- ಶ್ರೀರಾಮನ ಭಜನೆ ಮಾಡುವ ಮೂಲಕ ಪೊಲೀಸ್ ಕಾರ್ಯಕ್ಕೆ ಖಂಡನೆ
ಕನ್ನಡಪ್ರಭ ವಾರ್ತೆ ಹುಬ್ಬಳ್ಳಿ
ನಗರದ ಶಹರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದ ಹಳೆ ಪ್ರಕರಣಕ್ಕೆ ಸಂಬಂಧಿಸಿದಂತೆ ಶ್ರೀಕಾಂತ ಪೂಜಾರಿ ಅವರನ್ನು ಬಂಧಿಸಿರುವುದನ್ನು ಖಂಡಿಸಿ ಹಿಂದೂಪರ ಸಂಘಟನೆಗಳ ಕಾರ್ಯಕರ್ತರು ಶಹರ ಠಾಣೆಗೆ ಮುತ್ತಿಗೆ ಹಾಕಿ ಆಕ್ರೋಶ ವ್ಯಕ್ತಪಡಿಸಿದರು.ಸೋಮವಾರ ರಾತ್ರಿ 8.30ರ ಸುಮಾರಿಗೆ ಠಾಣೆಗೆ ಮುತ್ತಿಗೆ ಹಾಕಿದ ಹಿಂದೂಪರ ಸಂಘಟನೆಗಳ ಕಾರ್ಯಕರ್ತರು, 31 ವರ್ಷದ ಬಳಿಕ ಬಂಧಿಸಲು ಕಾರಣವೇನು? ಅದು ಕೂಡ ರಾಮಜನ್ಮಭೂಮಿ ಹೋರಾಟಗಾರರನ್ನು ರಾಮನ ಮೂರ್ತಿ ಪ್ರಾಣ ಪ್ರತಿಷ್ಠಾಪನೆ ಇದ್ದಾಗಲೇ ಬಂಧಿಸಿದ್ದು ಏಕೆ ಎಂದು ಪ್ರಶ್ನಿಸಿದರು.
ಭಜನೆ:ಬಂಧಿಸಿರುವುದನ್ನು ಖಂಡಿಸಿ ಮುತ್ತಿಗೆ ಹಾಕಿ ಅಲ್ಲೇ ಕುಳಿತು ಶ್ರೀರಾಮ ಜಯರಾಮ ಜಯರಾಮ ಎಂದು ಭಜನೆ ಕೂಡ ಮಾಡಲು ಶುರು ಮಾಡಿದರು. ಸುಮಾರು ಗಂಟೆಗೂ ಅಧಿಕ ಕಾಲ ಪ್ರತಿಭಟನೆ ಮುಂದುವರಿಯಿತು.
ಈ ವೇಳೆ ಮಾತನಾಡಿದ ಹಿಂದೂಪರ ಸಂಘಟನೆಯ ಮುಖಂಡ ಸಂಜೀವ ಬಡಸ್ಕರ್, ಅಯೋಧ್ಯೆ ರಾಮಮಂದಿರ ನಿರ್ಮಾಣ ಸಮಾರಂಭ ನಡೆಯುತ್ತಿರುವುದು ನೋಡಿ ಸಂತಸ ವ್ಯಕ್ತಪಡಿಸುತ್ತಿದ್ದಾರೆ. ಆದರೆ ನಗರದಲ್ಲಿ ರಾಮಮಂದಿರ ಹೋರಾಟದಲ್ಲಿ ಭಾಗಿಯಾದ ಹೋರಾಟಗಾರರನ್ನು ಉದ್ದೇಶ ಪೂರ್ವಕವಾಗಿ ಬಂಧಿಸುತ್ತಿದ್ದಾರೆ ಎಂದು ಆರೋಪಿಸಿದರು.ಇದು ಅತ್ಯಂತ ಖಂಡನೀಯವಾಗಿದ್ದು, ಪೊಲೀಸ್ ಇಲಾಖೆ ಅಮಾಯಕ ಹಿಂದೂ ಕಾರ್ಯಕರ್ತರ ಬಂಧಿಸಬಾರದು ಎಂದು ಮನವಿ ಮಾಡುತ್ತೇವೆ. ಮನೆ ಮನೆಗೆ ಶ್ರೀರಾಮನ ಮಂತ್ರಾಕ್ಷತೆ ಹಾಗೂ ಜಾಗೃತಿ ಮೂಡಿಸುತ್ತಿರುವ ಕಾರ್ಯಕರ್ತರ ಬಂಧಿಸುತ್ತಿದ್ದಾರೆ ಎಂದು ಹೇಳಿದರು.
