ಎಲ್ಲಾ ಭಕ್ತರಿಗೂ ಹಾಸನಾಂಬೆಯ ಸುಗಮ ದರ್ಶನಕ್ಕೆ ವ್ಯವಸ್ಥೆ ಮಾಡಿ

KannadaprabhaNewsNetwork | Published : Oct 8, 2024 1:06 AM

ಸಾರಾಂಶ

ಹಾಸನ: ಪ್ರತಿ ವರ್ಷದಂತೆ ಈ ವರ್ಷವೂ ಕೂಡ ಹಾಸನಾಂಬೆ ದೇವಿ ದರ್ಶನ ಮಾಡಲು ಅಕ್ಟೋಬರ್‌ ೨೪ರಂದು ಬಾಗಿಲು ತೆಗೆಯಲಿದ್ದು, ದರ್ಶನ ವ್ಯವಸ್ಥೆಯಲ್ಲಿರುವ ಅವ್ಯವಸ್ಥೆಗಳನ್ನು ಸರಿಪಡಿಸಿ ಎಲ್ಲಾ ಸಾಮಾನ್ಯ ಭಕ್ತರಿಗೂ ಸುಸೂತ್ರವಾದ ದರ್ಶನ ಸಿಗಬೇಕು ಎಂದು ಶ್ರೀ ಹಾಸನಾಂಬೆ ಜಾತ್ರಾ ಹಿತರಕ್ಷಣಾ ಸಮಿತಿಯಿಂದ ಸೋಮವಾರ ಜಿಲ್ಲಾಧಿಕಾರಿ ಸಿ. ಸತ್ಯಭಾಮ ಅವರಿಗೆ ಮನವಿ ಸಲ್ಲಿಸಿದರು.

ಹಾಸನ: ಪ್ರತಿ ವರ್ಷದಂತೆ ಈ ವರ್ಷವೂ ಕೂಡ ಹಾಸನಾಂಬೆ ದೇವಿ ದರ್ಶನ ಮಾಡಲು ಅಕ್ಟೋಬರ್‌ ೨೪ರಂದು ಬಾಗಿಲು ತೆಗೆಯಲಿದ್ದು, ದರ್ಶನ ವ್ಯವಸ್ಥೆಯಲ್ಲಿರುವ ಅವ್ಯವಸ್ಥೆಗಳನ್ನು ಸರಿಪಡಿಸಿ ಎಲ್ಲಾ ಸಾಮಾನ್ಯ ಭಕ್ತರಿಗೂ ಸುಸೂತ್ರವಾದ ದರ್ಶನ ಸಿಗಬೇಕು ಎಂದು ಶ್ರೀ ಹಾಸನಾಂಬೆ ಜಾತ್ರಾ ಹಿತರಕ್ಷಣಾ ಸಮಿತಿಯಿಂದ ಸೋಮವಾರ ಜಿಲ್ಲಾಧಿಕಾರಿ ಸಿ. ಸತ್ಯಭಾಮ ಅವರಿಗೆ ಮನವಿ ಸಲ್ಲಿಸಿದರು.

