ಗ್ರಾಮೀಣ ಪ್ರದೇಶಗಳಲ್ಲಿ ಸಣ್ಣ ಪ್ರಮಾಣದ ನಿವೇಶನ ಅಭಿವೃದ್ಧಿ ಹಾಗೂ ಮನೆ ನಿರ್ಮಾಣಕ್ಕೆ ಸಂಬಂಧಿಸಿದ ಸಿಂಗಲ್ ಪ್ಲಾಟ್ ಲೇಔಟ್ ಅನುಮೋದನೆ ಪ್ರಕ್ರಿಯೆ ಸರಳಗೊಳಿಸುವ ನಿಟ್ಟಿನಲ್ಲಿ ರಾಜ್ಯ ಸರ್ಕಾರ ಮಹತ್ವದ ಅಧಿಕಾರ ವಿಕೇಂದ್ರೀಕರಣ ಮಾಡಿದೆ.
ರಾಂ ಅಜೆಕಾರು
ಕಾರ್ಕಳ ; ಗ್ರಾಮೀಣ ಪ್ರದೇಶಗಳಲ್ಲಿ ಸಣ್ಣ ಪ್ರಮಾಣದ ನಿವೇಶನ ಅಭಿವೃದ್ಧಿ ಹಾಗೂ ಮನೆ ನಿರ್ಮಾಣಕ್ಕೆ ಸಂಬಂಧಿಸಿದ ಸಿಂಗಲ್ ಪ್ಲಾಟ್ ಲೇಔಟ್ ಅನುಮೋದನೆ ಪ್ರಕ್ರಿಯೆ ಸರಳಗೊಳಿಸುವ ನಿಟ್ಟಿನಲ್ಲಿ ರಾಜ್ಯ ಸರ್ಕಾರ ಮಹತ್ವದ ಅಧಿಕಾರ ವಿಕೇಂದ್ರೀಕರಣ ಮಾಡಿದೆ.
ನಗರಾಭಿವೃದ್ಧಿ ಇಲಾಖೆಯ ಸೆ.24ರ ಅಧಿಸೂಚನೆಯಂತೆ, 1,000 ಚದರ ಮೀಟರ್‌ವರೆಗೆ ಇರುವ ಸಿಂಗಲ್ ಪ್ಲಾಟ್ ಲೇಔಟ್‌ಗಳಿಗೆ ಅನುಮೋದನೆ ನೀಡುವ ಅಧಿಕಾರವನ್ನು ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಹಿರಿಯ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗೆ ವಹಿಸಲಾಗಿದೆ.ಕರ್ನಾಟಕ ಟೌನ್ ಅಂಡ್ ಕಂಟ್ರಿ ಪ್ಲಾನಿಂಗ್ ಕಾಯ್ದೆ, 1961ರ ಸೆಕ್ಷನ್ 81ರಡಿ ಈ ಅಧಿಕಾರ ನೀಡಲಾಗಿದ್ದು, ಸಂಬಂಧಿತ ಕಾಯ್ದೆ, ನಿಯಮಗಳು ಹಾಗೂ ಸರ್ಕಾರದ ಕಾಲಕಾಲದ ಆದೇಶಗಳಿಗೆ ಒಳಪಟ್ಟು ಅನುಮೋದನೆ ನೀಡಬೇಕಿದೆ.ಗ್ರಾಮೀಣರಿಗೆ ಅಲೆದಾಟ ಕಡಿಮೆ:
ಇದುವರೆಗೆ ಸಿಂಗಲ್ ಪ್ಲಾಟ್ ಲೇಔಟ್ ಸೇರಿದಂತೆ ಯೋಜನಾ ಸಂಬಂಧಿತ ಅನುಮೋದನೆಗಳಿಗಾಗಿ ದೂರದ ಯೋಜನಾ ಪ್ರಾಧಿಕಾರಗಳ ಕಚೇರಿಗಳಿಗೆ ತೆರಳಬೇಕಾಗಿದ್ದ ಗ್ರಾಮೀಣ ಪ್ರದೇಶದ ಜನರಿಗೆ ಈ ಕ್ರಮದಿಂದ ಸ್ಥಳೀಯ ಮಟ್ಟದಲ್ಲೇ ಸೇವೆ ಪಡೆಯಲು ಅವಕಾಶ ದೊರೆಯಲಿದೆ.ಕಾರ್ಕಳ ತಾಲೂಕಿನ ದೂರದ ಗ್ರಾಮಗಳಿಂದ ಕಾಪು ಯೋಜನಾ ಪ್ರಾಧಿಕಾರದ ಕಚೇರಿಗೆ ತೆರಳಬೇಕಾಗಿರುವ ಹಿನ್ನೆಲೆಯಲ್ಲಿ ಸಾರ್ವಜನಿಕರು ದೂರದ ಪ್ರಯಾಣ, ಪ್ರಯಾಣ ವೆಚ್ಚ ಹಾಗೂ ಸಮಯದ ನಷ್ಟದ ಸಮಸ್ಯೆ ಎದುರಿಸುತ್ತಿದ್ದಾರೆ ಎಂಬ ದೂರುಗಳಿದ್ದವು. ಕೆಲವೆಡೆ ಒಂದು ಕಡತದ ಕೆಲಸಕ್ಕಾಗಿ ಹಲವು ಬಾರಿ ಕಚೇರಿಗೆ ತೆರಳಬೇಕಾದ ಪರಿಸ್ಥಿತಿಯೂ ಇದೆ ಎನ್ನಲಾಗಿದೆ.