ಚಿಕ್ಕಪ್ಪನಹಳ್ಳಿ ಷಣ್ಮುಖ
ನಿಯಮಾವಳಿಗಳ ಉಲ್ಲಂಘಿಸಿ ಆಡಳಿತ ನಡೆಸಲಾಗುತ್ತಿದೆ ಎಂಬ ಗಂಭೀರ ಆರೋಪಕ್ಕೆ ಗುರಿಯಾಗಿ ಜಿಲ್ಲಾಧಿಕಾರಿ ರಮ್ಯಾ ಅವರ ಕೆಂಗಣ್ಣಿಗೆ ತುತ್ತಾಗಿದ್ದ ಚಿತ್ರದುರ್ಗದ ಪ್ರತಿಷ್ಠಿತ ಸಿಟಿ ಇನ್ ಸ್ಟಿಟ್ಯೂಟ್‌ಗೆ ಆಡಳಿತಾಧಿಕಾರಿಗಳ ನೇಮಕ ಸನ್ನಿಹಿತವಾಗಿದೆ. ಆಡಳಿತಾಧಿಕಾರಿಗಳ ನೇಮಕದ ಅನಿವಾರ್ಯತೆ ಕುರಿತು ಸಹಕಾರ ಸಂಘಗಳ ಉಪ ನಿಬಂಧಕರು ಸರ್ಕಾರಕ್ಕೆ ಸಲ್ಲಿಸಿರುವ ಸುಧೀರ್ಘ ವರದಿ ಕನ್ನಡಪ್ರಭಕ್ಕೆ ಲಭ್ಯವಾಗಿದೆ. ಹೆಚ್ಚುವರಿ ಜಿಲ್ಲಾಧಿಕಾರಿ ಬಿ.ಟಿ.ಕುಮಾರಸ್ವಾಮಿ ಅವರನ್ನುಆಡಳಿತಾಧಿಕಾರಿಯನ್ನಾಗಿ ನೇಮಿಸಿ ಹೊಸದಾಗಿ ಆಡಳಿತ ಮಂಡಳಿಗೆ ಚುನಾವಣೆ ನಡೆಸುವ ಅಗತ್ಯತೆಯನ್ನು ವರದಿಯಲ್ಲಿ ಪ್ರಧಾನವಾಗಿ ಪ್ರಸ್ತಾಪಿಸಲಾಗಿದೆ.
ಚಿತ್ರದುರ್ಗ ಸಿಟಿ ಇನ್ ಸ್ಟಿಟ್ಯೂಟ್ ಗೆ ಜಿಲ್ಲಾಧಿಕಾರಿ ಪದ ನಿಮಿತ್ತ ಅಧ್ಯಕ್ಷರು. ಸಂಸ್ಥೆ ಬೈಲಾದಲ್ಲಿ ಸ್ಪಷ್ಟವಾಗಿ ನಮೂದು ಮಾಡಲಾಗಿದೆ. ಅವರ ಗಮನಕ್ಕೆ ಬಾರದಂತೆ ಏನೂ ಕೈಗೊಳ್ಳುವಂತಿಲ್ಲ. ಆದರೆ ಹಾಲಿ ಆಡಳಿತ ಮಂಡಳಿ ಕಾರ್ಯದರ್ಶಿ ವೆಂಕಟೇಶ ರೆಡ್ಡಿ, ಜಿಲ್ಲಾಧಿಕಾರಿಗಳ ವಿಶ್ವಾಸಕ್ಕೆ ತೆಗೆದುಕೊಳ್ಳದೇ ಏಕ ಪಕ್ಷಿಯವಾಗಿ ನಡೆದುಕೊಳ್ಳುತ್ತಿದ್ದರು ಎನ್ನಲಾಗಿದೆ. ಇದರಿಂದ ಬೇಸತ್ತ ಖಜಾಂಚಿ ಅಜಿತ್ ಪ್ರಸಾದ್ ಜೈನ್, ನಿರ್ದೇಶಕರಾದ ರಾಮಮೂರ್ತಿ, ದೇವರಾಜ್, ಎಚ್.ಎನ್.ಲೋಕೇಶ್, ಮಧುಸೂಧನ ರೆಡ್ಡಿ ಹಾಗೂ ಟಿ.ವಿಜಯಕುಮಾರ್ ಅವರು ಆಡಳಿತ ಮಂಡಳಿಯ ತಮ್ಮ ಹುದ್ದೆಗೆ ರಾಜಿನಾಮೆ ಸಲ್ಲಿಸಿದ್ದರು. ಇದರಿಂದಾಗಿ ಆಡಳಿತ ಮಂಡಳಿಯಲ್ಲಿ ಕೋರಂ ಕೊರತೆ ಉಂಟಾಗಿ ವ್ಯವಸ್ಥಾಪನ ಸಮಿತಿ ಅಸ್ಥಿತ್ವ ಕಳೆದುಕೊಂಡಿದೆ ಎಂದು ತಿಳಿಸಿ ಸಂಸ್ಥೆ ಅಧ್ಯಕ್ಷೆ ಜಿಲ್ಲಾಧಿಕಾರಿ ರಮ್ಯಾ ಹಾಗೂ ಸಹಕಾರ ಸಂಘಗಳ ಉಪ ನಿಬಂಧಕರಿಗೆ ಪತ್ರ ಬರೆದಿದ್ದರು.