ಆಗಷ್ಟ್‌ ನಂತರ ಎಲ್ಲ ತಾಲೂಕು ಆಸ್ಪತ್ರೆಗೆ ವೈದ್ಯರ ನೇಮಕ

KannadaprabhaNewsNetwork | Published : Mar 24, 2025 12:32 AM

ಸಾರಾಂಶ

ತಜ್ಞ ವೈದ್ಯರ ನೇಮಕ ಆಗುವ ತನಕ ಲಭ್ಯವಿರುವ ವೈದ್ಯರ ಮುಖಾಂತರ ರೋಗಿಗಳಿಗೆ ತೊಂದರೆಯಾಗದಂತೆ ಕ್ರಮಕೈಗೊಳ್ಳಲು ಸೂಚಿಸಿದರು.

ಕನ್ನಡಪ್ರಭ ವಾರ್ತೆ ರಾಮದುರ್ಗ

ರಾಜ್ಯದ ಸರ್ಕಾರಿ ಆಸ್ಪತ್ರೆಯಲ್ಲಿ ಖಾಲಿ ಇರುವ ವೈದ್ಯರ ಮತ್ತು ಟೆಕ್ನಿಷಿಯನ್ ಹುದ್ದೆಗಳಿಗೆ ಮೇ ತಿಂಗಳ ಬಳಿಕ ಕೌನ್ಸಲಿಂಗ್‌ ಮೂಲಕ ವರ್ಗಾವಣೆ ನಡೆಸಿ ಆಗಷ್ಟ್‌ ನಂತರ ಎಲ್ಲ ತಾಲೂಕು ಆಸ್ಪತ್ರೆಗಳಿಗೆ ವೈದ್ಯರ ನೇಮಕ್ಕೆ ಕ್ರಮಕೈಗೊಳ್ಳಲಾಗುವುದು ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ದಿನೇಶ ಗುಂಡುರಾವ್ ಹೇಳಿದರು.

ಸವದತ್ತಿಯಲ್ಲಿ ಭಾನುವಾರ ಬೃಹತ್ ಆರೋಗ್ಯ ಮೇಳಕ್ಕೆ ಚಾಲನೆ ನೀಡಿದ ನಂತರ ಇಲ್ಲಿನ ತಾಲೂಕು ಸರ್ಕಾರಿ ಆಸ್ಪತ್ರೆಗೆ ದಿಢೀರ್‌ ಭೇಟಿ ನೀಡಿದ ಸಚಿವರು, ಪರಿಶೀಲನೆ ನಡೆಸಿದರು. ಈ ಬಾರಿ ಬಜೆಟ್‌ನಲ್ಲಿ ರಾಮದುರ್ಗ ಮತ್ತು ಸವದತ್ತಿ ಆಸ್ಪತ್ರೆ ಪುನರ್ ನಿರ್ಮಾಣ ಮಾಡಿ ಅಭಿವೃದ್ಧಿಗೆ ಘೋಷಣೆ ಮಾಡಲಾಗಿದ್ದು ಪರಿಶೀಲನೆಗೆ ಬಂದಿರುವುದಾಗಿ ತಿಳಿಸಿದರು.

ರಾಮದುರ್ಗ ಸರ್ಕಾರಿ ಆಸ್ಪತ್ರೆಯಲ್ಲಿ ಪ್ರಸೂತಿ ಮತ್ತು ತಜ್ಞ ವೈದ್ಯರ ಕೊರತೆ ಹಾಗೂ ಎಕ್ಸ ರೇ ಮತ್ತಿತರ ವಿಭಾಗಗಳಲ್ಲಿ ಟೆಕ್ನಿಷಿಯನ್‌ಗಳ ಹುದ್ದೆಗಳು ಖಾಲಿ ಇರುವ ಬಗ್ಗೆ ಸಚಿವರ ಗಮನ ಸೆಳೆದಾಗ ಸಚಿವರು ಅರಿವಳಿಕೆ ವೈದ್ಯರ ನೇಮಕಕ್ಕೆ ಕೂಡಲೇ ಕ್ರಮ ಕೈಗೊಳ್ಳುವಂತೆ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿಗಳಿಗೆ ಸೂಚನೆ ನೀಡಿದರು. ತಜ್ಞ ವೈದ್ಯರ ನೇಮಕ ಆಗುವ ತನಕ ಲಭ್ಯವಿರುವ ವೈದ್ಯರ ಮುಖಾಂತರ ರೋಗಿಗಳಿಗೆ ತೊಂದರೆಯಾಗದಂತೆ ಕ್ರಮಕೈಗೊಳ್ಳಲು ಸೂಚಿಸಿದರು.

ಆಪರೇಷನ್ ಥೇಟರ್, ಹೆರಿಗೆ ವಿಭಾಗ, ತೀವ್ರ ನಿಗಾ ಘಟಕ, ಹೊರ ರೋಗಿ ವಾರ್ಡಗೆ ಭೇಟಿ ನೀಡಿ ಪರಿಶೀಲಿಸಿ, ರೋಗಿಗಳ ಆರೋಗ್ಯ ವಿಚಾರಿಸಿದರು. ಈ ಸಂದರ್ಭದಲ್ಲಿ ಡಿಎಚ್ಓ ಐ.ಪಿ.ಗಡಾದ , ಜಿಪಂ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ರಾಹುಲ್ ಶಿಂಧೆ, ಆರೋಗ್ಯ ಇಲಾಖೆ ಜಂಟಿ ನಿರ್ದೇಶಕಿ ಪುಷ್ಪಾ, ರಾಮದುರ್ಗ ತಾಲೂಕು ಆರೋಗ್ಯಾಧಿಕಾರಿ ಡಾ.ನವೀನ್ ನಿಜಗುಲಿ, ತಾಪಂ ಸಹಾಯಕ ನಿರ್ದೇಶಕ ಅಪ್ಪಯ್ಯಪ್ಪ ಕುಂಬಾರ ಸೇರಿದಂತೆ ಹಲವರು ಉಪಸ್ಥಿತರಿದ್ದರು.

Share this article