ಹಿಂದೂ ಕಾರ್ಯಕರ್ತರ ಬಂಧನ ಖಂಡನೆ

KannadaprabhaNewsNetwork | Published : Jan 4, 2024 1:45 AM

ಸಾರಾಂಶ

ರಾಮಭಕ್ತರನ್ನು ಬೇಕಂತಲೇ ಬಂಧಿಸಲಾಗುತ್ತಿದೆ. ಈ ಮೂಲಕ ಹಿಂದೂಗಳನ್ನು ಹೆದರಿಸುವ ತಂತ್ರಗಾರಿಕೆ ಮಾಡಲಾಗುತ್ತಿದೆ ಎಂದು ಆರೋಪಿಸಿ ಬಿಜೆಪಿ ಹುಬ್ಬಳ್ಳಿಯಲ್ಲಿ ಬೃಹತ್‌ ಪ್ರತಿಭಟನೆ ನಡೆಸಿತು. ಹಮ್ಮಿಕೊಂಡಿತು.

- ಹುಬ್ಬಳ್ಳಿಯ ಶಹರ ಠಾಣೆಗೆ ಮುತ್ತಿಗೆ

- ಆರ್‌.ಅಶೋಕ ಸೇರಿ 150ಕ್ಕೂ ಹೆಚ್ಚು ಪ್ರತಿಭಟನಾಕಾರರ ಬಂಧನ; ಬಿಡುಗಡೆ

- ರಸ್ತೆ ಮಧ್ಯೆ ಟೈರ್‌ಗೆ ಬೆಂಕಿ ಹಚ್ಚಿ ಆಕ್ರೋಶ

- ಠಾಣೆಯ ಸುತ್ತಲು ಸರ್ಪಗಾವಲು

- ದುರ್ಗದ ಬೈಲ್‌ ಸೇರಿದಂತೆ ವಿವಿಧೆಡೆ ಅಘೋಷಿತ ಬಂದ್‌ ವಾತಾವರಣಕನ್ನಡಪ್ರಭ ವಾರ್ತೆ ಹುಬ್ಬಳ್ಳಿ

ರಾಮಜನ್ಮ ಭೂಮಿ ಹೋರಾಟದ ಶ್ರೀಕಾಂತ ಪೂಜಾರಿ ಬಂಧನ ಖಂಡಿಸಿ ಬಿಜೆಪಿ ನಗರದಲ್ಲಿ ಬೃಹತ್‌ ಪ್ರತಿಭಟನೆ ನಡೆಸಿತು. ಠಾಣೆಗೆ ಮುತ್ತಿಗೆ ಹಾಕಿದ ವಿಧಾನಸಭೆ ಪ್ರತಿಪಕ್ಷದ ನಾಯಕ ಆರ್‌.ಅಶೋಕ ಸೇರಿದಂತೆ 150ಕ್ಕೂ ಹೆಚ್ಚು ಜನರನ್ನು ಬಂಧಿಸಿ ನಂತರ ಬಿಡುಗಡೆ ಮಾಡಲಾಯಿತು.

ಬೃಹತ್‌ ಪ್ರತಿಭಟನೆ:

ರಾಮಜನ್ಮ ಭೂಮಿ ವಿಮೋಚನೆ ಹಿನ್ನೆಲೆಯಲ್ಲಿ 1992ರಲ್ಲಿ ನಡೆದಿದ್ದ ಗಲಭೆ ಪ್ರಕರಣದಲ್ಲಿ ಶ್ರೀಕಾಂತ ಪೂಜಾರಿ ಆರೋಪಿಯಾಗಿದ್ದ. ಬರೋಬ್ಬರಿ 31 ವರ್ಷದ ಬಳಿಕ ಆತನನ್ನು ಬಂಧಿಸಲಾಗಿದೆ. ಶ್ರೀರಾಮಮಂದಿರದ ಗರ್ಭಗುಡಿ ಉದ್ಘಾಟನೆ ವೇಳೆಯೇ ಬಂಧಿಸಿರುವುದಕ್ಕೆ ಆಕ್ರೋಶ ವ್ಯಕ್ತವಾಗುತ್ತಿದೆ. ರಾಮಭಕ್ತರನ್ನು ಬೇಕಂತಲೇ ಬಂಧಿಸಲಾಗುತ್ತಿದೆ. ಈ ಮೂಲಕ ಹಿಂದೂಗಳನ್ನು ಹೆದರಿಸುವ ತಂತ್ರಗಾರಿಕೆ ಮಾಡಲಾಗುತ್ತಿದೆ ಎಂದು ಆರೋಪಿಸಿ ಬಿಜೆಪಿ ಹುಬ್ಬಳ್ಳಿಯಲ್ಲಿ ಬೃಹತ್‌ ಪ್ರತಿಭಟನೆ ಹಮ್ಮಿಕೊಂಡಿದ್ದವು.

