ಬೆಳಗಾವಿ : ಹಿಂದುತ್ವ ನಾಯಕ, ಶಾಸಕ ಬಸನಗೌಡ ಪಾಟೀಲ ಯತ್ನಾಳ ಅವರನ್ನು ಬಿಜೆಪಿಯಿಂದ ಉಚ್ಛಾಟನೆ ಮಾಡಿರುವ ಆದೇಶವನ್ನು ವಾಪಸ್ ಪಡೆಯುವಂತೆ ಪಕ್ಷದ ಹೈಕಮಾಂಡ್‌ಗೆ ಏ.10 ಗಡುವನ್ನು ಕೂಡಲಸಂಗಮ ಪಂಚಮಸಾಲಿ ಪೀಠದ ಬಸವಜಯ ಮೃತ್ಯುಂಜಯ ಸ್ವಾಮೀಜಿ ನೀಡಿದರು.
ನಗರದಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ ಮತ್ತ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಅವರ ಕುತಂತ್ರದಿಂದ ಯತ್ನಾಳ ಅವರನ್ನು ಬಿಜೆಪಿ ಪಕ್ಷದಿಂದ ಉಚ್ಛಾಟಿಸಲಾಗಿದೆ ಎಂದು ಆರೋಪಿಸಿದರು.
ಏ.10 ರೊಳಗೆ ಯತ್ನಾಳ ಅವರ ಉಚ್ಛಾಟನಾ ಆದೇಶವನ್ನು ವಾಪಸ್ ಪಡೆಯಬೇಕು. ಇಲ್ಲದಿದ್ದರೇ ಬೆಳಗಾವಿಯಲ್ಲಿ ಏ.13 ರಂದು ಪಂಚಮಸಾಲಿ ಸಮಾಜದ ಬೃಹತ್ ಪ್ರತಿಭಟನಾ ಸಮಾವೇಶ ಹಮ್ಮಿಕೊಳ್ಳಲಾಗುವುದು. ರಾಜ್ಯಾದ್ಯಂತ ತಾಲೂಕು ಮಟ್ಟದಲ್ಲಿಯೂ ಸಮಾಜದ ಮುಖಂಡರು ಪ್ರತಿಭಟನಾ ಸಮಾವೇಶ ಹಮ್ಮಿಕೊಳ್ಳುವರು ಎಂದು ಎಚ್ಚರಿಕೆ ನೀಡಿದರು.
ಈ ಸಮಾವೇಶದ ಮೂಲಕ ಸಮಾಜದ ಶಕ್ತಿ ಪ್ರದರ್ಶನ ಮಾಡಲಾಗುವುದು. ಲಿಂಗಾಯತ ಸಮಾಜದ ನಾಯಕರನ್ನು ಕಡೆಗಣಿಸಿದರೇ ಯಾರೂ ಸರ್ಕಾರ ರಚನೆ ಮಾಡಲು ಸಾಧ್ಯವಿಲ್ಲ. ಯತ್ನಾಳ ಅವರ ಹಿಂದೆ ಇಡೀ ಲಿಂಗಾಯತ ಸಮುದಾಯವಿದೆ ಎಂದರು.
