ಚಿನ್ನಾಭರಣ ಖರೀದಿಸಿ ಹಣ ಪಾವತಿ ನಕಲಿ ಸಂದೇಶ ತೋರಿ ಕಾಲ್ಕಿತ್ತ ಪ್ರೇಮಿಗಳ ಸೆರೆ

KannadaprabhaNewsNetwork |  
Published : Mar 18, 2024, 01:49 AM IST
Kalpitha | Kannada Prabha

ಸಾರಾಂಶ

ಚಿನ್ನಾಭರಣ ಖರೀದಿಸಿ ಬಳಿಕ ಹಣ ಪಾವತಿಸಿರುವುದಾಗಿ ಅಂಗಡಿ ಮಾಲೀಕನಿಗೆ ‘ನಕಲಿ ಪೇಮೆಂಟ್‌ ಆ್ಯಪ್‌’ ಸಂದೇಶ ತೋರಿಸಿ ವಂಚಿಸಿ ಪರಾರಿಯಾಗಿದ್ದ ಚಾಲಾಕಿ ಮಹಿಳೆ ಹಾಗೂ ಆತನ ಪ್ರಿಯಕರನನ್ನು ಬ್ಯಾಡರಹಳ್ಳಿ ಠಾಣೆ ಪೊಲೀಸರು ಬಂಧಿಸಿದ್ದಾರೆ.

