ಅಡಕೆ ಬೆಳೆಹಾನಿ: ವಿಶೇಷ ಪರಿಹಾರ ಪ್ಯಾಕೇಜ್‌ ಘೋಷಿಸಲು ಆಗ್ರಹ

KannadaprabhaNewsNetwork | Published : Aug 21, 2024 12:31 AM

ಸಾರಾಂಶ

ವಾಡಿಕೆ ಮಳೆಗಿಂತ ಹೆಚ್ಚು ಹಾಗೂ ನಿರಂತರ ಮಳೆಯಿಂದ ಮುಖ್ಯ ಬೆಳೆಯಾದ ಅಡಕೆ ಭಾಗಶಃ ಹಾನಿಯಾಗಿದ್ದರೆ, ಕಾಳುಮೆಣಸು ಸಂಪೂರ್ಣವಾಗಿ ಹಾಳಾಗಿದೆ.

ಕುಮಟಾ: ತಾಲೂಕಿನಾದ್ಯಂತ ಅತಿವೃಷ್ಟಿಯಿಂದಾಗಿ ರೈತರ ಮುಖ್ಯ ಬೆಳೆಯಾದ ಅಡಕೆ, ಕಾಳುಮೆಣಸು ಬೆಳೆಹಾನಿಗೆ ಸೂಕ್ತ ಪರಿಹಾರ ಒದಗಿಸಬೇಕು ಹಾಗೂ ಇತರ ಬೇಡಿಕೆಗಳನ್ನು ಆಗ್ರಹಿಸಿ ರೈತ ಹಿತರಕ್ಷಣಾ ಸಮಿತಿ ಹಾಗೂ ಭಾರತೀಯ ಕೃಷಿಕ ಸಮಾಜದಿಂದ ಮನವಿಯನ್ನು ಇಲ್ಲಿನ ತಾಲೂಕು ಸೌಧದಲ್ಲಿ ಮಂಗಳವಾರ ಜಿಲ್ಲಾಧಿಕಾರಿ ಲಕ್ಷ್ಮೀಪ್ರಿಯಾ ಅವರ ಮೂಲಕ ಮುಖ್ಯಮಂತ್ರಿಗೆ ಸಲ್ಲಿಸಲಾಯಿತು.

ವಾಡಿಕೆ ಮಳೆಗಿಂತ ಹೆಚ್ಚು ಹಾಗೂ ನಿರಂತರ ಮಳೆಯಿಂದ ಮುಖ್ಯ ಬೆಳೆಯಾದ ಅಡಕೆ ಭಾಗಶಃ ಹಾನಿಯಾಗಿದ್ದರೆ, ಕಾಳುಮೆಣಸು ಸಂಪೂರ್ಣವಾಗಿ ಹಾಳಾಗಿದೆ. ಬೆಳೆವಿಮೆಗೆ ಈ ಹಾನಿಯನ್ನು ಪರಿಗಣಿಸಲಾಗದು. ಮೈಲುತುತ್ತಕ್ಕೆ ಸಹಾಯಧನ ಸಿಗಬೇಕು. ಅಡಕೆ ಬೆಳೆಗಾರರ ಹಾನಿ ಮೇಲ್ನೋಟಕ್ಕೆ ಒಂದು ವರ್ಷದ ಹಾನಿಯಾದರೂ ರೈತ ಅದನ್ನು ಕನಿಷ್ಠ ಎರಡು ವರ್ಷ ಅನುಭವಿಸುವುದು ವಾಸ್ತವ. ಆದ್ದರಿಂದ ರೈತರಿಗೆ ಆದ ಹಾನಿಯನ್ನು ಅಂದಾಜಿಸಿ, ಪೂರ್ಣ ನಷ್ಟ ಭರಿಸಲಾಗದಿದ್ದರೂ ಬದುಕಲು ಸಾಧ್ಯವಾಗುವಂತೆ ಹಾನಿ ವರದಿ ಸಿದ್ಧಪಡಿಸಿ ಸರ್ಕಾರದಿಂದ ರೈತರಿಗೆ ಪರಿಹಾರ ಕೊಡಿಸಬೇಕು ಎಂದು ಮನವಿಯಲ್ಲಿ ಆಗ್ರಹಿಸಿದರು.

