ವಿರೋಧದ ಮಧ್ಯ ನೀರು ನಿರ್ವಹಣೆ ಬಜೆಟ್‌ಗೆ ಅಸ್ತು

KannadaprabhaNewsNetwork | Published : Mar 8, 2024 1:47 AM

ಸಾರಾಂಶ

ಕರ್ನಾಟಕ ನಗರ ಮೂಲಸೌಕರ್ಯ ಅಭಿವೃದ್ಧಿ ಮತ್ತು ಹಣಕಾಸು ನಿಗಮ ನಿಯಮಿತ ತಯಾರಿಸಿದ ₹2.81 ಕೋಟಿ ಉಳಿತಾಯ ಬಜೆಟ್ ಅನ್ನು ಪಾಲಿಕೆಯ ತೆರಿಗೆ ನಿರ್ವಹಣೆ, ಹಣಕಾಸು ಮತ್ತು ಅಪೀಲುಗಳ ಸ್ಥಾಯಿ ಸಮಿತಿ ಅಧ್ಯಕ್ಷ ಮಲ್ಲಿಕಾರ್ಜುನ ಗುಂಡೂರ ಮಂಡಿಸಿದರು.

ಕನ್ನಡಪ್ರಭ ವಾರ್ತೆ ಹುಬ್ಬಳ್ಳಿ

ಹುಬ್ಬಳ್ಳಿ- ಧಾರವಾಡ ನೀರು ಸರಬರಾಜು ವ್ಯವಸ್ಥೆಯ ನಿರ್ವಹಣೆಗಾಗಿ 2023-24ನೇ ಸಾಲಿನ ಪರಿಷ್ಕೃತ ಹಾಗೂ 2024-25ನೇ ಸಾಲಿನ ಆಯ-ವ್ಯಯವನ್ನು ಆಡಳಿತ ಹಾಗೂ ಪ್ರತಿಪಕ್ಷಗಳ ವಿರೋಧ ಮಧ್ಯೆಯೇ ಮೇಯರ್ ವೀಣಾ ಬರದ್ವಾಡ ಅನುಮೋದಿಸಿದರು.

ಪಾಲಿಕೆಯ ಸಭಾಭವನದಲ್ಲಿ ಗುರುವಾರ ನಡೆದ ಸಾಮಾನ್ಯ ಸಭೆಯಲ್ಲಿ ಮಹಾನಗರ ಪಾಲಿಕೆ, ಕರ್ನಾಟಕ ನಗರ ಮೂಲಸೌಕರ್ಯ ಅಭಿವೃದ್ಧಿ ಮತ್ತು ಹಣಕಾಸು ನಿಗಮ ನಿಯಮಿತ (ಕೆಯುಐಡಿಎಸ್‌ಪಿ) ತಯಾರಿಸಿದ ₹2.81 ಕೋಟಿ ಉಳಿತಾಯ ಬಜೆಟ್ ಅನ್ನು ಪಾಲಿಕೆಯ ತೆರಿಗೆ ನಿರ್ವಹಣೆ, ಹಣಕಾಸು ಮತ್ತು ಅಪೀಲುಗಳ ಸ್ಥಾಯಿ ಸಮಿತಿ ಅಧ್ಯಕ್ಷ ಮಲ್ಲಿಕಾರ್ಜುನ ಗುಂಡೂರ ಮಂಡಿಸಿದರು.

ಉಳಿತಾಯ ಬಜೆಟ್:

ಮಹಾನಗರದ 220 ಚ.ಕಿ.ಮೀ ವ್ಯಾಪ್ತಿಯಲ್ಲಿ ₹1469 ವೆಚ್ಚದಲ್ಲಿ ನಿರಂತರ ನೀರು ಯೋಜನೆ ಅನುಷ್ಠಾನಗೊಳಿಸಲಾಗುತ್ತಿದೆ. ಇದರಲ್ಲಿ ₹984.23 ಕೋಟಿ (ಶೇ 67) ವಿಶ್ವಬ್ಯಾಂಕ್‌ನಿಂದ ಸಾಲದ ರೂಪವಾಗಿ ಪಡೆಯಲಾಗುತ್ತದೆ. ₹88.14(ಶೇ. 6) ಕೋಟಿ ರಾಜ್ಯ ಸರಕಾರ ಹಾಗೂ ₹396.63 (ಶೇ.27) ಕೋಟಿ ಮಹಾನಗರ ಪಾಲಿಕೆಯಿಂದ ಭರಿಸಲಿದೆ.

