ಅರಮಣಮಾಡ ಕ್ರಿಕೆಟ್‌: ನೆರವಂಡ, ಮಣವಟ್ಟೀರ ಚಾಂಪಿಯನ್ಸ್

KannadaprabhaNewsNetwork | Published : May 20, 2024 1:32 AM

ಸಾರಾಂಶ

ಅರಮಾಣಮಾಡ ಕ್ರಿಕೆಟ್‌ ನಮ್ಮೆಯ ಫೈನಲ್‌ ಪಂದ್ಯದ ಪುರುಷರ ವಿಭಾಗದಲ್ಲಿ ನೆರವಂಡ ಹಾಗೂ ಮಹಿಳೆಯರ ವಿಭಾಗದಲ್ಲಿ ಮಣವಟ್ಟೀರ ತಂಡ ಚಾಂಪಿಯನ್‌ ಪ್ರಶಸ್ತಿ ಗಳಿಸಿತು.

ಕನ್ನಡಪ್ರಭ ವಾರ್ತೆ ಗೋಣಿಕೊಪ್ಪ

ಕೊಡವ ಕುಟುಂಬಗಳ ನಡುವೆ ಬಾಳೆಲೆಯ ವಿಜಯಲಕ್ಷ್ಮೀ ಕಾಲೇಜು ಮೈದಾನದಲ್ಲಿ ಭಾನುವಾರ ನಡೆದ ಅರಮಣಮಾಡ ಕ್ರಿಕೆಟ್ ನಮ್ಮೆಯ ಫೈನಲ್ ಪಂದ್ಯದ ಪುರುಷರ ವಿಭಾಗದಲ್ಲಿ ನೆರವಂಡ ಹಾಗೂ ಮಹಿಳೆಯರ ವಿಭಾಗದಲ್ಲಿ ಮಣವಟ್ಟೀರ ತಂಡ ಚಾಂಪಿಯನ್ ಪ್ರಶಸ್ತಿ ಗಳಿಸಿತು.

ನೆರವಂಡ ಹಾಗೂ ಅಚ್ಚಪಂಡ ಪುರುಷರ ತಂಡಗಳ ನಡುವೆ ನಡೆದ ಫೈನಲ್ ಪಂದ್ಯದಲ್ಲಿ ಅಚ್ಚಪಂಡ ತಂಡ ಬ್ಯಾಟಿಂಗ್ ಮಾಡಿ 6 ಓವರ್ ಗಳಲ್ಲಿ 7 ವಿಕೆಟ್ ಗಳನ್ನು ಕಳೆದುಕೊಂಡು 36 ರನ್ ಗಳನ್ನು ಗಳಿಸಿತು. ಗುರಿ ಬೆನ್ನಟ್ಟಿದ ನೆರವಂಡ ತಂಡ 3.4 ಓವರ್ ಗಳಲ್ಲಿ 37 ರನ್ ಗಳಿಸಿ 9 ವಿಕೆಟ್ ಗಳ ಜಯ ಸಾಧಿಸಿ ಚಾಂಪಿಯನ್ ಪಟ್ಟ ತನ್ನದಾಗಿಸಿಕೊಂಡಿತು.

ಅಚ್ಚಪಂಡ ತಂಡದ ಪರ ಬೋಪಣ್ಣ 10, ಮಂಜು ಮಾಚಯ್ಯ 10 ರನ್ ಗಳಿಸಿದರೆ, ನೆರವಂಡ ತಂಡದ ಪ್ರಶಾಂತ್ 3, ವರುಣ್ 2 ವಿಕೆಟ್ ಗಳಿಸಿದರು. ನೆರವಂಡ ತಂಡ ಪ್ರಶಾಂತ್ 22, ಪೆಮ್ಮಯ್ಯ 12, ವರಣ್ 4 ರನ್ ಗಳಿಸಿದರು. ಅಚ್ಚಪಂಡ ಮಿಥುನ್ 1 ವಿಕೆಟ್ ಗಳಿಸಿದರು.

ಮಹಿಳೆಯರ ವಿಭಾಗದಲ್ಲಿ ನಡೆದ ಕ್ರಿಕೆಟ್ ನ ಫೈನಲ್ ಪಂದ್ಯದಲ್ಲಿ ಮಣವಟ್ಟೀರ ತಂಡ 25 ರನ್ ಗಳಿಂದ ಮುಕ್ಕಾಟ್ಟೀರ(ಹರಿಹರ-ಬೆಳ್ಳೂರು) ತಂಡವನ್ನು ಸೋಲಿಸಿತು. ಮಣವಟ್ಟೀರ ತಂಡ ಬ್ಯಾಟಿಂಗ್ ಮಾಡಿ 6 ಓವರ್ ಗಳಲ್ಲಿ 60 ರನ್ ಗಳನ್ನು ಪೇರಿಸಿತು. ಮಣವಟ್ಟಿರ ಸಂಗೀತ 30, ಅರ್ಪಿತ 20 ಗಳಿಸಿದರು. ನಂತರ ಬ್ಯಾಟಿಂಗ್ ಮಾಡಿದ ಮುಕ್ಕಾಟ್ಟೀರ ತಂಡ 6 ಓವರ್ ಗಳಲ್ಲಿ 3 ವಿಕೆಟ್ ಗಳನ್ನು ಕಳೆದುಕೊಂಡು 34 ರನ್ ಗಳನ್ನು ಗಳಿಸಿ ರನ್ನರ್ ಪ್ರಶಸ್ತಿಗೆ ತೃಪ್ತಿಪಟ್ಟುಕೊಂಡಿತು.

