ನೀರಿನ ದಾಹ ತಣಿಸುತ್ತಿರುವ ಅರವಟಿಗೆಗಳು

KannadaprabhaNewsNetwork | Published : Apr 16, 2024 1:00 AM
Follow Us

ಸಾರಾಂಶ

ಬಿಸಿಲಿನ ತಾಪಮಾನದಿಂದ ಜನರು ಕಂಗಾಲಾಗಿದ್ದು, ಪಟ್ಟಣಕ್ಕೆ ಅನೇಕ ಕೆಲಸ ಕಾರ್ಯಗಳಿಗೆ ಬರುವಂತಹ ಸಾರ್ವಜನಿಕರಿಗೆ ಇಲ್ಲಿಯ ನೀರಿನ ಅರವಟಿಗೆಗಳು ಜನತೆಯ ದಾಹ ತಣಿಸುವಂತಹ ಕೆಲಸ ಮಾಡುತ್ತಿವೆ.

ಪಟ್ಟಣದ ಹಲವೆಡೆ ಸಂಘ-ಸಂಸ್ಥೆಗಳಿಂದ ಅರವಟಿಗೆ ಸ್ಥಾಪನೆ, ನೀರು ಪೂರೈಕೆ

ಪರಶಿವಮೂರ್ತಿ ದೋಟಿಹಾಳ

ಕನ್ನಡಪ್ರಭವಾರ್ತೆ ಕುಷ್ಟಗಿ

ಬಿಸಿಲಿನ ತಾಪಮಾನದಿಂದ ಜನರು ಕಂಗಾಲಾಗಿದ್ದು, ಪಟ್ಟಣಕ್ಕೆ ಅನೇಕ ಕೆಲಸ ಕಾರ್ಯಗಳಿಗೆ ಬರುವಂತಹ ಸಾರ್ವಜನಿಕರಿಗೆ ಇಲ್ಲಿಯ ನೀರಿನ ಅರವಟಿಗೆಗಳು ಜನತೆಯ ದಾಹ ತಣಿಸುವಂತಹ ಕೆಲಸ ಮಾಡುತ್ತಿವೆ.

ದಿನದಿಂದ ದಿನಕ್ಕೆ ಬಿಸಿಲಿನ ತಾಪ ಹೆಚ್ಚುತ್ತಿದೆ. ಪಟ್ಟಣ ಸೇರಿದಂತೆ ಸುತ್ತಮುತ್ತಲಿನ ಗ್ರಾಮೀಣ ಭಾಗಗಳಿಂದ ನಾನಾ ಕೆಲಸಗಳಿಗೆ ಪಟ್ಟಣಕ್ಕೆ ಆಗಮಿಸುವ ಸಾರ್ವಜನಿಕರಿಗೆ ಅಲ್ಲಲ್ಲಿ ಅರವಟಿಗೆ ಸ್ಥಾಪಿಸಿ ಕುಡಿಯುವ ನೀರಿನ ವ್ಯವಸ್ಥೆ ಕಲ್ಪಿಸಲಾಗಿದೆ.

ತಾಲೂಕಿನ ನಿಡಶೇಸಿಯ ಮಠದ ಅಭಿನವ ಕರಿಬಸವ ಶಿವಾಚಾರ್ಯರು ಪಟ್ಟಣದ ಪ್ರಮುಖ ವೃತ್ತಗಳಾದ ಬಸ್ ನಿಲ್ದಾಣದ ಮುಂಭಾಗ, ಕಾರ್ಗಿಲ್ ವೀರಯೋಧ ದಿ. ಮಲ್ಲಯ್ಯ ವೃತ್ತ, ಪೊಲೀಸ್‌ ಠಾಣೆಯ ಹತ್ತಿರ ಸೇರಿದಂತೆ ವಿವಿಧ ಸ್ಥಳಗಳಲ್ಲಿ ಹಾಗೂ ಕುಷ್ಟಗಿಯ ಇನ್ನರ್ ವೀಲ್ ಕ್ಲಬ್‌ನಿಂದ ತಹಸೀಲ್ದಾರ ಕಾರ್ಯಾಲಯದ ಹತ್ತಿರ ಹಾಗೂ ಪಟ್ಟಣದ ಉದ್ಯಮಿ ಸಿದ್ದಣ್ಣ ಪಟ್ಟಣಶೆಟ್ಟರ ಎಸ್‌ಬಿಐ ಬ್ಯಾಂಕ್ ಹತ್ತಿರ ನೀರಿನ ಅರವಟಿಗೆಯನ್ನು ಸ್ಥಾಪನೆ ಮಾಡಿ ಮಣ್ಣಿನ ಮಡಿಕೆ ಹಾಗೂ ಪ್ಲಾಸ್ಟಿಕ್‌ ಕ್ಯಾನ್‌ಗಳಲ್ಲಿ ನೀರು ತುಂಬಿಸುವ ಮೂಲಕ ಜನರ ದಾಹ ನೀಗಿಸುವ ಕಾರ್ಯ ಮಾಡುತ್ತಿದ್ದಾರೆ. ಇದರಿಂದ ನಿತ್ಯ ನೂರಾರು ಜನರಿಗೆ ಅನುಕೂಲವಾಗುತ್ತಿದೆ. ಪಟ್ಟಣದಲ್ಲಿರುವಂತಹ ತಹಸೀಲ್ದಾರ ಕಚೇರಿ, ಉಪ ನೊಂದಣಾಧಿಕಾರಿಗಳ ಕಚೇರಿ, ನಾನಾ ಕಚೇರಿಗಳಿಗೆ ಕಾರ್ಯಗಳ ನಿಮಿತ್ತ ಪಟ್ಟಣಕ್ಕೆ ಬರುವ ಸಾರ್ವಜನಿಕರು, ಕೂಲಿಕಾರರು, ಶಾಲಾ-ಕಾಲೇಜುಗಳಿಗೆ ಬರುವ ವಿದ್ಯಾರ್ಥಿಗಳು ಇದರ ಸದುಪಯೋಗ ಪಡೆದುಕೊಳ್ಳುತ್ತಿದ್ದಾರೆ.

ದುಬಾರಿಯಾದ ನೀರು:

ಪಟ್ಟಣದಲ್ಲಿ ಒಂದು 20 ಲೀ. ಕ್ಯಾನಿಗೆ ₹20-30 ಇದೆ. ಮೊದಲು ₹ 10 ಇತ್ತು. ಈಗ ಬೇಸಿಗೆ ಹಿನ್ನೆಲೆ ದರ ದುಬಾರಿಯಾಗಿದೆ. ಸಣ್ಣ ಪುಟ್ಟ ಹೋಟೆಲ್‌ಗಳಲ್ಲಿ ಕೇವಲ ನೀರು ಕೇಳಿದರೆ ಕೊಡಲು ಹಿಂದೆಮುಂದೆ ನೋಡುವ ಮನಸ್ಥಿತಿ ನಿರ್ಮಾಣವಾಗಿದೆ. ಊಟ, ತಿಂಡಿ, ಕಾಫಿಗೆ ಬರುವವರಿಗೆ ಮಾತ್ರ ನೀರು ಸಿಗುತ್ತಿದೆ. ಹೋಟೆಲ್‌ನವರು ಸಹ ಹಣ ಪಾವತಿಸಿ ನೀರನ್ನು ಹಾಕಿಸಿಕೊಳ್ಳುತ್ತಿರುವುದರಿಂದ ಪುಕ್ಕಟೆಯಾಗಿ ನೀರು ಕೊಡಲು ಹಿಂದೇಟು ಹಾಕುತ್ತಿದ್ದಾರೆ. ಇದರಿಂದ ಅರವಟಿಗೆಗಳ ನೀರು ಬಹುಪಾಲು ಮಂದಿಗೆ ಆಸರೆಯಾಗಿದೆ.

ಭಕ್ತರ ಸಹಕಾರ:

ಅಭಿನವ ಕರಿಬಸವ ಶಿವಾಚಾರ್ಯರು ಸ್ಥಾಪನೆ ಮಾಡಿರುವ ನೀರಿನ ಅರವಟಿಗೆಯಲ್ಲಿ ಭಕ್ತರು ನಿತ್ಯ ನೀರು ತುಂಬಿಸುವ ಕಾರ್ಯ ಮಾಡುತ್ತಿದ್ದು, ನೀರು ಕುಡಿಯಲು ಬರುವಂತಹ ಸಾರ್ವಜನಿಕರಿಗೆ ತೊಂದರೆಯಾಗದಂತೆ ನೋಡಿಕೊಂಡು ಹೋಗುತ್ತಿದ್ದಾರೆ.

ಪಟ್ಟಣದಲ್ಲಿ ಅಲ್ಲಲ್ಲಿ ಅರವಟಿಗೆಗಳ ಮೂಲಕ ಸಾವಿರಾರು ಜನರ ನೀರಿನ ದಾಹ ತೀರಿಸುವಂತಹ ಉತ್ತಮ ಕಾರ್ಯ ನಡೆಯುತ್ತಿದ್ದು, ಇದನ್ನು ಹಲವರು ಶ್ಲಾಘಿಸುತ್ತಿದ್ದಾರೆ.