ಒಗ್ಗೂಡಿದರೆ ಬಡಾವಣೆ ಅಭಿವೃದ್ಧಿ ಸಾಧ್ಯ: ಜ್ಯೋತಿಗಣೇಶ್‌

KannadaprabhaNewsNetwork | Updated : Dec 26 2023, 01:32 AM IST

ಸಾರಾಂಶ

ತುಮಕೂರಿನ 26ನೇ ವಾರ್ಡಿನಲ್ಲಿ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮ

ಕನ್ನಡ ರಾಜ್ಯೋತ್ಸವ ಕಾರ್ಯಕ್ರಮಕ್ಕೆ ಚಾಲನೆ ನೀಡಿದ ಜಿ.ಬಿ. ಜ್ಯೋತಿಗಣೇಶ್‌

ಕನ್ನಡಪ್ರಭ ವಾರ್ತೆ ತುಮಕೂರು

ನಾಗರಿಕರು, ಜನಪ್ರತಿನಿಧಿಗಳು ಒಗ್ಗೂಡಿ ಕೆಲಸ ಮಾಡಿದರೆ ಬಡಾವಣೆಯ ಅಭಿವೃದ್ಧಿ ಸಾಧ್ಯ ಎಂಬುದಕ್ಕೆ ನಗರದ 26ನೇ ವಾರ್ಡು ಸಾಕ್ಷಿಯಾಗಿದ್ದು, ಅಶೋಕ ನಗರ ನಾಗರಿಕ ಹಿತರಕ್ಷಣಾ ಸಮಿತಿ ಹಾಗೂ ಇಲ್ಲಿನ ಕಾರ್ಪೋರೇಟರ್ ಇಬ್ಬರೂ ಒಗ್ಗೂಡಿ ಕೆಲಸ ಮಾಡಿದ ಪರಿಣಾಮ ಶೇ.90ರಷ್ಟು ಅಭಿವೃದ್ಧಿ ಕಾರ್ಯಗಳು ಈ ವಾರ್ಡಿನಲ್ಲಿ ನಡೆದಿವೆ ಎಂದು ತುಮಕೂರು ನಗರ ಶಾಸಕ ಜಿ.ಬಿ. ಜೋತಿಗಣೇಶ್ ತಿಳಿಸಿದ್ದಾರೆ.

ನಗರದ ಅಶೋಕನಗರ ಬಡಾವಣೆಯ ಆಜಾದ್ ಚಂದ್ರಶೇಖರ್ ಪಾರ್ಕಿನಲ್ಲಿ ಅಶೋಕನಗರ ನಾಗರಿಕರ ಹಿತರಕ್ಷಣಾ ಸಮಿತಿ ಹಾಗೂ 26ನೇ ವಾರ್ಡು ಕನ್ನಡ ರಾಜ್ಯೋತ್ಸವ ಸಮಿತಿ ವತಿಯಿಂದ ಆಯೋಜಿಸಿದ್ದ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.

ವಾರ್ಡಿನಲ್ಲಿ ವರ್ಷವಿಡಿ ಬಡಾವಣೆಯ ಎಲ್ಲಾ ನಾಗರಿಕರು ಸೇರಿ ಒಂದಿಲೊಂದು ಧಾರ್ಮಿಕ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳ ಜರುಗುತ್ತಿರುವುದನ್ನು ಕಾಣಬಹುದು. ಇದಕ್ಕೆ ನಾಗರಿಕ ಹಿತರಕ್ಷಣಾ ಸಮಿತಿ ಹಾಗೂ ವಾರ್ಡಿನ ಕಾರ್ಪೋರೇಟರ್ ನಡುವೆ ಇರುವ ಬಾಂಧವ್ಯ ಕಾರಣ. ಇದು ಬೇರೆ ವಾರ್ಡುಗಳಿಗೆ ಮಾದರಿ ಎಂದರು.

