ಕನ್ನಡಪ್ರಭ ವಾರ್ತೆ ಬಾಗಲಕೋಟೆ
ನಗರಸಭೆಯ 2024-25ನೇ ಸಾಲಿನ ನಿರೀಕ್ಷಿಸಲಾದ ಆದಾಯ ಮತ್ತು ವೆಚ್ಚಗಳಿಗೆ ಆಡಳಿತಾಧಿಕಾರಿಗಳು ಹಾಗೂ ಜಿಲ್ಲಾಧಿಕಾರಿಗಳಾದ ಜಾನಕಿ ಕೆ.ಎಂ. ಅನುಮೋದನೆ ನೀಡಿದ್ದಾರೆ ಎಂದು ಆಯುಕ್ತ ರಮೇಶ ಜಾಧವ ತಿಳಿಸಿದ್ದಾರೆ.ನಗರದ ಜನೆತೆಗೆ ಮೂಲ ಸೌಲಭ್ಯ ಒದಗಿಸುವುದು ನಗರಸಭೆಯ ಆದ್ಯ ಕರ್ತವ್ಯ ಆಗಿರುವುದರಿಂದ ಸಂಪನ್ಮೂಲ ಕ್ರೋಢೀಕರಿಸಿ ನಗರದ ನೀರು ಪೂರೈಕೆ, ಸ್ವಚ್ಛತೆ, ಘನತ್ಯಾಜ್ಯ ವಸ್ತುಗಳ ವಿಲೇವಾರಿ, ಬೀದಿ ದೀಪಗಳ ನಿರ್ವಹಣೆ, ನಗರದ ಚರಂಡಿ, ರಸ್ತೆ, ಶೌಚಾಲಯಗಳ ವ್ಯವಸ್ಥೆಯಂಥ ಅನೇಕ ವ್ಯವಸ್ಥೆಗಳನ್ನು ಸಮರ್ಪಕವಾಗಿ ಒದಗಿಸಲು ಅನುದಾನ ನಿಗದಿಪಡಿಸಲಾಗಿದೆ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ನಗರದ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಜನರಿಗೆ ಶೇ.24.10 (₹ 35.62 ಲಕ್ಷ), ನಗರದ ಬಡವರ ಕಲ್ಯಾಣಕ್ಕೆ ಶೇ.7.25 (₹10.72 ಲಕ್ಷ ), ನಗರದ ಅಂಗವಿಕಲರ ಕಲ್ಯಾಣಕ್ಕೆ ಶೇ.5 (₹7.39 ಲಕ್ಷ ) ಹಾಗೂ ಕ್ರೀಡಾ ಚಟುವಟಿಕೆಗಳಿಗಾಗಿ ಶೇ.1 (₹1.48 ಲಕ್ಷ )ರಷ್ಟು ಹಣ ಮೀಸಲೀಟ್ಟು ನಿರೀಕ್ಷಿಸಿದ ಆದಾಯ ಮತ್ತು ನಿಗದಿಪಡಿಸಿದ ವೆಚ್ಚಗಳ ಆಯವ್ಯಯ ಸಭೆಯಲ್ಲಿ ಮಂಡಿಸಲಾಗಿದೆ.ನಿರೀಕ್ಷಿತ ಸ್ವೀಕೃತಿಗಳಗಳಲ್ಲಿ ನಿರೀಕ್ಷಿತ ಕಂದಾಯ ಸ್ವೀಕೃತಿಗಳು ₹ 28.56 ಕೋಟಿ, ನಿರೀಕ್ಷಿತ ಬಂಡವಾಳ ಸ್ವೀಕೃತಿಗಳು ₹11.50 ಕೋಟಿ, ನಿರೀಕ್ಷಿತ ಅಸಾಮಾನ್ಯ ಸ್ವೀಕೃತಿಗಳು ₹ 8.83 ಕೋಟಿ ಸೇರಿ ಒಟ್ಟು ನಿರೀಕ್ಷಿತ ಸ್ವೀಕೃತಿ ₹ 48.90 ಕೋಟಿಯಾಗಿದೆ. ನಿರೀಕ್ಷಿತ ವೆಚ್ಚಗಳಲ್ಲಿ ನಿರೀಕ್ಷಿತ ಕಂದಾಯ ವೆಚ್ಚಗಳು ₹ 25.38 ಕೋಟಿ, ನಿರೀಕ್ಷಿತ ಬಂಡವಾಳ ವೆಚ್ಚಗಳು ₹ 14 ಕೋಟಿ, ನಿರೀಕ್ಷಿತ ಅಸಾಮಾನ್ಯ ವೆಚ್ಚಗಳು ₹ 9.33 ಕೋಟಿ ಸೇರಿ ಒಟ್ಟು ನಿರೀಕ್ಷಿತ ವೆಚ್ಚಗಳು ₹ 48.72 ಕೋಟಿ ಇದ್ದು, ನಿರೀಕ್ಷಿತ ಸ್ವೀಕೃತಿಯಲ್ಲಿ ನಿರೀಕ್ಷಿತ ವೆಚ್ಚ ಕಳೆದಾಗ ಒಟ್ಟು ₹ 17.68 ಲಕ್ಷ ಉಳಿತಾಯ ನಿರೀಕ್ಷಿಸಿ ಅನುಮೋದಿಸಲಾಯಿತು ಎಂದು ಹೇಳಿದ್ದಾರೆ.