ಕನ್ನಡಪ್ರಭ ವಾರ್ತೆ ಬೆಂಗಳೂರು
ಘಟನೆ ಕುರಿತು ಬುಧವಾರ ಮಾಧ್ಯಮಗಳಲ್ಲಿ ವರದಿ ಪ್ರಸಾರವಾದ ಬೆನ್ನಲ್ಲೇ ಮುಖ್ಯ ಕಾರ್ಯದರ್ಶಿಗೆ ಕರೆ ಮಾಡಿದ ಕೇಂದ್ರ ಸಚಿವರು, ಮಹಿಳಾ ಅಧಿಕಾರಿಯನ್ನು ಕೀಳುಮಟ್ಟದಲ್ಲಿ ನಿಂದಿಸಿದ್ದರ ಬಗ್ಗೆ ಆಕ್ರೋಶ ಹೊರಹಾಕಿದ್ದಾರೆ.
ತಾವು ಒಬ್ಬ ಮಹಿಳಾ ಅಧಿಕಾರಿ ಆಗಿದ್ದು, ಉನ್ನತ ಸ್ಥಾನ ಅಲಂಕರಿಸುವ ತಮ್ಮ ಅಧೀನದಲ್ಲಿ ಕರ್ತವ್ಯ ನಿರ್ವಹಿಸುವ ಮಹಿಳಾ ಅಧಿಕಾರಿಗೆ ಧಮ್ಕಿ ಹಾಕಿ, ಅಸಹ್ಯ ಪದಗಳನ್ನು ಬಳಸಿ ನಿಂದಿಸಿರುವ ಪ್ರಕರಣ ಖಂಡನೀಯ. ಈ ಸರ್ಕಾರದಲ್ಲಿ ಕಾನೂನುಬದ್ಧವಾಗಿ ಕರ್ತವ್ಯ ನಿರ್ವಹಿಸುವ ಅಧಿಕಾರಿಗಳಿಗೆ ರಕ್ಷಣೆ ಇಲ್ಲವೇ ಎಂದು ಮುಖ್ಯ ಕಾರ್ಯದರ್ಶಿ ಅವರನ್ನು ಕುಮಾರಸ್ವಾಮಿ ಪ್ರಶ್ನಿಸಿದ್ದಾರೆ.ಒಬ್ಬ ಮಹಿಳಾ ಅಧಿಕಾರಿಗೆ ಈ ರೀತಿ ಅವಾಚ್ಯ ಶಬ್ದಗಳಿಂದ ನಿಂದಿಸಿದರೆ ಹೇಗೆ? ನೀವು ಕೂಡ ಮಹಿಳೆ. ಮಹಿಳಾ ಅಧಿಕಾರಿಗಳ ಮೇಲೆ ನಡೆಯುತ್ತಿರುವ ಇಂಥ ದೌರ್ಜನ್ಯಗಳನ್ನು ಸಹಿಸಬಾರದು. ಮಹಿಳಾ ಅಧಿಕಾರಿಗಳ ರಕ್ಷಣೆ ಸರ್ಕಾರದ ಹೊಣೆ. ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ, ತಪ್ಪಿತಸ್ಥರ ವಿರುದ್ಧ ತಕ್ಷಣವೇ ಕಾನೂನು ಕ್ರಮ ಜರುಗಿಸುವಂತೆ ಕೇಂದ್ರ ಸಚಿವರು ಒತ್ತಾಯಿಸಿದ್ದಾರೆ.ಪದೇ ಪದೆ ದೌರ್ಜನ್ಯ:
ಮಹಿಳಾ ಅಧಿಕಾರಿಗಳ ಮೇಲೆ ಪದೇಪದೆ ಈ ರೀತಿ ದೌರ್ಜನ್ಯಗಳು ನಡೆಯುತ್ತಿವೆ. ಅಧಿಕಾರ ಇರಲಿ, ಇಲ್ಲದಿರಲಿ ಅಧಿಕಾರಿಗಳಿಗೆ ಗೌರವ ನೀಡಬೇಕು. ಅದರಲ್ಲೂ ಮಹಿಳಾ ಅಧಿಕಾರಿಯೊಬ್ಬರ ಮೇಲೆ ಈ ರೀತಿ ನಡೆ ಖಂಡನೀಯ ಎಂದು ಕುಮಾರಸ್ವಾಮಿ ಹೇಳಿದ್ದಾರೆ.