ನಗರದಲ್ಲಿ 1.80 ಲಕ್ಷ ನಳ ಸಂಪರ್ಕವಿದ್ದು, ಸುಮಾರು 30 ಸಾವಿರ ಅನಧಿಕೃತ ನಳಗಳ ಅಂದಾಜಿಸಲಾಗಿದೆ. ಸಕ್ರಮಗೊಳಿಸಲು ಕ್ರಮ ಕೈಗೊಳ್ಳಲಾಗುವುದು. 2024-25ನೇ ಸಾಲಿನಲ್ಲಿ ₹63.64 ಕೋಟಿ ನೀರಿನ ಕರ ನಿರೀಕ್ಷಿಸಲಾಗಿದೆ. ಹಳೆಯ ಬಾಕಿ ₹140 ಕೋಟಿ ನೀರಿನ ಕರ ಹಾಗೂ ಅದರ ಬಡ್ಡಿ ಮೊತ್ತ ಸೇರಿ ₹268.34 ಕೋಟಿ ಆದಾಯ ನಿರೀಕ್ಷಿಸಲಾಗಿದೆ.

ಕೆಯುಐಡಿಎಸ್‌ಪಿಯಿಂದ ₹64.71 ಕೋಟಿ ಯೋಜನಾ ಕಾಮಗಾರಿಗಳ ಅನುಷ್ಠಾನಕ್ಕೆ ಬಂಡವಾಳ ವೆಚ್ಚ ನೆರವು ಬರಲಿದೆ ಎಂದು ಅಂದಾಜಿಸಲಾಗಿದೆ. ಅಲ್ಲದೇ ₹34.28 ಕೋಟಿಯನ್ನು ನಿರ್ವಹಣೆಗೆ ವೆಚ್ಚ ಮಾಡುವ ಅಂದಾಜಿಸಲಾಗಿದೆ. ಒಟ್ಟು ₹2.81 ಕೋಟಿ ಉಳಿತಾಯವಾಗಲಿದೆ ಎಂದು ತಿಳಿಸಿದರು.

ಬಳಿಕ ಬಜೆಟ್‌ ಪ್ರತಿಯನ್ನು ಮೇಯರ್‌ ವೀಣಾ ಬರದ್ವಾಡಗೆ ಮಲ್ಲಿಕಾರ್ಜುನ ಗುಂಡೂರ ಸೇರಿದಂತೆ ಸ್ಥಾಯಿ ಸಮಿತಿ ಸದಸ್ಯರೆಲ್ಲರೂ ಸೇರಿಕೊಂಡು ಸಲ್ಲಿಸಿದರು.

ಬಜೆಟ್‌ ಬಗ್ಗೆ ಆಡಳಿತ ಪಕ್ಷ ಹಾಗೂ ಪ್ರತಿಪಕ್ಷದ ಸದಸ್ಯರು ತೀವ್ರ ವಿರೋಧಿಸಿದರು. ಯಾವೊಂದು ಹೊಸ ವಿಷಯಗಳು ಇದರಲ್ಲಿ ಇಲ್ಲ ಎಂದು ಬಜೆಟ್‌ ತಯಾರಿಸಿದ ಅಧಿಕಾರಿ ವರ್ಗವನ್ನು ತರಾಟೆಗೆ ತೆಗೆದುಕೊಂಡಿದ್ದು ಆಯಿತು. ಇದೇ ವಿಷಯವಾಗಿ ಆಡಳಿತ ಹಾಗೂ ಪ್ರತಿಪಕ್ಷದ ನಡುವೆ ವಾಗ್ವಾದ ಕೂಡ ನಡೆಯಿತು. ಈ ವಾಗ್ವಾದದ ನಡುವೆಯೇ ಬಜೆಟ್‌ನ್ನು ಅನುಮೋದಿಸಲಾಗಿದೆ ಎಂದು ಮೇಯರ್‌ ಬರದ್ವಾಡ ರೋಲಿಂಗ್‌ ನೀಡಿದರು.

Share this article