ಅಪ್ರಾಪ್ತ ಸೇರಿ ಮತ್ತಿಬ್ಬರ ಬಂಧನ; ಬಂಧಿತರ ಸಂಖ್ಯೆ ಐದಕ್ಕೆ ಏರಿಕೆ

KannadaprabhaNewsNetwork |  
Published : Mar 20, 2024, 01:49 AM ISTUpdated : Mar 20, 2024, 04:40 PM IST
hanuman chalisa Bangalore

ಸಾರಾಂಶ

ಆಜಾನ್‌ ಕೂಗುವ ಸಮಯದಲ್ಲಿ ಜೋರಾಗಿ ಭಜನೆ ಹಾಡು ಹಾಕಿದ್ದ ವಿಚಾರವಾಗಿ ಮೊಬೈಲ್‌ ಬಿಡಿ ಭಾಗಗಳ ಅಂಗಡಿಯ ಮಾಲಿಕ ಮುಖೇಶ್‌ ಮೇಲೆ ನಡೆದಿದ್ದ ಹಲ್ಲೆ ಪ್ರಕರಣ ಸಂಬಂಧ ಅಪ್ರಾಪ್ತ ಸೇರಿ ಮತ್ತಿಬ್ಬರನ್ನು ಹಲಸೂರು ಗೇಟ್‌ ಠಾಣೆ ಪೊಲೀಸರು ಬಂಧಿಸಿದ್ದಾರೆ. ಈ ಮೂಲಕ ಪ್ರಕರಣದಲ್ಲಿ ಬಂಧಿತರ ಸಂಖ್ಯೆ ಐದಕ್ಕೆ ಏರಿಕೆಯಾಗಿದೆ.

ಕನ್ನಡಪ್ರಭ ವಾರ್ತೆ ಬೆಂಗಳೂರು

ಆಜಾನ್‌ ಕೂಗುವ ಸಮಯದಲ್ಲಿ ಜೋರಾಗಿ ಭಜನೆ ಹಾಡು ಹಾಕಿದ್ದ ವಿಚಾರವಾಗಿ ಮೊಬೈಲ್‌ ಬಿಡಿ ಭಾಗಗಳ ಅಂಗಡಿಯ ಮಾಲಿಕ ಮುಖೇಶ್‌ ಮೇಲೆ ನಡೆದಿದ್ದ ಹಲ್ಲೆ ಪ್ರಕರಣ ಸಂಬಂಧ ಅಪ್ರಾಪ್ತ ಸೇರಿ ಮತ್ತಿಬ್ಬರನ್ನು ಹಲಸೂರು ಗೇಟ್‌ ಠಾಣೆ ಪೊಲೀಸರು ಬಂಧಿಸಿದ್ದಾರೆ. ಈ ಮೂಲಕ ಪ್ರಕರಣದಲ್ಲಿ ಬಂಧಿತರ ಸಂಖ್ಯೆ ಐದಕ್ಕೆ ಏರಿಕೆಯಾಗಿದೆ.

ಕಬ್ಬನ್‌ಪೇಟೆಯ ತರುಣ್‌ ಅಲಿಯಾಸ್‌ ದಡಿಯಾನನ್ನು (24) ಬಂಧಿಸಿ, 17 ವರ್ಷದ ಬಾಲಕನನ್ನು ವಶಕ್ಕೆ ಪಡೆದು ವಿಚಾರಣೆಗೆ ಒಳಪಡಿಸಿದ್ದಾರೆ. ಸೋಮವಾರ ಕಬ್ಬನ್‌ಪೇಟೆಯ ಸುಲೇಮಾನ್‌, ಶಹನವಾಜ್‌, ರೋಹಿತ್‌ ನನ್ನು ಬಂಧಿಸಿದ್ದರು. 

