ಕನ್ನಡಪ್ರಭ ವಾರ್ತೆ ಮುದ್ದೇಬಿಹಾಳ
ಭ್ರೂಣಲಿಂಗ ಪತ್ತೆ ಕಾನೂನಿನ ಪ್ರಕಾರ ಅಪರಾಧ. ಇಂತಹ ಪ್ರಕರಣಗಳ ಸುಳಿವು ಸಿಕ್ಕಲ್ಲಿ ಸಂಬಂಧಿಸಿದ ಅಧಿಕಾರಿಗಳು, ಪೊಲೀಸ್ ಇಲಾಖೆ ಯಾವುದೇ ಮುಲಾಜಿಲ್ಲದೇ, ಯಾವ ಪ್ರಭಾವಕ್ಕೂ ಒಳಗಾಗದೇ ಕೂಡಲೇ ಸೂಕ್ತ ಕ್ರಮಕ್ಕೆ ಮುಂದಾಗಬೇಕು ಎಂದು 5ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರಾದ ಸಚಿನ್ ಕೌಶಿಕ್ ಕರೆ ನೀಡಿದರು.ಪಟ್ಟಣದ ಕೆಬಿಎಂಪಿಎಸ್ ಹೈಸ್ಕೂಲ್‌ನಲ್ಲಿ ತಾಲೂಕು ಕಾನೂನು ಸೇವಾ ಸಮಿತಿ, ನ್ಯಾಯವಾದಿಗಳ ಸಂಘ, ಶಿಕ್ಷಣ ಇಲಾಖೆ ಹಾಗೂ ಇತರ ಎಲ್ಲ ಸರ್ಕಾರಿ ಇಲಾಖೆಗಳ ಆಶ್ರಯದಲ್ಲಿ ನಡೆದ ಅಂತಾರಾಷ್ಟ್ರೀಯ ಹೆಣ್ಣು ಮಗುವಿನ ದಿನಾಚರಣೆ ಉದ್ಘಾಟಿಸಿ ಅವರು ಮಾತನಾಡಿದರು. ಇತ್ತೀಚಿನ ವರದಿಗಳ ಪ್ರಕಾರ ಹಲವು ರಾಜ್ಯಗಳಲ್ಲಿ ಹೆಣ್ಣು ಜನನ ಅನುಪಾತ ತಗ್ಗುತ್ತಿರುವುದು ಆತಂಕದ ವಿಷಯ. ಭ್ರೂಣಲಿಂಗ ಪತ್ತೆ ಮತ್ತು ಗರ್ಭಪಾತವನ್ನು ಕಾನೂನುಬದ್ಧವಾಗಿ ನಿಷೇಧಿಸಲ್ಪಟ್ಟರೂ ಇನ್ನೂ ಕೆಲವು ಪ್ರದೇಶಗಳಲ್ಲಿ ಭ್ರೂಣಲಿಂಗ ಪತ್ತೆ ಮತ್ತು ಗರ್ಭಪಾತ ನಡೆಯುತ್ತಿರುವುದು ಮಹಿಳಾ ಜನಸಂಖ್ಯೆಯ ಮೇಲೆ ದುಷ್ಪರಿಣಾಮ ಬೀರುತ್ತಿದೆ. ಇದು ಬರುವ ದಿನಗಳಲ್ಲಿ ಕೇವಲ ಜನಸಂಖ್ಯೆಯ ಅಸಮತೋಲನವಲ್ಲದೇ ವೈವಾಹಿಕ ತೊಂದರೆಗಳು, ಮಹಿಳಾ ದೌರ್ಜನ್ಯಗಳು ಮತ್ತು ಮಾನವ ಮೌಲ್ಯದ ಕುಸಿತಗಳಿಗೆ ಕಾರಣವಾಗಬಹುದು ಎಂದು ಹೇಳಿದರು.ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ತಾಲೂಕು ಕಾನೂನು ಸೇವಾ ಸಮಿತಿ ಅಧ್ಯಕ್ಷರೂ ಹಾಗೂ ಹಿರಿಯ ಸಿವಿಲ್ ನ್ಯಾಯಾಧೀಶರಾದ ರವೀಂದ್ರಕುಮಾರ ಕಟ್ಟಿಮನಿ ಮಾತನಾಡಿ, ನಮ್ಮ ಸಂವಿಧಾನವು ಎಲ್ಲರಿಗೂ ಸಮಾನ ಹಕ್ಕು ನೀಡಿದೆ. ಹೆಣ್ಣು ಮಗುವಿನ ವಿರುದ್ಧದ ಬೇಧಭಾವ, ಬಾಲ್ಯವಿವಾಹ, ವರದಕ್ಷಿಣೆ ನಿಷೇಧ, ಮತ್ತು ಹಿಂಸೆ ತಡೆಯಲು ಅನೇಕ ಕಾನೂನುಗಳು ಅಸ್ತಿತ್ವದಲ್ಲಿದ್ದರೂ ಇನ್ನೂ ಹೆಣ್ಣಿನ ಮೇಲಿನ ಶೋಷಣೆ ನಿಲ್ಲುತ್ತಿಲ್ಲ. ಈ ಶೋಷಣೆ ನಿಲ್ಲಬೇಕಾದರೆ ಜನಜಾಗೃತಿ, ಶಿಕ್ಷಣ ಮತ್ತು ನೈತಿಕ ಬದಲಾವಣೆ ಅತ್ಯವಶ್ಯ. ಒಂದು ಹೆಣ್ಣು ಬಲಿಷ್ಟವಾದರೆ ಕುಟುಂಬ ಬಲಿಷ್ಟವಾಗುತ್ತದೆ. ಕುಟುಂಬ ಬಲಿಷ್ಟವಾದರೆ ರಾಷ್ಟ್ರ ಬಲಿಷ್ಟವಾಗುತ್ತದೆ ಎಂಬುದನ್ನು ಪ್ರತಿಯೊಬ್ಬರೂ ಅರಿತು ನಿಮ್ಮ ಸುತ್ತಮುತ್ತ ಹೆಣ್ಣಿನ ಮೇಲಾಗುತ್ತಿರುವ ಶೋಷಣೆ ತಡೆಯಲು ಮುಂದಾಗಬೇಕು ಎಂದರು.