ದೀರ್ಘಾವಧಿ ಬೆಳೆಗಳನ್ನು ಪಹಣಿ ಪತ್ರಿಕೆಯಲ್ಲಿ ಪದೇ ಪದೇ ಬದಲಿಸುವುದರಿಂದ ರೈತರಿಗೆ ಬೆಳೆಸಾಲ ಪಡೆಯಲು ಸಮಸ್ಯೆ ಆಗುತ್ತಿದ್ದು, ರೈತ ಬಯಸಿದಲ್ಲಿ ಮಾತ್ರ ಪಹಣಿಯಲ್ಲಿ ದೀರ್ಘಾವಧಿ ಬೆಳೆ ಬದಲಿಸಲು ಅವಕಾಶ ಮಾಡಿಕೊಡಬೇಕು. ಬೆಳೆದರ್ಶಕ ಅಪ್ಲಿಕೇಶನ್ ನ್ಯೂನತೆ ಸರಿಪಡಿಸಬೇಕು. ಏಕೆಂದರೆ ಒಂದು ಎಕರೆ ಅಡಕೆ ಮುಖ್ಯ ಬೆಳೆಯಾಗಿ ಬೆಳೆದ ರೈತನಿಗೆ ಉಪಬೆಳೆ ಎರಡು ಎಕರೆ ಕಾಳುಮೆಣಸನ್ನು ತೋರಿಸಲು ಅವಕಾಶ ಒದಗಿಸಬೇಕು. ಅಡಕೆ ಇಲ್ಲಿನ ಸಾಂಪ್ರದಾಯಿಕ ಬೆಳೆಯಾಗಿರುವುದರಿಂದ ಅದನ್ನು ನಿಯಂತ್ರಣಕ್ಕೆ ಒಳಪಡಿಸಿ, ಮಿತಿ ಮೀರಿದ ವಿಸ್ತರಣೆ ಕಡಿವಾಣ ಹಾಕಬೇಕು.

ಈ ಹಿಂದೆ ಬೆಳೆ ಪರಿಹಾರ, ರೈತರಿಗೆ ಹಾನಿ ಸಂಬಂಧಿತ ಮಾನದಂಡವನ್ನು ಪರಾಮರ್ಶಿಸಿ ಕಾಲಮಾನಕ್ಕೆ ತಕ್ಕಂತೆ ಪರಿಹಾರವನ್ನು ಹೆಚ್ಚಿಸಬೇಕು. ಬೆಳೆಸಾಲ ಪಡೆಯುವಾಗ ಸಾಮೂಹಿಕ ಆಸ್ತಿ ಎಂದಾದಲ್ಲಿ ಆ ಕುಟುಂಬದ ಒಬ್ಬ ರೈತನೂ ಬೆಳೆಸಾಲ ಪಡೆಯಲು ಸಾಧ್ಯವಾಗುತ್ತಿಲ್ಲ. ಇದನ್ನು ಸರಿಪಡಿಸಬೇಕು. ಬೆಳೆವಿಮೆ ಅಪ್ಲೋಡ್ ಸಮಸ್ಯೆ ಸರಿಪಡಿಸಬೇಕು.

