ಮಳೆ ನೀರಷ್ಟೇ ಹರಿಯಬೇಕಿದ್ದ ರಾಜಕಾಲುವೆಗಳಿಗೆ ನಗರದ ಹಲವು ಬಡಾವಣೆಗಳ ಒಳಚರಂಡಿ ನೀರೂ ಬಂದು ಸೇರುತ್ತಿದೆ. ಹೀಗಾಗಿ, ಕೆಲ ರಾಜಕಾಲುವೆಗಳು ‘ಕೊಳಚೆ ಕಾಲುವೆ’ಗಳಾಗಿವೆ.
ಕೋಲಾರ : ಇನ್ನೇನು ಕೆಲವೇ ದಿನಗಳಲ್ಲಿ ಮುಂಗಾರುಮಳೆ ಆರಂಭವಾಗಲಿದೆ, ಮಳೆಯಿಂದ ಸಂಭವಿಸಬಹುದಾದ ಅನಾಹುತಗಳನ್ನು ತಡೆಯಲು ಕೋಲಾರ ನಗರಸಭೆ ಯಾವುದೇ ಸಿದ್ಧತೆಗಳನ್ನು ಮಾಡಿಕೊಂಡಂತಿಲ್ಲ.
ನಗರದ ಚರಂಡಿಗಳು, ಕಾಲುವೆಗಳು, ರಾಜಕಾಲುವೆಗಳು ಕಳೆಗಿಡ ಬೆಳೆದು, ತ್ಯಾಜ್ಯ ರಾಶಿಗಳಿಂದ ಹೂಳು ತುಂಬಿವೆ. ಹೆಚ್ಚು ಮಳೆಯಾದಾಗ ನೀರು ಸರಾಗವಾಗಿ ಹರಿಯಲು ಜಾಗವಿಲ್ಲದೇ ರಸ್ತೆಗಳ ಮೇಲೆ ಹರಿದು ಮನೆಗಳಿಗೆ ನುಗ್ಗಿದ ನಿದರ್ಶನಗಳಿದ್ದರೂ ಸಂಬಂಧಪಟ್ಟ ಅಧಿಕಾರಿಗಳು, ಸಿಬ್ಬಂದಿಯ ನಿರ್ಲಕ್ಷ್ಯ ಮುಂದುವರೆದಿರುವುದು ಬೇಸರದ ಸಂಗತಿಯಾಗಿದೆ. ಪ್ರತಿ ವರ್ಷ ಈ ಸಮಸ್ಯೆಯು ಪುನರಾವರ್ತಿಸುತ್ತಿದೆ. ಚರಂಡಿಗಳನ್ನು ಸ್ವಚ್ಛಗೊಳಿಸಿ ಹಲವಾರು ತಿಂಗಳುಗಳೇ ಕಳೆದು ಹೋಗಿವೆ. ಈ ಕುರಿತು ನಗರಸಭೆಯು ಪಂಚೇಂದ್ರೀಯಗಳನ್ನು ಕಳೆದುಕೊಂಡಂತಿದೆ. ಚರಂಡಿಗಳಲ್ಲಿ ಹೂಳು, ಪ್ಲಾಸ್ಟಿಕ್ ತುಂಬಿಕೊಂಡಿದ್ದು, ಸೊಳ್ಳೆ ಉತ್ಪಾದನೆಯ ಕೇಂದ್ರವಾಗಿವೆ. ಸಾಂಕ್ರಾಮಿಕ ರೋಗಗಳನ್ನು ಹರಡುವ ಫ್ಯಾಕ್ಟರಿಗಳಾಗಿವೆ. ನಗರದಲ್ಲಿನ ಬಹುತೇಕ ಬಡಾವಣೆಗಳ ನಿವಾಸಿಗಳ ಪಾಲಿಗೆ ನಿತ್ಯ ಬದುಕು ನರಕವಾಗಿದ್ದು, ಸಂಕಷ್ಟ ಹೇಳ ತೀರದಾಗಿದೆ.
