- ಹಿಮಾಚಲ ಪ್ರದೇಶ ಹೈಕೋರ್ಟ್ ವಿಶ್ರಾಂತ ನ್ಯಾಯಮೂರ್ತಿ ಎಲ್. ನಾರಾಯಣಸ್ವಾಮಿ ಸಲಹೆ - ನೂತನ ಕಾಯ್ದೆಗಳ ಕೈಪಿಡಿ ಬಿಡುಗಡೆಗೊಳಿಸಿದ ಭಾರತದ ಲೋಕಪಾಲ ನ್ಯಾಯಾಂಗ ಸದಸ್ಯ - - - ಕನ್ನಡಪ್ರಭ ವಾರ್ತೆ ದಾವಣಗೆರೆ
ದೇಶದಲ್ಲಿ ಅನೇಕ ಕ್ರಿಮಿನಲ್ ಕಾನೂನುಗಳನ್ನು ಈಗಾಗಲೇ ತಿದ್ದುಪಡಿ ಮಾಡಿದ್ದು, ಯಾರು ಮಾಡಿದ್ದಾರೆಂಬ ಬಗ್ಗೆ ಆಲೋಚಿಸುವ ಬದಲಿಗೆ, ಅವುಗಳನ್ನು ಸೂಕ್ತ ರೀತಿ ಬಳಸಿಕೊಳ್ಳುವತ್ತ ನ್ಯಾಯಾಧೀಶರು ಹಾಗೂ ವಕೀಲರು ಗಮನ ಹರಿಸಬೇಕು ಎಂದು ಭಾರತದ ಲೋಕಪಾಲ ನ್ಯಾಯಾಂಗ ಸದಸ್ಯ ಹಾಗೂ ಹಿಮಾಚಲ ಪ್ರದೇಶ ಹೈಕೋರ್ಟ್ ವಿಶ್ರಾಂತ ನ್ಯಾಯಮೂರ್ತಿ ಎಲ್. ನಾರಾಯಣಸ್ವಾಮಿ ಹೇಳಿದರು.ನಗರದ ಜಿಲ್ಲಾ ನ್ಯಾಯಾಲಯ ಸಂಕೀರ್ಣದ ವಕೀಲರ ಸಾಂಸ್ಕೃತಿಕ ಸಮುದಾಯ ಭವನದಲ್ಲಿ ಶುಕ್ರವಾರ ಜಿಲ್ಲಾ ವಕೀಲರ ಸಂಘ ಹಮ್ಮಿಕೊಂಡಿದ್ದ ಭಾರತೀಯ ನ್ಯಾಯ ಸಂಹಿತೆ, ಭಾರತೀಯ ನಾಗರೀಕ ಸುರಕ್ಷಾ ಸಂಹಿತೆ, ಭಾರತೀಯ ಸಾಕ್ಷಿ ಅಧಿನಿಯಮ-2023 ಕುರಿತ ಉಪನ್ಯಾಸ ಮಾಲಿಕೆ-9 ಅನ್ನು ಉದ್ಘಾಟಿಸಿ, ಸಂಘದಿಂದ ಹೊರತಂದ ನೂತನ ಕಾಯ್ದೆಗಳ ಕೈಪಿಡಿ ಬಿಡುಗಡೆ ಮಾಡಿ ಅವರು ಮಾತನಾಡಿದರು.
