ಆಪ್ತಮಿತ್ರ ವಾಟ್ಸಪ್‌ ಬಳಗದ ಯಕ್ಷಗಾನ ಪ್ರದರ್ಶನ ಆಯೋಜನೆ ಯಶಸ್ವಿ

KannadaprabhaNewsNetwork | Updated : Feb 05 2024, 04:03 PM IST

ಸಾರಾಂಶ

‘ಆಪ್ತಮಿತ್ರ ಬಳಗದ’ ಮೂರ್ನಾಡು ವಾಟ್ಸ್‌ ಗ್ರೂಪ್ ವತಿಯಿಂದ ಯಕ್ಷೋತ್ಸವ ಇತ್ತೀಚೆಗೆ ಮೂರ್ನಾಡಿನ ಪಾಂಡಾಣೆ ಮೈದಾನದಲ್ಲಿ ನಡೆಯಿತು.

ದುಗ್ಗಳ ಸದಾನಂದ

ಕನ್ನಡಪ್ರಭ ವಾರ್ತೆ ನಾಪೋಕ್ಲು

ತುಳುನಾಡಿನ ಜನರ ರಕ್ತದಲ್ಲೇ ಒಡಮೂಡಿ ಇಂದಿಗೂ ಪ್ರಚಲಿತದಲ್ಲಿರುವ ಯಕ್ಷಗಾನ ಕಲೆಗೆ ಎಲ್ಲಿಲ್ಲದ ಆಕರ್ಷಣೆಯಿದೆ. ಆದರೆ, ದಕ್ಷಿಣ ಕನ್ನಡದ ಗಡಿಯಾಚೆಗೆ ಅಂತಹ ಜನಪ್ರಿಯತೆ ಈ ಕಲೆಗಿಲ್ಲ. 

ಕೊಡಗಿನಲ್ಲಂತೂ ಯಕ್ಷಗಾನ ಕಾರ್ಯಕ್ರಮ ನಡೆದರೆ ಬೆರಳೆಣಿಕೆ ಜನರು ಸೇರುತ್ತಾರೆ. ಈ ಅಪ್ರತಿಮ ಕಲೆಯನ್ನು ನಾಡಿನಾದ್ಯಂತ ಪ್ರಚುರಪಡಿಸುವ ಸದುದ್ದೇಶದಿಂದ ‘ಆಪ್ತಮಿತ್ರ ಬಳಗದ’ ಮೂರ್ನಾಡು ವಾಟ್ಸ್‌ ಗ್ರೂಪ್, ಹೊಸ ಕಲಾ ಸೇವೆ ಆರಂಭಿಸಿದೆ.

ಬಳಗವು ಹಮ್ಮಿಕೊಂಡಿರುವ ಈ ಕಲಾಸೇವೆ ಯಕ್ಷೋತ್ಸವ ಇತ್ತೀಚೆಗೆ ಮೂರ್ನಾಡಿನ ಪಾಂಡಾಣೆ ಮೈದಾನದಲ್ಲಿ ಸಾಕಾರಗೊಂಡಿತು.

ಕಲಾಭಿಮಾನಿಗಳಿಗಾಗಿ ಉಚಿತ ಯಕ್ಷಗಾನ ಬಯಲಾಟ ಆಯೋಜಿಸಲಾಗಿತ್ತು. ಇದರಲ್ಲೇನು ವಿಶೇಷ ಅಂತೀರಾ? ಯಕ್ಷಗಾನವನ್ನು ಕಣ್ತುಂಬಿಕೊಂಡ ಪ್ರೇಕ್ಷಕರು, ಹೊಟ್ಟೆ ತುಂಬಾ ಭೋಜನವನ್ನೂ ಸ್ವೀಕರಿಸಿದರು.

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ‘ಗಜಮೇಳ’ ಎಂದೇ ಪ್ರಖ್ಯಾತಿ ಪಡೆದ ಹನುಮಗಿರಿಯ ಶ್ರೀ ಕೋದಂಡರಾಮ ಕೃಪಾಪೋಷಿತ ಯಕ್ಷಗಾನ ಮಂಡಳಿಯ ಖ್ಯಾತ ಕಲಾವಿದರು ‘ಇಂದ್ರಪ್ರಸ್ತ’ ಎಂಬ ಯಕ್ಷ ಪ್ರಸಂಗ ಪ್ರದರ್ಶಿಸಿದರು. 