ಮುಂಗಾರು ಪ್ರವೇಶಕ್ಕೂ ಮುನ್ನವೇ ಕಾಮಗಾರಿ ನಡೆದರೆ ಅನಾಹುತ ತಪ್ಪಿಸಬಹುದು. ನಗರಸಭೆಗೆ ಮಾತ್ರ ನಮ್ಮ ಗೋಳು ಕೇಳಿದಂತಿಲ್ಲ. ಕಾಲುವೆಗಳ ಸ್ವಚ್ಛತೆ ಬಗ್ಗೆ ಗಮನ ಹರಿಸಿಲ್ಲ. ಕಳೆದ ಒಂದು ವರ್ಷದಿಂದ ಇದೇ ಗೋಳಾಗಿದೆ ಎಂದು ನಾಗರಿಕರು ನಗರಸಭೆಯ ಅಧಿಕಾರಿಗಳಿಗೆ ಹಾಗೂ ವಾರ್ಡಿನ ಜನಪ್ರತಿನಿಧಿಗಳ ಕಾರ್ಯವೈಖರಿ ಬಗ್ಗೆ ಬೇಸರ ವ್ಯಕ್ತಪಡಿಸುತ್ತಾರೆ.
ಈ ಸಂಬಂಧ ನಗರಸಭೆ ಆಯುಕ್ತ ಶಿವಾನಂದ ಮತ್ತು ಇತರ ಅಧಿಕಾರಿಗಳು, ಸಿಬ್ಬಂದಿಯನ್ನು ವಿಚಾರಿಸಿದರೆ ಚರಂಡಿ, ಕಾಲುವೆ ಸ್ವಚ್ಛತಾ ಕಾರ್ಯ ಪ್ರಗತಿಯಲ್ಲಿದೆ ಎಂದು ಬಾಯಿಪಾಠ ಒಪ್ಪಿಸುತ್ತಾರೆ. ಇಡೀ ಕೋಲಾರದ ೩೫ ವಾರ್ಡಗಳನ್ನು ಪರಿಶೀಲಿಸಿದರೂ ಒಂದು ಚರಂಡಿಯೂ ಸ್ವಚ್ಛವಾಗಿಲ್ಲ.
ರಹಮತ್ ನಗರ, ಕೆಎಸ್‌ಆರ್‌ಟಿಸಿ ಡಿಪೋ ಹಿಂಭಾಗ, ಜಿಲ್ಲಾಧಿಕಾರಿ ಹಳೆ ಕಚೇರಿ ಹಿಂಭಾಗ, ಮಹಿಳಾ ಸರ್ಕಾರಿ ಹಾಸ್ಟೆಲ್ ಪಕ್ಕ, ಇಟಿಸಿಎಂ ಆಸ್ಪತ್ರೆ, ಕುವೆಂಪು ಪಾರ್ಕ್, ಎಸ್.ಎನ್.ಆರ್. ಆಸ್ಪತ್ರೆ ಸಮೀಪ ಸೇರಿ ಹಲವೆಡೆ ರಾಜಕಾಲುವೆಗಳಲ್ಲಿ ಹೂಳು, ತ್ಯಾಜ್ಯ ತುಂಬಿಕೊಂಡಿದೆ. ಪ್ರಮುಖ ರಸ್ತೆಯ ಬದಿಯಲ್ಲಿರುವ ಈ ರಾಜಕಾಲುವೆಗಳೇ ಈ ದುಃಸ್ಥಿತಿಯಲ್ಲಿದ್ದರೆ, ಇನ್ನು ಬಡಾವಣೆಗಳ ಒಳಭಾಗಗಳಲ್ಲಿನ ಚರಂಡಿಗಳ ಬಗ್ಗೆ ಯಾರೂ ಕೇಳುವವರಿಲ್ಲ. ನಗರಸಭೆ ಅಧಿಕಾರಿಗಳು ಹಾಗೂ ಸಿಬ್ಬಂದಿಯು ಸ್ವಚ್ಛತೆಗೂ, ತಮಗೂ ಸಂಬಂಧವೇ ಇಲ್ಲವೇನೋ ಎಂಬಂತೆ ವರ್ತಿಸುತ್ತಿದ್ದಾರೆ.
