ಅಕ್ಕಿ ಅಕ್ರಮದಲ್ಲಿ ಬಡಪಾಯಿಗಳು ಬಲಿಪಶು?

KannadaprabhaNewsNetwork | Published : Dec 15, 2023 1:30 AM

ಸಾರಾಂಶ

ಅಕ್ಕಿ ಅಕ್ರಮದಲ್ಲಿ ಬಡಪಾಯಿಗಳು ಬಲಿಪಶು?ಸೂತ್ರಧಾರಿ ಪಾರಾಗಿಸಲು ಅಧಿಕಾರಿಗಳ ಸರಳ ಸೂತ್ರ । ಕಾರ್ಯವೈಖರಿ ಬಗ್ಗೆ ಅನುಮಾನ. ಚರ್ಚೆಗೆ ಗ್ರಾಸವಾದ ಬಂಧನ ಪ್ರಕರಣ

ಸೂತ್ರಧಾರಿ ಪಾರಾಗಿಸಲು ಅಧಿಕಾರಿಗಳ ಸರಳ ಸೂತ್ರ । ಕಾರ್ಯವೈಖರಿ ಬಗ್ಗೆ ಅನುಮಾನ । ಚರ್ಚೆಗೆ ಗ್ರಾಸವಾದ ಬಂಧನ ಪ್ರಕರಣಕನ್ನಡಪ್ರಭ ವಾರ್ತೆ ಯಾದಗಿರಿ/ಶಹಾಪುರ

ಜಿಲ್ಲೆಯ ಶಹಾಪುರದ ಸರ್ಕಾರಿ ಗೋದಾಮಿನಿಂದ 2 ಕೋಟಿ ರು.ಗಳಿಗೂ ಹೆಚ್ಚಿನ ಮೌಲ್ಯದ, 6 ಸಾವಿರ ಕ್ವಿಂಟಾಲ್‌ ಅಕ್ಕಿ ನಾಪತ್ತೆ ಪ್ರಕರಣಕ್ಕೆ ಸಂಬಂಧಿಸಿದಂತೆ 6 ಜನರನ್ನು ಪೊಲೀಸರು ಬಂಧಿಸಿ, ಸುಮಾರು 12.80 ಲಕ್ಷ ರು.ಗಳ ಹಣ ಜಪ್ತಿ ಮಾಡಿದ್ದಾರೆ. ಇಲಾಖೆ ವಿಚಾರಣೆ ಕೈಗೊಂಡಿದ್ದ ಜಿಲ್ಲಾಡಳಿತ ಕರ್ತವ್ಯಲೋಪ ಆರೋಪದಡಿ ನಾಲ್ವರನ್ನು ಅಮಾನತುಗೊಳಿಸಿ ಆದೇಶಿಸಿದೆ.

ಆದರೆ, ಅಕ್ಕಿ ಅಕ್ರಮದಲ್ಲಿ ಕೇಳಿಬರುತ್ತಿರುವ ಪ್ರಭಾವಿ ವ್ಯಕ್ತಿಗಳ ವಿಚಾರಣೆಗೆ ಅಧಿಕಾರಿಗಳು ಹಿಂದೇಟು ಹಾಕುತ್ತಿದ್ದು, ಅವರ ಪಾರು ಮಾಡಿಸಿ ಈ ಪ್ರಕರಣ ಕೊನೆಗೊಳಿಸಬೇಕೆಂಬ ಕಾರಣಕ್ಕೆ ಅಮಾಯಕರನ್ನು ಪ್ರಕರಣದಲ್ಲಿ ಸಿಲುಕಿಸುವ ಯತ್ನ ನಡೆಸಿದ್ದಾರೆ ಎಂಬ ಮಾತುಗಳು ಸಾರ್ವಜನಿಕ ವಲಯದಲ್ಲಿ ಚರ್ಚೆಗೆ ಗ್ರಾಸವಾಗಿವೆ.

ಜಪ್ತಿ ತೋರಿಸಲು (ರಿಕವರಿ) ಕೆಲ ಪಡಿತರ ಅಂಗಡಿಗಳ ಹಾಗೂ ಟ್ರಾನ್ಸ್‌ಪೋರ್ಟ್ ಕಂಪನಿಗಳ ಮಾಲೀಕರಿಗೆ ಒತ್ತಡ ಹೇರಲಾಗುತ್ತಿದೆ. ಇಂತಿಷ್ಟು ಅಕ್ಕಿ ಮೂಟೆಗಳು ಅಥವಾ ಹಣ ನೀಡದಿದ್ದರೆ ಈ ಪ್ರಕರಣದಲ್ಲಿ ಅವರನ್ನೇ ಆರೋಪಿಗಳನ್ನಾಗಿಸುವ ಬೆದರಿಕೆಗಳನ್ನೂ ಒಡ್ಡಲಾಗುತ್ತಿದೆ ಎಂದು ವಿಚಾರಣೆ ಎದುರಿಸಿದ್ದ ಕೆಲವರು ಹೊರಬಂದು ಅಳಲು ತೋಡಿಕೊಂಡಿದ್ದ ಬಗ್ಗೆ ಮಾತುಗಳು ಕೇಳಿಬಂದಿದ್ದವು.

