ಕನ್ನಡಪ್ರಭ ವಾರ್ತೆ ಅರಕಲಗೂಡು
ತಾಲೂಕು ಪಂಚಾಯಿತಿ ಸಭಾಂಗಣದಲ್ಲಿ ಮಂಗಳವಾರ ನಡೆದ ಕೆಡಿಪಿ ಸಭೆಯಲ್ಲಿ ವಿವಿಧ ಇಲಾಖೆಗಳ ಪ್ರಗತಿ ಪರಿಶೀಲನೆ ನಡೆಸಿದ ಅವರು, ತಾಲೂಕಿನಲ್ಲಿ 10 ರಿಂದ 15 ಸಾವಿರ ವಲಸೆ ಕಾರ್ಮಿಕರು ಇರುವ ಕುರಿತು ಮಾಹಿತಿ ಇದೆ. ಇವರು ಹೊರರಾಜ್ಯದವರಾಗಿದ್ದು ಎಲ್ಲಿಂದ ಬರುತ್ತಿದ್ದಾರೆ, ಕರೆತರುತ್ತಿರುವವರು ಯಾರು, ಅಗತ್ಯ ದಾಖಲೆಗಳಿವೆಯೆ ಎಂಬ ಕುರಿತು ಸರಿಯಾದ ಮಾಹಿತಿ ಇಲ್ಲ. ಇವರಿಂದಾಗಿ ಸ್ಥಳೀಯ ಕಾರ್ಮಿಕರಿಗೆ ಕೆಲಸ ದೊರೆಯದಂತಾಗಿದೆ. ಅಪರಾಧ ಪ್ರಕರಣಗಳು ವರದಿಯಾಗುತ್ತಿದ್ದು ಸಮಸ್ಯೆ ಗಂಭೀರವಾಗುವ ಮುನ್ನವೆ ಅಧಿಕಾರಿಗಳು ಎಚ್ಚೆತ್ತು ಕ್ರಮ ವಹಿಸುವಂತೆ ಖಡಕ್ ಸೂಚನೆ ನೀಡಿದರು.
ತಾಲೂಕು ಆರೋಗ್ಯಾಧಿಕಾರಿ ಡಾ. ಪುಷ್ಪಲತಾ ಅವರು ಮಾತನಾಡಿ, ಆರೋಗ್ಯ ಇಲಾಖೆಗೂ ವಲಸೆ ಕಾರ್ಮಿರು ತಲೆನೋವಾಗಿದ್ದಾರೆ. ಮಕ್ಕಳಿಗೆ ಲಸಿಕೆ ಹಾಕಿಸಿಲು ನಿರಾಕರಿಸುತ್ತಾರೆ. ರೋಗಗಳು ಹರಡಿದರೆ ಸ್ಥಳಿಯರೂ ಆರೋಗ್ಯ ಸಮಸ್ಯೆಗೆ ಸಿಲುಕಬೇಕಾಗುತ್ತದೆ. ಅಪ್ರಾಪ್ತ ವಯಸ್ಸಿನ ಗರ್ಭಿಣಿ ಹೆಣ್ಣುಮಕ್ಕಳ ಬಗ್ಗೆ ಪ್ರಶ್ನಿಸಿದರೆ ನಿಖರ ಮಾಹಿತಿ ದೊರೆಯುತ್ತಿಲ್ಲ. ದೂರು ನೀಡಿ ವಿಚಾರಿಸಲು ಹೋದರೆ ನಾಪತ್ತೆ ಯಾಗಿರುತ್ತಾರೆ. ಹೀಗೆ ಹಲವು ಸಮಸ್ಯೆಗಳಿಗೆ ಕಾರಣರಾಗುತ್ತಿದ್ದಾರೆ ಎಂದರು.ಪಿಎಸ್‌ಐ ಸಿ.ಆರ್.ಕಾವ್ಯ ಅವರು ಮಾತನಾಡಿ, ಈ ಕುರಿತು ಕ್ರಮಕ್ಕೆ ಇಲಾಖೆ ಮುಂದಾಗಿದೆ. ವಲಸೆ ಕಾರ್ಮಿಕರನ್ನು ಕರೆತರುವ ಉದ್ಯಮಿಗಳು, ಜಮೀನಿನ ಮಾಲೀಕರು ಅಗತ್ಯ ಮಾಹಿತಿಯನ್ನು ಪೊಲೀಸ್ ಠಾಣೆಗೆ ಒದಗಿಸಬೇಕು, ಮನೆ ಬಾಡಿಗೆ ನೀಡುವವರು ಅಗತ್ಯ ದಾಖಲೆಗಳನ್ನು ಪಡೆದು ನೀಡುವಂತೆ ತಿಳಿಸಿದ್ದು, ಅಹಿತಕರ ಘಟನೆಗಳು ನಡೆದಾಗ ನಿಮ್ಮನ್ನೇ ಹೊಣೆಗಾರರನ್ನಾಗಿ ಮಾಡುವುದಾಗಿ ಸೂಚನೆ ನೀಡಿರುವುದಾಗಿ ಮಾಹಿತಿ ನೀಡಿದರು.