ಸ್ಪೂರ್ತಿ ಡೆವಲಪರ್‌ನ ಎಸ್.ಪಿ. ಚಿದಾನಂದ್ ಮಾತನಾಡಿ, ನಾಗರಿಕರ ಸಮಿತಿಗಳು ಹೆಚ್ಚು ಸಕ್ರಿಯವಾದಷ್ಟು ಸಮಸ್ಯೆಗಳಿಂದ ಮುಕ್ತಿ ಕಾಣಬಹುದು ಎಂಬುದಕ್ಕೆ ಅಶೋಕ ನಗರ ನಾಗರಿಕ ಹಿತರಕ್ಷಣಾ ಸಮಿತಿ ಮಾದರಿಯಾಗಿದೆ. ಎಲ್ಲಾ ವರ್ಗದ ಜನರು ಒಗ್ಗೂಡಿ ಬಡಾವಣೆಯ ಅಭಿವೃದ್ಧಿಗೆ ದುಡಿಯುತ್ತಿರುವುದು ಸಂತಸವನ್ನು ಉಂಟು ಮಾಡಿದೆ. ನಾಗರಿಕ ಸಮಿತಿ ಧಾರ್ಮಿಕ, ಸಾಂಸ್ಕೃತಿಕ ಕಾರ್ಯಕ್ರಮಗಳ ಜೊತೆಗೆ, ಯುವಜನರಿಗೆ ಕೌಶಲ್ಯಾಭಿವೃದ್ಧಿ ತರಬೇತಿ ಕಾರ್ಯಕ್ರಮಗಳನ್ನು ಜೋಡಿಸಿಕೊಂಡರೆ ಹೆಚ್ಚು ಅನುಕೂಲವಾಗಲಿದೆ. ನಿರುದ್ಯೋಗ ಸಮಸ್ಯೆ ಹೆಚ್ಚಿದೆ. ನಿಮ್ಮಿಂದ ನಾಲ್ಕು ಜನರಿಗೆ ಅನುಕೂಲವಾದರೆ ಅದು ಮತ್ತಷ್ಟು ಜನರಿಗೆ ಸಹಕಾರಿಯಾಗಲಿದೆ ಎಂದರು.

ಮಹಾಕಾವ್ಯಗಳ ಪ್ರವಚನಕಾರ ಮುರುಳಿಕೃಷ್ಣ ಮಾತನಾಡಿ, ಕನ್ನಡ ಎಂಬುದು ಕೇವಲ ಭಾಷೆಯಲ್ಲ. ಅದು ಕನ್ನಡಿಗರ ಅಸ್ಮಿತೆ. ಈ ನಾಡನ್ನು ಆಳಿದ ರಾಜ ಮಹಾರಾಜು, ದಳಪತಿಗಳು, ಸಾಮಂತರು, ಪಾಳ್ಳೇಗಾರರುಗಳು ತಮ್ಮ ಆಡಳಿತ ಕಾಲದಲ್ಲಿ ಕನ್ನಡ ಭಾಷೆಯನ್ನು ಶ್ರೀಮಂತಗೊಳಿಸಿ, ಮುಂದಿನ ಪೀಳಿಗೆಗೆ ವರ್ಗಾಯಿಸಿದ್ದಾರೆ. ಅವರನ್ನು ಈ ಸಂದರ್ಭದಲ್ಲಿ ನೆನಪು ಮಾಡಿಕೊಳ್ಳಬೇಕಿದೆ. ನವೆಂಬರ್ ಮಾಸವೆಂದರೆ ಕನ್ನಡ, ಕನ್ನಡಿಗ, ಕರ್ನಾಟಕ ಒಂದೇ ದ್ವನಿಯಾಗುವ ತಿಂಗಳು. ನಮ್ಮ ಸರ್ಕಾರ ಇಡೀ ವರ್ಷ ಕನ್ನಡ ಸಂಭ್ರಮ ಕಾರ್ಯಕ್ರಮಕ್ಕೆ ಕರೆ ನೀಡಿದೆ. ಇದನ್ನು ನಾವೆಲ್ಲರೂ ಪಾಲಿಸೋಣ ಎಂದರು.

ಕಾರ್ಯಕ್ರಮದಲ್ಲಿ 26ನೇ ವಾರ್ಡಿನ ಪಾಲಿಕೆ ಕಾರ್ಪೋರೇಟರ್ ಎಚ್. ಮಲ್ಲಿಕಾರ್ಜುನಯ್ಯ, ಅಶೋಕನಗರ ನಾಗರಿಕ ಹಿತರಕ್ಷಣಾ ಸಮಿತಿ ಅಧ್ಯಕ್ಷ ಎಂ.ಕೆ. ವೆಂಕಟಸ್ವಾಮಿ, ಕಾರ್ಯದರ್ಶಿ ಬಿ.ಆರ್. ಉಮೇಶ್, ವಾಸುದೇವ್‌ ಶೆಟ್ಟಿ, ಎಚ್.ಜಿ. ಬಸವರಾಜು, ಕೊಪ್ಪಲ್ ನಾಗರಾಜು, ಡಾ. ಸಂಜಯ ನಾಯಕ್, ಮುಖಂಡರಾದ ಪ್ರಮೋದ್ ರೆಡ್ಡಿ, ಚಂದ್ರಮೌಳಿ, ನಾಗರಾಜು, ಡಿ.ಎಂ. ಸತೀಶ್, ಮಂಜೇಶ್, ಅಶೋಕನಗರ ನಾಗರಿಕ ಹಿತರಕ್ಷಣಾ ಸಮಿತಿ ಪದಾಧಿಕಾರಿಗಳು ಉಪಸ್ಥಿತರಿದ್ದರು.

Share this article