ಲಾರಿ ಚಾಲಕರು ಹಾಗೂ ಮಾಲೀಕರ ಸಂಘ ಧರಣಿಕನ್ನಡಪ್ರಭ ವಾರ್ತೆ ಸಕಲೇಶಪುರ
ಚಾಲಕರ ಪಾಲಿಗೆ ಮರಣ ಶಾಸನವಾಗಿರುವ ಹಿಟ್ ಅಂಡ್ ರನ್ ಕಾಯ್ದೆಯನ್ನು ವಾಪಸ್ಸು ಪಡೆಯುವಂತೆ ಆಗ್ರಹಿಸಿ ಪಟ್ಟಣದಲ್ಲಿ ಲಾರಿ ಚಾಲಕರು ಹಾಗೂ ಮಾಲೀಕರ ಸಂಘದ ವತಿಯಿಂದ ಪ್ರತಿಭಟನೆ ನಡೆಸಲಾಯಿತು.ನೂತನ ಕಾಯ್ದೆ ವಿರುದ್ದ ದೇಶವ್ಯಾಪಿ ನಡೆಯುತ್ತಿರುವ ಪ್ರತಿಭಟನೆ ಬೆಂಬಲಿಸಿ ತಾಲೂಕು ಲಾರಿ ಚಾಲಕರು ಹಾಗೂ ಮಾಲೀಕರು ಪ್ರತಿಭಟನೆ ನಡೆಸಿದರು. ಈ ವೇಳೆ ಮಾತನಾಡಿ, ಅಪಘಾತಗಳು ಉದ್ದೇಶಪೂರ್ವಕವಾಗಿ ನಡೆಯುವುದಿಲ್ಲ. ಅಪಘಾತ ನಡೆದ ವೇಳೆ ಪ್ರಾಣ ಭಯದಿಂದ ಚಾಲಕರು ವಾಹನ ಬಿಟ್ಟು ಹೋಗುವುದು ಸಹಜ ಪ್ರಕ್ರಿಯೆ. ಇಂತಹ ಘಟನೆಗೆ ಏಳು ಲಕ್ಷ ರು. ದಂಡ ವಿಧಿಸುವ ನೂತನ ಕಾಯ್ದೆ ಚಾಲಕರ ಪಾಲಿಗೆ ಮರಣಶಾಸನವಾಗಿದೆ. ಚಾಲಕರ ಬಳಿ ಏಳು ಲಕ್ಷ ರು. ಹಣವಿದ್ದರೆ ಬೇರೆ ಉದ್ಯೋಗ ಮಾಡುತ್ತಾರೆ ಎಂದು ಪ್ರಶ್ನಿಸಿದರು.
ಕೇಂದ್ರ ಸರ್ಕಾರ ಬಡವರ ಹಾಗೂ ಶ್ರಮಿಕರ ವಿರೋಧಿಯಾಗಿದೆ. ಈ ಕಾನೂನು ಜಾರಿಗೊಳಿಸದಂತೆ ಹಲವು ಬಾರಿ ಕೇಂದ್ರ ಸರ್ಕಾರಕ್ಕೆ ಮನವಿ ಮಾಡಿದರೂ ಯಾವುದೇ ಪ್ರಯೋಜವಾಗಿಲ್ಲ. ಕಾಯ್ದೆ ವಾಪಸ್ಸ ಪಡೆಯದಿದ್ದರೆ ಪ್ರತಿಭಟನೆಯನ್ನು ಮುಂದಿನ ದಿನಗಳಲ್ಲಿ ಮತ್ತಷ್ಟು ತೀವ್ರಗೊಳಿಸುವುದು ನಿಶ್ಚಿತ. ಜಾರಿಗೊಳಿಸಲು ಉದ್ದೇಶಿರುವ ಕಾಯ್ದೆ ಕೇವಲ ಲಾರಿಗಳಿಗೆ ಮಾತ್ರವಲ್ಲದೆ ಸಣ್ಣ ಗೂಡ್ಸ್ ವಾಹನಗಳಿಗೆ ಅನ್ವಯವಾಗುತ್ತಿದ್ದು ಈ ವಾಹನಗಳ ಚಾಲಕರು ಪ್ರತಿಭಟನೆಗೆ ಬೆಂಬಲ ನೀಡಬೇಕು ಎಂದು ಪ್ರತಿಭಟನಕಾರರು ಮನವಿ ಮಾಡಿದರು.ಸಲೀಂ ಕೊಲ್ಲಹಳ್ಳಿ, ಲಾರಿ ಮಾಲೀಕರ ಸಂಘದ ಅಧ್ಯಕ್ಷ ರಘು, ಉಪಾಧ್ಯಕ್ಷ ಮುಧಸೀರ್, ನೂರುಲ್ಲ ಮುಂತಾದವರಿದ್ದರು.
ಕೇಂದ್ರ ಸರ್ಕಾರ ತರಲು ಉದ್ದೇಶಿಸಿರುವ ಹಿಟ್ ಅಂಡ್ ರನ್ ಕಾಯ್ದೆ ವಾಪಸ್ಸ ಪಡೆಯುವಂತೆ ಒತ್ತಾಯಿಸಿ ತಾಲೂಕು ಲಾರಿ ಮಾಲೀಕರು ಹಾಗೂ ಚಾಲಕರ ಸಂಘದ ವತಿಯಿಂದ ಪ್ರತಿಭಟನೆ ನಡೆಸಲಾಯಿತು.