ಕನ್ನಡಪ್ರಭ ವಾರ್ತೆ ಮೈಸೂರುನಗರದ ಹೆಸರಾಂತ ದೇವರಾಜ ಮಾರುಕಟ್ಟೆಯು ಸಂಪೂರ್ಣವಾಗಿ ಪಾರಂಪರಿಕ ಕಟ್ಟಡವಲ್ಲ ಎಂದು ಮಾಜಿ ಮೇಯರ್ ಸಂದೇಶ್ ಸ್ವಾಮಿ ತಿಳಿಸಿದ್ದಾರೆ.ಸುಮಾರು 7ಎಕರೆ ವಿಸ್ತೀರ್ಣ ಹೊಂದಿರುವ ದೇವರಾಜ ಮಾರುಕಟ್ಟೆಯಲ್ಲಿ ಸುತ್ತ ಹದಿನೈದು ಅಡಿ ಅಳತೆಯಲ್ಲಿ ಚೌಕಕಾರವಾಗಿ ನಿರ್ಮಿಸಿರುವ ಕಟ್ಟಡ ಮಾತ್ರ ಪಾರಂಪರಿಕ ಸೌಧವಾಗಿದೆ. ಅದರ ಮಧ್ಯ ಭಾಗದಲ್ಲಿರುವ ಸುಮಾರು ಐದು ಎಕರೆ ವಿಸ್ತೀರ್ಣದ ಕಲ್ನಾರ್ ಶೀಟ್ ಕಟ್ಟಡವು ಸಾಮಾನ್ಯವಾದುದು. ಈ ಜಾಗದಲ್ಲಿ ನಾನು ಮೇಯರ್ ಹಾಗೂ ಕೆ.ಎಸ್. ರಾಯ್ಕರ್ ಆಯುಕ್ತರಾಗಿದ್ದ ಸಂದರ್ಭದಲ್ಲಿ ಯೋಜನೆಯೊಂದನ್ನು ರೂಪಿಸಿ, ನಗರದೊಳಗಿನ ಪಾರ್ಕಿಂಗ್ ಸಮಸ್ಯೆ ತಪ್ಪಿಸಲು ಎರಡು ಅಂತಸ್ತಿನ ಸೆಲ್ಲಾರ್ ವಾಹನಗಳ ನಿಲ್ದಾಣ ಹಾಗೂ ಎರಡು ಅಂತಸ್ತಿನ ಸುಮಾರು ಎರಡು ಸಾವಿರ ಸುಸಜ್ಜಿತ ಮಳಿಗೆಗಳ ಕಟ್ಟಡ ನಿರ್ಮಾಣ ಮಾಡಲು 39 ಕೋಟಿ ರೂ. ವೆಚ್ಚದಲ್ಲಿ ನಕ್ಷೆ ತಯಾರಿಸಿ ಸರ್ಕಾರಕ್ಕೆ ಕಳುಹಿಸಲಾಗಿತ್ತು. ಆದರೆ ಸರ್ಕಾರ ಅನುಮತಿ ನೀಡದ ಕಾರಣ ನೆನಗುದಿಗೆ ಬಿತ್ತು ಎಂದು ವಿವರಿಸಿದ್ದಾರೆ.ದೇಶ ವಿದೇಶದ ಹೆಚ್ಚಿನ ಪ್ರವಾಸಿಗರು ಮೈಸೂರಿನ ಹೃದಯ ಭಾಗದ ಸಯ್ಯಾಜಿರಾವ್ ರಸ್ತೆ ಹಾಗೂ ಚಿಕ್ಕಗಡಿಯಾರ ಸುತ್ತ ಸಂಚರಿಸುವುದಿದೆ. ಇಂತಹ ಸಂದರ್ಭದಲ್ಲಿ ಪಾಳುಬಿದ್ದಿರುವ ದೇವರಾಜ ಮಾರುಕಟ್ಟೆ, ಆ ಮಾರುಕಟ್ಟೆಯ ಸುತ್ತಮುತ್ತ ಅನಧಿಕೃತ ಮಾರಾಟ ಕೇಂದ್ರಗಳು ಗಮನ ಸೆಳೆಯಲಿದೆ. ಜಿಲ್ಲಾಡಳಿತದ ಅವ್ಯವಸ್ಥೆಗೂ ಸಾಕ್ಷಿಯಾಗಿದೆ. ಸಾರ್ವಜನಿಕರ ಹಾಗೂ ವಾಹನಗಳ ಸುಗಮ ಸಂಚಾರಕ್ಕೂ ಅಡಚಣೆಯಾಗಿದೆ. ಈ ಎಲ್ಲಾ ಸಮಸ್ಯೆ ಪರಿಹರಿಸಲು ಕೂಡಲೇ ದೇವರಾಜ ಮಾರುಕಟ್ಟೆ ನವೀಕರಣಗೊಳಿಸಬೇಕಿದೆ.ಅಧಿಕೃತವಾಗಿ ಈ ಮಾರುಕಟ್ಟೆಯಲ್ಲಿ 750 ರಿಂದ 800 ವ್ಯಾಪಾರಗಾರರು ಇದ್ದಾರೆ. ಆದರೆ ಕೆಲವರು ತಮ್ಮ ಮಳಿಗೆಯನ್ನು ಪರಭಾರೆ ಮಾಡಿರುವುದರಿಂದ ಹಲವು ಸಮಸ್ಯೆಗಳು ಎದುರಾಗಿವೆ. ಇದರಿಂದ ಕೆಲವರು ನ್ಯಾಯಾಲಯದ ಮೆಟ್ಟಿಲೇರಿದ್ದರಿಂದಲೂ ದೇವರಾಜ ಮಾರುಕಟ್ಟೆ ನವೀಕರಣ ಕಾರ್ಯ ನೆನಗುದಿಗೆ ಬಿದ್ದಿದೆ ಎಂದಿದ್ದಾರೆ.ಇದೀಗ ಸಿಎಂ ಸಿದ್ದರಾಮಯ್ಯ ಅವರನ್ನು ಸಂಸದರಾದ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರು ದೇವರಾಜ ಮಾರುಕಟ್ಟೆ ಹಾಗೂ ಲ್ಯಾನ್ಸ್ ಡೌನ್ ಬಿಲ್ಡಿಂಗ್ ನವೀಕರಣಕ್ಕೆ ಮನವಿ ಮಾಡಿದ್ದಾರೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ವೈಯಕ್ತಿವಾಗಿ ಹೆಚ್ಚಿನ ಕಾಳಜಿ ವಹಿಸಿ ಮೈಸೂರಿನ ಪಾರಂಪರಿಕ ಕಟ್ಟಡಗಳ ಸಂರಕ್ಷಣೆಗೆ ಮುಂದಾಗಬೇಕು. ಅಧಿಕಾರಿಗಳ ನಿರ್ಲಕ್ಷ್ಯ ಹಾಗೂ ಬೇಜವಾಬ್ದಾರಿಯಿಂದ ಹಾಳು ಕೊಂಪೆಯಾಗಿರುವ ಪಾರಂಪರಿಕ ಸೌಧಗಳಿಗೆ ನವೀಕರಣ ಭಾಗ್ಯ ಕಲ್ಪಿಸಬೇಕು ಎಂದರು.