ಈ ಬಾರಿ ನಡೆದ ಅರಮಣಮಾಡ ಕ್ರಿಕೆಟ್ ನಮ್ಮೆಯಲ್ಲಿ ಸುಮಾರು 313 ಕೊಡವ ಕುಟುಂಬ ತಂಡ ಪ್ರವೇಶದೊಂದಿಗೆ ಹೊಸ ದಾಖಲೆಯನ್ನು ನಿರ್ಮಿಸಿತು. ಇದೇ ಮೊದಲ ಬಾರಿಗೆ ಮಹಿಳಾ ಕ್ರಿಕೆಟ್ ಪಂದ್ಯವನ್ನು ಆಯೋಜಿಸಲಾಗಿದ್ದು, ಸುಮಾರು 49 ತಂಡಗಳು ಪಾಲ್ಗೊಂಡಿದ್ದು, ವಿಶೇಷವಾಗಿತ್ತು.

ವೈಯಕ್ತಿಕ ಪ್ರಶಸ್ತಿ ವಿವರ: ಪುರುಷರ ವಿಭಾಗದಲ್ಲಿ ಉದಯೋನ್ಮುಖ ಆಟಗಾರ- ಕೊಟ್ಟುಕತ್ತೀರ ಲೋಕೇಶ್ ತಿಮ್ಮಯ್ಯ, ಉತ್ತಮ ಫೀಲ್ಡರ್- ಜಮ್ಮಡ ತಾಶಿನ್ ತಮ್ಮಯ್ಯ, ಅತ್ಯುತ್ತಮ ಬೌಲರ್-ಅಚ್ಚಪಂಡ ನೀರೋಷ್(13 ವಿಕೆಟ್), ಉತ್ತಮ ಬ್ಯಾಟ್ಸ್‌ಮನ್-ಅಚ್ಚಪಂಡ ಮಿಥುನ್, ಪ್ಲೇಯರ್ ಆಫ್ ದಿ ಟೂರ್ನಮೆಂಟ್ -ನೆರವಂಡ ಪ್ರಶಾಂತ್, ಉತ್ತಮ ಶಿಸ್ತಿನ ತಂಡ ಮುಕ್ಕಾಟೀರ ಕುಂಜಿಲಗೇರಿ, ಮ್ಯಾನ್ ಆಫ್ ದಿ ಮ್ಯಾಚ್ ಪ್ರಶಸ್ತಿಯನ್ನು ನೆರವಂಡ ಪ್ರಶಾಂತ್ ಪಡೆದುಕೊಂಡರು.

ಮಹಿಳೆಯರ ವಿಭಾಗದಲ್ಲಿ ಅತ್ಯುತ್ತಮ ಶಿಸ್ತಿನ ತಂಡ- ಅಜ್ಜಿಕುಟ್ಟೀರ ಕುಟುಂಬ, ಅಪ್ ಕಮ್ಮಿಂಗ್ ಪ್ಲೇಯರ್ ಓಡಿಯಂಡ ರೋಹಿಣಿ, ಅತ್ಯುತ್ತಮ ಆಲ್ ರೌಂಡರ್- ಅರಮಣಮಾಡ ಟೀನಾ ನಾಚಪ್ಪ, ವುಮೆನ್ ಆಫ್ ದಿ ಸೀರೀಸ್ ಮಣವಟ್ಟೀರ ಸಂಗೀತಾ, ಉತ್ತಮ ಬ್ಯಾಟರ್-ಮುಕ್ಕಾಟೀರ ಅಂಜನಾ, ಅತ್ಯುತ್ತಮ ಬೌಲರ್-ಮನವಟ್ಟೀರ ಶ್ರುತಿ, ಬೆಸ್ಟ್ ಫೀಲ್ಡರ್ ಪ್ರಶಸ್ತಿಯನ್ನು ಮಾಳೇಟಿರ ಪಲ್ಲವಿ ಗಳಿಸಿದರು.

ಅರಮಣಮಾಡ ಕ್ರಿಕೆಟ್ ನಮ್ಮೆ 2024 ರ ಪುರುಷರ ವಿಭಾಗದಲ್ಲಿ ವಿಜೇತ ತಂಡಕ್ಕೆ 1 ಲಕ್ಷ ರು. ನಗದು ಹಾಗೂ ಟ್ರೋಫಿ, ದ್ವಿತೀಯ ಸ್ಥಾನ ಪಡೆದ ತಂಡಕ್ಕೆ 75 ಸಾವಿರ ರು. ನಗದು ಹಾಗೂ ಟ್ರೋಫಿ, ಮೂರನೇ ಸ್ಥಾನ ಪಡೆದ ತಂಡಕ್ಕೆ 50 ಸಾವಿರ ರು. ಹಾಗೂ ಟ್ರೋಫಿ, ನಾಲ್ಕನೇ ಸ್ಥಾನ ಪಡೆದ ತಂಡಕ್ಕೆ 25 ಸಾವಿರ ರು. ನಗದು ಹಾಗೂ ಟ್ರೋಫಿ ವಿತರಿಸಲಾಯಿತು.

ಮಹಿಳಾ ವಿಭಾಗದಲ್ಲಿ ವಿನ್ನರ್ ಮತ್ತು ರನ್ನರ್ ಅಪ್ ತಂಡಗಳ ಪ್ರತಿಯೊಬ್ಬ ಆಟಗಾರರಿಗೆ ತಂಡ ಟ್ರೋಫಿ ಮತ್ತು ವೈಯಕ್ತಿಕ ಟ್ರೋಫಿಯೊಂದಿಗೆ ಬೆಳ್ಳಿಯಲ್ಲಿ ಕೊಡವ ಸಾಂಪ್ರದಾಯಿಕ ಆಭರಣವಾದ ಕೊಕ್ಕೆ ತಾತಿಯನ್ನು ನೀಡಲಾಯಿತು.

Share this article