ಹುಬ್ಬಳ್ಳಿ:
ಪಶು ಸಂಗೋಪನೆ ಇಲಾಖೆಗೆ ಈಗಾಗಲೇ 400 ವೈದ್ಯರನ್ನು ಗುತ್ತಿಗೆ ಆಧಾರದಲ್ಲಿ ನೇಮಕ ಮಾಡಿಕೊಳ್ಳಲಾಗಿದೆ. ಇನ್ನೂ 400 ವೈದ್ಯರ ನೇಮಕಕ್ಕೆ ಕೆಪಿಎಸ್ಸಿ ಅವರಿಗೆ ನೀಡಲಾಗಿದೆ. ಅವರು ಪರಿಶೀಲನೆ ನಡೆಸಿ ಏಪ್ರಿಲ್ ವೇಳೆಗೆ ನೇಮಕ ಪೂರ್ಣಗೊಳಿಸುವರು ಎಂದು ಪಶು ಸಂಗೋಪನೆ ಹಾಗೂ ರೇಷ್ಮೆ ಖಾತೆ ಸಚಿವ ಕೆ. ವೆಂಕಟೇಶ ತಿಳಿಸಿದರು.
ನಗರದಲ್ಲಿ ಬುಧವಾರ ಸುದ್ದಿಗಾರರೊಂದಿಗೆ ಮಾತನಾಡಿ, ಉಳಿದಂತೆ 200 ಇನ್‌ಸ್ಪೆಕ್ಟರ್, 700 ಡಿ ದರ್ಜೆ ನೌಕರರ ನೇಮಕಾತಿ ಪ್ರಕ್ರಿಯೆಯನ್ನು ಏಪ್ರಿಲ್ ವೇಳೆಗೆ ಪೂರ್ಣಗೊಳಿಸುವುದಾಗಿ ತಿಳಿಸಿದರು.ಹಾವೇರಿ, ಧಾರವಾಡ, ಬೆಳಗಾವಿ ಜಿಲ್ಲೆಗಳಲ್ಲಿ ರೇಷ್ಮೆ ಬೆಳೆಯುವ ರೈತರ ಸಂಖ್ಯೆ ಹೆಚ್ಚಾಗುತ್ತಿದೆ. ಇದಕ್ಕಾಗಿ ಹಾವೇರಿಯಲ್ಲಿ ₹ 15 ಕೋಟಿ ವೆಚ್ಚದ ಹೈಟೆಕ್ ಮಾರುಕಟ್ಟೆ ನಿರ್ಮಾಣ ಕಾರ್ಯ ಪ್ರಗತಿಯಲ್ಲಿದೆ. ಸೆಪ್ಟೆಂಬರ್ ವೇಳೆಗೆ ಉದ್ಘಾಟನೆಗೆ ಸಜ್ಜಾಗಲಿದೆ. ರೇಷ್ಮೆ ಬೆಳೆಯಲು ಮುಂದೆ ಬರುವ ರೈತರಿಗೆ ಎಲ್ಲ ರೀತಿಯ ಅನುಕೂಲ ಮಾಡಿಕೊಡಲಾಗುವುದು. ತರಬೇತಿ ಸಹ ನೀಡಲಾಗುವುದು. ಬೆಳೆಗಾರರು ಇದರ ಪ್ರಯೋಜನ ಪಡೆಯುವಂತೆ ಕೋರಿದರು.ಸೂಕ್ತ ಕ್ರಮಕ್ಕೆ ಒತ್ತಾಯ:ಶಿವಮೊಗ್ಗ ಜಿಲ್ಲೆಯ ಸೀಗೆಬಾಗಿ ಬಳಿ ಅಕ್ರಮ ಮರಳುಗಾರಿಕೆ ತಡೆಯಲು ಹೋಗಿದ್ದ ಮಹಿಳಾ ಅಧಿಕಾರಿಯನ್ನು ಅವಾಚ್ಯವಾಗಿ ನಿಂದಿಸಿ, ಜೀವಬೆದರಿಕೆ ಹಾಕಿರುವುದು ಖಂಡನಾರ್ಹ. ಈ ರೀತಿ ಮಾಡಿದವರ ಮೇಲೆ ಸೂಕ್ತ ಕ್ರಮಕೈಗೊಳ್ಳಬೇಕು ಎಂದು ಸಚಿವರು ಒತ್ತಾಯಿಸಿದರು.
ಜಾನುವಾರು ಗಣತಿ ಕಾರ್ಯ ಪೂರ್ಣಗೊಳಿಸಿ:
ಜನವರಿಯಿಂದ ಜಾನುವಾರು ಗಣತಿ ಆರಂಭಿಸಲಾಗಿದೆ. ಈಗಾಗಲೇ ಹಲವು ಜಿಲ್ಲೆಗಳಲ್ಲಿ ಶೇ. 70ರಷ್ಟು ಗಣತಿ ಕಾರ್ಯ ಪೂರ್ಣಗೊಂಡಿದೆ. ಫೆ. 28ರೊಳಗೆ ಉಳಿದ ಗಣತಿ ಕಾರ್ಯವನ್ನು ಪೂರ್ಣಗೊಳಿಸಬೇಕು. ಕೆಲವೆಡೆ ದಾಖಲೀಕರಣದ ಸರ್ವರ್ ಸಮಸ್ಯೆ, ತಾಂತ್ರಿಕ ಸಮಸ್ಯೆಯಿಂದ ವಿಳಂಬವಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಆಗಿರುವ ತಾಂತ್ರಿಕ ಸಮಸ್ಯೆ ಸರಿಪಡಿಸಿಕೊಂಡು ಕಾಲಮಿತಿಯಲ್ಲಿಯೇ ಗಣತಿ ಕಾರ್ಯ ಪೂರ್ಣಗೊಳಿಸುವಂತೆ ತಿಳಿಸಿದರು.
ಜಾನುವಾರು ಗಣತಿಯಲ್ಲಿ ಗದಗ ಜಿಲ್ಲೆಯು ರಾಜ್ಯದಲ್ಲಿಯೇ ಮೊದಲ ಸ್ಥಾನದಲ್ಲಿದೆ. ಈಗಾಗಲೇ ಶೇ. 95ರಷ್ಟು ಕಾರ್ಯವಾಗಿದೆ. ಇನ್ನೆರಡು ದಿನದಲ್ಲಿ ಪೂರ್ಣಗೊಳ್ಳಲಿದೆ ಎಂದು ಜಿಲ್ಲೆಯ ಅಧಿಕಾರಿಗಳು ಮಾಹಿತಿ ನೀಡಿದರು.
ಈ ವೇಳೆ ಧಾರವಾಡ, ಗದಗ, ಹಾವೇರಿ ಜಿಲ್ಲೆಗಳ ಪಶುಸಂಗೋಪನಾ ಇಲಾಖೆ ಅಧಿಕಾರಿಗಳು ಪಾಲ್ಗೊಂಡಿದ್ದರು.