ನಿರ್ದೇಶಕರ ಮನವಿ ಆಧರಿಸಿ ಸಹಕಾರ ಇಲಾಖೆಯ ಕಾರ್ಯದರ್ಶಿಗಳಿಗೆ ಅಕ್ಟೋಬರ್ 23-2026ರಂದು ಪತ್ರ ರವಾನಿಸಿದ್ದ ಜಿಲ್ಲಾಧಿಕಾರಿ ಹಾಗೂ ಸಂಸ್ಥೆ ಅಧ್ಯಕ್ಷೆ ರಮ್ಯಾ, ಆಡಳಿತಾಧಿಕಾರಿಗಳ ನೇಮಕ ಮಾಡುವಂತೆ ಮನವಿ ಮಾಡಿದ್ದರು. ಸೆಪ್ಟೆಂಬರ್ 27-2026 ರಂದು ನಡೆದ ಸಂಸ್ಥೆ ವಾರ್ಷಿಕ ಸರ್ವ ಸದಸ್ಯ ಸಭೆ ಸರಿಯಾಗಿ ನಡೆದಿಲ್ಲ. ನಿಯಮಾವಳಿಗಳ ಉಲ್ಲಂಘಿಸಲಾಗಿದೆ ಎಂದು ಖಜಾಂಚಿ ಅಜಿತ್ ಪ್ರಸಾದ್ ಜೈನ್ ಸೇರಿದಂತೆ ಐದು ಮಂದಿ ನಿರ್ದೇಶಕರು ಹಾಗೂ 128 ಜನ ಸದಸ್ಯರು ಸಹಿ ಮಾಡಿದ ಪತ್ರ ತಮಗೆ ಸಲ್ಲಿಸಿದ್ದಾರೆ. ಕೋರಂ ಇಲ್ಲದಿದ್ದರೂ ಸಭೆ ನಡೆಸಲಾಗಿದೆ. ಒಂದೇ ನಿಮಿಷದಲ್ಲಿ ಎಲ್ಲ ಒಪ್ಪಲಾಗಿದೆ ಎಂದು ಹೇಳಿ ಕಡತ ಸೃಷ್ಟಿಸಲಾಗಿದೆ. ವಾರ್ಷಿಕ ಮಹಾಸಭೆಯನ್ನು ಅಧ್ಯಕ್ಷರ ಗಮನಕ್ಕೆ ತಾರದಂತೆ ನಿಗಧಿಪಡಿಸಲಾಗಿದೆ. ಹಾಗಾಗಿ ಆಡಳಿತಾಧಿಕಾರಿ ನೇಮಕ ಮಾಡಬೇಕೆಂದು ಜಿಲ್ಲಾಧಿಕಾರಿಗಳು ಪತ್ರದಲ್ಲಿ ಸ್ಪಷ್ಟಪಡಿಸಿದ್ದರು.
ಸಂಸ್ಥೆಯು ತನ್ನ ಬೈಲಾ ಪ್ರಕಾರ ವಾರ್ಷಿಕ ಸಾಮಾನ್ಯ ಸಭೆ ನಡೆಸಲು ವಿಫಲವಾಗಿದೆ. ಸಂಸ್ಥೆಯ ವ್ಯವಸ್ಥಾಪನ ಸಮಿತಿಯ ಚುನಾಯಿತ ಸದಸ್ಯರು ಕೋರಂಗೆ ಅವಶ್ಯ ಇರುವುದಕ್ಕಿಂತ ಕಡಿಮೆ ಸಂಖ್ಯೆಯಲ್ಲಿ ಇದ್ದು ಸಮಿತಿ ಅಸ್ಥಿತ್ವ ಕಳೆದಕೊಂಡಂತಾಗಿದೆ. ಸಂಸ್ಥೆಯ ಆಡಳಿತವು ಬೈಲಾ ನಿಯಮಗಳನ್ನು ಉಲ್ಲಂಘಿಸಿ ನಡೆಯುತ್ತಿರುವುದು ಕಂಡು ಬಂದಿರುವುದರಿಂದ ಹಾಗೂ ಸಂಸ್ಥೆ ಪದ ನಿಮಿತ್ತ ಅಧ್ಯಕ್ಷರು ಹಾಗೂ ಜಿಲ್ಲಾಧಿಕಾರಿಗಳು ಆಡಳಿತಾಧಿಕಾರಿ ನೇಮಕದ ಅಗತ್ಯತೆ ಬಗ್ಗೆ ಪ್ರತಿಪಾದಿಸಿದ್ದಾರೆ. ಹಾಗಾಗಿ ಹೆಚ್ಚುವರಿ ಜಿಲ್ಲಾಧಿಕಾರಿಗಳನ್ನು ಸಿಟಿ ಇನ್ ಸ್ಟಿಟ್ಯೂಟ್‌ಗೆ ಆಡಳಿತಾಧಿಕಾರಿಗಳನ್ನಾಗಿ ನೇಮಿಸಬಹುದಾಗಿದೆ ಎಂದು ಸಹಕಾರ ಸಂಘಗಳ ಉಪ ನಿಬಂಧಕರು ನವೆಂಬರ್ 11-2026ರಂದು ಸರ್ಕಾರಕ್ಕೆ ಶಿಫಾರಸು ಮಾಡಿದ್ದಾರೆ.
ಸಿಟಿ ಇನ್ ಸ್ಟಿಟ್ಯೂಟ್ ನ ವಾರ್ಷಿಕ ಮಹಾ ಸಭೆ ನಡೆದ ಪರಿಯ ಕನ್ನಡಪ್ರಭ ಇಂಚಿಂಚು ಬಿಡದೆ ವರದಿ ಮಾಡಿತ್ತು.