ಇಲ್ಲಿನ ಶಹರ ಠಾಣೆಗೆ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಲು ನಿರ್ಧರಿಸಲಾಗಿತ್ತು. ಅದರಂತೆ 11 ಗಂಟೆಯಿಂದ ಹೋರಾಟ ಶುರುವಾಯಿತು. ಸುಮಾರು 3 ಗಂಟೆವರೆಗೂ ಮುಂದುವರಿಯಿತು. ಶ್ರೀರಾಮ ಜಯರಾಮ ಜಯ ಜಯರಾಮ.. ಸೇರಿದಂತೆ ಶ್ರೀರಾಮನ ಭಜನೆ, ಕಾಂಗ್ರೆಸ್‌ ಸರ್ಕಾರದ ವಿರುದ್ಧ ಧಿಕ್ಕಾರದ ಘೋಷಣೆಗಳೆಲ್ಲ ಮೊಳಗಿದವು. ವಿಧಾನಸಭೆ ಪ್ರತಿಪಕ್ಷದ ನಾಯಕ ಆರ್‌. ಅಶೋಕ ನೇತೃತ್ವದಲ್ಲಿ ನಡೆದ ಹೋರಾಟಕ್ಕೆ ವಿಎಚ್‌ಪಿ ಸೇರಿದಂತೆ ವಿವಿಧ ಹಿಂದೂಪರ ಸಂಘಟನೆಗಳೆಲ್ಲ ಬೆಂಬಲಿಸಿ ಭಾಗವಹಿಸಿದ್ದವು.

ಈ ವೇಳೆ ಮಾತನಾಡಿದ ಆರ್‌.ಅಶೋಕ ಸೇರಿದಂತೆ ಎಲ್ಲ ಮುಖಂಡರು, ಕಾಂಗ್ರೆಸ್‌ ವಿರುದ್ಧ ಹರಿಹಾಯ್ದರು. ಕಾಂಗ್ರೆಸ್‌ ಸರ್ಕಾರಕ್ಕೆ ರಾಮಮಂದಿರವಾಗುವುದು ಬೇಕಾಗಿರಲಿಲ್ಲ. ಆಗಲೂ ವಿರೋಧ ವ್ಯಕ್ತಪಡಿಸಿದ್ದರು. ಈಗ ಅದರ ಉದ್ಘಾಟನೆಯಾಗುತ್ತಿದೆ. ಈಗಲೂ ಅಲ್ಲಿಗೆ ಯಾರೂ ಹಿಂದೂಗಳು ಹೋಗಬಾರದೆಂಬ ದುರುದ್ದೇಶದಿಂದ ಬಂಧಿಸುತ್ತಿದ್ದಾರೆ. 31 ವರ್ಷದ ಬಳಿಕ ಅರೆಸ್ಟ್‌ ಮಾಡುವ ಅಗತ್ಯವೇನಿತ್ತು. ಶ್ರೀರಾಮನ ಭಕ್ತರನ್ನು ಬಂಧಿಸುತ್ತಾರೆ. ಅತ್ತ ಕುಕ್ಕರ್‌ನಲ್ಲಿ ಬಾಂಬ್‌ ಇಟ್ಟು ಸ್ಪೋಟ ಮಾಡುವ ಭಯೋತ್ಪಾದಕರನ್ನು ಬ್ರದರ್‌ ಎಂದು ಕರೆಯುತ್ತಾರೆ. ಕಾಂಗ್ರೆಸ್‌ ಸರ್ಕಾರ ಹಿಂದೂ ವಿರೋಧಿ ನೀತಿ ಅನುಸರಿಸುತ್ತಿದೆ. ರಾಮಭಕ್ತರನ್ನು ಕೆಣಕಿದ್ದೀರಿ. ನಿಮಗೆ ಉಳಿಗಾಲವಿಲ್ಲ ಎಂದು ಕಿಡಿಕಾರಿದರು. ಕೂಡಲೇ ಕರಸೇವಕರನ್ನು ಬಂಧಿಸಿರುವ ಪೊಲೀಸ್‌ ಅಧಿಕಾರಿಯನ್ನು ಅಮಾನತು ಮಾಡಬೇಕು ಎಂದು ಒತ್ತಾಯಿಸಿದರು.

