ವರ್ಷಕ್ಕೆ 2 ಕೋಟಿ ಉದ್ಯೋಗ ಸೃಷ್ಟಿಯಾಗಿದೆಯೇ?: ಆಪ್‌ ಜಿಲ್ಲಾಧ್ಯಕ್ಷ ಶಿವಕುಮಾರಪ್ಪ

KannadaprabhaNewsNetwork |  
Published : Mar 18, 2024, 01:49 AM IST
17ಕೆಡಿವಿಜಿ1-ದಾವಣಗೆರೆಯಲ್ಲಿ ಭಾನುವಾರ ಆಮ್ ಆದ್ಮಿ ಪಕ್ಷದ ಜಿಲ್ಲಾಧ್ಯಕ್ಷ ಕೆ.ಎಸ್.ಶಿವಕುಮಾರಪ್ಪ ಸುದ್ದಿಗೋಷ್ಟಿಯಲ್ಲಿ ಮಾತನಾಡಿದರು. | Kannada Prabha

ಸಾರಾಂಶ

ಬೇಟಿ ಬಚಾವೋ, ಬೇಟಿ ಪಡಾವೋ ಎಂಬುದಾಗಿ ಘೋಷಣೆ ಕೂಗಿದ್ದಷ್ಟೇ ನರೇಂದ್ರ ಮೋದಿ ಸಾಧನೆ. ಆದರೆ, ದೇಶದ ಹೆಣ್ಣು ಮಕ್ಕಳ ರಕ್ಷಣೆಗೆ ಕ್ರಮ ಕೈಗೊಳ್ಳಲಿಲ್ಲ. ಕಪ್ಪು ಹಣದ ಹೆಸರಿನಲ್ಲಿ ದೇಶಾದ್ಯಂತ ನೋಟು ಅಮಾನ್ಯಗೊಳಿಸಿದ ಮೋದಿ ಸರ್ಕಾರವು ಎಷ್ಟು ಮೊತ್ತದ ಕಪ್ಪು ಹಣ ಇತ್ತು ಎಂಬುದು ಈ ವೆರೆಗೆ ಬಹಿರಂಗಪಡಿಸಲಿಲ್ಲ ಏಕೆ?

ಕನ್ನಡಪ್ರಭ ವಾರ್ತೆ ದಾವಣಗೆರೆ

ಲೋಕಸಭೆ ಚುನಾವಣೆಗೆ ಮುನ್ನ ಪ್ರಧಾನಿ ನರೇಂದ್ರ ಮೋದಿ ಸುಳ್ಳಿನ ಸರಮಾಲೆ ಹೇಳುತ್ತಾ ಭಾರತೀಯರ ವಂಚಿಸುತ್ತಿದ್ದಾರೆ ಎಂದು ಆಮ್ ಆದ್ಮಿ ಪಕ್ಷದ ಜಿಲ್ಲಾಧ್ಯಕ್ಷ ಕೆ.ಎಸ್.ಶಿವಕುಮಾರಪ್ಪ ಆರೋಪಿಸಿದ್ದಾರೆ.

ನಗರದಲ್ಲಿ ಭಾನುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಪ್ರತಿ ವರ್ಷ 2 ಕೋಟಿ ಉದ್ಯೋಗ ಸೃಷ್ಟಿ ಮಾಡುವುದಾಗಿ ಭರವಸೆ ನೀಡಿ 10 ವರ್ಷ ಕಳೆದರೂ ಉದ್ಯೋಗ ಸೃಷ್ಟಿಸಲಾಗದ ನರೇಂದ್ರ ಮೋದಿ ಸರ್ಕಾರವು ಉದ್ಯೋಗಗಳನ್ನೇ ಕಡಿತಗೊಳಿಸಿ ಸರ್ಕಾರಿ ಸ್ವಾಮ್ಯದ ಲಾಭದಾಯಕ ಸಂಸ್ಥೆಗಳ ದೊಡ್ಡ ದೊಡ್ಡ ಬಂಡವಾಳ ಶಾಹಿಗಳಿಗೆ ನೀಡುವ ಕೆಲಸ ಮಾಡುತ್ತಿದೆ. ರೈತರ ಆದಾಯ ದ್ವಿಗುಣ ಆಗುವುದಿರಲಿ, ಬೆವರಿನ ಶ್ರಮಕ್ಕೆ ತಕ್ಕ ಪ್ರತಿಫಲವೂ ಇಲ್ಲ ಎಂದು ದೂರಿದರು.

