ಏ.16,17 ಸಿಇಟಿ ಪರೀಕ್ಷೆ: ಲೋಪದೋಷವಾಗದಂತೆ ಕ್ರಮ ಕೈಗೊಳ್ಳಿ; ಬಿ.ಸಿ.ಶಿವಾನಂದ ಮೂರ್ತಿ

KannadaprabhaNewsNetwork |  
Published : Apr 10, 2025, 01:03 AM IST
9ಕೆಎಂಎನ್ ಡಿ29 | Kannada Prabha

ಸಾರಾಂಶ

ಮಂಡ್ಯ ಜಿಲ್ಲಾ ಖಜಾನೆಯಿಂದ ಪ್ರಶ್ನೆ ಪತ್ರಿಕೆಗಳನ್ನು ಸುರಕ್ಷಿತವಾಗಿ ಪರೀಕ್ಷಾ ಕೇಂದ್ರಗಳಿಗೆ ತಲುಪಿಸಲು ಮಾರ್ಗಾಧಿಕಾರಿಗಳನ್ನು ನೇಮಕ ಮಾಡಲಾಗಿದೆ. ಪರೀಕ್ಷೆ ಕೇಂದ್ರದ ಸುತ್ತ ಸೆಕ್ಷನ್ 144 ಜಾರಿಗೊಳಿಸಿ ನಿಷೇಧಾಜ್ಞೆ ಹೊರಡಿಸಲಾಗುವುದು, ಯಾವುದೇ ಖಾಸಗಿ ವ್ಯಕ್ತಿಗಳು 200 ಮೀಟರ್ ವ್ಯಾಪ್ತಿಯಲ್ಲಿ ಸಂಚರಿಸುವಂತಿಲ್ಲ ಹಾಗೂ ಸುತ್ತಮುತ್ತಲು ಯಾವುದೇ ಜೆರಾಕ್ಸ್ ಅಂಗಡಿಗಳು ತೆರೆಯುವಂತಿಲ್ಲ.

ಕನ್ನಡಪ್ರಭ ವಾರ್ತೆ ಮಂಡ್ಯ

ಕರ್ನಾಟಕ ಪರೀಕ್ಷಾ ಪ್ರಾಧಿಕಾರದಿಂದ ಜಿಲ್ಲೆಯಲ್ಲಿ ಏಪ್ರಿಲ್ 16 ಮತ್ತು 17ರಂದು ನಡೆಯುವ ಸಿಇಟಿ ಪರೀಕ್ಷೆಯಲ್ಲಿ ಯಾವುದೇ ಲೋಪದೋಷ ಉಂಟಾಗದಂತೆ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಅಪರ ಜಿಲ್ಲಾಧಿಕಾರಿ ಬಿ.ಸಿ.ಶಿವಾನಂದ ಮೂರ್ತಿ ಹೇಳಿದರು.

ನಗರದ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ನಡೆದ ಸಿಇಟಿ ಪರೀಕ್ಷಾ ಪೂರ್ವ ತಯಾರಿ ಸಭೆ ಅಧ್ಯಕ್ಷತೆ ವಹಿಸಿ ಮಾತನಾಡಿ, ಸಿಇಟಿ ಪರೀಕ್ಷೆಯಲ್ಲಿ 6,401 ವಿದ್ಯಾರ್ಥಿಗಳು ಪರೀಕ್ಷೆ ಬರೆಯಲಿದ್ದಾರೆ ಎಂದು ತಿಳಿಸಿದರು.

ಜಿಲ್ಲೆಯಲ್ಲಿ ಒಟ್ಟು 15 ಪರೀಕ್ಷಾ ಕೇಂದ್ರಗಳಲ್ಲಿ ಮಂಡ್ಯ ತಾಲೂಕಿನಲ್ಲಿ 12 ಹಾಗೂ ಕೆಆರ್ ಪೇಟೆ ತಾಲೂಕಿನಲ್ಲಿ 3 ಕೇಂದ್ರಗಳಲ್ಲಿ ಪರೀಕ್ಷೆ ನಡೆಯಲಿದೆ. ಪರೀಕ್ಷಾ ಕೇಂದ್ರಗಳಿಗೆ ಪ್ರಶ್ನ ಪತ್ರಿಕೆ ಕೊಂಡೊಯ್ಯಲು ತಹಸೀಲ್ದಾರ್ ಬಿ.ಇ.ಒ ಹಾಗೂ ಪ್ರಾಂಶುಪಾಲರನ್ನು ಒಳಗೊಂಡ ತ್ರಿ ಸದಸ್ಯ ಸಮಿತಿ ರಚಿಸಲಾಗಿದೆ ಎಂದರು.