ಇದೇ ವೇಳೆ ಭಾರತೀಯ ವೈದ್ಯಕೀಯ ಸಂಘದ ಮಾಜಿ ಅಧ್ಯಕ್ಷ ಡಾ. ಎನ್. ರಮೇಶ್ ಮಾಧ್ಯಮದೊಂದಿಗೆ ಮಾತನಾಡಿ, ಶ್ರೀ ಹಾಸನಾಂಬೆ ದೇವಿಯ ದರ್ಶನ ೨೦೨೪, ಅಕ್ಟೋಬರ್ ೨೪ ರಿಂದ ನವಂಬರ್ ೩ರವರೆಗೆ ನಡೆಯಲಿದೆ. ವರ್ಷದಲ್ಲಿ ಕೇವಲ ಒಮ್ಮೆ ಮಾತ್ರ ಬಾಗಿಲು ತೆರೆಯುವ ಹಾಸನದ ಅಧಿದೇವತೆ ಶ್ರೀ ಹಾಸನಾಂಬೆ ದೇವಿಯ ಕ್ಷಣಮಾತ್ರ ದರ್ಶನದಿಂದ ಲಕ್ಷಾಂತರ ಭಕ್ತರು ತಮ್ಮ ಜೀವನವು ಪಾವನವಾಯಿತು ಎಂದು ಭಾವಿಸುತ್ತಾರೆ. ಎಲ್ಲ ಭಕ್ತರಿಗೂ ಸುಗಮವಾಗಿ ಹಾಗೂ ಶೀಘ್ರವಾಗಿ ಶ್ರೀ ಹಾಸನಾಂಬೆ ದೇವಿಯ ದರ್ಶನ ಸಿಗಲೆಂಬ ಉದ್ದೇಶದೊಂದಿಗೆ, ಹಾಗೂ ಭಕ್ತರ ಧಾರ್ಮಿಕ ಭಾವನೆಗಳಿಗೆ ಪೂರಕವಾಗಿ ಕೆಲ ಬದಲಾವಣೆಗಳನ್ನು ಪ್ರಸ್ತುತ ವರ್ಷದಿಂದಲೇ ಅಳವಡಿಸಬೇಕೆಂದು ತಮ್ಮಲ್ಲಿ ವಿನಯ ಪೂರಕ ಮನವಿ ಆಗಿದೆ. ವಿಐಪಿ ದರ್ಶನ ವ್ಯವಸ್ಥೆಯನ್ನು ಎರಡು ದಿನಗಳಿಗೆ ಸೀಮಿತಗೊಳಿಸಿ, ಉಳಿದ ಏಳು ದಿನಗಳಲ್ಲಿ ಕಡ್ಡಾಯವಾಗಿ ವಿಐಪಿ ದರ್ಶನ (ಶಿಷ್ಟಾಚಾರ ದರ್ಶನ) ನಿಷೇಧಿಸಬೇಕು. ವಿ ಐ ಪಿ ಗಳು ಮತ್ತು ಅವರ ಜೊತೆ ಬರುವ ಹಿಂಬಾಲಕರಿಂದಾಗಿ ದೇವಿಯ ದರ್ಶನ ಕನಿಷ್ಠ ೩೦ರಿಂದ ೪೫ ನಿಮಿಷಗಳ ಸಮಯ ಶ್ರೀಸಾಮಾನ್ಯರ ದರ್ಶನವನ್ನು ಮೊಟಕುಗೊಳಿಸುವುದು ಸಾಮಾನ್ಯವಾಗಿ ಬಿಟ್ಟಿದೆ. ಕಳೆದ ವರ್ಷವಂತು ದೇವಿಯ ದರ್ಶನ ಕಾಯುವಿಕೆ ಎಂಟರಿಂದ ಹತ್ತು ಗಂಟೆವರೆಗೂ ತಲುಪಿದ್ದನ್ನು ನಾವು ನೆನಪಿಸಿಕೊಳ್ಳಬಹುದು ಎಂದರು. ಯಾವ ಆಧಾರದ ಮೇಲೆ ಪಾಸುಗಳನ್ನು ವಿತರಿಸುತ್ತಿದ್ದಾರೋ ಇಂದಿಗೂ ಹಾಸನಾಂಬೆ ಭಕ್ತಾದಿಗಳಿಗೆ ತಿಳಿಯದಾಗಿದೆ. ದೇವಸ್ಥಾನದ ಗರ್ಭಗುಡಿಯ ಒಳಗೆ ಅರ್ಚಕರನ್ನು ಹೊರತುಪಡಿಸಿ ಇತರರ ಪ್ರವೇಶವನ್ನು ಸಂಪೂರ್ಣವಾಗಿ ನಿರ್ಬಂಧಿಸಬೇಕು ಎಂಬುದು ನಮ್ಮ ಒತ್ತಾಯ ಎಂದು ಹೇಳಿದರು. ಶ್ರೀ ಸಿದೇಶ್ವರ ದೇವಾಲಯದ ಪ್ರಾಂಗಣದಲ್ಲಿ ಫ್ಲೆಕ್ಸ್ ಅಳವಡಿಸುವುದು, ಪತ್ರಿಕಾಗೋಷ್ಠಿ ಅಥವಾ ಗಣ್ಯ ವ್ಯಕ್ತಿಗಳಿಗೆ ಸನ್ಮಾನ ಸಮಾರಂಭಗಳನ್ನ ನಿಷೇಧಿಸಬೇಕು. ದರ್ಶನವಾದ ನಂತರ ದೇವಾಲಯದ ಪ್ರಾಂಗಣದಲ್ಲಿ ಒಂದು ಕ್ಷಣವಾದರೂ ಭಕ್ತರು ಕುಳಿತುಕೊಳ್ಳುವುದು ಹಿಂದೂ ಸಂಪ್ರದಾಯದ ವಾಡಿಕೆ, ಶ್ರೀ ಹಾಸನಾಂಬೆ ದೇವಾಲಯದಲ್ಲೂ ಹಿಂದಿನಿಂದಲೂ ನಡೆದುಬಂದ ಸಂಪ್ರದಾಯ. ಪ್ರಸ್ತುತ ಅದಕ್ಕೆ ಅವಕಾಶವಿಲ್ಲದಂತೆ ಆಗಿದೆ. ಯಾವುದೇ ವ್ಯಕ್ತಿಗೆ ಸನ್ಮಾನ ಅಥವಾ ಪತ್ರಿಕಾಗೋಷ್ಠಿ ನಡೆಸುವಂತಿದ್ದರೆ ದೇವಾಲಯದ ಹೊರಗಡೆ ಅಥವಾ ಗರುಡುಗಂಬದ ಬಳಿ ನಡೆಸಬಹುದು ಎಂದರು.

