ಹಾವೇರಿ: ತಾಲೂಕಿನ ಯಲಗಚ್ಚ ಗ್ರಾಮದಲ್ಲಿ ಅಪ್ಪು ಅಭಿಮಾನಿಯೊಬ್ಬರು ನಿರ್ಮಿಸಿದ ಪುನೀತ ರಾಜಕುಮಾರ ದೇವಾಲಯವನ್ನು ಅವರ ಪತ್ನಿ ಅಶ್ವಿನಿ ಪುನೀತ್ ರಾಜಕುಮಾರ ಅವರು ಗುರುವಾರ ಲೋಕಾರ್ಪಣೆ ಮಾಡಿ, ಪುನೀತ ಪುತ್ಥಳಿಯನ್ನು ಅನಾವರಣಗೊಳಿಸಿದರು.
ಪುನೀತ್ ಅಭಿಮಾನಿ ತಾಲೂಕಿನ ಯಲಗಚ್ಚ ಗ್ರಾಮದ ಪ್ರಕಾಶ ಮೊರಬದ ಅವರು ತಮ್ಮ ಸ್ವಂತ ಜಾಗದಲ್ಲಿ ನಿರ್ಮಿಸಿದ ಅಪ್ಪು ದೇವಸ್ಥಾನವನ್ನು ಅದ್ಧೂರಿಯಾಗಿ ಉದ್ಘಾಟಿಸಲಾಯಿತು.ಪುತ್ಥಳಿ ಅನಾವರಣಕ್ಕೂ ಮೊದಲು ಹಾವೇರಿಗೆ ಆಗಮಿಸಿದ ಅಶ್ವಿನಿ ಪುನೀತ್‌ರಾಜಕುಮಾರ ಅವರನ್ನು ಅಭಿಮಾನಿಗಳು ಅದ್ಧೂರಿಯಾಗಿ ಸ್ವಾಗತಿಸಿದರು. ನಗರದ ಹೊಸಮನಿ ಸಿದ್ದಪ್ಪ ವೃತ್ತದಲ್ಲಿರುವ ಸಿದ್ದಪ್ಪ ಹೊಸಮನಿ ಪುತ್ಥಳಿಗೆ ಮಾಲಾರ್ಪಣೆ ಮಾಡಿ, ನಂತರ ಬೈಕ್ ರ‍್ಯಾಲಿಯೊಂದಿಗೆ ತಾಲೂಕಿನ ಯಲಗಚ್ಚ ಗ್ರಾಮದತ್ತ ತೆರಳಿದರು. ಯಲಗಚ್ಚ ಗ್ರಾಮದ ಮಹಿಳೆಯರು ಪೂರ್ಣಕುಂಭ ಹೊತ್ತು ಬರಮಾಡಿಕೊಂಡರೆ, ಪುರವಂತಿಕೆ ಸಮ್ಮಾಳ ಕಲಾತಂಡದವರು ಭರ್ಜರಿಯಾಗಿ ಸ್ವಾಗತಕೋರಿದರು.ಬಳಿಕ ಡಾ. ಪುನೀತ್ ರಾಜಕುಮಾರ ದೇವಾಲಯವನ್ನು ಅಶ್ವಿನಿ ಉದ್ಘಾಟಿಸಿದರು. ಬಳಿಕ ಅಪ್ಪು ಪುತ್ಥಳಿಯನ್ನು ಅನಾವರಣಗೊಳಿಸಿ, ಪೂಜೆ ಸಲ್ಲಿಸಿ ಮಾಲಾರ್ಪಣೆ ಮಾಡಿದರು. ಪುನೀತ್ ರಾಜಕುಮಾರ ಅಭಿಮಾನಿ ಪ್ರಕಾಶ ತಮ್ಮ ಜಾಗದಲ್ಲೇ ದೇವಾಲಯ ನಿರ್ಮಾಣ ಮಾಡಿದ್ದಕ್ಕೆ ಖುಷಿಯಾಗುತ್ತಿದೆ. ದೇವಾಲಯ ನಿರ್ಮಾಣ ಮಾಡಿದ್ದು, ಈ ರೀತಿಯ ಅಭಿಮಾನಿ ಇರುವುದು ನಮ್ಮ ಪುಣ್ಯ. ನಾವು ಹಾಗೂ ನಮ್ಮ ಕುಟುಂಬ ದೇವಸ್ಥಾನ ನಿರ್ಮಿಸಿದ ಅಭಿಮಾನಿಗೆ ಚಿರಋಣಿಯಾಗಿರುತ್ತೇವೆ ಎಂದು ಅಶ್ವಿನಿ ಭಾವುಕರಾಗಿ ನುಡಿದರು.
