ಕನ್ನಡಪ್ರಭ ವಾರ್ತೆ ಅರಸೀಕೆರೆ
ಕಳೆದ ೬೦ ದಿನಗಳಿಂದ ನಗರದ ಜನರಿಗೆ ಶ್ರದ್ಧಾ ಭಕ್ತಿಯ ಕೇಂದ್ರವಾಗಿ ಸಾಂಸ್ಕೃತಿಕ ಕಾರ್ಯಕ್ರಮಗಳ ಮೂಲಕ ಮನರಂಜನೆಯ ರಸದೌತಣವನ್ನು ನೀಡುತ್ತಿದ್ದ 82ನೇ ವರ್ಷದ ಶ್ರೀ ಪ್ರಸನ್ನ ಗಣಪತಿ ವಿಸರ್ಜನಾ ಮಹೋತ್ಸವ ನ.17ರ ಶುಕ್ರವಾರ ಸಂಜೆ ೬ರಿಂದ ಶನಿವಾರ ರಾತ್ರಿಯವರೆಗೆ 2 ದಿನಗಳ ಕಾಲ ವಿಜೃಂಭಣೆಯಿಂದ ನೆರವೇರಲಿದೆ.ನಾಡಿನ ಹೆಸರಾದಂತಹ ಹರಿಕಥಾ ವಿದ್ವಾನ್‌ರಿಂದ ಪೌರಾಣಿಕ ಹರಿಕಥೆಗಳು ಮಠಾಧೀಶರಿಂದ ಧರ್ಮಜಾಗೃತಿ, ಸಮಾರಂಭದ ಮೂಲಕ ಧಾರ್ಮಿಕ ಚಿಂತನೆ ಮೂಡಿಸಿ ಖ್ಯಾತ ಹಿನ್ನಲೆ ಗಾಯಕರಿಂದ ಸಂಗೀತ ರಸದೌತಣ ನೀಡಿ ಹಾಸ್ಯೋತ್ಸವ, ಪೌರಾಣಿಕ ನಾಟಕ, ನೃತ್ಯ ಪ್ರದರ್ಶನ ಮೂಲಕ ರಾಷ್ಟ್ರ ಭಕ್ತಿಯನ್ನು ಮೂಡಿಸಿ ವಿವಿಧ ಮನರಂಜನೆಯ ಮೂಲಕ ಜನರ ಮನಸ್ಸಿಗೆ ಮುದ ನೀಡಿದ ಶ್ರೀ ಪ್ರಸನ್ನ ಗಣಪತಿಯವರನ್ನು 17 ಶುಕ್ರವಾರ ಉತ್ಸವ ಭವ್ಯ ಮಂಟಪ ಅಲಂಕೃತಗೊಂಡ ನಂತರ ಸಂಜೆ 6:30ಕ್ಕೆ ಉತ್ಸವ ಪ್ರಾರಂಭಗೊಳ್ಳಲಿದೆ. ಉತ್ಸವ ಬರುವ ರಸ್ತೆಗಳು ವಿದ್ಯುತ್ ದೀಪಗಳಿಂದ ಅಲಂಕೃತಗೊಳ್ಳಲಿದ್ದು ಮೈಸೂರು ದಸರಾ ನೆನಪಿಗೆ ತರುವ ಸಂಭ್ರಮ ನಗರದಲ್ಲಿ ಕಾಣಲಿದೆ.