ತಾಲೂಕು ಕಾನೂನು ಸೇವಾ ಸಮಿತಿಯ ಸದಸ್ಯ ಕಾರ್ಯದರ್ಶಿಗಳು ಹಾಗೂ ಸಿವಿಲ್ ನ್ಯಾಯಾಧೀಶರಾದ ರಾಮಮೂರ್ತಿ.ಎನ್ ಮಾತನಾಡಿ, ಈ ದಿನಾಚರಣೆ ಇಂದಿನ ದಿನಕ್ಕೆ ಮಾತ್ರ ಸೀಮಿತವಾಗಬಾರದು. ಹೆಣ್ಣುಮಕ್ಕಳು ದುರ್ಬಲರಲ್ಲ. ಮಮತೆಯ ರೂಪದ ನಾಯಕಿಯರು. ಅವರಿಗೆ ಉತ್ತಮ ಶಿಕ್ಷಣ, ಆರೋಗ್ಯ ಹಾಗೂ ಸುರಕ್ಷಿತ ವಾತಾವರಣ ಒದಗಿಸುವುದು ಕೇವಲ ಸರ್ಕಾರದ ಜವಾಬ್ದಾರಿ ಅಲ್ಲ-ಅದು ಸಮಾಜದ ಪ್ರತಿ ಸದಸ್ಯರ ಧರ್ಮ ಎಂದರು.ನ್ಯಾಯವಾದಿಗಳ ಸಂಘದ ಅಧ್ಯಕ್ಷ ಶಶಿಕಾಂತ ಮಾಲಗತ್ತಿ ಮಾತನಾಡಿ, ಸಮಾಜದಲ್ಲಿನ ಮೂಢ ನಂಬಿಕೆಗಳಿಂದ ಹೆಣ್ಣಿನ ಸಂತತಿ ಕಡೆಮೆಯಾಗುತ್ತಿದೆ. ಹೆಣ್ಣಿನ ರಕ್ಷಣೆಗಾಗಿ, ಬೆಳವಣಿಗೆಗಾಗಿ ಸರ್ಕಾರ ಸಾಕಷ್ಟು ಕಾಯ್ದೆ-ಕಾನೂನುಗಳನ್ನು ತಂದರೂ ಸಹಿತ ಹೆಣ್ಣಿನ ಮೇಲಿನ ದೌರ್ಜನ್ಯಗಳು ನಿಲ್ಲದಿರುವುದು ವಿಷಾದನೀಯ. ಹೆಣ್ಣು ಬಲಿಷ್ಟವಾಗಿ ಬದುಕಲು ಮುಖ್ಯವಾಗಿ ಅವಳಿಗೆ ಶಿಕ್ಷಣದ ಅವಶ್ಯಕತೆಯಿದೆ. ಶಿಕ್ಷಣ ಎನ್ನುವುದು ಕೇವಲ ಪುಸ್ತಕದ ಜ್ಞಾನವಲ್ಲ-ಅದು ಆತ್ಮವಿಶ್ವಾಸದ ಬೆಳಕು ಎಂದರು.
ನ್ಯಾಯವಾದಿ ರಶ್ಮಿ ಕುಲಕರ್ಣಿ ವಿಶೇಶ ಉಪನ್ಯಾಸ ನೀಡಿದರು. ಹಿರಿಯ ಶ್ರೇಣಿ ಸಹಾಯಕ ಸರ್ಕಾರಿ ಅಭಿಯೋಜಕ ನಾಗರಾಜ ಪೂಜಾರ, ಅಪರ ಸರ್ಕಾರಿ ವಕೀಲ ಎಚ್.ಎಲ್.ಸರೂರ, ಸಹಾಯಕ ಸರ್ಕಾರಿ ಅಭಿಯೋಜಕ ಬಸವರಾಜ ಆಹೇರಿ, ತಹಶೀಲ್ದಾರ ಕಚೇರಿಯ ಶಿರಸ್ತೇದಾರ ಎಂ.ಎ.ಬಾಗೇವಾಡಿ, ಪಂಚಾಯತ್ ರಾಜ್ ಸಹಾಯಕ ನಿರ್ದೇಶಕ ಖೂಭಾಸಿಂಗ್ ಜಾಧವ ಸೇರಿದಂತೆ ಶಿಕ್ಷಕರು ಮತ್ತು ವಿದ್ಯಾರ್ಥಿಗಳು ಭಾಗಿಯಾಗಿದ್ದರು. ಮುಖ್ಯೋಪಾದ್ಯಾಯ ಎಂ.ಎಸ್.ಕವಡಿಮಟ್ಟಿ ಸ್ವಾಗತಿಸಿದರು. ಶಿಕ್ಷಕ ಮಂಜುನಾಥ ಚಟ್ಟರ ನಿರೂಪಿಸಿದರು.