ಬೇಟಿ ಬಚಾವೋ, ಬೇಟಿ ಪಡಾವೋ ಎಂಬುದಾಗಿ ಘೋಷಣೆ ಕೂಗಿದ್ದಷ್ಟೇ ನರೇಂದ್ರ ಮೋದಿ ಸಾಧನೆ. ಆದರೆ, ದೇಶದ ಹೆಣ್ಣು ಮಕ್ಕಳ ರಕ್ಷಣೆಗೆ ಕ್ರಮ ಕೈಗೊಳ್ಳಲಿಲ್ಲ. ಕಪ್ಪು ಹಣದ ಹೆಸರಿನಲ್ಲಿ ದೇಶಾದ್ಯಂತ ನೋಟು ಅಮಾನ್ಯಗೊಳಿಸಿದ ಮೋದಿ ಸರ್ಕಾರವು ಎಷ್ಟು ಮೊತ್ತದ ಕಪ್ಪು ಹಣ ಇತ್ತು ಎಂಬುದು ಈ ವೆರೆಗೆ ಬಹಿರಂಗಪಡಿಸಲಿಲ್ಲ ಏಕೆ? ವಂಶ ಪಾರಂಪರ್ಯವಾಗಿ ರಾಜಕೀಯ ಮಾಡುವುದಕ್ಕೆ ಅವಕಾಶ ನೀಡುವುದಿಲ್ಲ ಅಂದಿದ್ದ ಮೋದಿ ಈಗ ಏನು ಮಾಡುತ್ತಿದ್ದಾರೆ. ಬಿಜೆಪಿಯಲ್ಲೇ ವಂಶ ಪಾರಂಪರ್ಯ ಪದ್ಧತಿ ಮುಂದುವರಿಸುತ್ತಿರುವುದು ಎಷ್ಟರಮಟ್ಟಿಗೆ ಸರಿ? ಎಂದು ಪ್ರಶ್ನಿಸಿದರು.

ನಿರಾಶ್ರಿತರು, ನಾಗರಿಕರಿಗೆ ಮನೆಗಳ ನಿರ್ಮಿಸಲು ಮೋದಿ ಸರ್ಕಾರದಿಂದ ಆಗಲಿಲ್ಲ. ಚುನಾವಣಾ ಬಾಂಡ್ ನೆಪದಲ್ಲಿ ಭ್ರಷ್ಟಾಚಾರ ಬೆಳೆಯಲು ಪರೋಕ್ಷವಾಗಿ ನರೇಂದ್ರ ಮೋದಿ ಕಾರಣವಾಗಿದ್ದಾರೆ. ಹಸಿವು ಮುಕ್ತ ರಾಷ್ಟ್ರಗಳ ಪಟ್ಚಿಯಲ್ಲಿ ಭಾರತ 111ನೇ ಸ್ಥಾನಕ್ಕೆ ಬಂದು ನಿಂತಿದೆ. ಇದೇನಾ ನರೇಂದ್ರ ಮೋದಿ ಸರ್ಕಾರ ಸಾಧನಗೆಳು, ಜನ ಪರ ಬದ್ಧತೆ ಎಂದು ಕಿಡಿಕಾದರು.

ಮಹಾದಾಯಿ ಭದ್ರಾ ಮೇಲ್ದಂಡೆ ಯೋಜನೆಗಳ ಕುರಿತಂತೆ ನರೇಂದ್ರ ಮೋದಿ ಸರ್ಕಾರ ನೀಡಿದ್ದ ಭರವಸೆಗಳು ಈಗಲೂ ಭರವಸೆಯಾಗಿಯೇ ಉಳಿದಿವೆ. ಈ ರೀತಿ ಸುಳ್ಳುಗಳ ಹೇಳಿ, 2024ರ ಚುನಾವಣೆಯಲ್ಲಿ ಮತ್ತೆ ಅಧಿಕಾರದ ಚುಕ್ಕಾಣಿ ಹಿಡಿಯಲು ನರೇಂದ್ರ ಮೋದಿ ಮುಂದಾಗಿದ್ದಾರೆ. ಈ ಸಲವೂ ದೇಶದ ಸಮಸ್ತ ಜನತೆಯ ವಂಚಿಸಲು ಮುಂದಾಗಿರುವ ಬಿಜೆಪಿಗೆ ಲೋಕಸಭೆ ಚುನಾವಣೆಯಲ್ಲಿ ಜಿಲ್ಲೆ, ರಾಜ್ಯ, ರಾಷ್ಟ್ರದ ಮತದಾರರು ತಕ್ಕ ಪಾಠ ಕಲಿಸಬೇಕು ಎಂದು ಶಿವಕುಮಾರಪ್ಪ ಹೇಳಿದರು.

ಪಕ್ಷದ ಮುಖಂಡರಾದ ಎಸ್.ಕೆ.ಆದಿಲ್ ಖಾನ್, ಸಿ.ಆರ್.ಅರುಣಕುಮಾರ, ಧರ್ಮನಾಯ್ಕ, ಕೆ.ರವೀಂದ್ರ ಇತರರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಮಾನಸಿಕ ಖಿನ್ನತೆ ಸ್ವಯಂ ಮೌಲ್ಯಮಾಪನಕ್ಕೆ ನಿಮ್ಹಾನ್ಸ್‌ ಆ್ಯಪ್‌
ಒಂದೇ ದಿನ ಜಡ್ಜ್‌ ಮುಂದೆ 60 ಪರೋಲ್‌ ಅರ್ಜಿ!