಡಿಸಿದರು.

PREV

Recommended Stories

ಇಂದಿರಾರ ಆದರ್ಶವನ್ನು ಎಲ್ಲರೂ ಪಾಲಿಸಬೇಕು : ಸಿದ್ದರಾಮಯ್ಯ
ಕುಡಚಿ ಶಾಸಕ ಪುತ್ರಗೆ ಡಿಕೆಶಿಯಿಂದ ‘ಶಿವಕುಮಾರ್‌’ ಎಂದು ನಾಮಕರಣ!