ಶಾಂತಿಯುತ ಗಣೇಶೋತ್ಸವ ಆಯೋಜನೆಗೆ ಮೆಚ್ಚುಗೆ: ಡಾ.ಪ್ರಭಾ ಮಲ್ಲಿಕಾರ್ಜುನ್‌

KannadaprabhaNewsNetwork |  
Published : Sep 05, 2025, 01:00 AM IST
ಕ್ಯಾಪ್ಷನ4ಕೆಡಿವಿಜಿ34 ದಾವಣಗೆರೆ ಎಂಸಿಸಿ ಬಿ ಬ್ಲಾಕಿನಲ್ಲಿ ಗಣೇಶೋತ್ಸವದ ಅಂಗವಾಗಿ ನಡೆದ ಅನ್ನಸಂತರ್ಪಣೆ ಕಾರ್ಯಕ್ರಮವನ್ನು ಸಂಸದೆ ಡಾ.ಪ್ರಭಾ ಮಲ್ಲಿಕಾರ್ಜುನ್‌ ಉದ್ಘಾಟಿಸಿದರು. | Kannada Prabha

ಸಾರಾಂಶ

ಸಮಾಜದ ಸ್ವಾಸ್ಥ್ಯ ಕೆಡಿಸುವವರ ಬಗ್ಗೆ ಹೆಚ್ಚು ತಲೆಕೆಡಿಸಿಕೊಳ್ಳಬೇಡಿ, ಮಹತ್ವ ಕೊಡಬೇಡಿ. ಜಿಲ್ಲೆಯಾದ್ಯಂತ ಗಣೇಶ ಹಬ್ಬ ಹಾಗೂ ಗಣೇಶ ಮೂರ್ತಿ ವಿಸರ್ಜನಾ ಮೆರವಣಿಗೆಯು ಶಾಂತಿಯುತವಾಗಿ ನಡೆಯುತ್ತಿರುವುದು ಸಂತಸದ ವಿಚಾರ ಎಂದು ಸಂಸದೆ ಡಾ.ಪ್ರಭಾ ಮಲ್ಲಿಕಾರ್ಜುನ್ ಹೇಳಿದರು.

ಕನ್ನಡಪ್ರಭ ವಾರ್ತೆ ದಾವಣಗೆರೆ

ಸಮಾಜದ ಸ್ವಾಸ್ಥ್ಯ ಕೆಡಿಸುವವರ ಬಗ್ಗೆ ಹೆಚ್ಚು ತಲೆಕೆಡಿಸಿಕೊಳ್ಳಬೇಡಿ, ಮಹತ್ವ ಕೊಡಬೇಡಿ. ಜಿಲ್ಲೆಯಾದ್ಯಂತ ಗಣೇಶ ಹಬ್ಬ ಹಾಗೂ ಗಣೇಶ ಮೂರ್ತಿ ವಿಸರ್ಜನಾ ಮೆರವಣಿಗೆಯು ಶಾಂತಿಯುತವಾಗಿ ನಡೆಯುತ್ತಿರುವುದು ಸಂತಸದ ವಿಚಾರ ಎಂದು ಸಂಸದೆ ಡಾ.ಪ್ರಭಾ ಮಲ್ಲಿಕಾರ್ಜುನ್ ಹೇಳಿದರು.

ನಗರದ ಎಂಸಿಸಿ ಬಿ ಬ್ಲಾಕ್‌ನಲ್ಲಿ ಪ್ರತಿಷ್ಠಾಪಿಸಿರುವ ಗಣೇಶ ಮೂರ್ತಿ ವಿಸರ್ಜನೆಗೆ ಮುನ್ನ ಗುರುವಾರ ಏರ್ಪಡಿಸಲಾಗಿದ್ದ ಅನ್ನ ಸಂತರ್ಪಣೆ ಕಾರ್ಯಕ್ರಮದಲ್ಲಿ ಭಕ್ತಾದಿಗಳಿಗೆ ಪ್ರಸಾದ ಬಡಿಸುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.

ಶ್ರದ್ಧಾ ಭಕ್ತಿಯಿಂದ ಗಣೇಶೋತ್ಸವ ಆಚರಿಸಲಾಗುತ್ತಿದೆ. ಪೂಜೆ ಪುನಸ್ಕಾರವೂ ಜೋರಾಗಿ ನಡೆಯುತ್ತಿದೆ. ಗಣೇಶ ಮೂರ್ತಿ ಮೆರವಣಿಗೆಯು ಶಾಂತಿಯುತವಾಗಿ ಸಾಗಿ ವಿಸರ್ಜನೆ ನಡೆಯುತ್ತಿದ್ದು, ಇದು ದಾವಣಗೆರೆ ಜನರು ಶಾಂತಿಪ್ರಿಯರು ಎಂದು ತೋರಿಸುತ್ತದೆ. ಜಿಲ್ಲೆಯ ಜನರು, ಭಕ್ತಾದಿಗಳು ಯಾವುದೇ ಸಂಘರ್ಷಕ್ಕೆ ಎಡೆ ಮಾಡಿಕೊಡದೇ ಆಚರಣೆ ಮಾಡುತ್ತಿರುವುದು ಒಳ್ಳೆಯ ಬೆಳವಣಿಗೆ ಎಂದು ಹೇಳಿದರು.