ಮುತ್ತಿಗೆ:

ಶಹರ ಠಾಣೆಗೆ ಮುತ್ತಿಗೆ ಹಾಕುತ್ತಾರೆ ಎಂಬ ಮಾಹಿತಿ ಅರಿತಿದ್ದ ಪೊಲೀಸರು ಠಾಣೆಯ ಸುತ್ತಲೂ ಬ್ಯಾರಿಕೇಡ್‌ಗಳನ್ನು ಹಾಕಿ ಬಿಗಿಬಂದೋಬಸ್ತ್‌ ಏರ್ಪಡಿಸಿದ್ದರು. ಪೊಲೀಸ್‌ ಸರ್ಪಗಾವಲು ಭೇದಿಸಿ ಠಾಣೆಗೆ ಮುತ್ತಿಗೆ ಹಾಕಲು ಯತ್ನಿಸಿದರು. ಈ ವೇಳೆ ಪೊಲೀಸರು, ಪ್ರತಿಭಟನಾಕಾರರ ಮಧ್ಯೆ ತಳ್ಳಾಟ ನೂಕಾಟ ನಡೆದು ಗೊಂದಲಮಯ ವಾತಾವರಣ ಸೃಷ್ಟಿಯಾಗಿತ್ತು. ಎಲ್ಲ ಪ್ರತಿಭಟನಾಕಾರರನ್ನು ಪೊಲೀಸರು ಹೊತ್ತುಕೊಂಡೇ ಹೋಗಿ ವಾಹನದಲ್ಲಿ ಹತ್ತಿಸಿದರು.

ಇನ್ನು ಇದೇ ವೇಳೆ ಪ್ರತಿಭಟನಾ ಸ್ಥಳದಲ್ಲಿ ಟೈರ್‌ಗೆ ಬೆಂಕಿ ಕೂಡ ಹಚ್ಚಿ ಆಕ್ರೋಶ ವ್ಯಕ್ತಪಡಿಸಲಾಯಿತು. ಅದೇ ವೇಳೆ ಎಲ್ಲರನ್ನು ಬಂಧನಕ್ಕೊಳಪಡಿಸುತ್ತಿದ್ದ ಕಾರಣ, ಗೊಂದಲದ ವಾತಾವರಣ ಸೃಷ್ಟಿಯಾಗಿತ್ತು. ಕೂಡಲೇ ಕೆಲ ಪೊಲೀಸರು ನೀರು ತಂದು ಬೆಂಕಿ ನಂದಿಸಿದರು.

ಬಳಿಕ ಆರ್‌. ಅಶೋಕ ಸೇರಿದಂತೆ 150ಕ್ಕೂ ಹೆಚ್ಚು ಜನರನ್ನು ಬಂಧಿಸಿ ಹೊಸ ಸಿಎಆರ್‌ ಮೈದಾನಕ್ಕೆ ಕಳುಹಿಸಿದರು. ಅಲ್ಲಿಂದ ಬಿಡುಗಡೆ ಮಾಡಿ ಕಳುಹಿಸಿದರು.