ಈ ಪ್ರಕರಣದಲ್ಲಿ ಭಾಗಿಯಾಗಿರುವ ಮತ್ತೊಬ್ಬ ಆರೋಪಿ ತಲೆಮರೆಸಿಕೊಂಡಿದ್ದು, ಬಂಧನಕ್ಕೆ ಬಲೆ ಬೀಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಬಂಧಿತ ಆರೋಪಿಗಳ ಪೈಕಿ ಸುಲೇಮಾನ್‌ಗೆ ಅಪರಾಧ ಹಿನ್ನೆಲೆ ಇದೆ. ವೃತ್ತಿಯಲ್ಲಿ ಕಾರು ಚಾಲಕನಾಗಿದ್ದು, ಈ ಹಿಂದೆ ಅಪಹರಣ, ಸುಲಿಗೆ ಪ್ರಕರಣದಲ್ಲಿ ಜೈಲಿಗೆ ಹೋಗಿ ಬಂದಿದ್ದಾನೆ. 

ಇನ್ನು ಶಹನವಾಜ್‌ ಖಾಸಗಿ ಆಸ್ಪತ್ರೆಯಲ್ಲಿ ವಾರ್ಡ್‌ ಬಾಯ್‌ ಆಗಿದ್ದಾನೆ. ರೋಹಿತ್‌ ಔಷಧಿ ವಿತರಣಾ ಪ್ರತಿನಿಧಿಯಾಗಿ ಕೆಲಸ ಮಾಡುತ್ತಿದ್ದಾನೆ. ಇನ್ನು ಆರೋಪಿ ತರುಣ್‌ಗೆ ನಿರ್ದಿಷ್ಟ ಕೆಲಸವಿಲ್ಲ. 

ಹೀಗಾಗಿ ಹುಡುಗರೊಂದಿಗೆ ಏರಿಯಾದಲ್ಲಿ ಓಡಾಡಿಕೊಂಡು ಕಾಲಹರಣ ಮಾಡುತ್ತಿದ್ದ ಎಂಬುದು ವಿಚಾರಣೆಯಿಂದ ತಿಳಿದು ಬಂದಿದೆ.ಈ ಹಿಂದೆ ಮುಖೇಶ್‌

ಜತೆಗೆ ವಾಗ್ವಾದ?
ಹಲ್ಲೆಗೆ ಒಳಗಾದ ಕೃಷ್ಣ ಟೆಲಿಕಾಂ ಅಂಗಡಿಯ ಮಾಲೀಕ ಮುಖೇಶ್ ಮೂರು ತಿಂಗಳ ಹಿಂದೆಯಷ್ಟೇ ಅಂಗಡಿ ತೆರೆದಿದ್ದ. ಈ ಹಿಂದೆ ಸಹ ಈ ಪುಂಡರ ಗ್ಯಾಂಗ್‌ ಮೊಬೈಲ್‌ ಬಿಡಿಭಾಗ ಖರೀದಿಗೆ ಅಂಗಡಿಗೆ ಭೇಟಿ ನೀಡಿದ್ದರು. 

ಆ ವೇಳೆ ಚಾರ್ಜರ್‌ ವಿಚಾರಕ್ಕೆ ಮುಖೇಶ್‌ ಮತ್ತು ಈ ಗ್ಯಾಂಗ್‌ ನಡುವೆ ವಾಗ್ವಾದ ನಡೆದಿತ್ತು. ಆದರೆ, ಈ ಸಂಬಂಧ ಯಾವುದೇ ದೂರು ದಾಖಲಾಗಿರಲಿಲ್ಲ ಎಂದು ತಿಳಿದು ಬಂದಿದೆ.

ಘಟನೆ ಹಿನ್ನೆಲೆ: ದೂರುದಾರ ಮುಖೇಶ್‌ ನಗರ್ತಪೇಟೆ ಸಿದ್ಧಣ್ಣ ಗಲ್ಲಿಯ ಜುಮ್ಮಾ ಮಸೀದಿ ರಸ್ತೆಯಲ್ಲಿ ‘ಕೃಷ್ಣ ಟೆಲಿಕಾಂ’ ಹೆಸರಿನ ಮೊಬೈಲ್‌ ಬಿಡಿ ಭಾಗಗಳ ಮಾರಾಟದ ಅಂಗಡಿ ಇರಿಸಿಕೊಂಡಿದ್ದಾರೆ. 