ಕಾಡುಪ್ರಾಣಿಗಳಿಂದ ಬೆಳೆಹಾನಿಗೆ ಸೂಕ್ತ ರಕ್ಷಣೆ ಒದಗಿಸಬೇಕು. ಮಳೆಮಾಪನ ಕೇಂದ್ರ ಹಾಳಾದಲ್ಲಿ ಹವಾಮಾನ ಆಧರಿತ ಹಾನಿಯನ್ನು ಲೆಕ್ಕ ಹಾಕುವುದು ಹಾಗೂ ಪರಿಹಾರ ಸ್ಪಷ್ಟಪಡಿಸುವುದು. ಚಿಕ್ಕ ಹಿಡುವಳಿದಾರ ರೈತರಿಗೆ, ತುಂಡುಭೂಮಿ ರೈತರಿಗೆ ಪರಿಹಾರಕ್ಕಾಗಿ ಪ್ರತಿಯೊಂದು ಪಹಣಿಯನ್ನೂ ದಾಖಲೆಯಾಗಿ ಒದಗಿಸುವುದಕ್ಕೆ ತಗಲುವ ವೆಚ್ಚವು ಪರಿಹಾರದ ಮೊತ್ತಕ್ಕಿಂತ ಹೆಚ್ಚಾಗಿದೆ. ಹೀಗಾಗಿ ರೈತನ ಎಫ್‌ಐಡಿ ಹಾಕಿದಾಗ, ಆ ಎಲ್ಲ ದಾಖಲೆಗಳನ್ನು ಪರಿಗಣಿಸಬೇಕೇ ಹೊರತು ರೈತ ಪ್ರತಿಬಾರಿ ಎಲ್ಲ ದಾಖಲೆಗಳನ್ನು ಒದಗಿಸುವ ಕ್ರಮವನ್ನು ಕೈಬಿಡಬೇಕು. ಅಡಕೆ ಬೆಳೆಗಾರರ ಸಮಗ್ರ ಹಾನಿಗೆ ವಿಶೇಷ ಪರಿಹಾರದ ಪ್ಯಾಕೇಜ್ ಘೋಷಿಸಬೇಕು ಎಂದು ಮನವಿಯಲ್ಲಿ ಆಗ್ರಹಿಸಲಾಗಿದೆ.

ಮನವಿ ಸ್ವೀಕರಿಸಿದ ಜಿಲ್ಲಾಧಿಕಾರಿ ಕೆ. ಲಕ್ಷ್ಮೀಪ್ರಿಯಾ ಮಾತನಾಡಿ, ಮನವಿಯನ್ನು ಮುಖ್ಯಮಂತ್ರಿಗಳಿಗೆ ರವಾನಿಸುವ ಜತೆಗೆ ಬೆಳೆಹಾನಿ ಪರಿಹಾರ ಕ್ರಮಗಳ ಕುರಿತು ಪರಿಶೀಲಿಸಲಾಗುವುದು. ಜತೆಗೆ ರೈತರ ಬೇಡಿಕೆಯಂತೆ ವಿಶೇಷ ಪ್ಯಾಕೇಜ್ ಅಗತ್ಯತೆಯ ಕುರಿತಾಗಿಯೂ ರೈತರ ಬೇಡಿಕೆಯನ್ನು ಸರ್ಕಾರಕ್ಕೆ ಬರೆಯುವುದಾಗಿ ತಿಳಿಸಿದರು.

ಉಪವಿಭಾಗಾಧಿಕಾರಿ ಕಲ್ಯಾಣಿ ಕಾಂಬ್ಳೆ, ತಹಸೀಲ್ದಾರ್ ಸತೀಶ ಗೌಡ ಇದ್ದರು. ಪ್ರತಿಭಟನೆಯಲ್ಲಿ ರೈತ ಹಿತರಕ್ಷಣಾ ಸಮಿತಿ ಅಧ್ಯಕ್ಷ ಎಂ.ಜಿ. ಭಟ್ಟ ಕೂಜಳ್ಳಿ, ಭಾರತೀಯ ಕೃಷಿಕ ಸಮಾಜದ ಅಧ್ಯಕ್ಷ ಪ್ರದೀಪಕುಮಾರ ಹೆಗಡೆ ಬರಗದ್ದೆ, ಟಿ.ವಿ. ಹೆಗಡೆ ಕಲ್ಲಬ್ಬೆ, ವಿ.ಐ. ಹೆಗಡೆ, ಸಿ.ಜಿ. ಹೆಗಡೆ, ಈಶ್ವರ ಎಂ. ಕೊಡಿಯಾ ಸಾಲೆಹಕ್ಕಲ, ರಾಜುಭಟ್ಟ, ಆರ್.ಜಿ. ಹೆಗಡೆ ಕೋಣಾರೆ, ಗಣಪತಿ ನಾಯ್ಕ ಅಳವಳ್ಳಿ, ಶ್ರೀಪಾದ ಭಟ್ಟ ಮೂರೂರು, ಶ್ರೀಧರ ಹೆಗಡೆ ವಾಲಗಳ್ಳಿ, ಉದಯ ಕೊಡಂಬಳ್ಳಿ, ದಿನೇಶ ಭಟ್ ಸೇರಿದಂತೆ ನೂರಾರು ರೈತರು ಇದ್ದರು.

Share this article