ಭಾರತದಲ್ಲಿ ಜಾರಿಯಾದ 3 ಹೊಸ ಕಾನೂನುಗಳು ಸಮಾಜದಲ್ಲಿ ಬದಲಾವಣೆ ತಂದು, ಸುರಕ್ಷತೆಯ ಸಮಾಜ ನಿರ್ಮಾಣಕ್ಕೆ ಸಹಕಾರಿಯಾಗಲಿವೆ. ದೇಶದ ಸಂಸತ್ತಿನ ಮೂಲಕ ನೂತನ ಕಾನೂನು ಜಾರಿಗೆ ತರಲಾಗಿದೆ. ಇವುಗಳ ಜಾರಿ ಮತ್ತು ಪಾಲನೆ ನಮ್ಮೆಲ್ಲರ ಜವಾಬ್ದಾರಿ. ವಿದೇಶಗಳಲ್ಲಿ ಗಮನಿಸಿದರೆ, ಅಲ್ಲೆಲ್ಲಾ ಶಿಕ್ಷೆಯ ಪ್ರಮಾಣ ಶೇ.90ರಷ್ಟು ಇದೆ. ಆದರೆ, ನಮ್ಮಲ್ಲಿ ಶಿಕ್ಷೆಯ ಪ್ರಮಾಣ ತೀರಾ ಕಡಿಮೆ ಇದೆ. ಹಳೆ ಬೇರು, ಹೊಸ ಚಿಗುರು ಎಂಬಂತೆ ಸ್ವಸ್ಥ ಸಮಾಜ ನಿರ್ಮಾಣಕ್ಕೆ ಎಲ್ಲರೂ ಕೈಜೋಡಿಸಬೇಕು ಎಂದರು.ಅಪರಾಧಿಗಳಿಗೆ ಶಿಕ್ಷೆ ಕೊಡಿಸುವ ಮೂಲಕ ಶಿಕ್ಷೆ ಪ್ರಮಾಣ ಹೆಚ್ಚಿಸಿದಾಗ ಮಾತ್ರ ನೂತನ ಕಾನೂನುಗಳಿಗೆ ಮಹತ್ವ ಬರಲಿದೆ. ಪ್ರಯೋಗಾತ್ಮಕವಾಗಿ 5 ವರ್ಷ ಜಾರಿಗೆ ತಂದು, ಶಿಕ್ಷೆ ಪ್ರಮಾಣ ಹಿಂದಿನಂತೆಯೇ ಇದ್ದರೆ ಈ ತಿದ್ದುಪಡಿಗಳಿಂದ ಏನು ಪ್ರಯೋಜನ ಎಂಬುದಾಗಿ ಪ್ರಶ್ನಿಸಬಹುದು. ನಮ್ಮ ವ್ಯವಸ್ಥೆಯಲ್ಲಿ ತುಂಬಾ ಬದಲಾವಣೆಯಾಗಿದ್ದು, ಸಂವಿಧಾನದಲ್ಲೂ ಬೇಡಿಕೆಗೆ ತಕ್ಕಂತೆ ಹಲವು ತಿದ್ದುಪಡಿ ಆಗಿವೆ ಎಂದು ನಾರಾಯಣಸ್ವಾಮಿ ಮಾಹಿತಿ ನೀಡಿದರು.
ಶೀಘ್ರವೇ ಕಾರ್ಯಾಗಾರ:ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶೆ ರಾಜೇಶ್ವರಿ ಎನ್. ಹೆಗಡೆ ಮಾತನಾಡಿ, ಸರಳತೆ, ಸಾಮಾಜಿಕ ಕಳಕಳಿ, ವಕೀಲರ ಬಗ್ಗೆ ಕಳಕಳಿಯ ನಿವೃತ್ತ ನ್ಯಾಯಮೂರ್ತಿ ಎಲ್.ನಾರಾಯಣಸ್ವಾಮಿ ಅವರ ಆದರ್ಶಗಳನ್ನು ನಾವೆಲ್ಲರೂ ಮೈಗೂಡಿಸಿಕೊಳ್ಳಬೇಕು. ವಕೀಲರ ಬಗ್ಗೆ ಸದಾ ಚಿಂತನೆ ಮಾಡುವ, ಅವರ ಏಳಿಗೆಗೆ ಕೈ ಜೋಡಿಸುವ ನಿಟ್ಟಿನಲ್ಲಿ ಸದಾ ಸಿದ್ಧರಿದ್ದಾರೆ. ನೂತನ 3 ಕಾಯ್ದೆಗಳ ಬಗ್ಗೆ ತಿಳಿಯಲು ಶೀಘ್ರವೇ ಕಾರ್ಯಾಗಾರ ನಡೆಸಲಾಗುವುದು. ನೂತನ ಕಾಯಿದೆಗಳು ಎಲ್ಲರಿಗೂ ಅನುಕೂಲವಾಗಲಿವೆ ಎಂದರು.