ನಾಪೋಕ್ಲು, ಮೂರ್ನಾಡು ಸೇರಿದಂತೆ ವಿವಿಧ ಭಾಗಗಗಳಿಂದ ಬಂದಿದ್ದ ಸಾವಿರಾರು ಪ್ರೇಕ್ಷಕರಿಗೆ ಸಂಜೆ ಲಘು ಉಪಾಹಾರ ಮತ್ತು ರಾತ್ರಿ ವೇಳೆ ಊಟದ ವ್ಯವಸ್ಥೆಯನ್ನೂ ಮಾಡಲಾಗಿತ್ತು.

ನುರಿತ ಕಲಾವಿದರ ವೇಷ-ಭೂಷಣಗಳು, ಭಾಗವತಿಕೆ, ನೃತ್ಯ, ತಾಳ- ಮೇಳ ಹಾಗೂ ಮಾತುಗಾರಿಕೆಗೆ ಮಾರು ಹೋದ ಜನರು, ಚಪ್ಪಾಳೆ, ವಿಷಲ್‌ಗಳ ಸುರಿಮಳೆಯೊಂದಿಗೆ ಕಲಾವಿದರಿಗೆ ಹಾಗೂ ಮೇಳಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದರು. ಬಳಗದ ಪರವಾಗಿ ವಿಘ್ನೇಶ್ ಭಟ್ ಸ್ವಾಗತಿಸಿ, ವಂದಿಸಿದರು.

ಆಪ್ತಮಿತ್ರ ಬಳಗ ಎಂಬ ವಾಟ್ಸಪ್ ಗ್ರೂಪ್ ವಿವಿಧ ಸಮಾಜ ಸೇವಾ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತಿದೆ. ಐದು ವರ್ಷಗಳ ಹಿಂದೆ ಸ್ಥಾಪನೆಯಾದ ಈ ಬಳಗ 145 ಸದಸ್ಯರನ್ನೊಳಗೊಂಡಿದೆ.

ತುರ್ತು ಸಂದರ್ಭಗಳಲ್ಲಿ ವಾಟ್ಸಪ್ ಗ್ರೂಪ್ ಸದಸ್ಯರಿಂದ ಮಾತ್ರ ದೇಣಿಗೆ ಸಂಗ್ರಹಿಸಿ ಅಗತ್ಯವಿದ್ದವರಿಗೆ ನೆರವು ನೀಡುತ್ತಿದ್ದೇವೆ. ಸಮಾಜ ಸೇವೆಯೊಂದಿಗೆ ಕಲೆ ಮತ್ತು ಸಂಸ್ಕೃತಿಗೆ ಒತ್ತು ನೀಡುವ ನಿಟ್ಟಿನಲ್ಲಿ ಯಕ್ಷಗಾನ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ - ಚಂದ್ರಶೇಖರ ಕುಲಾಲ್, ಕಾರ್ಯಕ್ರಮದ ಸಂಘಟಕ, ವಾಟ್ಸಾಪ್‌ ಗ್ರೂಪ್ ಅಡ್ಮಿನ್

ನಮ್ಮೊಂದಿಗೆ ಸಹಕರಿಸಿ ಪ್ರೋತ್ಸಾಹಿಸಿದ ಆಪ್ತಮಿತ್ರ ಬಳಗ ಹಾಗೂ ಕಲಾ ಪ್ರೇಮಿಗಳಿಗೆ ತುಂಬು ಹೃದಯದ ಧನ್ಯವಾದಗಳು. ಮುಂದೆಯೂ ನಮ್ಮಂಥ ಕಲಾವಿದರಿಗೆ ಇದೇ ರೀತಿಯ ಸಹಕಾರ ಸಿಗಲೆಂದು ಮನವಿ ಮಾಡುತ್ತೇನೆ - ಹರೀಶ್ ಬೊಳಂತಿಮೊಗೇರು, ಶ್ರೀ ಕೋದಂಡರಾಮ ಕೃಪಾಪೋಷಿತ ಯಕ್ಷಗಾನ ಮಂಡಳಿಯ ವ್ಯವಸ್ಥಾಪಕ.

Share this article