ಕನ್ನಡಪ್ರಭ ವಾರ್ತೆ ಮಂಗಳೂರು ಕಳ್ಳತನಕ್ಕಾಗಿ ವಿಮಾನದಲ್ಲಿ ಆಗಮಿಸಿ ಮಂಗಳೂರಿನಲ್ಲಿ ವಾರಾಂತ್ಯದ ರೈಲುಗಳಲ್ಲಿ ಪ್ರಯಾಣಿಕರ ಚಿನ್ನಾಭರಣ ಎಗರಿಸುತ್ತಿದ್ದ ಇಬ್ಬರು ಹೈಟೆಕ್ ಕಳ್ಳರನ್ನು ರೈಲ್ವೆ ಪೊಲೀಸರು ಬಂಧಿಸಿದ್ದಾರೆ. ಬಂಧಿತರನ್ನು ಉತ್ತರ ಪ್ರದೇಶದ ಮಿರ್ಜಾಪುರದ ಧೋರುಪುರದ ಅಭಯ್‌ರಾಜ್ ಸಿಂಗ್ (26) ಮತ್ತು ರಾಜ್‌ಪುರದ ಹರಿಶಂಕರ್ ಗಿರಿ (25) ಎಂದು ಹೆಸರಿಸಲಾಗಿದೆ. ಆರೋಪಿಗಳು ಉತ್ತರ ಪ್ರದೇಶದಿಂದ ವಿಮಾನದಲ್ಲಿ ಬಂದು ರಾತ್ರಿ ವೇಳೆ ಸಂಚರಿಸುವ ರೈಲುಗಳನ್ನು ಕಳ್ಳತನಕ್ಕೆ ಆಯ್ಕೆ ಮಾಡುತ್ತಿದ್ದರು. ರೈಲಿನಲ್ಲಿ ಚಿನ್ನಾಭರಣ ಧರಿಸಿರುವ ವೃದ್ಧರು ಹಾಗೂ ಮಹಿಳಾ ಪ್ರಯಾಣಿಕರನ್ನು ಗುರುತಿಸುತ್ತಿದ್ದರು. ರೈಲಿನ ವೇಗ ಕಡಿಮೆ ಆದ ಸಂದರ್ಭ ಅವರ ಚಿನ್ನಾಭರಣಗಳನ್ನು ಕಿತ್ತುಕೊಂಡು, ಬೋಗಿಗಳಿಂದ ಹೊರಗೆ ಜಿಗಿದು ಪರಾರಿಯಾಗುತ್ತಿದ್ದರು. ಈ ಕೃತ್ಯಕ್ಕೆ ವಾರಾಂತ್ಯದಲ್ಲಿ ಚಲಿಸುವ ರೈಲುಗಳನ್ನೇ ಆಯ್ಕೆ ಮಾಡಿಕೊಳ್ಳುತ್ತಿದ್ದರು. ಮಂಗಳೂರು ಮತ್ತು ಸುರತ್ಕಲ್ ನಡುವೆ ಸೆಪ್ಟೆಂಬರ್ 28ರಂದು ಸಂಚರಿಸಿದ್ದ ರೈಲಿನಲ್ಲಿ ಪ್ರಯಾಣಿಕರೊಬ್ಬರ ಚಿನ್ನಾಭರಣ ಕಳವಾಗಿತ್ತು. ಇಬ್ಬರು ಯುವಕರ ವರ್ತನೆ ಬಗ್ಗೆ ಸಂದೇಹ ಮೂಡಿದ್ದರಿಂದ ಅವರನ್ನು ಆರ್ಪಿಎಫ್ ಪೊಲೀಸರು ಅಕ್ಟೋಬರ್ 2ರಂದು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದರು. ರೈಲಿನಲ್ಲಿ ಚಿನ್ನಾಭರಣ ಕಳವು ಮಾಡಿದ್ದನ್ನು ಆರೋಪಿಗಳು ಒಪ್ಪಿಕೊಂಡಿದ್ದರು. ಆರ್ಪಿಎಫ್ನವರು ಆರೋಪಿಗಳನ್ನು ಮಂಗಳೂರು ರೈಲ್ವೆ ಪೊಲೀಸರ ವಶಕ್ಕೆ ಒಪ್ಪಿಸಿದ್ದಾರೆ. ಆರೋಪಿಗಳು ರೈಲ್ವೆಯ ಪಾಲಕ್ಕಾಡ್, ತಿರುವನಂತಪುರ ವಲಯಗಳಲ್ಲಿ ಹಾಗೂ ಕೊಂಕಣ ರೈಲ್ವೆಯ ವ್ಯಾಪ್ತಿಯಲ್ಲಿ ಸಂಚರಿಸುವ ರೈಲುಗಳಲ್ಲಿ ಸಹಪ್ರಯಾಣಿಕರಿಂದ ಕದ್ದಿರುವ ಚಿನ್ನಾಭರಣಗಳು ಸೇರಿ ಒಟ್ಟು 125 ಗ್ರಾಂ ತೂಕದ ಚಿನ್ನವನ್ನು ವಶಪಡಿಸಿಕೊಳ್ಳಲಾಗಿದೆ.