ಸಹಾಯಧನ ಮೊತ್ತ ಹೆಚ್ಚಿಸಬೇಕು:ಅಧ್ಯಕ್ಷತೆ ವಹಿಸಿದ್ದ ಸಂಘದ ಅಧ್ಯಕ್ಷ ಎಲ್.ಎಚ್. ಅರುಣಕುಮಾರ ಮಾತನಾಡಿ, ಇಂದು ಸಮಸಮಾಜ ನಿರ್ಮಾಣಕ್ಕೆ ಶ್ರಮಿಸುವ ವಕೀಲರಿಗೆ ಸಾಮಾಜಿಕ ಭದ್ರತೆ ಇಲ್ಲದಾಗಿದೆ. ಅದರಲ್ಲೂ ಗ್ರಾಮಾಂತರ ವಕೀಲರಿಗೆ ಅಪಘಾತ, ಕಾಯಿಲೆ ಎದುರಾದಾಗ ಅಂತಹವರ ಕುಟುಂಬ ಹಲವಾರು ಸಂಕಷ್ಟ ಎದುರಿಸಿವೆ. ಈ ನಿಟ್ಟಿನಲ್ಲಿ ಲೋಕಪಾಲ ನ್ಯಾಯಾಂಗ ಸದಸ್ಯರು ರಾಜ್ಯ ವಕೀಲರ ಸಂಘದೊಂದಿಗೆ ಚರ್ಚಿಸಿ, ಮರಣೋತ್ತರವಾಗಿ ನೀಡುವ ಸಹಾಯಧನದ ಮೊತ್ತವನ್ನು ಹೆಚ್ಚಳ ಮಾಡಿಸಬೇಕು ಎಂದು ಮನವಿ ಮಾಡಿದರು.
ನ್ಯಾಯಾಧೀಶರಾದ ಮಂಜಪ್ಪ ಹನುಮಂತಪ್ಪ ಅಣ್ಣಯ್ಯನವರ, ಆರ್.ಎನ್.ಪ್ರವೀಣಕುಮಾರ, ಶ್ರೀರಾಮ ನಾರಾಯಣ ಹೆಗಡೆ ಇದ್ದರು. ವಕೀಲರಾದ ಚಂದ್ರಪ್ಪ, ಎಸ್.ಪರಮೇಶ, ಕಾರ್ಯಕಾರಿ ಸಮಿತಿಯ ಎಸ್.ಭಾಗ್ಯಲಕ್ಷ್ಮೀ, ಬ್ಯಾಂಕ್ ಫೀಲ್ಡ್ ಆಫೀಸರ್ ರೇಣುಕಯ್ಯ ಅವರನ್ನು ಸನ್ಮಾನಿಸಲಾಯಿತು.ಅಪಘಾತದಲ್ಲಿ ಮೃತಪಟ್ಟ ವಕೀಲ ನಿಂಗಪ್ಪ ಕುಟುಂಬಕ್ಕೆ ಮರಣೋತ್ತರ ಪರಿಹಾರ ನಿಧಿ ವಿತರಿಸಲಾಯಿತು. ಸಂಘದ ಜಿ.ಕೆ.ಗೋಪನಾಳು ಬಸವರಾಜು, ಎಸ್.ಬಸವರಾಜ, ಬಿ.ಅಜ್ಜಯ್ಯ, ಆರ್.ಭಾಗ್ಯಲಕ್ಷ್ಮಿ, ಎಂ.ಚೌಡಪ್ಪ, ಟಿ.ಎಚ್. ಮಧುಸೂಧನ್, ಎಲ್.ನಾಗರಾಜ, ಕೆ.ಎಂ. ನೀಲಕಂಠಯ್ಯ, ಎಂ.ರಾಘವೇಂದ್ರ, ಸಂತೋಷಕುಮಾರ, ಜಿ.ಜೆ.ವಾಗೀಶ ಕಟಗಿಹಳ್ಳಿ ಮಠ ಇತರರು ಇದ್ದರು.