ಹಿಂದೂ ಸಂಘಟನೆ ಮುಖಂಡ ಜಯತೀರ್ಥ ಕಟ್ಟಿ ಮಾತನಾಡಿ, 1992ರಲ್ಲಿ ನಡೆದ ಹೋರಾಟ ಪ್ರಕರಣ ಸಂಬಂಧಿಸಿ ಹೋರಾಟಗಾರರನ್ನು ತಲೆ ಮರೆಸಿಕೊಂಡಿದ್ದಾರೆ ಎಂದು ಪೊಲೀಸ್ ಇಲಾಖೆ ತೋರಿಸಿದೆ. ಈಗ ಏಕಾಏಕಿ ಒಬ್ಬ ಹೋರಾಟಗಾರರನ್ನು ಬಂಧಿಸಿದ್ದಾರೆ. ಇಷ್ಟು ದಿನ ಅವರು ನಗರದಲ್ಲಿ ಇದ್ದರೂ ಯಾಕೆ ಬಂಧಿಸಿಲ್ಲ ಎಂಬ ಪ್ರಶ್ನೆ ಮೂಡುತ್ತಿದೆ ಎಂದರು.ಪೊಲೀಸ್ ಅಧಿಕಾರಿ ಮುಸ್ಲಿಂ ಆಗಿದ್ದರಿಂದ ಉದ್ದೇಶ ಪೂರ್ವಕವಾಗಿ ಬಂಧಿಸಿದ್ದಾರೆ. ಇಲಾಖೆಗೆ ಸರ್ಕಾರದ ಒತ್ತಡವೂ ಇರಬಹುದು. ಆದರೆ ಪೊಲೀಸ್ ಅಧಿಕಾರಿಗಳು ವಿವೇಚನೆಯಿಂದ ಕಾರ್ಯ ನಿರ್ವಹಿಸಬೇಕು. ಅಯೋಧ್ಯೆಯಲ್ಲಿ ರಾಮ ಮೂರ್ತಿ ಪ್ರತಿಷ್ಠಾಪನೆ ಸಮಯದಲ್ಲಿ ಹಿಂದೂ ಕಾರ್ಯಕರ್ತರ ಹೆದರಿಸುವ ಉದ್ದೇಶ ಪೊಲೀಸ್ ಇಲಾಖೆಯದ್ದಾಗಿದೆ. ಸರ್ಕಾರ ಹಾಗೂ ಪೊಲೀಸ್ ಇಲಾಖೆ ಒಂದು ಸಮುದಾಯಕ್ಕೆ ಕುಮ್ಮಕ್ಕು ನೀಡುವುದು. ಇನ್ನೊಂದು ಸಮುದಾಯಕ್ಕೆ ತೊಂದರೆ ನೀಡುವ ಕೆಲಸ ಮಾಡುತ್ತಿದೆ ಎಂದು ಆರೋಪಿಸಿದರು.
ವಿಶ್ವ ಹಿಂದೂ ಪರಿಷತ್ ಮುಖಂಡರಾದ ರಮೇಶ ಕದಂ, ಸುಬ್ರಹ್ಮಣ್ಯ ಶಿರಕೋಳ, ಮಂಜು ಕಲಾಲ, ರಂಗಾ ಕಟಾರೆ, ರಾಜು ಕುದನಹಳ್ಳಿ, ಶಿವಾನಂದ ಸತ್ತಿಗೇರಿ, ರಾಜು ಜರತಾರಘರ, ಅನುಪ ಬಿಜವಾಡ ಸೇರಿದಂತೆ ಹಲವರಿದ್ದರು