ಪಟ್ಟಣದ ಹೊರವಲಯದ ಗಾಳೀಹಳ್ಳಿ ಕೆರೆಯಿಂದ ಕೋಡಿಬಿದ್ದ ನೀರು,
ಹೋಬಳಿಯಾದ್ಯಂತ ಸುರಿಯುತ್ತಿರುವ ಮಳೆಯಿಂದ ಬೀರೂರು- ಅಜ್ಜಂಪುರ ರಸ್ತೆಯ ಪಕ್ಕದಲ್ಲಿ ಯಗಟಿ ಕಡೆ ಹರಿಯುವ ಕರ್ಲಹಳ್ಳ ಕಾಲುವೆ ಭರ್ತಿಯಾಗಿ, ಪಕ್ಕದ ಅಡಕೆ ತೋಟ ಜಲಾವೃತವಾಗಿದೆ.
ಪಟ್ಟಣದ ಹೊರವಲಯದ ಗಾಳೀಹಳ್ಳಿ ಕೆರೆಯಿಂದ ಕೋಡಿಬಿದ್ದ ನೀರು, ವಾಣಿವಿಲಾಸ ಸಾಗರದ ಕಡೆ, ಕರ್ಲಹಳ್ಳಕ್ಕೆ ಹರಿಯುತ್ತಿದ್ದು, ಅಜ್ಜಂಪುರ ರಸ್ತೆ ಯಲ್ಲಿರುವ ರಹೀಂಸಾಬ್ ಲೇಔಟ್ ಹಿಂಭಾಗದಿಂದ ಶಿವಮೊಗ್ಗ ಬೈಪಾಸ್ ರಸ್ತೆ ಪಕ್ಕದಲ್ಲಿ ನಿರ್ಮಿಸಿದ ಒಳಚರಂಡಿ ಮೂಲಕ ದೊಡ್ಡ ಕಾಲುವೆಗೆ ಸೇರುತ್ತಿದೆ.ಬೈಪಾಸ್ ರಸ್ತೆ ನಿರ್ಮಾಣ ಸಂದರ್ಭದಲ್ಲಿ ದೊಡ್ಡ ಕಾಲುವೆ ಮುಚ್ಚಿ, ಸಣ್ಣ ಡೆಕ್ ನಿರ್ಮಾಣ ಮಾಡಲಾಗಿತ್ತು.ಆದ್ದರಿಂದ ರಸ್ತೆ ಮೇಲೆ ನೀರು ಹರಿದು ಸಮಸ್ಯೆಯಾಗಿತ್ತು. ಹೆದ್ದಾರಿ ವಿಭಾಗದ ಎಂಜಿನಿಯರ್, ತಹಸೀಲ್ದಾರ್ ಮತ್ತು ಸಂಬಂಧಪಟ್ಟ ಇಲಾಖೆಯವರನ್ನು ಶಾಸಕರು ಸ್ಥಳಕ್ಕೆ ಕರೆಸಿಕೊಂಡು ಶೀಘ್ರ ಸಮಸ್ಯೆ ಬಗೆಹರಿಸಿಕೊಡುವಂತೆ ಸೂಚಿಸಿದ್ದರು. ಅದರಂತೆ ಹೆದ್ದಾರಿ ಪ್ರಾಧಿಕಾರದವರು ಬೈಪಾಸ್ ರಸ್ತೆ ಸೇತುವೆ ಕೆಳಭಾಗದಲ್ಲಿ ಸಣ್ಣ ಒಳ ಚರಂಡಿ ನಿರ್ಮಿಸಿ ನೀರು ಹರಿದುಹೋಗಲು ಅನುವು ಮಾಡಿಕೊಟ್ಟಿದ್ದರು.
ಅವೈಜ್ಞಾನಿಕ ಬೈಪಾಸ್ ರಸ್ತೆ ನಿರ್ಮಾಣದಿಂದ ಯಗಟಿ ರಸ್ತೆಯ ನಮ್ಮ ತೋಟದಲ್ಲಿ ಕಾಲಿಡಲು ಆಗುತ್ತಿಲ್ಲ. ಮೊದಲೆಲ್ಲಾ ನೀರು ಕರ್ಲಹಳ್ಳದ ಮೂಲಕ ಸರಾಗವಾಗಿ ಹರಿದು ಹೋಗುತ್ತಿತ್ತು. ತೋಟ ಫಸಲು ನೀಡುವ ಹಂತದಲ್ಲಿದ್ದು, ಈ ತಿಂಗಳಿನಲ್ಲಿ ಅಡಕೆ ಮತ್ತು ತೆಂಗಿನ ಫಸಲಿನ ಕೊಯ್ಲು ಆಗಬೇಕಿತ್ತು. ಆದರೆ ಈ ರೀತಿ ನೀರು ಹರಿಯುತ್ತಿರುವ ಸಂದರ್ಭದಲ್ಲಿ ಫಸಲು ಉದುರಿ, ಕೊಚ್ಚಿ ಹೋಗುವ ಸಾಧ್ಯತೆ ಇದೆ. ನಮ್ಮ ಕಷ್ಟಕ್ಕೆ ದನಿಯಾಗುವವರು. ಈ ವಿಷಯವಾಗಿ ಈ ಹಿಂದೆಯೇ ಪುರಸಭೆ, ತಹಸೀಲ್ದಾರ್, ಉಪವಿಭಾಗಾಧಿಕಾರಿ ಹಾಗೂ ಜಿಲ್ಲಾಧಿಕಾರಿಗೂ ಮನವಿ ನೀಡಿದರೂ ಪ್ರಯೋಜನವಾಗಿಲ್ಲ’ ಎಂದು ಕೃಷಿಕ ಈರೋಜಿ ರಾವ್ ಅಳಲು ತೋಡಿಕೊಂಡರು.