- ನೆಫ್ಟ್‌ ಮೂಲಕ ಹಣ ಕಳುಹಿಸುವುದಾಗಿ ವಂಚನೆ । ಖಾತೆ ಪರಿಶೀಲಿಸಿದ ಮಾಲಿಕನಿಗೆ ಮೋಸದ ಸುಳಿವು

ಕನ್ನಡಪ್ರಭ ವಾರ್ತೆ ಬೆಂಗಳೂರುಚಿನ್ನಾಭರಣ ಖರೀದಿಸಿ ಬಳಿಕ ಹಣ ಪಾವತಿಸಿರುವುದಾಗಿ ಅಂಗಡಿ ಮಾಲೀಕನಿಗೆ ‘ನಕಲಿ ಪೇಮೆಂಟ್‌ ಆ್ಯಪ್‌’ ಸಂದೇಶ ತೋರಿಸಿ ವಂಚಿಸಿ ಪರಾರಿಯಾಗಿದ್ದ ಚಾಲಾಕಿ ಮಹಿಳೆ ಹಾಗೂ ಆತನ ಪ್ರಿಯಕರನನ್ನು ಬ್ಯಾಡರಹಳ್ಳಿ ಠಾಣೆ ಪೊಲೀಸರು ಬಂಧಿಸಿದ್ದಾರೆ.ದೇವನಹಳ್ಳಿ ನಿವಾಸಿ ನಂದನ್ (40) ಮತ್ತು ಆಕೆಯ ಪ್ರಿಯತಮೆ ರಾಜರಾಜೇಶ್ವರಿನಗರ ನಿವಾಸಿ ಕಲ್ಪಿತಾ (35) ಬಂಧಿತರು. ಆರೋಪಿಗಳಿಂದ 2.29 ಲಕ್ಷ ರು. ಮೌಲ್ಯದ 36 ಗ್ರಾಂ ಚಿನ್ನಾಭರಣ ಜಪ್ತಿ ಮಾಡ ಲಾಗಿದೆ. ಆರೋಪಿಗಳು ಮಾ.4 ರಂದು ಮಾಗಡಿ ಮುಖ್ಯರಸ್ತೆಯ ಪರಮೇಶ್ವರ ಬ್ಯಾಂಕರ್ಸ್‌ ಆ್ಯಂಡ್‌ ಜ್ಯೂವೆಲ್ಲರಿ ಅಂಗಡಿಗೆ ಬಂದು ಚಿನ್ನಾಭರಣ ಖರೀದಿಸಿ, ಹಣ ಪಾವತಿಸಿರುವುದಾಗಿ ನಕಲಿ ಪೇಮೆಂಟ್‌ ಆ್ಯಪ್‌ ಸಂದೇಶ ತೋರಿಸಿ ಪರಾರಿಯಾಗಿದ್ದರು. ಈ ಸಂಬಂಧ ಅಂಗಡಿ ಮಾಲೀಕ ಗೇವರ್‌ಚಂದ್‌ ನೀಡಿದ ದೂರಿನ ಮೇರೆಗೆ ಕಾರ್ಯಾಚರಣೆ ಇಬ್ಬರು ಆರೋಪಿಗಳನ್ನು ಬಂಧಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.ಘಟನೆ ವಿವರ: ಆರೋಪಿಗಳು ಮಾ.4ರಂದು ಬೆಳಗ್ಗೆ ಸದರಿ ಅಂಗಡಿಗೆ ಬಂದು 36 ಗ್ರಾಂ ತೂಕದ ಚಿನ್ನಾಭರಣ ಖರೀದಿಸಿದ್ದಾರೆ. ಬಳಿಕ ತಮ್ಮ ಬಳಿ ನಗದು ಇಲ್ಲ. ಎನ್‌ಇಎಫ್‌ಟಿ(ನೆಫ್ಟ್‌) ಮೂಲಕ ಹಣ ಕಳುಹಿಸುತ್ತೇವೆ ಪ್ರಾಂಕ್‌ ಪೇಮೆಂಟ್‌ ಆ್ಯಪ್ ಮೂಲಕ ಹಣ ಪಾವತಿಸುವುದಾಗಿ ಪಾವತಿಯ ಸಂದೇಶವನ್ನು ಅಂಗಡಿ ಮಾಲೀಕನಿಗೆ ತೋರಿಸಿದ್ದಾರೆ. ಬಳಿಕ ಚಿನ್ನಾಭರಣ ಪಡೆದು ಸ್ಥಳದಿಂದ ಪರಾರಿ ಯಾಗಿದ್ದಾರೆ. ಕೆಲ ಸಮಯದ ಬಳಿಕ ಅಂಗಡಿ ಮಾಲೀಕ ಗೇವರ್‌ ಚಂದ್‌ ಬ್ಯಾಂಕ್ ಖಾತೆ ಪರಿಶೀಲಿಸಿದಾಗ ಹಣ ಪಾವತಿಯಾಗದಿರುವುದು ಕಂಡು ಬಂದಿದೆ. ಬಳಿಕ ಪೊಲೀಸ್‌ ಠಾಣೆಗೆ ತೆರಳಿ ದುಷ್ಕರ್ಮಿಗಳ ವಿರುದ್ಧ ದೂರು ನೀಡಿದ್ದರು. ಈ ದೂರಿನ ಮೇರೆಗೆ ಪ್ರಕರಣ ದಾಖಲಿಸಿಕೊಂಡು ಆರೋಪಿಗಳನ್ನು ಬಂಧಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.ಲೀವ್‌ ಇನ್‌ ರಿಲೇಶನ್‌ಶಿಪ್‌: ಆರೋಪಿಗಳಾದ ನಂದನ್‌ ಮತ್ತು ಆಕೆಯ ಪ್ರಿಯತಮೆ ಕಲ್ಪಿತಾ ವಿವಾಹಿತರು. ಕೌಟುಂಬಿಕ ಕಲಹದಿಂದ ಇಬ್ಬರು ಪ್ರತ್ಯೇಕವಾಗಿ ನೆಲೆಸಿದ್ದರು. ಕಳೆದ ವರ್ಷದ ಸಾಮಾಜಿಕ ಜಾಲತಾಣದಲ್ಲಿ ಇಬ್ಬರು ಪರಸ್ಪರ ಪರಿಚಿತರಾಗಿದ್ದರು. ಪರಿಚಯ ಪ್ರೇಮಕ್ಕೆ ತಿರುಗಿ ಕೆಲ ತಿಂಗಳಿಂದ ಒಂದೇ ಮನೆಯಲ್ಲಿ ಸಹಜೀವನ ನಡೆಸುತ್ತಿದ್ದರು.ವಂಚಿಸಿ ವಿಲಾಸಿ ಜೀವನ: ಇಬ್ಬರೂ ಯಾವುದೇ ಕೆಲಸ ಮಾಡುತ್ತಿರಲಿಲ್ಲ. ಆರೋಪಿಗಳು ವಂಚನೆ ಮಾಡುವ ಉದ್ದೇಶದಿಂದಲೇ ಪ್ರಾಂಕ್‌ ಪೇಮೆಂಟ್‌ ಆ್ಯಪ್‌ ಡೌನ್‌ಲೋಡ್‌ ಮಾಡಿಕೊಂಡಿದ್ದರು. ಚಿನ್ನಾಭರಣ ಮಳಿಗೆಗಳು, ಹೋಟೆಲ್‌, ದಿನಸಿ ಅಂಗಡಿ ಸೇರಿದಂತೆ ವಿವಿಧೆಡೆ ತೆರಳಿ ಅಗತ್ಯ ವಸ್ತುಗಳನ್ನು ಖರೀದಿಸಿ, ಈ ಪ್ರಾಂಕ್‌ ಪೇಮೆಂಟ್‌ ಆ್ಯಪ್‌ನಲ್ಲಿ ಹಣ ಪಾವತಿಸಿದ ಸಂದೇಶ ತೋರಿಸಿ ಅಂಗಡಿ ಮಾಲೀಕರನ್ನು ವಂಚಿಸಿ ಎಸ್ಕೇಪ್‌ ಆಗುತ್ತಿದ್ದರು. ಬಳಿಕ ಚಿನ್ನಾಭರಣಗಳು ಹಾಗೂ ದುಬಾರಿ ವಸ್ತುಗಳನ್ನು ಅಡಮಾನ ಅಥವಾ ಮಾರಾಟ ಮಾಡಿ ಹಣ ಪಡೆದು ವಿಲಾಸಿ ಜೀವನ ನಡೆಸುತ್ತಿದ್ದರು.ಆರೋಪಿಗಳು ಇದೇ ರೀತಿ ಹಲವೆಡೆ ವಂಚನೆ ಮಾಡಿರುವುದು ವಿಚಾರಣೆಯಿಂದ ತಿಳಿದು ಬಂದಿದೆ. ಇಬ್ಬರನ್ನೂ ವಶಕ್ಕೆ ಪಡೆದು ಹೆಚ್ಚಿನ ವಿಚಾರಣೆಗೆ ಒಳಪಡಿಸಿದರೆ ಮತ್ತಷ್ಟು ವಂಚನೆಗಳು ಬೆಳಕಿಗೆ ಬರಲಿದೆ. ಹೀಗಾಗಿ ತನಿಖೆ ಮುಂದುವರೆದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

PREV

Recommended Stories

ಮಾನಸಿಕ ದೈಹಿಕ ಸದೃಢತೆಗೆ ಕ್ರೀಡೆ ಸಹಕಾರಿ
ಸಭೆಯಲ್ಲಿ ಪುರಸಭೆ ಮಳಿಗೆಗಳ ಹರಾಜಿನ ಗದ್ದಲ