ಭಾನುವಾರ ಸಂಜೆ 6.25ರ ಸುಮಾರಿಗೆ ಮುಖೇಶ್‌ ಅಂಗಡಿಯಲ್ಲಿ ಇರುವಾಗ ಸುಮಾರು ಆರು ಮಂದಿ ಆರೋಪಿಗಳು ಅಂಗಡಿ ಬಳಿಗೆ ಬಂದಿದ್ದಾರೆ. ‘ಏಕೆ ಸ್ಪೀಕರ್‌ ಅನ್ನು ಜೋರಾಗಿ ಹಾಕಿರುವೆ? ಇದರಿಂದ ನಮಗೆ ತೊಂದರೆಯಾಗುತ್ತಿದೆ’ ಎಂದು ಮುಖೇಶ್‌ನನ್ನು ಪ್ರಶ್ನಿಸಿದ್ದಾರೆ.

‘ಈ ವೇಳೆ ಮಾತಿಗೆ ಮಾತು ಬೆಳೆದು ಜಗಳ ಏರ್ಪಟ್ಟಿದೆ. ಆಗ ಆರೋಪಿ ಶಹನವಾಜ್‌ ಹಾಗೂ ಸುಲೇಮಾನ್‌ ಕೈನಿಂದ ಮುಖೇಶ್‌ ಮುಖಕ್ಕೆ ಹಲ್ಲೆ ಮಾಡಿದ್ದಾರೆ. 

ಬಳಿಕ ಉಳಿದ ಆರೋಪಿಗಳು ಮುಖೇಶ್‌ ಮೇಲೆ ಹಲ್ಲೆ ನಡೆಸಿ, ಅಂಗಡಿಯಿಂದ ಹೊರಗೆ ಎಳೆದುಕೊಂಡು ರಸ್ತೆಯಲ್ಲಿ ಕೆಡವಿ ಹಿಗ್ಗಾಮುಗ್ಗಾ ಥಳಿಸಿದ್ದಾರೆ’ ಎಂದು ಮುಖೇಶ್‌ ದೂರಿನಲ್ಲಿ ಆರೋಪಿಸಿದ್ದರು. ಹಲ್ಲೆ ಘಟನೆ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿತ್ತು.ಇವತ್ತು ಜೈಲ್, ನಾಳೆ ಬೇಲ್ ಮತ್ತೆ ಖೇಲ್!

ಬಂಧಿತ ಆರೋಪಿಗಳ ಪೈಕಿ ಸುಲೇಮಾನ್‌ನ ಅಪ್ರಾಪ್ತ ಸಹೋದರ ಸಾಮಾಜಿಕ ಜಾಲತಾಣದಲ್ಲಿ ವಿವಾದಾತ್ಮಕ ಸ್ಟೇಟಸ್‌ವೊಂದನ್ನು ಪೋಸ್ಟ್‌ ಹಾಕಿದ್ದಾನೆ. 

ಹಿಂದಿಯಲ್ಲಿ ಇರುವ ಆ ಪೋಸ್ಟ್‌ನಲ್ಲಿ ‘ಇಂದು ಜೈಲ್, ನಾಳೆ ಬೇಲ್, ಮತ್ತೆ ಅದೇ ಖೇಲ್’ ಎಂದು ಬರೆದುಕೊಂಡಿದ್ದಾನೆ. ಅಂದರೆ, ಇವತ್ತು ಜೈಲಾಗುತ್ತದೆ, ನಾಳೆ ಬೇಲಾಗುತ್ತದೆ ನಂತರ ನಮ್ಮ ಆಟ ಶುರು ಎಂಬ ಅರ್ಥ ಬರುತ್ತದೆ.

PREV

Recommended Stories

ವಿಶ್ವದಲ್ಲೇ ಮೊದಲ ಬಾರಿ ಬನ್ನೇರುಘಟ್ಟದಲ್ಲಿ ಕರಡಿಗೆ ಕೃತಕ ಕಾಲು ಜೋಡಣೆ
ರಾಜ್ಯದ ಸಿರಿಧಾನ್ಯ ಬೆಳೆಗಾರರಿಗೆ ರಾಜ್ಯ ಸರ್ಕಾರದ ಸಿಹಿ ಸುದ್ದಿ