ಮಳೆ ನೀರಷ್ಟೇ ಹರಿಯಬೇಕಿದ್ದ ರಾಜಕಾಲುವೆಗಳಿಗೆ ನಗರದ ಹಲವು ಬಡಾವಣೆಗಳ ಒಳಚರಂಡಿ ನೀರೂ ಬಂದು ಸೇರುತ್ತಿದೆ. ಹೀಗಾಗಿ, ಕೆಲ ರಾಜಕಾಲುವೆಗಳು ‘ಕೊಳಚೆ ಕಾಲುವೆ’ಗಳಾಗಿವೆ. ಹೆಚ್ಚಿನ ಕಾಲುವೆಗಳು, ಮೋರಿಗಳು ಒತ್ತುವರಿಯಾಗಿದ್ದು, ಅವುಗಳಿಗೆ ಅಂಟಿಕೊಂಡು ಮನೆ, ಕಟ್ಟಡ, ಉದ್ಯಾನವನ ನಿರ್ಮಿಸಲಾಗಿದೆ. ಕೆಲವೆಡೆ ಆಟದ ಮೈದಾನವನ್ನಾಗಿ ಮಾರ್ಪಡಿಸಿಕೊಂಡಿದ್ದಾರೆ.
ಈ ಹಿಂದೆ ಭಾರೀ ಮಳೆಯಿಂದಾಗಿ ನ್ಯಾಯಾಲಯದ ಹಿಂದಿನ ಬಡಾವಣೆಗಳು, ಚಿನ್ನಾಪುರ ಗ್ರಾಮ ಹಾಗೂ ಅಮಾನಿಕೆರೆಯ ರಾಜಕಾಲುವೆಯ ಬಳಿ ಇರುವ ಗಾಂಧಿನಗರದ ಮನೆಗಳಿಗೆ ನೀರು ನುಗ್ಗಿತ್ತು. ಆಗ ಜಿಲ್ಲಾಧಿಕಾರಿ ಮತ್ತು ಅಧಿಕಾರಿಗಳು ಕ್ರಮದ ಭರವಸೆ ನೀಡಿದ್ದರು. ಆದರೆ, ಈವರೆಗೂ ಯಾವುದೇ ಕ್ರಮ ಕೈಗೊಂಡಿಲ್ಲ ಎಂಂಬುದು ಬಡಾವಣೆಯ ನಿವಾಸಿಗಳ ಆರೋಪವಾಗಿದೆ.
ಇಂಥಹ ಬೇಜವಾಬ್ದಾರಿ ನಗರಸಭೆ ಅಧ್ಯಕ್ಷರು, ಸದಸ್ಯರು, ಅಧಿಕಾರಿಗಳು, ಜನಪ್ರತಿನಿಧಿಗಳನ್ನು ನಗರದ ಜನತೆ ಈವರೆಗೆ ಕಂಡಿಲ್ಲ ಎಂಬ ಮಾತುಗಳು ಸಾರ್ವಜನಿಕರ ಬಾಯಿಂದ ಕೇಳಿ ಬರುತ್ತಿವೆ.ಇನ್ನು ರಸ್ತೆಗಳನ್ನು ಕೇಳುವಂತಯೇ ಇಲ್ಲ. ಗುಡ್ಡಾಗಾಡುಗಳ ರಸ್ತೆಗಳೇ ಎಷ್ಟೋ ವಾಸಿ ಎಂಬಂತೆ ಇದೆ. ಹೆಜ್ಜೆ ಹೆಜ್ಜೆಗೂ ಹಳ್ಳ- ಕೊಳ್ಳಗಳು ತುಂಬಿವೆ. ಇನ್ನು ಮಳೆ ಬಂದರೆ ದೇವರೇ ಗತಿ, ಅಪಘಾತಗಳಾಗಿ ಸಾರ್ವಜನಿಕರು ಕೈ, ಕಾಲು ಮುರಿದುಕೊಳ್ಳುವುದು ಖಚಿತವಾಗಿದೆ. ಪ್ರಜ್ಞಾವಂತ ಸಾರ್ವಜನಿಕರು ಇಂತಹ ಅವ್ಯವಸ್ಥೆಗಳ ವಿರುದ್ಧ ಪಂಚೇಂದ್ರೀಯಗಳನ್ನು ಕಳೆದುಕೊಂಡಿರುವ ಅಧಿಕಾರಿಗಳನ್ನು ಪ್ರಶ್ನಿಸಿ ಚುರುಕು ಮುಟ್ಟಿಸದಿದ್ದರೆ ಇಂತಹ ಕರ್ಮಗಳನ್ನು ಅನುಭವಿಸಬೇಕಾಗಿರುವುದು ಅನಿವಾರ್ಯವಾಗಿದೆ.