ಜಿಲ್ಲಾ ಖಜಾನೆಯಿಂದ ಪ್ರಶ್ನೆ ಪತ್ರಿಕೆಗಳನ್ನು ಸುರಕ್ಷಿತವಾಗಿ ಪರೀಕ್ಷಾ ಕೇಂದ್ರಗಳಿಗೆ ತಲುಪಿಸಲು ಮಾರ್ಗಾಧಿಕಾರಿಗಳನ್ನು ನೇಮಕ ಮಾಡಲಾಗಿದೆ. ಪರೀಕ್ಷೆ ಕೇಂದ್ರದ ಸುತ್ತ ಸೆಕ್ಷನ್ 144 ಜಾರಿಗೊಳಿಸಿ ನಿಷೇಧಾಜ್ಞೆ ಹೊರಡಿಸಲಾಗುವುದು, ಯಾವುದೇ ಖಾಸಗಿ ವ್ಯಕ್ತಿಗಳು 200 ಮೀಟರ್ ವ್ಯಾಪ್ತಿಯಲ್ಲಿ ಸಂಚರಿಸುವಂತಿಲ್ಲ ಹಾಗೂ ಸುತ್ತಮುತ್ತಲು ಯಾವುದೇ ಜೆರಾಕ್ಸ್ ಅಂಗಡಿಗಳು ತೆರೆಯುವಂತಿಲ್ಲ ಎಂದು ಸೂಚನೆ ಹೊರಡಿಸಲಾಗುವುದು ಎಂದರು.

ಸಿಇಟಿ ಪರೀಕ್ಷೆ ಬರೆಯಲು ಬರುವ ಮಕ್ಕಳಿಗೆ ಕುಡಿಯುವ ನೀರು, ಸೂಕ್ತ ಆಸನಗಳು, ಕೊಠಡಿಯಲ್ಲಿ ಗಡಿಯಾರ ಸೇರಿದಂತೆ ಮೂಲ ಸೌಕರ್ಯ ಕಲ್ಪಿಸಬೇಕು, ಪರೀಕ್ಷಾ ಕೊಠಡಿಯ ಸುತ್ತಮುತ್ತಲಿನ ಪ್ರದೇಶವನ್ನು ಸ್ವಚ್ಛಗೊಳಿಸಬೇಕು ಎಂದು ಅಧಿಕಾರಿಗಳಿಗೆ ಸೂಚಿಸಿದರು.

24 ವಿದ್ಯಾರ್ಥಿಗಳಿಗೆ ಒಬ್ಬರು ಮೇಲ್ವಿಚಾರಕರನ್ನು ನೇಮಿಸಲಾಗಿದೆ. ಪ್ರತಿ ಪರೀಕ್ಷಾ ಕೇಂದ್ರಗಳಿಗೂ ಆರೋಗ್ಯ ಸಿಬ್ಬಂದಿಯನ್ನು ನಿಯೋಜಿಸಲಾಗುವುದು, ವಿದ್ಯುತ್ ವ್ಯತ್ಯಯ ಉಂಟಾಗದಂತೆ ಪ್ರತಿ ಕೇಂದ್ರಕ್ಕೂ ಇಬ್ಬರು ಲೈನ್ ಮ್ಯಾನ್ ನಿಯೋಜಿಸಲಾಗುವುದು, ಪರೀಕ್ಷಾ ಕೇಂದ್ರಗಳಲ್ಲಿ ಯಾವುದೇ ಲೋಪಗಳಾಗದಂತೆ ಭದ್ರತಾ ವ್ಯವಸ್ಥೆಯನ್ನು ಕಲ್ಪಿಸಲಾಗುವುದು ಎಂದರು.

ವೆಬ್ ಕಾಸ್ಟಿಂಗ್:

ಸಿಇಟಿ ಪರೀಕ್ಷೆ ನಡೆಯುವ 15 ಕೇಂದ್ರಗಳಲ್ಲೂ ಸಿಸಿ ಟಿವಿ ಕಡ್ಡಾಯ, ಎಲ್ಲಾ ಕೊಠಡಿಯ ವಿಡಿಯೋಗಳು ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಪ್ರದರ್ಶನ ಗೊಳ್ಳುತ್ತಿರುತ್ತವೆ. ಆದ್ದರಿಂದ ಕೊಠಡಿ ಮೇಲ್ವಿಚಾರಕರು ಜಾಗೃತೆಯಿಂದ ಕಾರ್ಯನಿರ್ವಹಿಸಿ ಎಂದು ಎಚ್ಚರಿಕೆ ನೀಡಿದರು.