ಪ್ರತಿಭಟನೆಯಲ್ಲಿ ಶಾಸಕರಾದ ಅರವಿಂದ ಬೆಲ್ಲದ, ಮಹೇಶ ಟೆಂಗಿನಕಾಯಿ, ಎಂ.ಆರ್‌. ಪಾಟೀಲ, ವಿಧಾನ ಪರಿಷತ್‌ ಸದಸ್ಯ ಪ್ರದೀಪ ಶೆಟ್ಟರ್‌, ಸಂಜಯ ಕಪಟಕರ, ಬಸವರಾಜ ಕುಂದಗೋಳಮಠ, ಜಯತೀರ್ಥ ಕಟ್ಟಿ, ರಂಗಾಬದ್ದಿ, ದತ್ತಮೂರ್ತಿ ಕುಲಕರ್ಣಿ, ಶಿವು ಮೆಣಸಿನಕಾಯಿ, ರವಿ ನಾಯಕ, ತಿಪ್ಪಣ್ಣ ಮಜ್ಜಗಿ, ಮೇನಕಾ ಹುರುಳಿ, ಸಂತೋಷ ಚವ್ಹಾಣ, ಸಿದ್ದು ಮೊಗಲಿಶೆಟ್ಟರ್‌ ಸೇರಿದಂತೆ ಹಲವರು ಪಾಲ್ಗೊಂಡಿದ್ದರು.

ಸರ್ಪಗಾವಲು

ಶಹರಠಾಣೆಗೆ ಮುತ್ತಿಗೆ ಹಾಕುವ ಹಿನ್ನೆಲೆಯಲ್ಲಿ ಹುಬ್ಬಳ್ಳಿ-ಧಾರವಾಡ ಕಮಿಷನರ್‌ ರೇಣುಕಾ ಸುಕುಮಾರ ನೇತೃತ್ವದಲ್ಲಿ ಬಿಗಿ ಬಂದೋಬಸ್ತ್‌ ಏರ್ಪಡಿಸಲಾಗಿತ್ತು. ಇಬ್ಬರು ಡಿಸಿಪಿ, ಎಸಿಪಿ, ಪಿಐಗಳೆಲ್ಲ ಸ್ಥಳದಲ್ಲೇ ಮೊಕ್ಕಾಂ ಹೂಡಿದ್ದರು. ಮುಂಜಾಗ್ರತಾ ಕ್ರಮವಾಗಿ ಠಾಣೆಯ ಎದುರಿಗೆ ಬ್ಯಾರಿಕೇಡ್‌ ಹಾಕಿ ಒಳನುಗ್ಗದಂತೆ ನೋಡಿಕೊಳ್ಳಲಾಗಿತ್ತು. ಕೆಎಸ್‌ಆರ್‌ಪಿ, ಡಿಎಆರ್‌ ಸೇರಿದಂತೆ ಹೆಚ್ಚುವರಿ ಪೊಲೀಸ್‌ ಸಿಬ್ಬಂದಿಯನ್ನು ಬಂದೋಬಸ್ತ್‌ಗೆ ನಿಯೋಜಿಸಲಾಗಿತ್ತು.

ಆರ್‌. ಅಶೋಕಗೆ ನೀರು

ಠಾಣೆಗೆ ಮುತ್ತಿಗೆ ಹಾಕುವ ವೇಳೆ ವಿಧಾನಸಭೆ ಪ್ರತಿಪಕ್ಷದ ನಾಯಕ ಆರ್‌.ಅಶೋಕಗೆ ಪೊಲೀಸರೇ ನೀರು ಕೊಟ್ಟರು. ಮುತ್ತಿಗೆ ಹಾಕುವ ವೇಳೆ ತಳ್ಳಾಟ, ನೂಕಾಟವೆಲ್ಲ ಜೋರಾಗಿ ನಡೆಯಿತು. ಈ ವೇಳೆ ಅಶೋಕ ಅವರಿಗೆ ನಿಯಂತ್ರಣ ತಪ್ಪಿದಂತಾಯಿತು. ಈ ವೇಳೆ ಪೊಲೀಸರೇ ನೀರು ಕೊಟ್ಟು ಸಂಬಾಳಿಸಿದರು. ನೀರು ಕುಡಿದಾದ ಮೇಲೆ ಮತ್ತೆ ಮುತ್ತಿಗೆ ಹಾಕಲು ಮುನ್ನುಗ್ಗಿದರು.

Share this article