ರಸ್ತೆಬದಿ ಪರವಾನಿಗೆಯಿಲ್ಲದೇ ತಲೆಯೆತ್ತಿರುವ ಅಂಗಡಿಗಳು:
ಇತ್ತೀಚೆಗೆ ಜಿಲ್ಲಾ ಕೇಂದ್ರದಲ್ಲಿ ಸಾರ್ವಜನಿಕರು ಓಡಾಡುವ ರಸ್ತೆ ಬದಿಯ ಪುಟ್‌ಪಾತ್‌ಗಳ ಮೇಲೆ ನಗರಸಭೆಯಿಂದ ಯಾವುದೇ ಪರವಾನಗಿಯಿಲ್ಲದೇ ತಾತ್ಕಾಲಿಕ ಅಂಗಡಿಗಳು ನಿರ್ಮಾಣವಾಗುತ್ತಿರುವುದರಿಂದ ಸಾರ್ವಜನಿಕರು ಓಡಾಡಲು ತೊಂದರೆಪಡುವಂತಾಗಿದೆ. ನಡುರಸ್ತೆಯಲ್ಲಿ ಸಾರ್ವಜನಿಕರು ನಡೆದಾಡುವಾಗ ವಾಹನಗಳು ಓಡಾಡಲು ಅಡಚಣೆಯಾಗಿ ಟ್ರಾಫಿಕ್ ಜಾಮ್ ಆಗುತ್ತಿದೆ, ಇಷ್ಟೆಲ್ಲಾ ಸಮಸ್ಯೆಗಳು ಜಿಲ್ಲಾ ಕೇಂದ್ರದಲ್ಲಿ ತಾಂಡವವಾಡುತ್ತಿದ್ದರೂ ಜಿಲ್ಲಾಡಳಿತ ಹಾಗೂ ನಗರಸಭೆ ಅಧಿಕಾರಿಗಳು ಕಣ್ಣುಮುಚ್ಚಿ ಕುಳಿತಿರುವುದು ವಿಪರ್ಯಾಸವಾಗಿದೆ.
ಈ ಹಿಂದೆ ರಂಗಮಂದಿರ ಹಾಗೂ ನಗರದ ವಿವಿಧ ಕಡೆ ಅನಧಿಕೃತವಾಗಿ ನಿರ್ಮಾಣಗೊಂಡಿದ್ದ ಅಂಗಡಿಗಳನ್ನು ತೆರವುಗೊಳಿಸುವ ಮೂಲಕ ಸಾರ್ವಜನಿಕರಿಗೆ ಹಾಗೂ ವಾಹನಗಳ ಪಾರ್ಕಿಂಗ್ ಗೆ ಅನುಕೂಲ ಮಾಡಿಕೊಡಲಾಗಿತ್ತು, ಹಿಂದಿನ ನಗರಸಭೆ ಆಯುಕ್ತ ಶ್ರೀಕಾಂತ್ ವರ್ಗಾವಣೆಯಾದ ನಂತರ ಪುಟ್‌ಬಾತ್ ಅಂಗಡಿಗಳು ಮತ್ತೆ ತಲೆಯೆತ್ತಿರುವುದರಿಂದ ಸಾರ್ವಜನಿಕರಿಗೆ ಓಡಾಡಲು ಕಷ್ಟಕರವಾಗುತ್ತಿದೆ.