ಕನ್ನಡಪ್ರಭ ವಾರ್ತೆ ಮುದ್ದೇಬಿಹಾಳ
ಮುದ್ದೇಬಿಹಾಳದಲ್ಲಿ ಬರ ಘೋಷಣೆಗೆ ಆಗ್ರಹಿಸಿ ತಹಸೀಲ್ದಾರ್ ಕಚೇರಿ ಎದುರು ಸೋಮವಾರದಿಂದ ಆರಂಭಗೊಂಡಿರುವ ಅನಿರ್ದಿಷ್ಟಾವಧಿ ಧರಣಿ ಸತ್ಯಾಗ್ರಹದಲ್ಲಿ ಮಾತನಾಡಿದ ಅವರು, ಮುಖ್ಯಮಂತ್ರಿಗಳು ಸೂಚನೆ ನೀಡಿದ್ದರೂ ಉಸ್ತುವಾರಿ ಸಚಿವರು ಕ್ಷೇತ್ರಕ್ಕೆ ಭೇಟಿ ನೀಡಿಲ್ಲ. ಶಾಸಕರು ಅಧಿಕಾರಿಗಳನ್ನು ಕರೆದುಕೊಂಡು ಗ್ರಾಮಗಳಿಗೆ ತೆರಳಿ ಬೆಳೆಹಾನಿ ಹಾಗೂ ಮಳೆಕೊರತೆಯ ವಾಸ್ತವ ಪರಿಸ್ಥಿತಿಯ ಸಮೀಕ್ಷೆ ನಡೆಸಬೇಕಿತ್ತು. ವಾಸ್ತವ ವರದಿ ಸರ್ಕಾರಕ್ಕೆ ಸಲ್ಲಿಕೆಯಾಗಿದ್ದರೆ ರೈತರು ಹೋರಾಟಕ್ಕೆ ಇಳಿಯುವ ಪರಿಸ್ಥಿತಿ ಬರುತ್ತಿರಲಿಲ್ಲ ಎಂದು ಹೇಳಿದರು.
ಹೊಲದಲ್ಲಿ ಬೆಳೆ ಒಣಗಿದೆ, ಫೋಟೋಶೂಟ್ ಬೇಡ:ಕೃಷಿ ಅಧಿಕಾರಿಗಳಾದ ಶರಣಗೌಡ, ಸುರೇಶ ಭಾವಿಕಟ್ಟಿ ಹಾಗೂ ಮುತ್ತಣ್ಣ ಹಳ್ಳೂರ ಅವರು ಹೊಲದಲ್ಲಿ ಸಜ್ಜೆ ಬೆಳೆ ಪರಿಶೀಲನೆ ನಡೆಸಿದಾಗ ಬೆಳೆ ಒಣಗಿರುವುದು ಕಂಡುಬಂದಿದೆ. ರೈತರು ಸಜ್ಜೆ ಬರುವುದಿಲ್ಲ ಎಂದು ಹೇಳುತ್ತಿದ್ದರೂ, ಮಳೆ ಬಂದರೆ ಚಿಗುರುತ್ತದೆ ಎಂಬ ರೀತಿಯಲ್ಲಿ ಹೇಳಲಾಗುತ್ತಿದೆ. ರೈತರ ಹೊಲಗಳ ವಾಸ್ತವ ಪರಿಸ್ಥಿತಿ ಅರಿಯದೆ ಫೋಟೋಶೂಟ್ ಮಾಡಿಸುವುದರಿಂದ ಸಮಸ್ಯೆ ಬಗೆಹರಿಯುವುದಿಲ್ಲ ಎಂದು ಟೀಕಿಸಿದರು.
ಸಮೀಕ್ಷೆ ಮಾಡಲು ಬಿಡಲಿಲ್ಲ; ತಪ್ಪು ಯಾರದ್ದು?:
ಧರಣಿಯಲ್ಲಿ ಮುಖಂಡರಾದ ಹೇಮರಡ್ಡಿ ಮೇಟಿ, ಮಲಕೇಂದ್ರಗೌಡ ಪಾಟೀಲ, ಗುರುನಾಥಗೌಡ ಬಿರಾದಾರ, ಸೋಮನಗೌಡ ಬಿರಾದಾರ, ವೆಂಕನಗೌಡ ಪಾಟೀಲ, ಜಗದೀಶ ಪಂಪಣ್ಣವರ, ಬಸವರಾಜ ಚಿತ್ತರಗಿ, ಲಕ್ಷ್ಮಣ ಬಿಜ್ಜೂರ, ಸಂಗಮೇಶ ಹತ್ತಿ, ಶಂಕರಗೌಡ ಶಿವಣಗಿ ಸೇರಿದಂತೆ ನೂರಾರು ರೈತರು ಪಾಲ್ಗೊಂಡಿದ್ದರು.
ಮುದ್ದೇಬಿಹಾಳ ವಿಧಾನಸಭಾ ಕ್ಷೇತ್ರವನ್ನು ಬರಪೀಡಿತ ಪ್ರದೇಶವೆಂದು ಘೋಷಿಸಬೇಕು. ಸರ್ಕಾರ ಕೂಡಲೇ ಈ ಕುರಿತು ತೀರ್ಮಾನ ಕೈಗೊಂಡು ಸಂಕಷ್ಟದಲ್ಲಿರುವ ರೈತರಿಗೆ ಪರಿಹಾರ ನೀಡಬೇಕು. ಇಲ್ಲವಾದಲ್ಲಿ ರೈತರನ್ನು ಪಕ್ಷಾತೀತವಾಗಿ ಒಗ್ಗೂಡಿಸಿ ಬೀದಿಗಿಳಿದು ಹೋರಾಟ ನಡೆಸುವುದು ಅನಿವಾರ್ಯವಾಗಲಿದೆ ಎಂದು ಬಿಜೆಪಿ ರೈತ ಮೋರ್ಚಾ ರಾಜ್ಯಾಧ್ಯಕ್ಷ ಎ.ಎಸ್. ಪಾಟೀಲ (ನಡಹಳ್ಳಿ) ಎಚ್ಚರಿಸಿದರು.
ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಅವರ ನೇತೃತ್ವದಲ್ಲಿ ಬರದ ವಿಚಾರವಾಗಿ ಪಾದಯಾತ್ರೆ ಆರಂಭವಾಗಿದೆ. ಸರ್ಕಾರ ರೈತರ ಸಮಸ್ಯೆಯನ್ನು ಗಂಭೀರವಾಗಿ ಪರಿಗಣಿಸಿ ಮುದ್ದೇಬಿಹಾಳ ಸೇರಿದಂತೆ ವಿಜಯಪುರ ಜಿಲ್ಲೆಯನ್ನು ಬರಪೀಡಿತ ಪ್ರದೇಶವೆಂದು ಘೋಷಿಸಬೇಕು. ಇಲ್ಲವಾದಲ್ಲಿ ರೈತರ ಹೋರಾಟ ಮತ್ತಷ್ಟು ತೀವ್ರಗೊಳ್ಳಲಿದೆ ಎಂದು ಹೇಳಿದರು.