17 ಶುಕ್ರವಾರ ಸಂಜೆ 6:30ಕ್ಕೆ ಶಾಸಕ ಕೆ.ಎಂ.ಶಿವಲಿಂಗೇಗೌಡ, ಮೆರವಣಿಗೆಗೆ ಚಾಲನೆ ನೀಡಲಿದ್ದು ವಿವಿಧ ಜಾನಪದ ಕಲಾತಂಡಗಳೊಂದಿಗೆ ನಗರದ ಪ್ರಮುಖ ರಾಜಬೀದಿಗಳಲ್ಲಿ ಭವ್ಯ ಮೆರವಣಿಗೆ ನಡೆಸಲಾಗುವುದು. ಮೆರವಣಿಗೆಯಲ್ಲಿ ಡಂಕಣಿ ಕೋಟೆ ಶಿವಶಕ್ತಿ ಕೀಲು ಕುದುರೆ ಸಂಘದಿಂದ ಕೀಲು ಕುದುರೆ, ಡೊಳ್ಳು ಕುಣಿತ, ರೋಡ್ ಆರ್ಕೆಸ್ಟ್ರಾ, ವೀರಭದ್ರ ಕುಣಿತ ಮತ್ತು ಭದ್ರಕಾಳಿ ಕುಣಿತ, ರಾಷ್ಟ್ರ ಪ್ರಶಸ್ತಿ ವಿಜೇತ ತಂಡದಿಂದ ತಮಟೆ ಚಮತ್ಕಾರ ಚಂಡೇವಾದ್ಯ, ಬೊಂಬೆ ಪ್ರದರ್ಶನ , ಕರಡೆ ವಾದ್ಯ, ವೀರಗಾಸೆ ಸೇರಿದಂತೆ ಇನ್ನಿತರ ಜಾನಪದ ಹಾಗೂ ಮನರಂಜನಾ ಕಾರ್ಯಕ್ರಮಗಳನ್ನು ಏರ್ಪಡಿಸಲಾಗಿದೆ. ಎರಡೂ ದಿನ ಬಿ.ಎಚ್ ರಸ್ತೆಯಲ್ಲಿನ ವೃತ್ತಗಳಲ್ಲಿ ಮಾತ್ರ ಡಿ ಜೆ ಇರಲಿದೆ.ಮೆರವಣಿಗೆಯು ಗಣಪತಿ ಪೆಂಡಾಲ್ ಹಿಂಭಾಗ ವೆಂಕಟೇಶ್ವರ ಕಲಾಭವನದ ಮುಂಭಾಗ ಸಂತೆಪೇಟೆ, ಶಿವಾಲಯ, ಪೇಟೆಬೀದಿ, ಮಾರ್ಕೇಟ್ ಚೌಕ, ಬಸವೇಶ್ವರ ವೃತ್ತ, ಸ್ಟೇಷನ್ ರೋಡ್, ಹಳೇ ಆರ್.ಎಂ.ಎಸ್.ಬೀದಿ, ಬಿ.ಹೆಚ್.ರಸ್ತೆ. ಯಜಮಾನ್ ರಂಗೇಗೌಡರ ಬೀದಿ, ಕರಿಯಮ್ಮನಗುಡಿ ಬೀದಿ, ಕುವೆಂಪು ವೃತ್ತ, ಸಾಯಿನಾಥ ರಸ್ತೆ ಲಕ್ಷ್ಮಿಪುರ ಕೃಪಿ ಉತ್ಪನ್ನ ಮಾರುಕಟ್ಟೆ ಸೇರಿದಂತೆ ನಗರದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ನಂತರ ಶನಿವಾರ ರಾತ್ರಿ ಕಂತೇನಹಳ್ಳಿ ಪ್ರವೇಶಿಸಲಿದೆ.
ಶನಿವಾರ ಸಂಜೆ 9 ಗಂಟೆಗೆ ತಾಲೂಕಿನ ವಡೇರಹಳ್ಳಿಯ ಕಾಳಿಕಾಂಬ ಪೈರ್ ವಕ್ಸ್ರ್ ಅವರಿಂದ ಭಾರಿ ಮದ್ದುಗುಂಡುಗಳ ಪ್ರದರ್ಶವನ್ನು ಏರ್ಪಡಿಸಲಾಗಿದ್ದು ನಂತರ ಮೂರ್ತಿಯನ್ನು ದೊಡ್ಡಕೆರೆಯಲ್ಲಿ ವಿಸರ್ಜಿಸಲಾಗುವುದು.