ಸಾಮಾಜಿಕ ಇಲಾಖೆ ಪ್ರಗತಿ ತೋರಿಸಲು ಕಂಡ ಕಂಡಲ್ಲಿ ಗಿಡಗಳನ್ನು ನೆಡುವುದನ್ನು ಕೈಬಿಟ್ಟು ನಿಮ್ಮ ವ್ಯಾಪ್ತಿಯ ಜಮೀನಿನಲ್ಲಿ ಮಾತ್ರ ಗಿಡ ನೆಡಬೇಕು. ಅನುಮತಿ ಇಲ್ಲದೆ ಕಂದಾಯ ಇಲಾಖೆ, ಗೋಮಾಳ ಗಳಲ್ಲಿ ಗಿಡಗಳನ್ನು ನೆಡುತ್ತಿದ್ದು ಇದು ಭೂವ್ಯಾಜ್ಯಗಳಿಗೂ ಕಾರಣವಾಗುತ್ತಿದೆ. ಈ ಕುರಿತು ಕಂದಾಯ ಇಲಾಖೆಯೂ ಗಮನ ಹರಿಸಬೇಕು, ರಸ್ತೆ ಬದಿ ನಿಗದಿತ ಜಾಗ ಬಿಟ್ಟು ಗಿಡ ನೆಡುವಂತೆ ಸಾಮಾಜಿಕ ಅರಣ್ಯಾಧಿಕಾರಿ ವಿಜಯಕುಮಾರ್ ಅವರಿಗೆ ಸೂಚಿಸಿದರು.
ಗ್ಯಾರಂಟಿ ಅನುಷ್ಠಾನ ಯೋಜನೆಗಳ ಅಧ್ಯಕ್ಷ ಶ್ರೀಧರ್ ಗೌಡ ಮಾತನಾಡಿ, ಮೂರು ಡ್ಯಾಂಗಳ ಸಂಪರ್ಕ ಹೊಂದಿದ್ದರೂ ಅಭಿವೃದ್ಧಿಯಲ್ಲಿ ಹಿಂದುಳಿದಿದೆ. ಉನ್ನತ ಶಿಕ್ಷಣಕ್ಕೆ ಹೊರ ಊರುಗಳಿಗೆ ಇಲ್ಲಿನ ವಿದ್ಯಾರ್ಥಿಗಳು ತೆರಳಬೇಕಿದೆ. ಕೈಗಾರಿಕೆ, ಉದ್ದಿಮೆಗಳು ಬೆಳೆಯದೆ ಯುವಕರು ನಿರುದ್ಯೋಗಿಗಳಾಗಿದ್ದಾರೆ. ತಾಲೂಕಿನ ಅಭಿವೃದ್ಧಿಗೆ ಶಾಸಕರು ಗಮನ ಹರಿಸಬೇಕು, ಇದಕ್ಕೆ ತಾವೂ ಸಹ ಅಗತ್ಯ ಸಹಕಾರ ನೀಡುವುದಾಗಿ ಹೇಳಿದರು. ಸದಸ್ಯ ಈರೇಶ್ ಹಿರೇಹಳ್ಳಿ ಅಂಬೇಡ್ಕರ್ ಪುತ್ಥಳಿಯ ಮೇಲ್ಛಾವಣಿ ಕಾಮಗಾರಿ ಹಾಗೂ ಅರ್ಧಕ್ಕೆ ನಿಂತಿರುವ ಅಂಬೇಡ್ಕರ್ ಭವನದ ಕಾಮಗಾರಿ ಪೂರ್ಣಗೊಳಿಸಿಲು ಕ್ರಮಕೈಗೊಳ್ಳುವಂತೆ ಒತ್ತಾಯಿಸಿದರು. ಜಿಪಂ ಉಪಕಾರ್ಯದರ್ಶಿ ಎಂ.ಸಿ.ಚಂದ್ರಶೇಖರ್, ತಾಪಂ ಇಒ ಪ್ರಕಾಶ್, ಕೆಡಿಪಿ ಸದಸ್ಯರಾದ ಲೋಕೇಶ್, ಡಿ.ಎಂ.ರಮ್ಯ, ಸಿ.ಆರ್.ಪುನೀತ್, ಮಹಮದ್ ಜಾನ್, ಎಸ್. ಆರ್. ಸುರೇಶ್ ಭಾಗವಹಿಸಿದ್ದರು.