ಹಾಸನಾಂಬೆ ತಾಯಿ ಪೂಜಾ ಪದ್ಧತಿ ಹಿಂದಿನಿಂದಲೂ ನಡೆದುಕೊಂಡು ಬಂದಂತೆ ಶಾಸ್ತ್ರದ ಪ್ರಕಾರ, ಸಾಂಪ್ರದಾಯಿಕ ರೀತಿಯಲ್ಲಿ ಅಮ್ಮನವರಿಗೆ ಪೂಜೆ ನಡೆಸಬೇಕು. ಶ್ರೀ ಹಾಸನಾಂಬೆ ದೇವಾಲಯಕೆ, ಭೇಟಿ ನೀಡುವ ಭಕ್ತರಿಗೆ, ಸರದಿ ಸಾಲಿನಲ್ಲಿ ನಿಂತವರಿಗೆ ಹಣೆಯಲ್ಲಿ ಕುಂಕುಮ ಇಡಲು ಕಪ್ಪುಗಳಲ್ಲಿ ಕುಂಕುಮವನ್ನು ಸಾಲಿನ ಬಳಿ ಇಡಲು ಹಾಗೂ ಭಕ್ತಾದಿಗಳಿಗೆ ದರ್ಶನದ ನಂತರ ಅರಿಶಿನ ಕುಂಕುಮ, ಪ್ರಸಾದ, ಹೂಗಳ ಪ್ರಸಾದ ವಿತರಿಸುವ ವ್ಯವಸ್ಥೆ ಮಾಡಬೇಕು ಎಂದು ಕೋರಿದರು.

ದರ್ಶನಕ್ಕೆ ಆಗಮಿಸುವ ಭಕ್ತರಿಗೆ ವಸ್ತ್ರ ಸಂಹಿತೆ ಜಾರಿಗೊಳಿಸಿ. ಆಂಗ್ಲ ಭಾಷೆಯಲ್ಲಿ ಹಾಸನ್ ಎಂಬುದನ್ನು ಹಾಸನ ಎಂದು ಶ್ರೀ ಹಾಸನಾಂಬೆ ದೇವಿ ಜಾತ್ರೆ ಸಮಯದಲ್ಲಿ ಘೋಷಿಸಬೇಕು. ಶ್ರೀ ಹಾಸನಾಂಬೆ ದೇವಿಯ ಪ್ರಾಂಗಣದಲ್ಲಿರುವ ಪರಿವಾರ ದೇವತೆಗಳ ( "ಶಿವನ ೧೦೮ ಲಿಂಗ ದೇವಾಲಯ’ ’ಶ್ರೀ ವೀರಭದ್ರ ದೇವಾಲಯ” “ಹಾಲಪ್ಪನವರ ಗದ್ದುಗೆ " ಮತ್ತು "ಕಳ್ಳಪ್ಪನ ಗುಡಿ " ) ದೇವಾಲಯ ಮುಂದೆ ಬ್ಯಾರಿಕೇಡ್ ಅಳವಡಿಸಿ ಭಕ್ತರಿಗೆ ದರ್ಶನ ಭಾಗ್ಯ ಕಲ್ಪಿಸಬೇಕು ಎಂದರು.

ದೇವಿಯ ದರ್ಶನಕ್ಕೆ ಬರುವ ಹಿರಿಯ ನಾಗರಿಕರಿಗೆ ಶೀಘ್ರ ದರ್ಶನದ ವ್ಯವಸ್ಥೆ ಕಲ್ಪಿಸಬೇಕು ಹಾಗೂ ತೀರಾ ಗಣ್ಯಾತಿಗಣ್ಯರನ್ನು ಹೊರತುಪಡಿಸಿ ಇನ್ನಿತರ ಎಲ್ಲರಿಗೂ ಗರ್ಭಗುಡಿ ಒಳಗೆ ಹೋಗಲು ಪ್ರವೇಶ ನಿಷೇಧ ಮಾಡುವಂತೆ ಮನವಿ ಮಾಡಿದರು. ಇದೇ ವೇಳೆ ಶ್ರೀ ಹಾಸನಾಂಬೆ ಜಾತ್ರಾ ಹಿತರಕ್ಷಣಾ ಸಮಿತಿಯ ಜಿಲ್ಲಾ ಚಿನ್ನ ಬೆಳ್ಳಿ ಕೆಲಸಗಾರರ ಸಂಘದ ಅಧ್ಯಕ್ಷ ವೆಂಕಟೇಶ್, ಹಿಂದೂ ಜನಜಾಗೃತಿ ವೇದಿಕೆಯ ಗೋವಿಂದರಾಜು, ಇತರರು ಉಪಸ್ಥಿತರಿದ್ದರು.

Share this article