- - -ಬಾಕ್ಸ್ * ಶಿಕ್ಷೆಯ ಪ್ರಮಾಣ ಕಡಿಮೆ, ಚಿಂತನೆಗೆ ಸಲಹೆ
ನಮ್ಮ ಕಾನೂನು ವಿಫಲವಾಗಿವೆಯೇ ಎಂಬ ಪ್ರಶ್ನೆ ಕಾಡುತ್ತದೆ. ನಾವೇನು ಮಾಡಬೇಕೆಂಬುದನ್ನೂ ಆಲೋಚಿಸಬೇಕು. ಕಾನೂನಿನಲ್ಲಿ ಕೆಲ ಬದಲಾವಣೆಗೆ ತಿದ್ದುಪಡಿ ಅಗತ್ಯವಿರುತ್ತದೆ. ನಮ್ಮ ನ್ಯಾಯಾಂಗವು ಅಪರಾಧಿಗಳಿಗೆ ಶಿಕ್ಷೆ ಕೊಡಿಸುವಲ್ಲಿ ಮುಂದಾಗಿದ್ದು, ಅದರ ಪ್ರಮಾಣ ಅರಿಯಬೇಕಿದೆ ಎಂದು ಎಲ್.ನಾರಾಯಣಸ್ವಾಮಿ ಹೇಳಿದರು.ದೇಶದಲ್ಲಿ ಶೇ.50ಕ್ಕಿಂತಲೂ ಕಡಿಮೆ ಶಿಕ್ಷೆಯ ಪ್ರಮಾಣ ಇದೆ. ನ್ಯಾಯದಾನ ವಿಳಂಬವಾದರೆ ನಾವು ಅಭಿಯೋಜನೆ ವಿಫಲವೇ, ತನಿಖಾ ವೈಫಲ್ಯವೇ, ನ್ಯಾಯವಾದಿಗಳು ವಿಫಲರಾದರಾ ಅಥವಾ ನ್ಯಾಯದಾನ ಮಾಡುವಲ್ಲಿ ನ್ಯಾಯಾಧೀಶರು ವಿಫಲರಾದರೆ ಅಥವಾ ಕಾಯ್ದೆಗಳೇ ವಿಫಲಗೊಂಡಿವೆಯೇ ಎಂಬ ಬಗ್ಗೆಯೂ ಚಿಂತನೆ ನಡೆಸಬೇಕು. ಈಗ ಹೊಸ ಕಾನೂನು ಅಂತಹ ಚಿಂತನೆ ತೊಡೆದು ಹಾಕಲಿದ್ದು, ನ್ಯಾಯಾಂಗಕ್ಕೂ ಸಹಕಾರಿಯಾಗಲಿದೆ ಎಂದರು.
- - - -21ಕೆಡಿವಿಜಿ11, 12:ದಾವಣಗೆರೆಯಲ್ಲಿ ಶುಕ್ರವಾರ ವಕೀಲರ ಸಾಂಸ್ಕೃತಿಕ ಸಮುದಾಯ ಭವನದಲ್ಲಿ ಭಾರತೀಯ ನ್ಯಾಯ ಸಂಹಿತೆ, ಭಾರತೀಯ ನಾಗರೀಕ ಸುರಕ್ಷಾ ಸಂಹಿತೆ, ಭಾರತೀ ಯ ಸಾಕ್ಷಿ ಅಧಿನಿಯಮ-2023 ಕುರಿತ ಉಪನ್ಯಾಸ ಮಾಲಿಕೆ-9 ಅನ್ನು ಭಾರತದ ಲೋಕಪಾಲ ನ್ಯಾಯಾಂಗ ಸದಸ್ಯ ಹಾಗೂ ವಿಶ್ರಾಂತ ನ್ಯಾಯಾಧೀಶ ಎಲ್.ನಾರಾಯಣಸ್ವಾಮಿ ಉದ್ಘಾಟಿಸಿದರು. -21ಕೆಡಿವಿಜಿ13:
ಭಾರತದ ಲೋಕಪಾಲ ನ್ಯಾಯಾಂಗ ಸದಸ್ಯ, ವಿಶ್ರಾಂತ ನ್ಯಾಯಾಧೀಶ ಎಲ್.ನಾರಾಯಣಸ್ವಾಮಿ ಅವರು ಕಾರ್ಯಕ್ರಮದಲ್ಲಿ "ಹೊಸ ಕಾನೂನು ಕೈಪಿಡಿ " ಬಿಡುಗಡೆ ಮಾಡಿದರು.