ಮಾದಕ ವಸ್ತುಗಳ ಕಳ್ಳ ಸಾಗಾಣಿಕೆ ತಡೆಗೆ ಸೂಕ್ತ ಕ್ರಮ

KannadaprabhaNewsNetwork |  
Published : Dec 27, 2024, 12:46 AM IST
26ಎಚ್‌ವಿಆರ್2 | Kannada Prabha

ಸಾರಾಂಶ

ಜಿಲ್ಲೆಯಲ್ಲಿ ಮಾದಕವಸ್ತು ವ್ಯಸನಿಗಳು ಹಾಗೂ ಮಾದಕವಸ್ತು ಕಳ್ಳ ಸಾಗಾಣಿಕೆ ಕಂಡು ಬಂದಲ್ಲಿ ಕಟ್ಟುನಿಟ್ಟಿನ ಕ್ರಮ ಜರುಗಿಸುವಂತೆ ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ಡಾ. ವಿಜಯ ಮಹಾಂತೇಶ್ ದಾನಮ್ಮನವರ ಸೂಚಿಸಿದರು.

ಹಾವೇರಿ: ಜಿಲ್ಲೆಯಲ್ಲಿ ಮಾದಕವಸ್ತು ವ್ಯಸನಿಗಳು ಹಾಗೂ ಮಾದಕವಸ್ತು ಕಳ್ಳ ಸಾಗಾಣಿಕೆ ಕಂಡು ಬಂದಲ್ಲಿ ಕಟ್ಟುನಿಟ್ಟಿನ ಕ್ರಮ ಜರುಗಿಸುವಂತೆ ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ಡಾ. ವಿಜಯ ಮಹಾಂತೇಶ್ ದಾನಮ್ಮನವರ ಸೂಚಿಸಿದರು.ನಗರದ ಜಿಲ್ಲಾಧಿಕಾರಿಗಳ ಕಾರ್ಯಾಲಯದ ಸಭಾಂಗಣದಲ್ಲಿ ಗುರುವಾರ ಆಯೋಜಿಸಲಾಗಿದ್ದ ನಾರ್ಕೊ ಸಮನ್ವಯ ಕೇಂದ್ರದ ಸಭೆಯ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದ ಅವರು, ಜಿಲ್ಲೆಯಲ್ಲಿ ಗಾಂಜಾ, ಗಸಗಸೆ ಅಂತಹ ಮಾದಕವಸ್ತು ಬೆಳೆಗಳನ್ನು ಬೆಳೆಯುತ್ತಿದ್ದರೆ ತೀವ್ರ ನಿಗಾ ವಹಿಸಬೇಕು ಹಾಗೂ ಪರಿಶೀಲನೆಗೆ ಒಳಪಡಿಸಬೇಕು. ಮಾದಕ ಬೆಳೆಗಳು ಬೆಳೆಯುತ್ತಿರುವುದರ ಬಗ್ಗೆ ಹಾಗೂ ಮಾದಕವಸ್ತುಗಳ ಕಳ್ಳ ಸಾಗಾಣಿಕೆ ಕಂಡು ಬಂದಲ್ಲಿ ತಕ್ಷಣ ಕಾರ್ಯಪ್ರವೃತ್ತರಾಗಿ ಕಠಿಣ ಕ್ರಮ ಜರುಗಿಸಬೇಕು ಎಂದು ಅಧಿಕಾರಿಗಳಿಗೆ ಎಚ್ಚರಿಸಿದರು ಎಂದರು. ಮುಂಬರುವ ಜಾತ್ರೆ ಸಂತೆ ಹಾಗೂ ಜನನಿಬಿಡ ಪ್ರದೇಶದಲ್ಲಿ ಆದಷ್ಟು ಎಚ್ಚರ ವಹಿಸಬೇಕು. ಮಾದಕವಸ್ತುಗಳ ಕಳ್ಳ ಸಾಗಣಿಕೆ ತಡೆಗಟ್ಟುವಿಕೆಯು ಕೇವಲ ಪೊಲೀಸ್ ಇಲಾಖೆಗೆ ಮಾತ್ರ ಸೀಮಿತವಾಗಿರದೆ ಪ್ರತಿಯೊಂದು ಇಲಾಖೆಯ ಕಟ್ಟು ನಿಟ್ಟಾಗಿ ಕಾರ್ಯನಿರ್ವಹಿಸುವಂತೆ ಸೂಚಿಸಿದರು. ಮುಂದಿನ ಸಭೆಯಲ್ಲಿ ಅಗತ್ಯ ಕ್ರಮದೊಂದಿಗೆ ಹಾಗೂ ಮಾದಕವಸ್ತು ಕಳ್ಳ ಸಾಗಣಿಕೆಗೆ ಕೈಗೊಂಡಿರುವ ಕ್ರಮಗಳ ಕುರಿತ ವರದಿಯನ್ನು ತಪ್ಪದೆ ತರುವಂತೆ ಅಧಿಕಾರಿಗಳಿಗೆ ಸೂಚಿಸಿದರು.