ಕನ್ನಡಪ್ರಭ ವಾರ್ತೆ ಮಂಡ್ಯ
ಸಂಸ್ಥೆಯ ಹಿರಿಯ ಉಪ ನಿರ್ದೇಶಕ ವಿ.ಎ.ಪಂಖಾವಾಲ, ಡಾ.ಬಿ.ವಿ.ಶ್ಯಾಮಸುಂದರ್ ಹಾಗೂ ಹಿರಿಯ ಪ್ರಧಾನ ವ್ಯವಸ್ಥಾಪಕ ಗಿರೀಶ್ ತನವಾಡೆ ಅವರು ಮಂಡ್ಯದ ಕಂದಾಯ ಇಲಾಖೆ ಅಧಿಕಾರಿಗಳೊಂದಿಗೆ ಬಸರಾಳು ಸಮೀಪದಲ್ಲಿರುವ ಮುದ್ದನಘಟ್ಟ ಹಾಗೂ ಹೆಗ್ಗಡತಿಹಳ್ಳಿ ಗ್ರಾಮಗಳ ಬಳಿಯ ಜಾಗವನ್ನು ಖುದ್ದು ವೀಕ್ಷಿಸಿದರು.
ಈ ಎರಡು ಗ್ರಾಮಗಳ ಬಳಿ ಸುಮಾರು ೧೧೦ ಎಕರೆ ಸರ್ಕಾರಿ ಭೂಮಿ ಲಭ್ಯವಿದೆ ಎಂದು ರಾಜ್ಯ ಸರ್ಕಾರ ತಿಳಿಸಿದ್ದು, ಎಆರ್‌ಎಐ ತಂಡವು ಈ ಭೂಮಿಯನ್ನು ವಿಸ್ತೃತವಾಗಿ ಪರಿಶೀಲನೆ ನಡೆಸಿತು. ಅಲ್ಲದೇ, ಜಾಗಕ್ಕೆ ಸಂಬಂಧಿತ ಅಗತ್ಯ ಮಾಹಿತಿಯನ್ನು ಕಂದಾಯ ಇಲಾಖೆ ಅಧಿಕಾರಿಗಳಿಂದ ಕಲೆ ಹಾಕಿತು.ಈ ಭೂಮಿ ಎಆರ್‌ಎಐ ಪರೀಕ್ಷಾ ಕೇಂದ್ರ ಸ್ಥಾಪನೆಗೆ ಅನುಕೂಲವಾಗಿದೆಯೇ ಇಲ್ಲವೇ ಎಂಬುದನ್ನು ಅಧಿಕಾರಿಗಳು ಪರಿಶೀಲಿಸಿದರು. ಈ ತಂಡದ ವರದಿಯ ನಂತರ ತಾಂತ್ರಿಕ ನಿಪುಣರ ತಂಡವು ಈ ಭೂಮಿಗಳನ್ನು ಪರಿಶೀಲನೆ ನಡೆಸಲಿದೆ. ಭೂಮಿಯ ಸ್ವರೂಪ, ರಸ್ತೆ ಸಂಪರ್ಕ, ನೀರು, ವಿದ್ಯುತ್ ಸೇರಿ ಮೂಲ ಸೌಕರ್ಯಗಳ ಸಂಯೋಜನೆ ಸುಲಭ ಸಾಧ್ಯವೇ ಎಂಬುದರ ಬಗ್ಗೆ ಸ್ಥಳೀಯ ಅಧಿಕಾರಿಗಳಿಂದ ಮಾಹಿತಿ ಪಡೆಯಿತು. ಅಲ್ಲದೇ, ತ್ವರಿತವಾಗಿ ತಾಂತ್ರಿಕ ತಂಡವೂ ಸ್ಥಳಕ್ಕೆ ಭೇಟಿ ಕಾರ್ಯಸಾಧ್ಯತಾ ವರದಿಯನ್ನು ನೀಡಲಿದೆ ಎಂದು ಹೇಳಿತು.ಜಿಲ್ಲಾಧಿಕಾರಿಗಳೊಂದಿಗೆ ಎಆರ್‌ಎಐ ತಂಡ ಮಾತುಕತೆ
ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಜಿಲ್ಲಾಧಿಕಾರಿ ಡಾ. ಕುಮಾರ ಅವರು, ಎಆರ್‌ಎಐ ತಂಡವು ಬಸರಾಳು ಗ್ರಾಮದ ಸಮೀಪವಿರುವ ಮುದ್ದನಘಟ್ಟ-ಹೆಗ್ಗಡತಿಹಳ್ಳಿ ಬಳಿ ಗುರುತಿಸಿರುವ ಭೂಮಿಯ ಪ್ರಾಥಮಿಕ ಪರಿಶೀಲನೆ ನಡೆಸಿದೆ. ಬಸರಾಳು ಹತ್ತಿರದ ಭೂಮಿ ಎಆರ್‌ಎಐ ಪರೀಕ್ಷಾ ಕೇಂದ್ರಕ್ಕೆ ಸೂಕ್ತವಾಗಿದೆ ಎಂದು ಹೇಳಿದೆಯೇ ವಿನಾ ಅಲ್ಲಿಯೇ ಕಾರ್ಯಸಾಧ್ಯತೆ ಆಗುತ್ತದೆಯೇ ಎಂಬುದನ್ನು ಹೇಳಿಲ್ಲ. ಅಲ್ಲದೆ ಈಗ ಬಂದಿರುವ ಮೂವರು ಅಧಿಕಾರಿಗಳ ತಂಡವು ಇಪ್ಪತ್ತು ದಿನಗಳಲ್ಲಿ ವರದಿ ನೀಡಲಿದ್ದು, ಆ ವರದಿ ಪರಿಶೀಲನೆ ನಂತರ ತಾಂತ್ರಿಕ ತಂಡ ಜಿಲ್ಲೆಗೆ ಭೇಟಿ ನೀಡಲಿದೆ ಎಂದರು.ಸಚಿವರ ಕನಸು ಈಡೇರುವುದಕ್ಕೆ ದೊಡ್ಡ ಹೆಜ್ಜೆ
ಮಂಡ್ಯದಲ್ಲಿ ಕೇಂದ್ರದ ಬೃಹತ್ ಕೈಗಾರಿಕೆ ಸಚಿವಾಲಯದ ಅಧೀನದಲ್ಲಿರುವ ಎಆರ್‌ಎಐ ಪರೀಕ್ಷಾ ಕೇಂದ್ರ ಸ್ಥಾಪನೆ ಮಾಡಲಾಗುವುದು ಎಂದು ಕೇಂದ್ರದ ಬೃಹತ್ ಕೈಗಾರಿಕೆ ಮತ್ತು ಉಕ್ಕು ಖಾತೆ ಸಚಿವ ಎಚ್.ಡಿ.ಕುಮಾರಸ್ವಾಮಿ ಅವರು ಮಂಡ್ಯದ ಜನತೆಗೆ ಭರವಸೆ ನೀಡಿದ್ದರು. ಮಾ.೧೪ರಂದು ಮಂಡ್ಯದ ವಿ.ಸಿ. ಫಾರಂನಲ್ಲಿ ಒಳಾಂಗಣ ಕ್ರೀಡಾಂಗಣಕ್ಕೆ ಅಡಿಗಲ್ಲು ಹಾಕಿದ ಸಭೆಯಲ್ಲಿ ಮಾತನಾಡುತ್ತಾ, ಎಆರ್‌ಎಐ ಪರೀಕ್ಷಾ ಕೇಂದ್ರ ಸ್ಥಾಪನೆಯ ಪ್ರಕ್ರಿಯೆಗಳು ಆರಂಭವಾಗಿವೆ ಎಂದು ಹೇಳಿದ್ದರು. ಅದಾದ ಎರಡು ದಿನಗಳಲ್ಲಿಯೇ ಆ ಸಂಸ್ಥೆಯ ಉನ್ನತಾಧಿಕಾರಿಗಳು ಭೇಟಿ ನೀಡಿ ಸ್ಥಳ ಪರಿಶೀಲನೆ ನಡೆಸಿದ್ದಾರೆ. ಈ ಯೋಜನೆಗೆ ಆರಂಭಿಕ ಹಂತದಲ್ಲಿ ೫೦೦ ಕೋಟಿ, ನಂತರದ ದಿನಗಳಲ್ಲಿ ಇನ್ನೂ ೫೦೦ ಕೋಟಿ ಹೂಡಿಕೆ ಮಾಡಲಾಗುವುದು. ಇದರಿಂದ ಮಂಡ್ಯದ ಅಭಿವೃದ್ಧಿಗೆ ಬಲ ಬರುವುದು ಮಾತ್ರವಲ್ಲದೆ, ಕರ್ನಾಟಕದಲ್ಲಿ ಆಟೋಮೊಬೈಲ್ ಕ್ಷೇತ್ರದ ಬೆಳವಣಿಗೆಗೆ ಹೆಚ್ಚು ಅನುಕೂಲ ಆಗಲಿದೆ ಎಂದು ಸಚಿವರು ತಿಳಿಸಿದ್ದನ್ನು ಇಲ್ಲಿ ಸ್ಮರಿಸಬಹುದು.