ಯತ್ನಾಳ ಅವರನ್ನು ಉಚ್ಛಾಟಿಸುವ ಮೂಲಕ ಬಿಜೆಪಿ ತನ್ನ ಕಾಲ ಮೇಲೆ ತಾನೇ ಕಲ್ಲು ಹಾಕಿಕೊಂಡಿದೆ. ಯಾವುದೇ ಕಾರಣ ಇಲ್ಲದೇ ಉಚ್ಛಾಟನೆ ಮಾಡಿರುವ ಬಿಜೆಪಿ ಹೈಕಮಾಂಡ್ ಕ್ರಮ ಖಂಡನೀಯ. ಕರ್ನಾಟಕದ ಕೆಲವರು ಪಿತೂರಿ ಮಾಡಿ ಯತ್ನಾಳ ಅವರನ್ನು ಉಚ್ಛಾಟನೆ ಮಾಡಲಾಗಿದೆ. ನಮ್ಮ ಸಮಾಜದ ಎಲ್ಲ ಶಾಸಕರು ಪಕ್ಷದ ವರಿಷ್ಠರ ಮನವೊಲಿಸುವ ಕೆಲಸ ಮಾಡಬೇಕು
ಭ್ರಷ್ಟಾಚಾರ ಮತ್ತು ಕುಟುಂಬ ರಾಜಕೀಯದ ಬಗ್ಗೆ ಧ್ವನಿ ಎತ್ತಿದ್ದರಿಂದ ಯತ್ನಾಳ ಅವರನ್ನು ಬಿಜೆಪಿಯಿಂದ ಉಚ್ಛಾಟನೆ ಮಾಡಲಾಗಿದೆ, ನಮ್ಮ ಸಮಾಜ ದೃತಿಗೆಟ್ಟಿಲ್ಲ ಎಂದರು.ಬಿಜೆಪಿಗೆ ದೊಡ್ಡ ವೋಟ್ ಬ್ಯಾಂಕ್ ಪಂಚಮಸಾಲಿ ಸಮುದಾಯ. ಮೀಸಲಾತಿ ಕೊಡದಿದ್ದಕ್ಕೆ ಕಾಂಗ್ರೆಸ್ ಗೆ ಸಪೋರ್ಟ್ ಮಾಡಿದ್ದೇವು. ಆದರೆ, ಕಾಂಗ್ರೆಸ್ ನವರು ಲಾಠಿ ಏಟು ಬೂಟಿನೇಟು ನೀಡಿದರು.
ಇದನ್ನು ನೋಡಿದ ನಮ್ಮ ಸಮುದಾಯ ಮತ್ತೆ ಬಿಜೆಪಿಯತ್ತ ವಾಲಿತ್ತು. ನಮ್ಮ ನಾಯಕನ ಧ್ವನಿ ಅಡಗಿಸಿದ ಬಿಜೆಪಿಗೆ ಸಪೋರ್ಟ್ ಮಾಡಬೇಕಾ ಎನ್ನುವುದರ ಕುರಿತು ಚರ್ಚೆ ನಡೆಯುತ್ತಿದೆ. ಲಿಂಗಾಯತ ನಾಯಕರ ತುಳಿಯುವ ನಾಯಕರ ವಿರುದ್ಧ ನಮ್ಮ ಹೋರಾಟ ಮುಂದುವರೆಯುತ್ತದೆ ಎಂದು ಎಚ್ಚರಿಕೆ ನೀಡಿದರು.
ನಮ್ಮದು ಅಮಿತ್ ಶಾ, ಮೋದಿಯವರ ವಿರುದ್ಧ ಹೋರಾಟ ಅಲ್ಲ. ಈಗಷ್ಟೇ ಯತ್ನಾಳ್ ಅವರ ಜೊತೆಗೆ ನಾನು ಮಾತನಾಡಿದ್ದೇನೆ. ಇದು ಮೊದಲ ಸಲ ಅಲ್ಲ. ಈ ಹಿಂದೆಯೂ ಆಗಿದೆ. ಅವರು ಗಟ್ಟಿಯಾಗಿದ್ದಾರೆ ಸ್ವಲ್ಪ ಮನಸ್ಸಿಗೆ ನೋವಾಗಿದೆ. ಅಮಿತ್ ಶಾ, ಮೋದಿಯವರ ಗಮನಕ್ಕೆ ಇದು ಬಂದಿಲ್ಲ.
-ಬಸವಜಯ ಮೃತ್ಯುಂಜಯ ಸ್ವಾಮೀಜಿ, ಪಂಚಮಸಾಲಿ ಪೀಠ.