ಪರೀಕ್ಷಾರ್ಥಿಗಳು ರಿಸ್ಟ್ ವಾಚ್, ಕ್ಯಾಲ್ಕುಲೇಟರ್, ಮೊಬೈಲ್ ಹಾಗೂ ಇತ್ಯಾದಿ ಎಲೆಕ್ಟ್ರಾನಿಕ್ ಸಾಧನಗಳನ್ನು ಪರೀಕ್ಷಾ ಕೊಠಡಿಗೆ ತರುವಂತಿಲ್ಲ. ಪರೀಕ್ಷಾ ಕೊಠಡಿಗೆ ವಿದ್ಯಾರ್ಥಿಗಳು ಬಿಡುವ ಮೊದಲು ಅವರ ಪ್ರವೇಶ ಪತ್ರವನ್ನು ಸ್ಕ್ಯಾನ್ ಮಾಡಿ ವಿದ್ಯಾರ್ಥಿಗಳ ಗುರುತು ಖಾತರಿಯಾದ ನಂತರ ಪ್ರವೇಶ ನೀಡತಕ್ಕದ್ದು ಎಂದು ಸೂಚಿಸಿದರು.

ಪರೀಕ್ಷೆಗೆ ನಿಯೋಜಿಸಲಾಗಿರುವ ಮೇಲ್ವಿಚಾರಕರು ವಿದ್ಯಾರ್ಥಿಗಳಿಗೆ ಓ.ಎಂ.ಆರ್ ಪತ್ರಿಕೆಯನ್ನು ತುಂಬುವ ವಿಧಾನವನ್ನು ವಿವರವಾಗಿ ತಿಳಿಸಬೇಕು. ವಿದ್ಯಾರ್ಥಿಗಳು ಓ.ಎಂ.ಆರ್ ಪತ್ರಿಕೆಯಲ್ಲಿ ಯಾವುದೇ ರೀತಿಯ ತಪ್ಪುಗಳನ್ನು ಮಾಡದಂತೆ ಮುನ್ನೆಚ್ಚರಿಕೆ ವಹಿಸಬೇಕು. ವಿಶೇಷ ಚೇತನ ಮಕ್ಕಳಿಗೆ ಕೆಳಮಹಡಿಯಲ್ಲೇ ಕೊಠಡಿಗಳನ್ನು ಒದಗಿಸಬೇಕು ಎಂದರು.

ಪರೀಕ್ಷೆಗಳು ಮುಗಿದ ನಂತರ ಯಾವುದೇ ವಿಳಂಬ ಮಾಡದೆ, ಎಲ್ಲಾ ಉತ್ತರ ಪತ್ರಿಕೆಗಳನ್ನು ಜಿಲ್ಲಾ ಖಾಜಾನೆಗೆ ಮಾರ್ಗಾಧಿಕಾರಿಗಳು ತಲುಪಿಸಬೇಕು ಎಂದರು.

ಸಭೆಯಲ್ಲಿ ಪಿಯು ಡಿಡಿ ಸಿ.ಚೆಲುವಯ್ಯ, ಮಂಡ್ಯ ಪಶ್ಚಿಮ ಠಾಣೆ ಆರಕ್ಷಕ ಉಪ ನಿರೀಕ್ಷಕ ಕೆ.ಎನ್ ಕೇಶವಮೂರ್ತಿ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಉಪ ನಿರ್ದೇಶಕ ರಾಜಮೂರ್ತಿ, ಜಿಪಂ ಉಪ ಕಾರ್ಯದರ್ಶಿ-1(ಆಡಳಿತ) ಎಂ.ಬಾಬು, ಜಿಲ್ಲಾ ಖಜಾನೆ ಮುಖ್ಯ ಲೆಕ್ಕಿಗ ಬಿ.ಜೆ ಬಸವಣ್ಣ, ಪ್ರವಾಸೋದ್ಯಮ ಇಲಾಖೆ ಉಪನಿರ್ದೇಶಕ ರಾಘವೇಂದ್ರ, ಸೇರಿದಂತೆ ಇನ್ನಿತರ ಅಧಿಕಾರಿಗಳು ಉಪಸ್ಥಿತರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ನಮ್ಮವರಿಗೆ ಇಲ್ಲದ ಪರಿಹಾರ ಅವರಿಗೆ ಏಕೆ : ಬಿಜೆಪಿ ಆಕ್ರೋಶ
ಶೆಡ್‌ ತೆರವಿನ ಪ್ರಕರಣದಲ್ಲಿ ಪಾಕ್‌ ಹಸ್ತಕ್ಷೇಪಕ್ಕೆ ಕೈ ಕಿಡಿ