ಹೊಸ ಅಧಿಸೂಚನೆಯಡಿ ಅರ್ಹ ಸಿಂಗಲ್ ಪ್ಲಾಟ್ ಲೇಔಟ್‌ಗಳಿಗೆ ಗ್ರಾಮ ಪಂಚಾಯಿತಿ ಮಟ್ಟದಲ್ಲೇ ಪ್ರಕ್ರಿಯೆ ನಡೆಯುವ ಅವಕಾಶ ಸಿಕ್ಕಿರುವುದರಿಂದ ಗ್ರಾಮೀಣ ಭಾಗದ ಜನರಿಗೆ ವಿಶೇಷವಾಗಿ ಪ್ರಯೋಜನವಾಗುವ ನಿರೀಕ್ಷೆ ಇದೆ.ಸ್ಥಳೀಯ ಮಟ್ಟದಲ್ಲೇ ವಿಲೇವಾರಿ: ಅಧಿಕಾರ ವಿಕೇಂದ್ರೀಕರಣದಿಂದ ಅರ್ಜಿದಾರರು ದೂರದ ಕಚೇರಿಗಳಿಗೆ ತೆರಳುವ ಅವಶ್ಯಕತೆ ಕಡಿಮೆಯಾಗುವುದರ ಜತೆಗೆ, ದಾಖಲೆ ಪರಿಶೀಲನೆ ಹಾಗೂ ಕಡತ ವಿಲೇವಾರಿ ಪ್ರಕ್ರಿಯೆಯೂ ಸ್ಥಳೀಯ ಮಟ್ಟದಲ್ಲಿ ನಡೆಯಲು ಸಾಧ್ಯವಾಗಲಿದೆ. ಆದರೆ, ಅಧಿಸೂಚನೆಯಡಿ ನಿಗದಿಪಡಿಸಿರುವ ಮಿತಿಗಳು ಮತ್ತು ಸಂಬಂಧಿತ ಕಾನೂನು-ನಿಯಮಗಳನ್ನು ಪಾಲಿಸುವುದು ಕಡ್ಡಾಯವಾಗಿದೆ.ಸರ್ಕಾರದ ಅಧಿಸೂಚನೆ ಹಾಗೂ ಮಾರ್ಗಸೂಚಿಗಳನ್ನು ಪರಿಗಣಿಸಿ ಗ್ರಾಮಮಟ್ಟದಲ್ಲೇ 9/11 ವ್ಯವಸ್ಥೆ ಕಲ್ಪಿಸಲಾಗುವುದು. 24 ಸೆಂಟ್ಸ್‌ಗಿಂತ ಹೆಚ್ಚಿನ ಜಮೀನಿನ 9/11 ಅರ್ಜಿಗಳ ಇತ್ಯರ್ಥ ಯೋಜನಾ ಪ್ರಾಧಿಕಾರದಲ್ಲಿಯೇ ನಡೆಯಲಿದೆ.
-ಪ್ರತೀಕ್ ಬಾಯಲ್, ಉಡುಪಿ ಜಿ.ಪಂ.ಸಿಇಒ.“ಸರಕಾರದ ಸುತ್ತೋಲೆಯಂತೆ ಗ್ರಾಮಮಟ್ಟದಲ್ಲಿ ಪಂಚಾಯಿತಿ 9/11 ಅರ್ಜಿಗಳನ್ನು ಸ್ವೀಕರಿಸಲಿದೆ. 24 ಸೆಂಟ್ಸ್‌ಗಿಂತ ಹೆಚ್ಚಿನ ಕನ್ವರ್ಷನ್‌ಗೆ ಸಂಬಂಧಿಸಿದ 9/11 ಅರ್ಜಿಗಳನ್ನು ಯೋಜನಾ ಪ್ರಾಧಿಕಾರಕ್ಕೆ ಸಲ್ಲಿಸಬೇಕು. ಪ್ರಸ್ತುತ ಗ್ರಾಮಮಟ್ಟದಲ್ಲಿ ಬಾಕಿ ಇರುವ 9/11 ಅರ್ಜಿಗಳನ್ನು ಇತ್ಯರ್ಥಪಡಿಸಲು ಕ್ರಮ ಕೈಗೊಂಡು, ಉಳಿದ ಅರ್ಜಿಗಳನ್ನು ಸಂಬಂಧಿಸಿದ ಗ್ರಾಮ ಪಂಚಾಯಿತಿಗಳಿಗೆ ರವಾನಿಸಲಾಗುವುದು.”
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.