ಇಸ್ರೇಲ್‌ನಿಂದ ಮಂಗಳೂರಿಗೆ ಓರ್ವರ ಆಗಮನ,ಏರ್‌ಲಿಫ್ಟ್‌ನಲ್ಲಿ ಕರಾವಳಿಗೆ ಯಾರೂ ಆಗಮಿಸಿಲ್ಲ

KannadaprabhaNewsNetwork | Published : Oct 15, 2023 12:46 AM

ಸಾರಾಂಶ

ಯುದ್ಧಪೀಡಿತ ಇಸ್ರೇಲ್‌ನಿಂದ ಮಂಗಳೂರು ನಿವಾಸಿಯೊಬ್ಬರು ಶನಿವಾರ ತವರಿಗೆ ಆಗಮಿಸಿದ್ದಾರೆ. ಇಸ್ರೇಲ್‌ನಲ್ಲಿ ಉದ್ಯೋಗದಲ್ಲಿರುವ ಲೆನಾರ್ಡ್‌ ಫರ್ನಾಂಡಿಸ್‌ ಅವರು ಶುಕ್ರವಾರ ಇಸ್ರೇಲ್‌ನಿಂದ ಪ್ರತ್ಯೇಕವಾಗಿ ವಿಮಾನದಲ್ಲಿ ಹೊರಟು ಅಬುದಾಭಿ ಮೂಲಕ ಶನಿವಾರ ಮಂಗಳೂರಿಗೆ ಆಗಮಿಸಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.
ಕನ್ನಡಪ್ರಭ ವಾರ್ತೆ ಮಂಗಳೂರು ಯುದ್ಧಪೀಡಿತ ಇಸ್ರೇಲ್‌ನಿಂದ ಮಂಗಳೂರು ನಿವಾಸಿಯೊಬ್ಬರು ಶನಿವಾರ ತವರಿಗೆ ಆಗಮಿಸಿದ್ದಾರೆ. ಇಸ್ರೇಲ್‌ನಲ್ಲಿ ಉದ್ಯೋಗದಲ್ಲಿರುವ ಲೆನಾರ್ಡ್‌ ಫರ್ನಾಂಡಿಸ್‌ ಅವರು ಶುಕ್ರವಾರ ಇಸ್ರೇಲ್‌ನಿಂದ ಪ್ರತ್ಯೇಕವಾಗಿ ವಿಮಾನದಲ್ಲಿ ಹೊರಟು ಅಬುದಾಭಿ ಮೂಲಕ ಶನಿವಾರ ಮಂಗಳೂರಿಗೆ ಆಗಮಿಸಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ. ಲೆನಾರ್ಡ್‌ ಫರ್ನಾಂಡಿಸ್‌ ಅವರು ಕಳೆದ ವಾರವೇ ಮಂಗಳೂರಿಗೆ ಆಗಮಿಸುವವರಿದ್ದರು. ಆದರೆ ಇಸ್ರೇಲ್‌ನಲ್ಲಿ ಯುದ್ಧದ ಪರಿಸ್ಥಿತಿ ತಲೆದೋರಿದ ಕಾರಣ ವಿಮಾನ ಸಂಚಾರ ಹಠಾತ್‌ ರದ್ದುಗೊಂಡಿತ್ತು. ಈಗ ಪರಿಸ್ಥಿತಿ ತುಸು ತಿಳಿಯಾದ ಕಾರಣ ಅವರು ಇಸ್ರೇಲ್‌ನಿಂದ ಹೊರಟು ತವರಿಗೆ ಆಗಮಿಸಿದ್ದಾರೆ ಎಂದು ಹೇಳಲಾಗಿದೆ. ಭಾರತ ಸರ್ಕಾರ ಇಸ್ರೇಲ್‌ನಲ್ಲಿರುವ ಭಾರತೀಯ ರಕ್ಷಣೆಗೆ ಆಪರೇಷನ್‌ ಅಜಯ್‌ ಏರ್‌ಲಿಫ್ಟ್‌ ಕಾರ್ಯಾಚರಣೆ ಆರಂಭಿಸಿತ್ತು. ಶುಕ್ರವಾರ ಮೊದಲ ಏರ್‌ಲಿಫ್ಟ್‌ನಲ್ಲಿ ದ.ಕ. ಮೂಲದ ಇಬ್ಬರು ಹೊರಟಿದ್ದು, ಮುಂಬೈ ಸಂಬಂಧಿಕರ ಮನೆ ತಲುಪಿದ್ದರು. ಶನಿವಾರ ಎರಡನೇ ಏರ್‌ಲಿಫ್ಟ್‌ನಲ್ಲಿ ದ.ಕ. ಮಂದಿ ಇಲ್ಲ ಎಂದು ಹೇಳಲಾಗಿದೆ. ಮೂರು ಮತ್ತು ನಾಲ್ಕನೇ ಏರ್‌ಲಿಫ್ಟ್‌ನಲ್ಲಿ ಭಾನುವಾರ ಇನ್ನಷ್ಟು ಮಂದಿ ಭಾರತೀಯರು ಇಸ್ರೇಲ್‌ನಿಂದ ದೆಹಲಿಗೆ ಆಗಮಿಸಲಿದ್ದಾರೆ. ಇದರಲ್ಲಿ ದ.ಕ.ಜಿಲ್ಲೆಯರು ಇದ್ದಾರೆಯೇ ಎಂಬ ಮಾಹಿತಿ ಲಭ್ಯವಾಗಿಲ್ಲ. ಮಂಗಳೂರಿನ ಜಿಲ್ಲಾಧಿಕಾರಿ ಕಚೇರಿಯಲ್ಲಿ ತೆರೆದ ಕಂಟ್ರೋಲ್‌ ರೂಂಗೆ ಶನಿವಾರ ವರೆಗೆ ದ.ಕ.ಜಿಲ್ಲೆಯ 118 ಮಂದಿ ಇಸ್ರೇಲ್‌ನಲ್ಲಿ ಇರುವ ಬಗ್ಗೆ ಮಾಹಿತಿ ಲಭ್ಯವಾಗಿದೆ ಎಂದು ಪ್ರಭಾರ ಜಿಲ್ಲಾಧಿಕಾರಿ ಡಾ.ಆನಂದ್‌ ಮಾಹಿತಿ ನೀಡಿದ್ದಾರೆ.

Share this article