ಮೊನ್ನೆ ಬೆಳಗಾವಿ ಅಧಿವೇಶನದಲ್ಲಿ ಅಕ್ಕಿ ಅಕ್ರಮದ ಬಗ್ಗೆ ಸದನದಲ್ಲಿ ಪ್ರಸ್ತಾಪಿಸಿದ್ದ ಗುರುಮಠಕಲ್‌ ಶಾಸಕ ಶರಣಗೌಡ ಕಂದಕೂರು, ಅಕ್ರಮದಲ್ಲಿ ಕೇಳಿಬಂದಿರುವ ವ್ಯಕ್ತಿಗೆ ಅಲ್ಲಿನ ಡಿವೈಎಸ್ಪಿ ಸನ್ಮಾನಿಸಿದ್ದಾರೆ. ಈಗ ಅದೇ ಡಿವೈಎಸ್ಪಿ ಹಾಗೂ ಕೆಲ ಅಧಿಕಾರಿಗಳು ಈ ಬಗ್ಗೆ ನಡೆಸುತ್ತಿರುವ ತನಿಖೆ ಮೇಲೆ ವಿಶ್ವಾಸವಿಲ್ಲವಾಗಿದ್ದು, ಎಲ್ಲ ಅಕ್ಕಿ ಅಕ್ರಮದ ಪ್ರಕರಣಗಳ ತನಿಖೆಯನ್ನು ಸಿಐಡಿಗೆ ವಹಿಸುವಂತೆ ಸರ್ಕಾರಕ್ಕೆ ಆಗ್ರಹಿಸಿದ್ದರು.

- - -

ಬಾಕ್ಸ್‌

6 ಜನರ ಬಂಧನ, ನಾಲ್ವರ ಅಮಾನತು

ಅಕ್ಕಿ ಅಕ್ರಮದಲ್ಲಿ ತನಿಖೆ ನಡೆಸುತ್ತಿರುವ ಪೊಲೀಸರು ಈವರೆಗೆ ಆರು ಜನರನ್ನು ಬಂಧಿಸಿ, ಅವರಿಂದ ಸುಮಾರು 12.80 ಲಕ್ಷ ರು.ಗಳನ್ನು ಜಪ್ತಿ ಮಾಡಿದ್ದಾರೆ. ಇನ್ನೊಂದೆಡೆ, ಇಲಾಖಾ ವಿಚಾರಣೆ ನಡೆಸಿದ್ದ ಜಿಲ್ಲಾಡಳಿತ, ನಾಲ್ವರನ್ನು ಅಮಾನತುಗೊಳಿಸಿ ಆದೇಶಿಸಿದೆ.

ಬಂಧಿತರು:

ಟಿಎಪಿಸಿಎಂಎಸ್ ಗೋದಾಮಿನ ಕಾರ್ಯನಿರ್ವಹಣಾಧಿಕಾರಿ ಶಿವಪ್ಪ, ಹಿಂದಿನ ಕಾರ್ಯನಿರ್ವಹಣಾಧಿಕಾರಿ ಹಾಗೂ ಹಾಲಿ ಸಲಹೆಗಾರ ಶಿವರಾಜ, ನ್ಯಾಯಬೆಲೆ ಅಂಗಡಿ ಮಾಲೀಕರಾದ ಶಹಾಪುರದ ನಬಿ, ಮಲ್ಲಣಗೌಡ ಹಾಗೂ ಮೆಹಬೂಬ್‌ ತಾರಕಾಶ್‌ ಹಾಗೂ ಅಕ್ಕಿ ವ್ಯಾಪಾರಿ ವೆಂಕಟೇಶ.

- - -

ಅಮಾನತುಗೊಂಡವರು:

ಶಹಾಪುರ ಆಹಾರ ಇಲಾಖೆ ಶಿರಸ್ತೇದಾರರಾದ ಮಂಜುಳಾ, ಶಹಾಪುರ ಆಹಾರ ನಿರೀಕ್ಷಕರಾದ ವಿಜಯರೆಡ್ಡಿ ಹಾಗೂ ಜಂಬಯ್ಯ ಮತ್ತು ವಡಗೇರಾ ಆಹಾರ ನಿರೀಕ್ಷಕ ಬಸವರಾಜ್‌.

- - -

ಕೋಟ್‌:

ಶಹಾಪುರದ ಪ್ರವಾಸಿ ಮಂದಿರದಲ್ಲಿ ವಿಚಾರಣೆ ನೆಪದಲ್ಲಿ ಕೆಲವರನ್ನು ಕರೆಯಿಸಿಕೊಂಡು ಅವರ ವಿರುದ್ಧ ಕೇಸು ಜಡಿಯುವ ಬೆದರಿಕೆ ಹಾಕಲಾಗುತ್ತಿದೆ. ಹಣ ಹಾಗೂ ಅಕ್ಕಿ ಮೂಟೆ ನೀಡುವಂತೆ ಒತ್ತಡ ಹೇರಲಾಗುತ್ತಿದೆ. ಸಿಐಡಿ ತನಿಖೆಗೆ ಇದನ್ನು ಒಪ್ಪಿಸಿದರೆ ನೈಜ ಬಯಲಾಗಲಿದೆ.

-ಚೆನ್ನಪ್ಪ ಆನೆಗುಂದಿ, ಪ್ರಾಂತ ರೈತ ಸಂಘದ ಜಿಲ್ಲಾಧ್ಯಕ್ಷ.

- - - -

(14ವೈಡಿಆರ್‌13)

14ವೈಡಿಆರ್12 : ಶಹಾಪುರದ ಟಿಎಪಿಸಿಎಂಎಸ್‌ ಗೋದಾಮು.

- - - -

Share this article