ಬಸ್ ನಿಲ್ದಾಣಕ್ಕೆ ಪುನೀತ್ ಹೆಸರು?: ಹಾವೇರಿ: ಪುನೀತ್‌ರಾಜಕುಮಾರ ಅವರ ಹೆಸರನ್ನು ಚಿರಸ್ಥಾಯಿಯಾಗಿಸಲು ಹಾವೇರಿಯ ಸಾರಿಗೆ ಸಂಸ್ಥೆ ಬಸ್ ನಿಲ್ದಾಣಕ್ಕೆ ಪುನೀತ್ ರಾಜಕುಮಾರ ಹೆಸರು ಇಡಲು ಪ್ರಯತ್ನಿಸುತ್ತೇನೆ ಎಂದು ವಿಧಾನಸಭೆ ಉಪಾಧ್ಯಕ್ಷ ಹಾಗೂ ಶಾಸಕ ರುದ್ರಪ್ಪ ಲಮಾಣಿ ಹೇಳಿದರು.ತಾಲೂಕಿನ ಯಲಗಚ್ಚ ಗ್ರಾಮದ ಸರಕಾರಿ ಪ್ರೌಢ ಶಾಲಾ ಆವರಣದಲ್ಲಿ ಗುರುವಾರ ಆಯೋಜಿಸಿದ್ದ ಡಾ.ಪುನೀತ್ ರಾಜಕುಮಾರ ದೇವಸ್ಥಾನ ಉದ್ಘಾಟನೆ ಹಾಗೂ ಪುತ್ಥಳಿ ಅನಾವರಣ ಸಮಾರಂಭದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.ಪುನೀತ್ ರಾಜಕುಮಾರ ದೇಶ ಕಂಡ ಅಪ್ರತಿಮ ನಟ. ಪುನೀತ್ ಅವರು ಇನ್ನೂ ಬಹಳಷ್ಟು ಸಾಧನೆ ಮಾಡಬೇಕಿತ್ತು. ಅವರ ಅಕಾಲಿಕ ನಿಧನದಿಂದಾಗಿ ರಾಜ್ಯ ಬಡವಾಗಿದೆ. ಪತ್ನಿ, ಕುಟುಂಬದವರು, ಅಭಿಮಾನಿಗಳನ್ನು ದುಃಖ ಸಾಗರದಲ್ಲಿ ಇಟ್ಟಿದ್ದಾರೆ. ಪುನೀತ್ ಸ್ಥಾನವನ್ನು ತುಂಬಲು ಯಾರಿಂದಲೂ ಸಾಧ್ಯವಿಲ್ಲ. ಪುನೀತ್‌ರಷ್ಟು ಅಭಿಮಾನ ಪಡೆದವರು ಮತ್ಯಾರು ಇಲ್ಲ. ಅಂತಹ ಅಪ್ಪಟ ಅಭಿಮಾನಿ ತಮ್ಮ ಗ್ರಾಮದಲ್ಲಿ ಪುತ್ಥಳಿ ನಿರ್ಮಾಣ ಮಾಡಿ ಅವರ ಪತ್ನಿ ಕರೆಸಿ ಉದ್ಘಾಟಿಸಿರುವುದು ಶ್ಲಾಘನೀಯ. ಪುನೀತ್‌ರ ಅಭಿಮಾನಿ ಪ್ರಕಾಶ ಮೊರಬದ ಬಹಳ ಶ್ರಮಪಟ್ಟು ಪುಣ್ಯದ ಕೆಲಸ ಮಾಡಿದ್ದಾರೆ ಎಂದು ಶ್ಲಾಘಿಸಿದರು.ಡಿಎಸ್‌ಎಸ್ ಜಿಲ್ಲಾ ಸಂಚಾಲಕ ಡಾ.ಸಂಜಯಗಾಂಧಿ ಸಂಜೀವಣ್ಣವರ ಮಾತನಾಡಿ, ರಾಜ್ಯ ಸರ್ಕಾರ ಹಾವೇರಿ ಬಸ್ ನಿಲ್ದಾಣಕ್ಕೆ, ಹಾವೇರಿ ಹಾಲು ಒಕ್ಕೂಟಕ್ಕೆ ಹಾಗೂ ನೂರು ವರ್ಷ ಪೂರೈಸಿದ ಸರ್ಕಾರಿ ಶಾಲೆಗಳಿಗೆ ಪುನೀತ್ ರಾಜಕುಮಾರ ಅವರ ಹೆಸರನ್ನು ನಾಮಕರಣ ಮಾಡಬೇಕು. ಜತೆಗೆ ಕೇಂದ್ರ ಸರ್ಕಾರ ಮರಣೋತ್ತರವಾಗಿ ಭಾರತ ರತ್ನ ಪ್ರಶಸ್ತಿ ನೀಡಬೇಕು ಎಂದು ಮನವಿ ಮಾಡಿದರು. ಕಾರ್ಯಕ್ರಮ ಉದ್ಘಾಟಿಸಿದ ಅಶ್ವಿನಿ ಪುನೀತರಾಜಕುಮಾರ ಅಭಿಮಾನಿಗಳ ಪ್ರೀತಿಯನ್ನು ಯಾವತ್ತೂ ಮರೆಯುವುದಿಲ್ಲ ಎಂದರು.ಹೊಸರಿತ್ತಿಯ ಗುದ್ದಲಿಸ್ವಾಮಿ ಮಠದ ಶಿವಯೋಗೇಶ್ವರ ಸ್ವಾಮಿಗಳು ಸಾನಿಧ್ಯ ವಹಿಸಿದ್ದರು. ಜಿಪಂ ಮಾಜಿ ಅಧ್ಯಕ್ಷ ಕೊಟ್ರೆಶಪ್ಪ ಬಸೆಗಣ್ಣಿ, ಗ್ರಾಪಂ ಅಧ್ಯಕ್ಷ ಆನಂದ ಕುಂಬಾರಿ, ಎಂ.ಎಂ. ಮೈದೂರ, ರವಿ ಮೆಣಸಿನಕಾಯಿ, ಬಸವರಾಜ ಪೂಜಾರ, ನಾಗಪ್ಪ ಕೋಣನವರ, ದರ್ಶನ ಲಮಾಣಿ, ಜಮೀರ್ ಜಿಗರಿ, ಇತರರು ಉಪಸ್ಥಿತರಿದ್ದರು. ಅನಿತಾ ಹರನಗಿರಿ ಸ್ವಾಗತಿಸಿದರು. ಸತೀಶ ಈಳಗೇರ ನಿರೂಪಿಸಿದರು.