ಕನ್ನಡಪ್ರಭ ವಾರ್ತೆ ಮಡಿಕೇರಿ
ಅಂದಾಜು 350 ಕೆ.ಜಿ. ತೂಕದ ಹಸಿ ಕಾಫಿಯನ್ನು ಕಳವು ಮಾಡಿದ್ದ ನಾಲ್ವರು ಆರೋಪಿಗಳನ್ನು ಮಡಿಕೇರಿ ಗ್ರಾಮಾಂತರ ಪೊಲೀಸರು ಬಂಧಿಸಿದ್ದಾರೆ.
ಮಡಿಕೇರಿ ತಾಲೂಕಿನ ಕಗ್ಗೋಡ್ಲು ಗ್ರಾಮದ ನಿವಾಸಿಯಾದ ಚಿದಾನಂದ ವೈ.ಎ. ಎಂಬವರು ತೋಟದ ಕಣದಲ್ಲಿ ಒಣಗಿಸಲು ಇಟ್ಟಿದ್ದ ಸುಮಾರು 2500 ಕೆ.ಜಿ. ಹಸಿ ಕಾಫಿಯನ್ನು ಜ.31ರಂದು ಕಳ್ಳತನ ಮಾಡಿರುವ ಬಗ್ಗೆ ದೂರು ನೀಡಲಾಗಿತ್ತು.
ಪ್ರಕರಣ ಸಂಬಂಧ ಗುರುವಾರ ಕಗ್ಗೋಡ್ಲುದ ಗ್ರಾಮ ನಿವಾಸಿಯಾದ ಜಯ.ಎಂ.ಸಿ (56), ಶರತ್ ಎಚ್.ಜಿ. (31), ಸಾಜು ಪಿ.ಜೆ. (44) ಮತ್ತು ಕಳ್ಳತನ ಮಾಡಿದ್ದ ಕಾಫಿಯನ್ನು ಮಡಿಕೇರಿ ನಗರದ ಜಿ.ಟಿ. ವೃತ್ತದ ಬಳಿಯ ನೂರ್ ಟ್ರೇಡರ್‌ನಲ್ಲಿ ಯಾವುದೇ ರಶೀದಿ/ಬಿಲ್ ಇಲ್ಲದೇ ಖರೀದಿ ಮಾಡಿರುವ ಅಬ್ದುಲ್ ಅಜೀಜ್ (49) ಎಂಬವರನ್ನು ಬಂಧಿಸಲಾಗಿದೆ.
ಕಳ್ಳತನ ಮಾಡಿದ್ದ ಕಾಫಿ ಚೀಲಗಳನ್ನು ವಶಪಡಿಸಿಕೊಂಡು ಕ್ರಮ ಕೈಗೊಳ್ಳಲಾಗಿದೆ.ಆರೋಪಿಗಳಾದ, ಕಗ್ಗೋಡ್ಲು ಗ್ರಾಮಾದ ಕಿಶೋರ್ ಕುಮಾರ್.ಕೆ.ಎಂ ಮತ್ತು ಮನು ರೈ ಎಂಬುವವರು ತಲೆಮರೆಸಿಕೊಂಡಿದ್ದು, ಪತ್ತೆ ಕಾರ್ಯ ಪ್ರಗತಿಯಲ್ಲಿದೆ.
ಆರೋಪಿಗಳನ್ನು ಪತ್ತೆ ಹಚ್ಚಲು ಮಹೇಶ್ ಕುಮಾರ್ ಎಸ್. ಡಿವೈಎಸ್‌ಪಿ, ಮಡಿಕೇರಿ ಉಪವಿಭಾಗ, ಉಮೇಶ್ ಯು. ಪಿಐ ಮತ್ತು ಶ್ರೀನಿವಾಸಲು ವಿ. ಪಿಎಸ್‌ಐ, ಮಡಿಕೇರಿ ಗ್ರಾಮಾಂತರ ಪೊಲೀಸ್ ಠಾಣೆ ಹಾಗೂ ಉಪವಿಭಾಗ ಮಟ್ಟದ ಅಪರಾಧ ತನಿಖಾ ಸಿಬ್ಬಂದಿಯ ವಿಶೇಷ ತಂಡವನ್ನು ರಚಿಸಲಾಗಿತ್ತು.
ಪ್ರಕರಣದಲ್ಲಿ ಉತ್ತಮವಾಗಿ ಕಾರ್ಯನಿರ್ವಹಿಸಿದ ಅಧಿಕಾರಿ, ಸಿಬ್ಬಂದಿಯನ್ನು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ. ರಾಮರಾಜನ್ ಶ್ಲಾಘಿಸಿದ್ದಾರೆ.
ಜಿಲ್ಲೆ ಯಾವುದೇ ಕಾಫಿ ಟ್ರೇಡರ್ಸ್ ಅವರು ಕಾಫಿ ಖರೀದಿ ಸಂದರ್ಭ ರಶೀದಿ/ಬಿಲ್ಲನ್ನು ನೀಡದೇ ಹಾಗೂ ಮಾರಾಟ ಮಾಡುವವರ ಸಂಪೂರ್ಣ ವಿವರವನ್ನು ಇಟ್ಟುಕೊಳ್ಳದೇ ವ್ಯವಹಾರ ನಡೆಸಿದಲ್ಲಿ ಹಾಗೂ ಕಳ್ಳತನ ಮಾಡಿರುವ ಕಾಫಿಯನ್ನು ಖರೀದಿ ಮಾಡಿರುವುದು ಕಂಡಬಂದಲ್ಲಿ ಕಾಫಿ ಟ್ರೇಡರ್ಸ್ ಮಾಲೀಕರನ್ನು ನೇರ ಹೋಣಗಾರರನ್ನಗಿಸಿ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ.ರಾಮರಾಜನ್ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.