ಕನ್ನಡಪ್ರಭ ವಾರ್ತೆ ಬಾಗಲಕೋಟೆ
ಜಿಲ್ಲೆಯಲ್ಲಿ ಈಗಾಗಲೇ ಅನುಮತಿ ಪಡೆದ ಮರಳು ಗಣಿಗಾರಿಕೆ, ಗ್ರಾನೈಟ್ ಕಲ್ಲುಗಣಿ, ಕಲ್ಲು ಪುಡಿ ಮಾಡುವ ಘಟಕಗಳು, ಸಾಗಾಣಿಕೆಗಳು ನಿಯಮಾನುಸಾರ ಕಾರ್ಯನಿರ್ವಹಿಸುತ್ತಿರುವ ಬಗ್ಗೆ ಪರಿಶೀಲಿಸಿ, ನಿಯಮ ಉಲ್ಲಂಘನೆ ಕಂಡುಬಂದಲ್ಲಿ ಸೂಕ್ತ ಕ್ರಮಕೈಗೊಳ್ಳುವಂತೆ ಜಿಲ್ಲಾಧಿಕಾರಿ ಸಂಗಪ್ಪ ಅಧಿಕಾರಿಗಳಿಗೆ ಸೂಚನೆ ನೀಡಿದರು.ಜಿಲ್ಲಾಧಿಕಾರಿ ಸಭಾಂಗಣದಲ್ಲಿ ನಡೆದ ಜಿಲ್ಲಾ ಮರಳು ಉಸ್ತುವಾರಿ ಸಮಿತಿ, ಜಿಲ್ಲಾ ಟಾಸ್ಕಪೋರ್ಸ್ (ಗಣಿ) ಸಮಿತಿ ಹಾಗೂ ಜಿಲ್ಲಾ ಕಲ್ಲು ಪುಡಿ ಮಾಡುವ ಘಟಕಗಳ ಲೈಸನ್ಸ್ ನೀಡಿಕೆ ಮತ್ತು ನಿಯಂತ್ರಣ ಪ್ರಾಧಿಕಾರದ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಮೊದಲು ಪರವಾನಗಿ ನೀಡಿದ ಘಟಕಗಳ ಮೇಲೆ ಗಣಿ ಮತ್ತು ಭೂ ವಿಜ್ಞಾನ, ಲೋಕೋಪಯೋಗಿ ಹಾಗೂ ತಹಸೀಲ್ದಾರ್ ಸೇರಿ ಜಂಟಿಯಾಗಿ ಪರಿಶೀಲನೆ ನಡೆಸಬೇಕು. ನಿಯಮಗಳ ಉಲ್ಲಂಘನೆ ಕಂಡುಬಂದಲ್ಲಿ ಸೂಕ್ತ ಕ್ರಮಕ್ಕೆ ಮುಂದಾಗಬೇಕು. ಇಲ್ಲವೇ ಅನುಮತಿ ರದ್ದುಪಡಿಸಲು ಮುಂದಾಗಬೇಕು ಎಂದರು.
ಪ್ರಸಕ್ತ ಸಾಲಿನಲ್ಲಿ ಜಿಲ್ಲಾ ಮತ್ತು ತಾಲೂಕು ಸಮಿತಿಗಳಿಂದ ಅನಧಿಕೃತ ಗಣಿಗಾರಿಕೆ, ಸಾಗಾಣಿಕೆ, ದಾಸ್ತಾನುಗಳಿಗೆ ಸಂಬಂಧಿಸಿದಂತೆ ಕೈಗೊಂಡ ಕ್ರಮಗಳ ಬಗ್ಗೆ ಪರಿಶೀಲಿಸಲಾಗಿ ಪತ್ತೆ ಹಚ್ಚಿದ ಪ್ರಕರಣಗಳ ಸಂಖ್ಯೆ 9 ಇದೆ. ಆದರೆ ಅವರ ಮೇಲೆ ಏಕೆ ಪ್ರಕರಣ ದಾಖಲಿಸಿಲ್ಲ ಎಂದು ಜಿಲ್ಲಾಧಿಕಾರಿ ಪ್ರಶ್ನಿಸಿದರು. ಅವರಿಗೆ ಕೇವಲ ದಂಡ, ನೋಟಿಸ್ ಕೊಟ್ಟರೆ ಸಾಲದು ಪ್ರಕರಣ ದಾಖಲಿಸಬೇಕು. ಅಲ್ಲದೇ ಮರಳು ಗಣಿಗಾರಿಕೆ ಪರವಾನಗಿ ಬಂದ ಅರ್ಜಿಗಳನ್ನು ಸೂಕ್ತ ಪರಿಶೀಲನೆ ನಂತರ ಅನುಮತಿ ನೀಡುವ ಕೆಲಸವಾಗಬೇಕು ಎಂದು ಹೇಳಿದರು. ಪಟ್ಟಾ ಜಮೀನಿನಲ್ಲಿ ಮರಳು ಗಣಿಗಾರಿಕೆ ಕೋರಿ ಬಂದ ಅರ್ಜಿಗಳಲ್ಲಿ ನಿಯಮಾನುಸಾರ ಇದ್ದಲ್ಲಿ ಮಾತ್ರ ಅನುಮತಿ ನೀಡಬೇಕು. ಈ ಬಗ್ಗೆ ಅರ್ಜಿಗಳನ್ನು ಪರಿಶೀಲಿಸಿ, ನಂತರ ಘಟಕಗಳ ಸ್ಥಳಕ್ಕೂ ಸಹ ಭೇಟಿ ಸರಿಯಾಗಿದ್ದಲ್ಲಿ ಮಾತ್ರ ಎಲ್ಲವನ್ನು ಪರಿಶೀಲಿಸಿ ಪರವಾನಗಿ ನೀಡುವ ಕೆಲಸವಾಗಬೇಕು. ಪರವಾನಗಿ ನೀಡಿದ ನಂತರ ಸಮಸ್ಯೆಯಾಗುವುದನ್ನು ತಪ್ಪಿಸಲು ಮೊದಲ ಹಂತದಲ್ಲಿಯೇ ಸೂಕ್ತ ಪರಿಶೀಲನೆ ಅಗತ್ಯವಾಗಿದೆಂದರು.ಕಲ್ಲುಪುಡಿ ಮಾಡುವ ಘಟಕಗಳ ಲೈಸನ್ಸ್ ನೀಡುವ, ಅವಧಿ ವಿಸ್ತರಿಸುವ ಕುರಿತು ಬಂದ ಅರ್ಜಿಗಳನ್ನು ಪರಿಶೀಲಿಸಿ ಫಾರಂ-ಸಿ ವಿತರಿಸುವ ಕೆಲಸವಾಗಬೇಕು. ಅಲ್ಲದೇ ಘಟಕ ಸ್ಥಾಪನೆ ಮಾಡುವ ಜಮೀನು ಎನ್.ಎ ಆಗಿರಬೇಕು. ಆಗದಿದ್ದಲ್ಲಿ ಅನುಮತಿ ನೀಡಬಾರದು ಎಂದು ಜಿಲ್ಲಾಧಿಕಾರಿ ತಿಳಿಸಿದರು. ಮರಳು ಸಾಗಿಸುವ ವಾಹನಗಳಿಗೆ ಕಡ್ಡಾಯವಾಗಿ ಜಿಪಿಎಸ್ ಅಳವಡಿಸಿರಬೇಕು. ಅನುಮತಿ ಇಲ್ಲದ ವಾಹನಗಳ ಮೇಲೆ ಕ್ರಮವಹಿಸಲು ಸೂಚಿಸಿದರು.
ಸಭೆಯಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸಿದ್ದಾರ್ಥ ಗೋಯಲ್, ಜಿಪಂ ಸಿಇಒ ಶಶಿಧರ ಕುರೇರ್, ಉಪ ಅರಣ್ಯ ಸಂರಕ್ಷಣಾಧಿಕಾರಿ ರುಥ್ರೇನ್, ಉಪ ವಿಭಾಗಾಧಿಕಾರಿ ಸಂತೋಷ ಜಗಲಾಸರ, ಗಣಿ ಮತ್ತು ಭೂವಿಜ್ಞಾನ ಇಲಾಖೆಯ ಉಪನಿರ್ದೇಶಕ ಷಣ್ಮುಖ ಡಿ.ಎಚ್, ಜಿಲ್ಲಾ ಪರಿಸರ ಅಧಿಕಾರಿ ಅನಿಕುಮಾರ ಚಳಗೇರಿ ಸೇರಿ ಇತರರು ಇದ್ದರು.