ಮುಖ್ಯವಾಗಿ ಶಾಲಾ ಕಾಲೇಜಗಳಲ್ಲಿ ಶಿಕ್ಷಕರು ವಿದ್ಯಾರ್ಥಿಗಳ ಮೇಲೆ ಸದಾ ನಿಗಾ ವಹಿಸಬೇಕು. ಜಿಲ್ಲೆಯ ಎಲ್ಲಾ ಶಾಲಾ, ಪದವಿ ಪೂರ್ವ ಮತ್ತು ಪದವಿ ಕಾಲೇಜಿನ ಪ್ರಾಂಶುಪಾಲರನ್ನು ಕರೆದು ಸಭೆ ನಡೆಸಿ ಮಾದಕವಸ್ತು ಬಳಕೆಯಿಂದ ಆಗಬಹುದಾದ ಅನಾಹುತ ಮತ್ತು ಪರಿಣಾಮಗಳ ಕುರಿತು ವಿದ್ಯಾರ್ಥಿಗಳಲ್ಲಿ ಜಾಗೃತಿ ಮೂಡಿಸಲು ಕ್ರಮ ವಹಿಸಬೇಕು ಎಂದರು. ವಿದ್ಯಾರ್ಥಿಗಳ ಹಿತದೃಷ್ಟಿಯಿಂದ ಮಾದಕವಸ್ತುಗಳ ಬಳಕೆಯಿಂದ ಆಗಬಹುದಾದ ದುಷ್ಪರಿಣಾಮಗಳನ್ನು ತಿಳಿಸುವುದರಿಂದ ಅವರುಗಳು ಜಾಗೃತರಾಗಿ ಮಾದಕವಸ್ತುಗಳ ಬಳಕೆಗೆ ಹಿಂಜರೆದು ಉತ್ತಮ ಭವಿಷ್ಯ ರೂಪಿಸಿಕೊಳ್ಳಲು ಸಾಧ್ಯವಾಗುತ್ತದೆ. ಇದು ಕೇವಲ ಪೊಲೀಸ್ ಇಲಾಖೆಯ ಜವಾಬ್ದಾರಿಯಾಗಿರದೆ ಪ್ರತಿಯೊಬ್ಬರ ಜವಾಬ್ದಾರಿ ಆಗಿದೆ ಎಂದರು .ಸೈಬರ್ ಕ್ರೈಂ ಪೊಲೀಸ್ ಅಧಿಕಾರಿ ಎಸ್.ಆರ್. ಗಣಚಾರಿ ಮಾತನಾಡಿ, ಮಾದಕವಸ್ತುಗಳ ಬಳಕೆಯನ್ನು ನಿಯಂತ್ರಿಸಲು ಡ್ರಗ್ ಫ್ರೀ ಕಂಟ್ರೋಲ್ ಆ್ಯಪ್ ಬಿಡುಗಡೆ ಮಾಡಲಾಗಿದೆ. ಗೂಗಲ್ ಪ್ಲೇ ಸ್ಟೋರ್‌ಅಲ್ಲಿ ಇದು ಲಭ್ಯ ವಿದ್ದು, ಪ್ರತಿಯೊಬ್ಬರು ಇದನ್ನು ತಮ್ಮ ತಮ್ಮ ಮೊಬೈಲಗಳಲ್ಲಿ ಡೌನ್‌ಲೋಡ್ ಮಾಡಿಕೊಳ್ಳಲು ಸೂಚಿಸಿದರು. ಇದರಿಂದ ಸಾಧ್ಯವಾದಷ್ಟು ಮಟ್ಟಿಗೆ ಮಾದಕ ವ್ಯಸನಿಗಳನ್ನು ನಿಯಂತ್ರಿಸಲು ಸಾಧ್ಯವಾಗುತ್ತದೆ. ಮಾದಕ ವ್ಯಸನಿಗಳನ್ನು ನಿಯಂತ್ರಿಸುವುದು ಕೇವಲ ಪೊಲೀಸ್ ಕರ್ತವ್ಯವಾಗಿರದೆ ಪ್ರತಿಯೊಬ್ಬರು ಇದನ್ನು ಈ ಆ್ಯಪ್ ಮೂಲಕ ನಿಯಂತ್ರಿಸಬಹುದು. ಮಾದಕ ವ್ಯಸನಿಗಳು ಕಂಡು ಬಂದಲ್ಲಿ ಡ್ರಗ್ ಫ್ರೀ ಕಂಟ್ರೋಲ್ ಆ್ಯಪ್ ಮೂಲಕ ಸೆರೆ ಹಿಡಿದು ಸಲ್ಲಿಸಿದ್ದಲ್ಲಿ ಅಂತವರನ್ನು ನಿಯಂತ್ರಿಸಲು ಸಾಧ್ಯವಾಗಲಿದೆ ಎಂದು ಸಭೆಗೆ ಮಾಹಿತಿ ನೀಡಿದರು. ಸಭೆಯಲ್ಲಿ ವಿವಿಧ ಜಿಲ್ಲಾ ಮಟ್ಟದ ಅಧಿಕಾರಿಗಳು ಹಾಜರಿದ್ದರು.

PREV

Recommended Stories

ಕೆಪಿಎಸ್ಸಿ: 384 ಹುದ್ದೆ ನೇಮಕಕ್ಕೆ ಕೋರ್ಟ್‌ ಅನುಮತಿ
ಧರ್ಮಸ್ಥಳ ಗ್ರಾಮ ಕೇಸಿಂದ ಹಿಂದೆ ಸರಿದ ನ್ಯಾಯಾಧೀಶ