ಡಿಜೆ ಸಿಸ್ಟಂ ನಿಷೇಧ ಮಾಡಿರುವುದರಿಂದ ಗಣೇಶೋತ್ಸವದಲ್ಲಿ ಸಂಸ್ಕೃತಿ ಬಿಂಬಿಸುವ, ಗಣಪತಿ ಮಹತ್ವ ಸಾರುವಂಥ ಸಂದೇಶವುಳ್ಳ ಕಲಾ ತಂಡಗಳ ಮೆರವಣಿಗೆಯು ಮತ್ತಷ್ಟು ಅಂದಗಾಣಿಸಲ್ಪಟ್ಟಿದೆ. ಇಲ್ಲಿಯವರೆಗೆ ಯಾವುದೇ ಅಹಿತಕರ ಘಟನೆಗೆ ಆಸ್ಪದ ನೀಡದಂತೆ ಹಬ್ಬ ಆಚರಣೆ ಮಾಡಲಾಗಿದ್ದು, ಎಲ್ಲರಿಗೂ ಮಾದರಿಯಾಗಿದೆ. ಹಬ್ಬವನ್ನು ಸಂಭ್ರಮದಿಂದ ನಾಡಿನೆಲ್ಲೆಡೆ ನಡೆಯುತ್ತಿದೆ. ಇನ್ನೂ ಗಣೇಶ ಮೂರ್ತಿಗಳ ವಿಸರ್ಜನಾ ಮೆರವಣಿಗೆ ಇದ್ದು, ಶಾಂತಿಯುತವಾಗಿ ನಡೆಯಬೇಕು ಎಂದು ಸಲಹೆ ನೀಡಿದರು.

ಕಂಸಾಳೆ, ವೀರಗಾಸೆ, ಡೊಳ್ಳು ಸೇರಿದಂತೆ ಇತರೆ ಕಲಾ ತಂಡಗಳ ಕಲಾವಿದರಿಗೆ ಈ ಬಾರಿಯ ಗಣೇಶೋತ್ಸವ ವಿಶೇಷವಾಗಿದೆ. ಜನರಿಗೆ ತೊಂದರೆಯಾಗುವ ಕಾರಣದಿಂದ ಡಿಜೆ ಸಿಸ್ಟಂ ಬಳಕೆ ನಿಷೇಧಿಸಲಾಗಿದೆ. ಹೈಕೋರ್ಟ್ ಕೂಡ ನಿಷೇಧಿಸಿದೆ. ಜಿಲ್ಲಾಡಳಿತವು ಸಹ ದಿಟ್ಟ ನಿರ್ಧಾರ ತೆಗೆದುಕೊಂಡಿದೆ. ಕೆಲವರು ಸಮಾಜದ ಸ್ವಾಸ್ಥ್ಯ ಹಾಳು ಮಾಡಲು ಕಾಯುತ್ತಿರುತ್ತಾರೆ. ಆದಕಾರಣ ಎಲ್ಲರೂ ಎಚ್ಚರದಿಂದ ಸಂಭ್ರಮದಿಂದ ಗಣೇಶೋತ್ಸವ ಆಚರಿಸಿ ಎಂದು ಕಿವಿಮಾತು ಹೇಳಿದರು.

ಮಹಾನಗರ ಪಾಲಿಕೆಯ ಮಾಜಿ ಸದಸ್ಯ ಗಡಿಗುಡಾಳ್ ಮಂಜುನಾಥ್ ಮಾತನಾಡಿ, ಸಚಿವ ಎಸ್.ಎಸ್. ಮಲ್ಲಿಕಾರ್ಜುನ್ ಸೂಚನೆ ಮೇರೆಗೆ ಜಿಲ್ಲಾಡಳಿತ, ಜಿಲ್ಲಾ ಪೊಲೀಸ್ ಇಲಾಖೆಯು ಶಾಂತಿಯುತವಾಗಿ, ಯಾವುದೇ ರೀತಿಯ ಗಲಾಟೆಗೆ ಆಸ್ಪದ ನೀಡದಂತೆ ಮುನ್ನಚ್ಚರಿಕೆ ವಹಿಸಿ ಶಾಂತಿ ಕಾಪಾಡುವ ಮೂಲಕ ಉತ್ತಮ ಕಾರ್ಯ ನಿರ್ವಹಿಸುತ್ತಿದ್ದು, ಹಬ್ಬದ ಸಂಭ್ರಮಕ್ಕೆ ಈ ಬಾರಿ ಕಲಾ ತಂಡಗಳು ಮೆರಗು ನೀಡಿವೆ ಎಂದು ತಿಳಿಸಿದರು.

ಈ ವೇಳೆ ಎಂಸಿಸಿ ಬಿ ಬ್ಲಾಕ್ ನ ಹಿರಿಯ ನಾಗರಿಕರು, ಮಹಿಳೆಯರು, ಗಣೇಶ ಮೂರ್ತಿ ಪ್ರತಿಷ್ಠಾಪಿಸಿದ್ದ ಆಯೋಜಕರು, ಮಹಿಳೆಯರು ಸೇರಿ ನೂರಾರು ಮಂದಿ ಪಾಲ್ಗೊಂಡಿದ್ದರು.

PREV

Recommended Stories

ಬಿಆರ್‌ಎಲ್ ಆಧುನಿಕ ಕನ್ನಡ ಸಾಹಿತ್ಯ ಚರಿತ್ರೆಯಲ್ಲಿ ಚಿರಕಾಲ ಉಳಿಯುವ ಆಪ್ತಭಾವದ ಕವಿ
ದಸರಾ ವೇಳೆ ಬಾನುರಿಂದ 2023ರ ಘಟನೆ ಮರುಕಳಿಸಬಾರ್ದು : ಯದುವೀರ್‌